Monday, November 30, 2009

ಮಲ್ಲೇಶ್‌ಪಾಳ್ಯದಲ್ಲಿ ಕೆರೆ ಉಳಿಸಿ: ಅಭಿಯಾನ; ಜಾತ್ರೆ

ನಗರದಲ್ಲಿ ಹಿಂದೆ ಕೆರೆಗಳು ಧಾರ್ಮಿಕ ಆಚರಣೆಗಳ ಕೇಂದ್ರ ಬಿಂದುವಾಗಿದ್ದವು. ಇಂದು ಆಚರಣೆಗಳ ಸೊಗಡಿನಿಂದಲೇ ಕೆರೆಗಳನ್ನು ಸಂರಕ್ಷಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ’ಕೆರೆ ಉಳಿಸಿಎಂದು ಸಾರಲು, ಊರಹಬ್ಬ, ಜಾತ್ರೆಯ ವಾತಾವರಣ ನಿಮಾರ್ಣ ವಾಗುತ್ತಿದೆ. ಮಲ್ಲೇಶಪಾಳ್ಯ ಇಂತಹ ಜಾಗೃತಿಹಬ್ಬದಲ್ಲಿ ಮಿಂದೆದ್ದಿತು.
ಬೆಂಗಳೂರಿನಲ್ಲಿ ಕೆರೆಗಳು ಅಭಿವೃದ್ಧಿ ಆಗುತ್ತಿರುವುದು ಸಂಸ್ಕೃತಿಯನ್ನು ಪ್ರೀತಿಸುವ ಪ್ರತಿ ಮನಸ್ಸಿಗೂ ಆಹ್ಲಾದ ಉಂಟು ಮಾಡುತ್ತದೆ. ಇಂತಹ ಯೋಜನೆಗಳು ಅಲ್ಲಲ್ಲಿ ಆರಂಭವಾಗುತ್ತಿರುವುದು ಸಂತಸಕರ. ಅದರಲ್ಲೂ ಒಂದು ಕೆರೆ ಅಭಿವೃದ್ಧಿಗೆ ಊರ ಸಂಸ್ಕೃತಿಯನ್ನು ಸಾರುವ ಮೆರವಣಿಗೆ ಮಾಡುವುದು ಶ್ಲಾಘನೀಯ. ಇದು ಊರಹಬ್ಬದ ಆಚರಣೆ ಆಗಬೇಕು. ಪ್ರತಿಯೊಂದು ಕೆರೆಯಲ್ಲೂ ಪ್ರತಿ ತಿಂಗಳೂ ತೆಪ್ಪೋತ್ಸವ ನಡೆಯಬೇಕು. ಇದು ನಮ್ಮ ಸಂಸ್ಕೃತಿಯನ್ನು ಸಾರುವ ಉತ್ಸವಗಳು ಕೆರೆಗಳಲ್ಲೇ ಆಗಬೇಕು
ಸರ್ ಸಿ.ವಿ. ರಾಮನ್‌ನಗರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಕಗ್ಗದಾಸಪುರ ಮತ್ತು ಮಲ್ಲೇಶಪಾಳ್ಯ ಕೆರೆ ಅಭಿವೃದ್ಧಿಗಾಗಿ ಜಾಗೃತಿ ಜಾಥಾ ನಡೆಯಿತು. ಬೆಂಗಳೂರಿನಲ್ಲಿ ಬಿಬಿಎಂಪಿ ಮತ್ತು ಬಿಡಿಎ ಕೆರೆಗಳನ್ನು ಅಭಿವೃದ್ಧಿ ಮಾಡುತ್ತಿವೆ. ಆದರೆ ಕಗ್ಗದಾಸಪುರ-ಮಲ್ಲೇಶಪಾಳ್ಯ ಕೆರೆಯನ್ನು ಶಾಸಕರ ನಿಧಿಯಿಂದ ಈ ಕೆರೆಗಳ ಅಭಿವೃದ್ಧಿ ಕಾರ್ಯ ಕೈಗೊಂಡಿರುವುದು ಇಲ್ಲಿನ ವಿಶೇಷ.
ಊರಹಬ್ಬದಂತೆ ಮೆರವಣಿಗೆ ಮೂಲಕ ಸಾಗಿ ಶಾಸಕ ಎಸ್. ರಘು ಕೆರೆ ಅಭಿವೃದ್ಧಿಗೆ ಚಾಲನೆ ನೀಡಿದರು. ಜಾನಪದ ಕಲಾತಂಡಗಳ ನೃತ್ಯ, ಕೆರೆ ಉಳಿಸಿ ಎಂದು ಸಾರುವ ಸಾವಿರಾರು ಟಿಶರ್ಟ್ ಧಾರಿಗಳು ಈ ಮೆರವಣಿಗೆಯ ಹೈಲೈಟ್.
’ಕೆರೆಗಳು ಉಳಿದರೆ ಮಾತ್ರ ಮನುಕುಲ ಉಳಿಯಲು ಸಾಧ್ಯ’ ಎಂಬ ಹಿರಿಯ ಮಾತನ್ನು ಅನುಸರಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ ’ನಮ್ಮೂರ್ ಕೆರೆ’ ಲೇಖನ ಮಾಲಿಕೆಯಿಂದ ಕೆರೆಯ ನಿಜಸ್ಥಿತಿಯ ಅರಿವಾಯಿತು. ಕಗ್ಗದಾಸಪುರ ಕೆರೆ ಅತ್ಯಂತ ಶೋಚನೀಯ ಸ್ಥಿತಿಯಲ್ಲಿದ್ದು, ಬಿಬಿಎಂಪಿ ಇದರ ಅಭಿವೃದ್ಧಿಗೆ ಯೋಜನೆ ರೂಪಿಸುತ್ತಿದೆ. ಇದು ಮುಂದಿನ ವರ್ಷ ಕಾರ್ಯಗತವಾಗುತ್ತದೆ. ಆದರೆ, ಈ ಕೆರೆಗೆ ಬೇಲಿ ಹಾಕಿ, ಹೂಳು ತೆಗೆಯಬೇಕಾದ್ದು ತುರ್ತುಸ್ಥಿತಿ. ಆದ್ದರಿಂದ ’ಶಾಸಕರ ನಿಧಿ’ಯಿಂದ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಶಾಸಕ ಎಸ್. ರಘು ತಿಳಿಸಿದರು.
ಕೆರೆಗೆ ಬೇಲಿ, ತಡೆಗೋಡೆ, ಹೂಳು ತೆಗೆಯುವುದು, ಮಾಲಿನ್ಯ ನಿಯಂತ್ರಣ, ವಾಕಿಂಗ್ ಟ್ರ್ಯಾಕ್ ಸೌಲಭ್ಯಗಳು ಮುಂದಿನ ಆರು ತಿಂಗಳಲ್ಲಿ ಸುಮಾರು 1.25 ಕೋಟಿ ರೂ.ಗಳಲ್ಲಿ ನಿರ್ಮಾಣವಾಗಲಿದೆ. ಬಿಬಿಎಂಪಿ ವತಿಯಿಂದ ಮುಂದಿನ ಯೋಜನೆ ಕೈಗೊಂಡು ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸಲಾಗುತ್ತದೆ. ಕಗ್ಗದಾಸಪುರ ಕೆರೆಯ ದಡದಲ್ಲಿರುವ ಇತಿಹಾಸ ಪ್ರಸಿದ್ಧ ಜಲಕಂಠೇಶ್ವರ ದೇವಸ್ಥಾನದ ಅಭಿವೃದ್ಧಿಗೆ 38 ಲಕ್ಷ ಮೀಸಲಿರಿಸಲಾಗಿದೆ ಎಂದರು.
ಮಲ್ಲೇಶ್‌ಪಾಳ್ಯದಲ್ಲಿ ಬಸ್ ನಿಲ್ದಾಣ, ಈ ಬಸ್‌ನಿಲ್ದಾಣದಿಂದ ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ, ಐಟಿಪಿಎಲ್‌ಗೆ ವೋಲ್ವೊ ಬಸ್ ಸೌಲಭ್ಯ ಹಾಗೂ ಹೈಮಾಸ್ಟ್ ವಿದ್ಯುತ್‌ದೀಪಗಳಿಗೆ ಶಾಸಕ ಎಸ್. ರಘು ಚಾಲನೆ ನೀಡಿದರು. ಮಲ್ಲೇಶ್‌ಪಾಳ್ಯ ಮುಖ್ಯರಸ್ತೆ ಅಗಲೀಕರಣಗೊಂಡು, ಡಾಂಬರೀಕರಣವಾಗಿದ್ದು, ಇದನ್ನು ಸಾರ್ವಜನಿಕ ಬಳಕೆಗೆ ಅರ್ಪಿಸಲಾಯಿತು.

Tuesday, November 10, 2009

ಬೆಂಗಳೂರಿನಲ್ಲಿ 183 ಕೆರೆ- ಇದು ಅಧಿಕೃತ...

123 ಕೆರೆಗಳಿಗೆ ಶುಕ್ರದೆಸೆ; ಭೂದಾಹಿಗಳಿಗೆ ಬೇಲಿ
ಉದ್ಯಾನನಗರಿಯಲ್ಲಿ ಗತವೈಭವದ ಇತಿಹಾಸ ಮೆಲುಕುಹಾಕುತ್ತಾ, ಬಡಕಲಾಗುತ್ತಿದ್ದ ಕೆರೆಗಳಿಗೆ ಕೊನೆಗೂ ಶುಕ್ರದೆಸೆ ಆವರಿಸಿಕೊಳ್ಳುತ್ತಿದೆ. ನಗರದಲ್ಲಿ ನೂರಾರು ಕೆರೆಗಳಿವೆಯೇ ಎಂಬ ಪ್ರಶ್ನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯೇ ಉತ್ತರ ನೀಡಿದೆ. 183 ಕೆರೆಗಳು ಬಿಬಿಎಂಪಿ ಗಣನೆಗೆ ಬಂದಿದ್ದು, 123 ಕೆರೆಗಳಿಗೆ ಸದ್ಯವೇ ಬೇಲಿ ಬೀಳಲಿದೆ.
ಬೆಂಗಳೂರಿನಲ್ಲಿ ಈಗಾಗಲೇ ಅಭಿವೃದ್ಧಿಗೆ ಚಾಲನೆ ದೊರಕಿರುವ 36 ಕೆರೆಗಳಲ್ಲದೆ, 123 ಕೆರೆಗಳ ಸರ್ವೆ ಕಾರ್ಯ ಆರಂಭವಾಗಿದೆ. ಅವುಗಳಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಿ, ಜನವರಿ ಅಂತ್ಯದೊಳಗೆ ಬೇಲಿ ಹಾಕಲಾಗುತ್ತದೆ. ಇದಕ್ಕಾಗಿ 40 ಕೋಟಿ ರೂ.ಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಐದಾರು ಕೆರೆಗಳಲ್ಲಿ ಬೇಲಿ ಕಾಮಗಾರಿಯೂ ಆರಂಭವಾಗಿದೆ.
ವಿಜಯ ಕರ್ನಾಟಕ ಬೆಂಗಳೂರಿನ ಕೆರೆಗಳ ದುಸ್ಥಿತಿಯನ್ನು 'ನಮ್ಮೂರ್ ಕೆರೆ' ಲೇಖನ ಮಾಲಿಕೆ ಮೂಲಕ ವಿವರಿಸಿದ್ದನ್ನು ಇಲ್ಲಿ ಸ್ಮರಿಸಬಹುದು. ಆನಂತರ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ, ಬಿಡಿಎ ವಿಶೇಷ ಯೋಜನೆಗಳನ್ನು ರೂಪಿಸಿವೆ.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಿಬಿಎಂಪಿ 21 ಕೆರೆಗಳಿಗೆ ಕಾಯಕಲ್ಪ ನೀಡುವ ಕಾಮಗಾರಿಗೆ ಚಾಲನೆ ನೀಡಿದೆ. ಇದರಲ್ಲಿ ಪ್ರಮುಖವಾಗಿ ಒತ್ತುವರಿ ತೆರವುಗೊಳಿಸಿರುವುದು ಗಮನಾರ್ಹ. ಯಾವುದೇ ಒತ್ತುವರಿಯನ್ನು ಮನ್ನಾ ಮಾಡಬೇಡಿ ಎಂಬ ಬಿಬಿಎಂಪಿ ಆಯುಕ್ತರ ಆದೇಶವನ್ನು ಅಧಿಕಾರಿಗಳು ಪಾಲಿಸುತ್ತಿದ್ದಾರೆ. ಆದರೆ, ಕೆಲವೆಡೆ ಶಾಸಕರ ಒತ್ತಾಸೆಗೆ ಕೆಲವು ಒತ್ತುವರಿ ತೆರವಾಗಿಲ್ಲ. ಅಭಿವೃದ್ಧಿಯ ಪಥದಲ್ಲಿರುವ ಕೆರೆಯಲ್ಲಿ ಹೂಳು ತೆಗೆದು, ಬೇಲಿ ಹಾಕುವ ಕಾರ್ಯ ಪ್ರಗತಿಯಲ್ಲಿದೆ.
ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಮುನ್ನ ಅಲ್ಲಿನ ಒತ್ತುವರಿಗೆ ಪ್ರಥಮವಾಗಿ ಅಂತ್ಯ ಹಾಡಲಾಗುತ್ತದೆ. ಇದರಿಂದ ಬಡಾವಣೆಗಳಿಗಾಗಿ ಕೆರೆಗಳನ್ನು ನುಂಗಿಕೊಂಡಿದ್ದ ಭೂದಾಹಿಗಳಿಗೆ ಹಿನ್ನಡೆ ಆಗಲಿದೆ. ಅಷ್ಟೇಅಲ್ಲ, ಹೊಸ ಒತ್ತುವರಿಗೂ ಕಡಿವಾಣ ಬೀಳಲಿದೆ.
ಈ ನಡುವೆ ಬಿಬಿಎಂಪಿ ಅಧಿಕಾರಿಗಳು ಬೆಂಗಳೂರಿನಲ್ಲಿರುವ ಕೆರೆಗಳ ಸಮೀಕ್ಷೆ ಕಾರ್ಯ ಆರಂಭಿಸಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 183 ಕೆರೆಗಳನ್ನು ಗುರುತಿಸಲಾಗಿದೆ. ಇದರಲ್ಲಿ, ಲಾಲ್‌ಬಾಗ್, ಅಗರ, ಹೆಬ್ಬಾಳ, ಹಲಸೂರು, ಕೆಂಪಾಂಬುಧಿ, ಯಡಿಯೂರು, ಸ್ಯಾಂಕಿ, ಹೆಣ್ಣೂರು, ಕೆಂಗೇರಿ, ವಸಂತಪುರ, ಹಲಗೆವಡೇರಹಳ್ಳಿ ಕೆರೆ ಸೇರಿದಂತೆ 25 ಕೆರೆಗಳನ್ನು ಬಿಡಿಎ, ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಅಭಿವೃದ್ಧಿಪಡಿಸಿವೆ. ಬಿಬಿಎಂಪಿ 21 ಕೆರೆಗಳಲ್ಲಿ ಅಭಿವೃದ್ಧಿ ಕಾಮಗಾರಿ ಆರಂಭಿಸಿದೆ. ಬಿಡಿಎ ತನ್ನ ವ್ಯಾಪ್ತಿಯ 12 ಕೆರೆಗಳಲ್ಲಿ ಅಭಿವೃದ್ಧಿಗೆ ಚಾಲನೆ ನೀಡಿದೆ. ಕೆರೆ ಅಭಿವೃದ್ಧಿ ಪ್ರಾಧಿಕಾರ ಅಮೃತಹಳ್ಳಿ ಹಾಗೂ ಜಕ್ಕೂರು ಕೆರೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಇನ್ನು ಉಳಿದ 123 ಕೆರೆಗಳಿಗೆ ಬಿಬಿಎಂಪಿ, ಒತ್ತುವರಿ ತೆರವುಗೊಳಿಸಿ ಬೇಲಿ ಹಾಕುವ ಕಾರ್ಯವನ್ನು ಆರಂಭಿಸಿದೆ.
ನಗರದ 11 ವಿಧಾನಸಭೆ ವ್ಯಾಪ್ತಿಯಲ್ಲಿರುವ ಈ 123 ಕೆರೆಗಳ ಸಮೀಕ್ಷೆ ಕಾರ್ಯ ಆರಂಭವಾಗಿದೆ. ಇದರಲ್ಲಿ 50 ಕೆರೆಗಳ ಸರ್ವೆ ಮುಗಿದಿದ್ದು, ಉಳಿದ್ದದ್ದು ಇನ್ನು ಒಂದು ತಿಂಗಳಲ್ಲಿ ಮುಗಿಯಲಿದೆ. ಡಿಸೆಂಬರ್ 2ನೇ ವಾರದಲ್ಲಿ ಈ ಎಲ್ಲ ಕೆರೆಗಳಿಗೆ ಬೇಲಿ ಹಾಕುವ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಜನವರಿ ಅಂತ್ಯಕ್ಕೆ ಈ ಕಾಮಗಾರಿ ಮುಗಿಯಲಿದೆ.
ಬೆಳ್ಳಂದೂರು, ಅಟ್ಟೂರು, ಕಲ್ಕೆರೆ, ಚಿನ್ನಪ್ಪನಹಳ್ಳಿ, ವರ್ತೂರು ಕೆರೆಗಳಲ್ಲಿ ಒತ್ತುವರಿಯನ್ನು ತೆರವುಗೊಳಿಸಲಾಗಿದೆ. ಇಲ್ಲಿ ಬೇಲಿ ಹಾಕುವ ಕಾರ್ಯ ಆರಂಭವಾಗಿದ್ದು, ಅಂಗಳದಲ್ಲಿ ಸಸಿ ನೆಡಲಾಗುತ್ತಿದೆ. ಮಳೆ ನೀರು ಕೆರೆಗಳಿಗೆ ಹರಿಯಲು ರಾಜಾಕಾಲುವೆಗಳ ತೆರವುಗೊಳಿಸಲಾಗುತ್ತಿದೆ.
ಕೆರೆಗಳಲ್ಲಿ ಔಷಧ ಸಸ್ಯ
ಬಿಬಿಎಂಪಿ ಅಭಿವೃದ್ಧಿಪಡಿಸುತ್ತಿರುವ ಕೆರೆಗಳ ಅಂಗಳದಲ್ಲಿ ಔಷಧೀಯ ಗುಣಗಳುಳ್ಳ ಸಸ್ಯಗಳನ್ನು ನಡೆಲಾಗುತ್ತಿದೆ. ಇದಕ್ಕಾಗಿ 16 ಸಸ್ಯಗಳನ್ನು ಗುರುತಿಸಲಾಗಿದೆ. ಅಮೃತಬಳ್ಳಿ, ಮಾವು, ಬಜೆ, ಆಡುಸೊಗೆ, ಲಾವಂಚಾ, ಭೃಂಗರಾಜ, ದಾಸವಾಳ, ಚಕ್ರಮುಖಿ, ಬಿಳೀ ಲಕ್ಕಿ ಸಸ್ಯಗಳು ಇದರಲ್ಲಿ ಸೇರಿವೆ.
ಬೆಂಗಳೂರಿನಲ್ಲಿ ಎಂಬತ್ತೇ ಕೆರೆಗಳಿರುವುದು ಎಂದು ಕೈಕಟ್ಟಿ ಕುಳಿತಿದ್ದ ಅಧಿಕಾರಿಗಳು, ಇದೀಗ ಎಚ್ಚೆತ್ತುಕೊಂಡಿದ್ದಾರೆ. ಅದಕ್ಕೇ 183 ಕೆರೆಗಳು ಕಾಣಿಸಿಕೊಂಡಿವೆಯಲ್ಲದೆ, ಲೆಕ್ಕಕ್ಕೂ ಸಿಕ್ಕಿವೆ. ಕಂದಾಯ ಇಲಾಖೆಯ ಕಡತಗಳನ್ನು ಪರಿಶೀಲಿಸಿ ಮತ್ತಷ್ಟು ಶೋಧಕಾರ್ಯ ಆದದ್ದೇ ಆದರೆ, ಇನ್ನೂ ನೂರಾರು ಕೆರೆಗಳು ಸಿಗುತ್ತವೆ. ಅವುಗಳೆಲ್ಲಕ್ಕೂ ಬೇಲಿ ಬಿದ್ದರೆ ಭೂದಾಹಿಗಳು
ವಿಧಾನಸಭೆ ಕ್ಷೇತ್ರವಾರು ಬೇಲಿ ಕಾಣಲಿರುವ ಕೆರೆಗಳು
ಮಹದೇವಪುರ-26, ಬೆಂಗಳೂರು ದಕ್ಷಿಣ-24, ಯಶವಂತಪುರ-19, ಕೆ.ಆರ್. ಪುರ-15, ಬ್ಯಾಟರಾಯನಪುರ-10, ಬೊಮ್ಮನಹಳ್ಳಿ-7, ರಾಜರಾಜೇಶ್ವರಿನಗರ-7, ಯಲಹಂಕ-5, ಸರ್ವಜ್ಞನಗರ-4, ದಾಸರಹಳ್ಳಿ-4, ಸಿವಿ ರಾಮನ್‌ನಗರ-2

Tuesday, October 27, 2009

ಕೆಂಪಾಂಬುಧಿ ಕೆರೆ ಏರಿ ಮೇಲೆ...

ಬೆಂಗಳೂರಿನ ಕೆಂಪಾಂಬುಧಿ ಕೆರೆಯ ಏರಿ ಮೇಲೆ ಮೊನ್ನೆ ಶುಕ್ರವಾರ ಅಂದರೆ, ಅಕ್ಟೋಬರ್ 23ರಂದು ವಿಶಿಷ್ಟ ಕಾರ್ಯಕ್ರಮ ಆಯೋಜನೆಯಾಗಿತ್ತು. "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಎಂಬ ಶೀರ್ಷಿಕೆಯಡಿ ಕೆರೆಯ ಸಂರಕ್ಷಣೆ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು. ಜತೆಗೆ ಸ್ಥಳೀಯ ಶಾಸಕರಿಂದ ಕೆರೆ ಅಭಿವೃದ್ಧಿಗೆ ಏನು ಮಾಡುತ್ತೀರಿ ಎಂದು ಕೇಳುವ ಪ್ರಶ್ನೆಯ ವೇದಿಕೆಯನ್ನೂ ಸೃಷ್ಟಿಸಲಾಗಿತ್ತು.
ಈ ಕಾರ್ಯಕ್ರಮವನ್ನು ಸ್ನೇಹ ಚೈತನ್ಯ ಸಾಮಾಜಿಕ ಟ್ರಸ್ಟ್ ಹಾಗೂ ಪ್ರಗತಿ ಪರ ಮಹಿಳಾ ಸಮಾಜ ಆಯೋಜಿಸಿದ್ದರಿಂದ ಮಹಿಳೆಯರೇ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕೆರೆ ಸಂರಕ್ಷಣೆಗೆ ಮಹಿಳೆಯರೇ ಬೇಕು. ಅವರಲ್ಲಿರುವ ಕಾಳಜಿ ಹಾಗೂ ಮನೆಯಲ್ಲಿ ನೀರು ಬರಲಿಲ್ಲವೆಂದರೆ ಅವರೇ ಪಾಡು ಪಡಬೇಕಾದ್ದು ಅಲ್ಲವೆ?
ಕೆಂಪೇಗೌಡ ಮನೆತನದವರು ಕಟ್ಟಿಸಿದ ಕೆರೆ ಕೆಂಪಾಂಬುಧಿ ಕೆರೆ. ಪಾಳೇಗಾರರ ವಂಶಸ್ಥರಾದ ಕೆಂಪಮ್ಮನವರ ಹೆಸರು ಈ ಕೆರೆಗಿತ್ತು. ಕೆಂಪಮ್ಮ ಕೆರೆ ಕಾಲ ಕಳೆದಂತೆ ಕೆಂಪಾಂಬುಧಿ ಆಯಿತು. ಕುಡಿಯುವ ನೀರು ಪೂರೈಸುತ್ತಿದ ಕೆರೆ ಇಂದು, ವಿಷಾನಿಲ ಸೂಸುತ್ತಿದೆ. ಕೆರೆಯ ಅಂಗಳದಲ್ಲಿ ಓಡಾಡುವುದೂ ಕಷ್ಟಕರವಾಗಿದೆ. 1983ರಿಂದಲೂ ಈ ಕೆರೆಯ ಅಭಿವೃದ್ಧಿ ಆಗುತ್ತಿದೆ ಎಂಬುದು ಬಹುತೇಕ ಜನರಿಗೆ ತಿಳಿದಿಲ್ಲ. ಅಂದರೆ, ಎಷ್ಟು ಕೋಟಿ ರೂ. ಕೆರೆಗೆ ಚೆಲ್ಲಿದ್ದಾರೆ ಯೋಚಿಸಿ! ಆದರೂ ಈ ಕೆರೆ ಅಭಿವೃದ್ಧಿ ಆಗಿಲ್ಲ. ಈಗ ಮತ್ತೆ ೮ ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಮಾಡಲಾಗುತ್ತಿದೆ. ಅಂದರೆ ನಮ್ಮ ಹಣ ಹೇಗೆ ವ್ಯಯ ಆಗುತ್ತಿದೆ ನೋಡಿ. ಇದನ್ನು ನಾವು ಎದ್ದು ನಿಂತು ಕೇಳಲಿಲ್ಲವೆಂದರೆ ಅದೆಲ್ಲದರ ಹೊರೆ ನಮ್ಮ ಮೇಲೇ ಬೀಳುತ್ತದೆ.
ಕುಡಿಯುವ ನೀರು ಕೊಡಿ ಎಂದು ಜನಪ್ರತಿನಿಧಿಗಳ ಮೇಲೆ ಒತ್ತಾಯ ಮಾಡುತ್ತೇವೆ. ಆದರೆ, ಸ್ಥಳೀಯ ವಾತಾವರಣ ಹೇಗಿದೆ? ಅದನ್ನು ಉಳಿಸಿಕೊಳ್ಳುವುದು ಹೇಗೆ? ಎಂಬುದರ ಬಗ್ಗೆ ಕಾಳಜಿ ವಹಿಸುವುದಿಲ್ಲ. ಕಾವೇರಿ ನೀರು ಸಾಲುತ್ತಿಲ್ಲ ಎಂದರೆ, ಬೋರ್‌ವೆಲ್ ಹಾಕಿಬಿಡಿ. ಟ್ಯಾಂಕ್ ಕಟ್ಟಿಸಿ, ಅಲ್ಲಿಂದ ನೀರು ತೆಗೆದುಕೊಳ್ಳುತ್ತೇವೆ ಎಂಬುದು ಸಲಹಾತ್ಮಕ ಒತ್ತಾಯವಾಗಿರುತ್ತದೆ. ಆದರೆ, ಸುತ್ತಮುತ್ತಲಿನ ಪರಿಸರ ಉತ್ತಮವಾಗಿಲ್ಲದಿದ್ದರೆ ಬೋರ್‌ವೆಲ್‌ನಲ್ಲಿ ಒಳ್ಳೆ ನೀರು ಎಲ್ಲಿಂದ ಬರುತ್ತೆ? ಅಂತರ್ಜಲ ಮೂಲವಾಗಿರುವ ಕೆರೆಗಳಲ್ಲಿ ತ್ಯಾಜ್ಯ, ರಾಸಾಯನಿಕ ಅಂಶ, ಕೊಳಕೇ ಇದ್ದರೆ, ಅದೇ ಬೋರ್‌ವೆಲ್‌ನಲ್ಲೂ ಬರುತ್ತದೆ. ಇದು ಎಲ್ಲರ ಗಮನದಲ್ಲಿರಲಿ.
ಅಂದಹಾಗೆ, ಈ ಕಾರ್ಯಕ್ರಮ ಮಧ್ಯಾಹ್ನ 3.3-0ಕ್ಕೆ ಆಯೋಜನೆಯಾಗಿತ್ತು. ಸಮಾರಂಭಕ್ಕೆ ಸಚಿವ ಸುರೇಶ್ ಕುಮಾರ್ ಬರಲಿಲ್ಲ. ಉತ್ತರ ಕರ್ನಾಟಕದ ನೆರೆ ಸಂತ್ರಸ್ತರ ಬಗ್ಗೆ ತನಿಖೆಗೆ ಕೇಂದ್ರದ ತಂಡ ಆಗಮಿಸಿದ್ದರಿಂದ ಅದರಲ್ಲಿ ಪಾಲ್ಗೊಳ್ಳುವ ಕಾರಣದಿಂದ ಸಚಿವರು ಬರಲಿಲ್ಲವಂತೆ. ಅದರಿಂದ ಕಾರ್ಯಕ್ರಮ ಆರಂಭ ತಡವಾಯಿತು. ಸ್ಥಳೀಯ ಶಾಸಕ ರವಿ ಸುಬ್ರಹ್ಮಣ್ಯ ಕೂಡ ತಡವಾಗಿಯೇ ಬಂದರು. ಆದರೆ, ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಸರಿಯಾದ ಸಮಯಕ್ಕೆ ಹಾಜರಿದ್ದರು.
ಕೆರೆ ಸಂರಕ್ಷಣೆಗೆ ಅಲ್ಲಲ್ಲಿ ಆಯಾ ಸ್ಥಳೀಯ ಸಂಘ-ಸಂಸ್ಥೆಗಳು ಟೊಂಕಕಟ್ಟಿ ನಿಂತರೆ, ಏನು ಅಭಿವೃದ್ಧಿ ಆಗುತ್ತಿದೆ ಎಂದು ಪ್ರಶ್ನಿಸಿದರೆ ಬೇಕಾಬಿಟ್ಟಿಗೆ ತಡೆಬೀಳುತ್ತದೆ. ಇಂತಹ ಪ್ರಯತ್ನ ಅಲ್ಲಲ್ಲಿ ಆಗಲಿ.
ವಾಹನಗಳಿಗೇ ಹೆಚ್ಚು ಕಾವೇರಿ ನೀರು ಬಳಕೆ
ನೂರಾರು ಕಿಲೋಮೀಟರ್ ದೂರದಿಂದ ಬೆಂಗಳೂರಿಗೆ ತರುತ್ತಿರುವ ಕಾವೇರಿ ನೀರು ಕುಡಿಯುವುದಕ್ಕಿಂತ ಹೆಚ್ಚಾಗಿ ಇತರೆ ಬಳಕೆಗೆ ಅರ್ಧಕ್ಕಿಂತ ಹೆಚ್ಚು ಬಳಕೆ ಆಗುತ್ತಿದೆಯೇ?
ಹೌದು, ಎನ್ನುತ್ತಾರೆ ಬಸವನಗುಡಿ ಶಾಸಕ ರವಿಸುಬ್ರಮಣ್ಯ. ಬೆಂಗಳೂರು ನಗರದಲ್ಲಿ ಶೇ.೫೦ಕ್ಕೂ ಹೆಚ್ಚು ಕಾವೇರಿ ನೀರು ವಾಹನಗಳನ್ನು ತೊಳೆಯುವುದಕ್ಕೆ ವ್ಯಯವಾಗುತ್ತಿದೆ. ಈ ಬಳಕೆಯನ್ನು ಕಡಿಮೆ ಮಾಡದಿದ್ದರೆ, ಕುಡಿಯುವ ನೀರಿಗೆ ಸಂಕಷ್ಟ ಎದುರಾಗಲಿದೆ ಎಂಬ ಆತಂಕವೂ ಶಾಸಕರದ್ದಾಗಿದೆ.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಹಾಗೂ ಪ್ರಗತಿಪರ ಮಹಿಳಾ ಸಮಾಜದ ಸಹಯೋಗದಲ್ಲಿ ಬಸವನಗುಡಿಯ ಕೆಂಪಾಂಬುಧಿ ಕೆರೆ ಏರಿಯಲ್ಲಿ "ನಮ್ಮ ಕೆರೆ ಸಂರಕ್ಷಣೆಯಲ್ಲಿ ನಮ್ಮ ಪಾತ್ರ' ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡಿದರು.
ಕೆಂಪಾಂಬುಧಿ ಕೆರೆಯನ್ನು 1983ರಿಂದಲೂ ಅಭಿವೃದ್ಧಿ ಮಾಡಲಾಗುತ್ತಿದೆ. ಆದರೂ ಕೆರೆ ಶುಚಿಯಾಗಿಲ್ಲ. ಇದೀಗ ಕೆರೆಯ ಸಮಗ್ರ ಅಭಿವೃದ್ಧಿಗೆ ೮ ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ. ನವೆಂಬರ್ ಎರಡನೇ ವಾರದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಆರು ತಿಂಗಳಲ್ಲಿ ಕೆರೆ ಅಭಿವೃದ್ಧಿ ಆಗುವುದಲ್ಲದೆ, ನಾಡಪ್ರಭು ಕೆಂಪೇಗೌಡರ ಕಾಲದ ಚಿತ್ರಣ ನೀಡುವ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಗರಕ್ಕೆ ಮಾದರಿ ಕೆರೆಯಾಗಿ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಪಡಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಚನ್ನಮ್ಮರಾಗಿ ಕೆರೆ ಉಳಿಸಿ
ಕಿತ್ತೂರು ರಾಣಿ ಚನ್ನಮ್ಮ ರೀತಿಯಲ್ಲಿ ಧೈರ್ಯವಂತರಾಗಿ ನನ್ನ ಜತೆ ಹೋರಾಡಿ. ನೂರು ಚನ್ನಮ್ಮಂದಿರು ನನ್ನೊಂದಿಗೆ ಹೋರಾಡಿದರೆ ಬೆಂಗಳೂರಿನಲ್ಲಿರುವ ಎಲ್ಲ ಕೆರೆಗಳನ್ನೂ ಉಳಿಸುತ್ತೇನೆ ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಶ್ವಾಸನೆ ನೀಡಿದರು.
ನಿಮ್ಮ ಸಮೀಪವಿರುವ ಕೆರೆಗೆ ಯಾರಾದರೂ ಮಣ್ಣು ತುಂಬಿದರೆ, ತ್ಯಾಜ್ಯವನ್ನು ತಂದು ಸುರಿಯುತ್ತಿದ್ದರೆ ಅವರಿಗೆ ಪೊರಕೆ ಸೇವೆ ಮಾಡಿ. ಕೆರೆ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ. ಯೋಜನೆ ಬಗ್ಗೆ ನಿಗಾವಹಿಸಿ, ಲೆಕ್ಕ ಪರಿಶೋಧಿಸಿ. ಇದರಿಂದ ಕೆರೆ ಅಭಿವೃದ್ಧಿ ಆಗುತ್ತದೆ ಎಂದು ಕರೆ ನೀಡಿದರು.
ಬೃಂದಾವನಗರದ ಸ್ನೇಹ ಚೈತನ್ಯ ಸಾಮಾಜಿಕ ಸೇವಾ ಟ್ರಸ್ಟ್ ಮಹಾಪೋಷಕ ಸಿದ್ದೇಗೌಡ, ವಿಜಯ ಕರ್ನಾಟಕದ ಹಿರಿಯ ವರದಿಗಾರ ಆರ್. ಮಂಜುನಾಥ್, ನಿಸರ್ಗ ಪ್ರಸ್ಥಾನದ ಅಧ್ಯಕ್ಷ ಚಂದ್ರಶೇಖರ ಬಾಳೆ, ಗ್ಲೋಬಲ್ ಟೆಕ್ನಾಲಜಿಯ ಪ್ರೊ. ವೈ. ಲಿಂಗರಾಜು, ಪರಿಸರವಾದಿ ಶಿವಮಲ್ಲು, ಟ್ರಸ್ಟ್ ಅಧ್ಯಕ್ಷೆ ಶೋಭಾಗೌಡ ಹಾಗೂ ಪ್ರಗತಿಪರ ಮಹಿಳಾ ಸಂಘದ ಅಧ್ಯಕ್ಷೆ ಕಮಲ ಬಾಳೆ ಹಾಜರಿದ್ದರು.

Tuesday, September 29, 2009

ಹೆಸರಘಟ್ಟ ಜಲಾಶಯದಲ್ಲಿ 7 ಅಡಿ ನೀರು

ನಂದಿ ಬೆಟ್ಟದಿಂದ ತಾಯಿ ಅರ್ಕಾವತಿ ಹರಿಯಲು ಇನ್ನೂ ಅನುವು ಮಾಡಿಕೊಟ್ಟಿಲ್ಲ. ನದಿ ಪುನಶ್ಚೇತನದ ಮಾತು, ಪಾದಯಾತ್ರೆ ಮಾತ್ರ ಆಗಿದೆ. ಒತ್ತುವರಿ ತೆರವಿಗೆ ಒಂದಿಷ್ಟೂ ಮನೋನಿರ್ಧಾರವಾಗಿದೆ. ಅಷ್ಟರಲ್ಲೇ, ವರುಣ ಕೃಪೆ ತೋರಿದ್ದಾನೆ. 10 ವರ್ಷಗಳ ನಂತರ ಹೆಸರಘಟ್ಟ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಿದ್ದಾನೆ. ನೀರೆಲ್ಲ ಹೆಸರಘಟ್ಟ ಸುತ್ತಮುತ್ತಲಿಂದ ಬಂದದ್ದು. ನಂದಿಯಲ್ಲಿನ ಮಳೆ ಕಾಲುವೆ ಮೂಲಕ ನೇರವಾಗಿ ಹರಿದಿದ್ದರೆ ಹೆಸರಘಟ್ಟ ಇನ್ನೆಷ್ಟು ನೀರು ತುಂಬಿಕೊಳ್ಳುತ್ತಿತ್ತು? ಅಂದರೆ, ಈಗ ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲೇ ಹೆಸರಘಟ್ಟಕ್ಕೆ ನೀರು ಹರಿಸಬಹುದೆಂಬುದು ಸಾಬೀತಾಗಿದೆ ಅಲ್ಲವೆ? ಇನ್ನೇಕೆ ತಡ? ಕಾರ್ಯಾರಂಭವಾಗಲಿ....
ಬೆಂಗಳೂರಿಗೆ ಪ್ರಥಮ ಬಾರಿಗೆ ಸಂಸ್ಕರಿತ ನೀರು ಪೂರೈಸಿದ ಹೆಸರಘಟ್ಟ ಜಲಾಶಯ ಹತ್ತು ವರ್ಷಗಳ ನಂತರ 7 ಅಡಿ ನೀರಿನ ಸೌಭಾಗ್ಯ ಕಂಡಿದೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯೇ ಇದಕ್ಕೆ ಪ್ರಮುಖ ಆಸರೆಯಾಗಿದ್ದು, ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದೆ.

ಹೆಸರಘಟ್ಟಕ್ಕೆ ನೀರು ಬರಬೇಕೆಂದರೆ ಬ್ಯಾತ ಹಾಗೂ ಕಾಕೋಳು ಕೆರೆಗಳು ಕೋಡಿ ಆಗಬೇಕು. ಇದರಲ್ಲಿ ಬ್ಯಾತ ಕೆರೆ ಕೋಡಿ ಹರಿಯುತ್ತಿದ್ದು, ಹೆಚ್ಚಿನ ನೀರು ಈ ಮೂಲಕವೇ ಹೆಸರಘಟ್ಟಕ್ಕೆ ಹರಿಯುತ್ತಿದೆ. 20 ದಿನಗಳ ಹಿಂದಷ್ಟೇ ಗಾಲ್ಫ್ ಮೈದಾನದಂತಾಗಿದ್ದ ಹೆಸರಘಟ್ಟ, ಇಂದು ಹತ್ತು ವರ್ಷಗಳ ಹಿಂದಿನ ವೈಭವಕ್ಕೆ ಮರಳಿದೆ. ಜಲಾಶಯದ ಏರಿಯಿಂದ ನೋಡಿದ ದೂರದಷ್ಟೂ ನೀರು ಕಾಣುತ್ತಿದೆ. 1998ರಲ್ಲಿ 8 ಅಡಿ ನೀರು ಬಂದಿತ್ತು. ಅದಾದ ಮೇಲೆ 3-4 ಅಡಿಯಷ್ಟು ನೀರಿನ ಸಂಗ್ರಹ ಮಾತ್ರ ಇಲ್ಲಿ ದಾಖಲಾಗುತ್ತಿತ್ತು.
ಹೆಸರಘಟ್ಟದಲ್ಲಿರುವ ನೀರಿನ ಮಾಪನದಲ್ಲಿ 49 ಅಡಿ ಎಂದು ಸೂಚಿಸುತ್ತಿದೆ. ಆದರೆ, ಗಣನೆಗೆ ತೆಗೆದುಕೊಳ್ಳುವುದು ೪೨ ಅಡಿ ಯಿಂದ. ಉಳಿದದ್ದು ಹೂಳು ತುಂಬಿದೆ. ಹೆಸರಘಟ್ಟ ಜಲಾಶಯದಲ್ಲಿ ಹೂಳು ಏಕೆ ತೆಗೆಯುತ್ತೀರಿ? ನೀರು ಬರೋಲ್ಲ ಎಂದು ಕೊಂಕು ನುಡಿದಿದ್ದವರಿಗೆ ವರುಣ ಸೂಕ್ತ ಉತ್ತರ ನೀಡಿದ್ದಾನೆ. ಅದಕ್ಕೇ ದಿನವೂ ನೂರಾರು ಜನರು ಹೆಸರಘಟ್ಟಕ್ಕೆ ಬಂದು ನೀರಿನ ಸಂಗ್ರಹದ ಸೊಬಗು ಸವಿಯುತ್ತಿದ್ದಾರೆ.
ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ಈ ವರ್ಷ ಹೆಚ್ಚಿನ ನೀರು ಹರಿದುಬರುತ್ತಿದೆ. ಹಿಂದೆ ಕೇವಲ ಕಲ್ಮಶಯುಕ್ತ ನೀರು ಮಾತ್ರ ತಿಪ್ಪಗೊಂಡನಹಳ್ಳಿ ಸೇರುತ್ತಿತ್ತು. ಈ ಬಾರಿ ಸ್ವಚ್ಛ ಮಳೆ ನೀರು ಹರಿದುಬರುತ್ತಿರುವುದು ಜಲಮಂಡಳಿ ಅಧಿಕಾರಿಗಳಲ್ಲಿ ಹರ್ಷ ತಂದಿದೆ. ಕಳೆದ ಐದಾರು ವರ್ಷಗಳಲ್ಲಿ ಇಷ್ಟು ನೀರಿನ ಹರಿವು ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅರ್ಕಾವತಿ ನದಿ ಹರಿದರೆ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ತುಂಬುತ್ತವೆ. ನಂದಿಬೆಟ್ಟದಿಂದ ಕಾಲುವೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಒತ್ತುವರಿ ತೆರವುಗೊಳಿಸಿ, ನದಿ ಪುನಶ್ಚೇತನವಾದರೆ ಹೆಸರಘಟ್ಟಕ್ಕೆ ನೀರು ತುಂಬುತ್ತದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದರು. ಸರಕಾರ ಪುನಶ್ಚೇತನಕ್ಕೆ ಸಮಿತಿ ರಚಿಸುವ ಭರವಸೆಯನ್ನೂ ನೀಡಿದೆ. ಈ ಪುನಶ್ಚೇತನದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ್ದರೆ ಇನ್ನೆಷ್ಟು ನೀರು ಬಂದಿರುತ್ತಿತ್ತು? ಈ ಬಗ್ಗೆ ಆಲೋಚಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಮಳೆ: ಒಳಭಾಗದಲ್ಲಿ ಕಿರಿಕಿರಿ; ಹೊರಭಾಗದಲ್ಲಿ ನಲಿನಲಿ

ಭಾರಿ ಮಳೆ ಬಂದಾಗ ಮಹಾನಗರ ತತ್ತರಿಸುತ್ತದೆ. ಒಳಭಾಗದಲ್ಲಿರುವ ಜನರ ಶಾಪಕ್ಕೂ ಗುರಿಯಾಗುತ್ತದೆ. ಏಕೆಂದರೆ, ಇಲ್ಲಿ ಬರೀ ನೀರಲ್ಲ, ಕೊಳಕೂ ಮನೆ ಒಳಗೆ ನುಗ್ಗುತ್ತದೆ. ಆದರೆ, ಹೊರವಲಯ ಹಾಗಲ್ಲ. ಮಳೆಯಲ್ಲಿ ಮಿಂದೇಳಲು ಬಯಸುತ್ತದೆ. ಅದಕ್ಕೇ, ಉದ್ಯಾನನಗರಿಯ ಅಂಚಿನಲ್ಲಿ ನದಿಯೊಂದು ದಶಕದ ನಂತರ ಸ್ವಚ್ಛವಾಗಿ ಹರಿಯುತ್ತಿದೆ.
ಸೋಮವಾರದಿಂದ ಬೆಂಗಳೂರು ಭಾರಿ ಮಳೆ ಸುರಿಯುತ್ತಿದೆ. ನೂರಾರು ಮಿಲಿಮೀಟರ್‌ನಷ್ಟು ಮಳೆಯಾಗಿದೆ. ನಗರದಲ್ಲಿ ನೂರಾರು ಕೆರೆಗಳಿದ್ದರೂ ಈ ನೀರನ್ನು ತಮ್ಮ ಒಡಲಿಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿವೆ. ರಾಜಕಾಲುವೆ ಹಾಗೂ ಮಳೆ ನೀರು ಕೆರೆಗೆ ಹರಿಯುವ ವ್ಯವಸ್ಥೆ ಇಲ್ಲ. ಆದ್ದರಿಂದಲೇ ನಗರ ಹಲವು ಭಾಗದಲ್ಲಿ ಒಳಚರಂಡಿ ನೀರು ಮನೆಯೊಳಗೆ ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೀಗಿದ್ದರೂ, ವೃಷಭಾವತಿ ನದಿ ಮಾತ್ರ ಅಲ್ಪ ಕೊಳೆ ಕಳೆದುಕೊಂಡಿದೆ.
ನಗರದಲ್ಲಿರುವ ಕೆರೆಗಳಿಗೆ ಮಳೆ ನೀರು ಹರಿಸುವ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಬೆಂಗಳೂರು ನಗರ ಮಳೆಗೆ ತತ್ತರಿಸುವಂತಾಗಿರುವುದಕ್ಕೆ ಪ್ರಮುಖ ಕಾರಣ. ಮಡಿವಾಳ, ಅಗರ, ಬೇಗೂರು, ದೊರೆಕೆರೆ, ಸಾರಕ್ಕಿ, ಪುಟ್ಟೇನಹಳ್ಳಿಯಂತಹ ದೊಡ್ಡ ಕೆರೆಗಳು ಇಂದಿಗೂ ಕೋಡಿ ಹೋಗಿಲ್ಲ. ಏಕೆಂದರೆ, ಸಾಮಾನ್ಯ ಹರಿವೇ ಹೊರಹೋಗುತ್ತಿದೆ. ಅಂದರೆ, ಒಳಚರಂಡಿ ನೀರು ಬಿಟ್ಟರೆ ಮಳೆ ನೀರು ಇಲ್ಲಿಗೆ ಹರಿಯುತ್ತಿಲ್ಲ. ನಗರದಲ್ಲಿ ಹಲವು ಕೆರೆಗಳಿಗೆ ಮಳೆ ನೀರು ಹರಿಯಲು ಮಾರ್ಗವೇ ಇಲ್ಲ. ಕೆಲವು ಕೆರೆಗಳಿಗೆ ನೀರು ಹರಿದರೂ, ಅಲ್ಲಿ ನೀರಿನ ಸಂಗ್ರಹಕ್ಕೆ ಸ್ಥಳವೇ ಇಲ್ಲ. ಹೂಳು ಯಥೇಚ್ಛವಾಗಿ ತುಂಬಿದೆ.
ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮಳೆ ನೀರು ಹರಿಯಲು ರಾಜಕಾಲುವೆಗಳನ್ನು ಸೂಕ್ತವಾಗಿ ನಿರ್ವಹಿಸಲಾಗಿದೆ. ಕೆರೆಗೆ ನೀರು ಹರಿಸಿ, ಪ್ರವಾಹ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಬೇಸಿಗೆ ಕಾಲದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು. ಆದರೆ, ಕಳೆದ ವಾರದ ನಾಲ್ಕು ದಿನ ಮಳೆ ಇದನ್ನು ಅಲ್ಲಗಳೆದಿದೆ. ಬಿಬಿಎಂಪಿ ಯಾವುದೇ ಮುನ್ನೆಚ್ಚರಿಕೆ ಕಾರ್ಯ ಕೈಗೊಂಡಿಲ್ಲ, ಕೆರೆಯಲ್ಲಿ ಹೂಳು ಎತ್ತಿಲ್ಲ ಎಂಬುದು ಸಾಬೀತಾಗಿದೆ. ಕೆರೆಗಳ ಮಹತ್ವ ಬಿಬಿಎಂಪಿ ಅರಿವಿಗೆ ಇನ್ನಾದರೂ ಬಂದೀತೇ?
ಹೊರವಲಯದಲ್ಲಿ ಖುಷಿ
ನಗರದ ಒಳಗೆ ಮಳೆ ಏಕೆ ಬರುತ್ತೋ ಎಂದು ಜನ ಒಲ್ಲದ ಮನಸ್ಸಿನಿಂದ ಶಾಪ ಹಾಕುತ್ತಿದ್ದರೆ, ಹೊರಭಾಗದಲ್ಲಿ ಮಳೆ ಇನ್ನಷ್ಟು ಬಂದಿದ್ದರೆ ನಮ್ಮ ಕೆರೆ ತುಂಬುತ್ತಿತ್ತು. ಬೋರ್‌ವೆಲ್‌ನಲ್ಲಿ ನೀರು ಹೆಚ್ಚಾಗುತ್ತಿತ್ತು. ನಮ್ಮ ಜಲಾಶಯ ತುಂಬುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ. ಮಾಕಳಿಯಲ್ಲಿ ಅರ್ಕಾವತಿ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮಕ್ಕಳು, ಹಿರಿಯರು ಸಂತಸಪಡುತ್ತಿದ್ದಾರೆ.
ಹೆಸರಘಟ್ಟ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದಂತೆ ಅಲ್ಲಿಂದ, ತಿಪ್ಪಗೊಂಡನಹಳ್ಳಿಯವರೆಗೆ ಅರ್ಕಾವತಿ ನದಿ ಹರಿವು ಕೂಡ ಹೆಚ್ಚಾಗಿದೆ. ತರಬನಹಳ್ಳಿ ಸಮೀಪವಿರುವ ರೈಲ್ವೆ ಸೇತುವೆ ಕೆಳಗೆ ಅರ್ಕಾವತಿ ಹೊಳೆ ಮೈದುಂಬಿ ಹರಿಯುತ್ತಿದೆ. ೧೫ ದಿನಗಳ ಹಿಂದ ವಾಹನ ಓಡಾಡುವ ರಸ್ತೆಯಾಗಿದ್ದ ಈ ಪ್ರದೇಶದಲ್ಲಿ ಈಗ ನೀರಿನ ಸಾಮ್ರಾಜ್ಯ.
ಮಾಕಳಿಯ ಬಳಿಯಿರುವ ಭೀರೇಶ್ವರ ಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಹೊಳೆಯ ಹರಿವು ವೃದ್ಧಿಯಾಗಿದೆ. ಶಾಲಾ ಮಕ್ಕಳು ಈ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮೋಜು ಅನುಭವಿಸುತ್ತಿದ್ದಾರೆ. ಯಾವಾಗಲೂ, ಕಲ್ಮಶವನ್ನು ಮೈಗಂಟಿಕೊಂಡು ಸಣ್ಣದಾಗಿ ಹರಿಯುತ್ತಿದ್ದ ಅರ್ಕಾವತಿ ನದಿ, ಈಗ ಇಲ್ಲಿ ಮೀನುಗಾರರಿಗೆ ಕೆಲಸ ನೀಡಿದ್ದಾಳೆ. ಅಲ್ಲಲ್ಲಿ ಸಣ್ಣ ಬಲೆಗಳನ್ನು ಹಾಕಿ ಮೀನು ಹಿಡಿಯುವ ಕಾರ್ಯ ನಡೆಯುತ್ತಿದೆ.
ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೂ ಅರ್ಕಾವತಿ ನದಿ ಹರಿವು ಹತ್ತು ವರ್ಷಗಳ ನಂತರ ಉತ್ತಮವಾಗಿದೆ. ಸೊಂಡೆಕೊಪ್ಪ, ವರ್ತೂರು ಬಳಿಯ ಹೊಳೆಯ ಹರಿವು ಕಂಡು ಜನ ಸಂತಸಗೊಂಡಿದ್ದಾರೆ. ಅಬ್ಬಾ, ನಮ್ಮ ನದಿ ಮತ್ತೊಮ್ಮೆ ಹರಿಯುತ್ತಿದೆಯಲ್ಲ ಎಂದು ಹಿರಿಯರು ಸಮಾಧಾನ ಪಡುತ್ತಿದ್ದಾರೆ. ಯುವಕರಿಗೆ ಉಲ್ಲಾಸ ಮೈತುಂಬಿದ್ದರೆ, ಮಕ್ಕಳು ಕಣ್ಣರಳಿಸಿಕೊಂಡು ಹೊಳೆಯನ್ನು ನೋಡುತ್ತಿದ್ದಾರೆ. ನೀರು ಹರಿಯುತ್ತಿರುವ ಎಲ್ಲ ಕಡೆಯೂ ಜನ ಅಚ್ಚರಿಯಿಂದ ದೃಷ್ಟಿ ಹರಿಸುತ್ತಿದ್ದಾರೆ.

Monday, September 21, 2009

ದೊರೆ ಕೊಳಕು ಸಾಮ್ರಾಜ್ಯಕ್ಕೆ ತೆರೆ; ಹೈಟೆಕ್ ಹೊಳೆ

ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯಲ್ಲಿರುವ ದೊರೆ ಕೆರೆಯ 29 ಎಕರೆ ಸಾಮ್ರಾಜ್ಯ ಕಲ್ಮಶದಿಂದ ಮುಕ್ತವಾಗಿದೆ. ಒಳಚರಂಡಿ ನೀರಿಗೆ ತನ್ನ ಸೆರಗಿನಲ್ಲಿ ರೂಪಿಸಿರುವ ಕಾಲುವೆಯಲ್ಲಿ ದಾರಿ ಮಾಡಿಕೊಟ್ಟು, ಹೈಟೆಕ್ ರೂಪಪಡೆದುಕೊಂಡು, ಪ್ರಕಾಶ ಬೀರಲು ಸಜ್ಜಾಗುತ್ತಿದೆ.
ದೊರೆಕೆರೆಗೆ ಒಳಚರಂಡಿ ನೀರು ಈಗ ಹೋಗುತ್ತಿಲ್ಲ. ಕೆರೆಯನ್ನು ಸಂಪೂರ್ಣ ಒಣಗಿಸಲಾಗಿದೆ. ಮಳೆ ನೀರು ಮಾತ್ರ ಕೆರೆಗೆ ಹರಿಯುತ್ತಿದೆ. ಒಳಚರಂಡಿ ನೀರಿಗೆ ಕೆರೆಯ ಅಂಚಿನಲ್ಲಿ ಕಾಲುವೆ ನಿರ್ಮಿಸಿ ಅಲ್ಲಿಂದ ಹರಿದು ಹೋಗುವಂತೆ ಮಾಡಲಾಗಿದೆ. ಕೆರೆಯ ಒಳಗೆ ಎರಡು ದ್ವೀಪಗಳನ್ನು ಸೃಷ್ಟಿಸಲಾಗಿದೆ. ಅಷ್ಟೇಅಲ್ಲ, ಕೆರೆಯ ಅಂಗಳಕ್ಕೆ ಬೇಲಿ ಹಾಕಲಾಗಿದೆ. ಆದರೆ, ಮೂಲ ಸ್ವರೂಪ ಅಥವಾ ವ್ಯಾಪ್ತಿಗೆ ಬೇಲಿ ಹಾಕಿಲ್ಲ ಎಂಬುದು ಅಚ್ಚರಿ ಸಂಗತಿ. ಇಷ್ಟಾದರೂ, ಕೆರೆಗೊಂದು ಬೇಲಿ, ಕಲ್ಮಶಮುಕ್ತ ವಾತಾವರಣ ರೂಪಿಸಲಾಗಿರುವುದು ಸಮಾಧಾನಕರ. ದಾಖಲೆಯಲ್ಲಿರುವ ದೊರೆ ಕೆರೆಯ ವಿಸ್ತೀರ್ಣ 31 ಎಕರೆ 32.88 ಗುಂಟೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 1.20 ಕೋಟಿ ರೂ. ವೆಚ್ಚದಲ್ಲಿ ದೊರೆ ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಕೆರೆಯನ್ನು ಒಣಗಿಸಿ, ಅದರಲ್ಲಿನ ಕಲ್ಮಶವನ್ನು ಹೊರಹಾಕಲಾಗಿದೆ. ಅದರೊಳಗೆ ಎರಡು ದ್ವೀಪ ನಿರ್ಮಾಣವಾಗಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕೆರೆಗೆ ಮಳೆನೀರು ಮಾತ್ರ ಒಳಬರುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಲ್ಲದೆ, ಬೋಟಿಂಗ್ ವ್ಯವಸ್ಥೆ, ಶೌಚಾಲಯ, ನೀರು ಸಂಸ್ಕರಣ ಘಟಕ, ವಾಚ್‌ಮೆನ್ ಶೆಡ್, ಧ್ಯಾನ ಕೇಂದ್ರ ಒಳಗೊಂಡಂತೆ ಹೈಟೆಕ್ ಮಾದರಿಯಲ್ಲಿ (ನೀಲನಕ್ಷೆ ನೋಡಿ) ದೊರೆಕೆರೆ ಅಭಿವೃದ್ಧಿಯಾಗಲಿದೆ.
ದೊರೆಕೆರೆಯನ್ನು ನಗರಕ್ಕೆ ಮಾದರಿ ಕೆರೆಯನ್ನಾಗಿ ಪರಿವರ್ತಿಸಲಾಗುವುದು. ಈಗಾಗಲೇ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಾರು ತಿಂಗಳಲ್ಲಿ ಕೆರೆಗೆ ಹೊಸ ಸ್ವರೂಪ ನೀಡಲಾಗುತ್ತದೆ. ದೊರೆ ಕೆರೆ ಈ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಎಲ್ಲ ರೀತಿಯ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗೆ ಹೈಟೆಕ್ ಸ್ವರೂಪ ನೀಡಲಾಗುತ್ತದೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ದ್ವೀಪ, ಬೋಟಿಂಗ್ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 14 ದೊಡ್ಡ ಕೆರೆಗಳಿವೆ. ಅವುಗಳೆಲ್ಲವನ್ನೂ ಉನ್ನತ ದರ್ಜೆಯಲ್ಲಿಯೇ ಅಭಿವೃದ್ಧಿ ಮಾಡಲಾಗುತ್ತದೆ. ಬಿಡಿಎ, ಬಿಬಿಎಂಪಿ ವತಿಯಿಂದ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಥಮ ಹಂತದ ಕಾಮಗಾರಿಯಲ್ಲಿ ಕೆರೆಗಳೂ ಕಲ್ಮಶಂiಮುಕ್ತವಾಗುವಂತೆ ಮಾಡಲಾಗುತ್ತದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಎಲ್ಲ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆಗಳೆಂದರೆ ಹೀಗಿರಬೇಕು ಎಂದು ಪರಿಸರವಾದಿಗಳು ಸೇರಿದಂತೆ ಸ್ಥಳೀಯ ಜನರು ಹೆಮ್ಮೆ ಪಟ್ಟುಕೊಂಡು ಹೇಳಬೇಕು. ಆ ರೀತಿ ಈ ಕೆರೆಗಳು ಅಭಿವೃದ್ಧಿ ಆಗಲಿವೆ.
ಕೊತ್ತನೂರು, ಚುಂಚಘಟ್ಟ ಕೆರೆ ಕಲ್ಮಶ ಮುಕ್ತ
ಕೊತ್ತನೂರು ಹಾಗೂ ಚುಂಚಘಟ್ಟ ಕೆರೆಗೆ ಸುತ್ತಮುತ್ತಲ ಪ್ರದೇಶದ ಒಳಚರಂಡಿ ನೀರು ಸಂಪೂರ್ಣವಾಗಿ ಹರಿಯುತ್ತಿದೆ. ಈ ಕಲ್ಮಶವನ್ನು ಕೆರೆಯ ಹೊರಭಾಗದಿಂದ ಹರಿಯುವಂತೆ ಮಾಡಿ, ಅದಕ್ಕಾಗಿ ವಿಶೇಷ ರೀತಿಯ ಕಾಮಗಾರಿಯನ್ನು ಕೈಗೊಳ್ಳಲು ಬೆಂಗಳೂರು ಒಳಚರಂಡಿ ಮಂಡಳಿ ಅಣಿಯಾಗಿದೆ. ಈ ಎರಡೂ ಕೆರೆಗಳ ಅಂಚಿನಿಂದ ಪೈಪ್‌ಲೈನ್ ಮೂಲಕ ಒಳಚರಂಡಿ ನೀರು ಹರಿಯುವಂತೆ ಮಾಡಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹೋಗದಂತೆ ತಡೆ ಹಾಕಲಾಗುತ್ತದೆ.
ಈ ಎರಡೂ ಕೆರೆಗಳನ್ನು ಕಲ್ಮಶಮುಕ್ತವನ್ನಾಗಿಸುವ ಯೋಜನೆಗೆ ಇನ್ನು ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ. ಈಗಾಗಲೇ ಯೋಜನೆ ರಚನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದು ಪೂರ್ಣಗೊಂಡ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಮೂರು ಅಥವಾ ನಾಲ್ಕು ತಿಂಗಳಲ್ಲೆ ಚುಂಚಘಟ್ಟ ಹಾಗೂ ಕೊತ್ತನೂರು ಕೆರೆಗಳು ಕಲ್ಮಶದಿಂದ ಮುಕ್ತವಾಗುತ್ತದೆ.
ಕೊತ್ತನೂರು ಕೆರೆಯನ್ನು ಬಿಡಿಎ ಅಭಿವೃದ್ಧಿಪಡಿಸಲು 3.6 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲವಾದರೂ, ಇದನ್ನು ಕೂಡಲೇ ಆರಂಭಿಸಲು ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇನ್ನೊಂದು ವರ್ಷದಲ್ಲಿ ಕೊತ್ತನೂರು ಕೆರೆ ಅಭಿವೃದ್ಧಿ ಆಗಲಿದೆ.
ಚುಂಚಘಟ್ಟ ಕೆರೆಯನ್ನು ಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆ ಸಂಪೂರ್ಣ ಕಲ್ಮಶಗೊಂಡಿರುವುದರಿಂದ ಏರಿಯ ಕೆಳಭಾಗದಲ್ಲಿ ಕೊಳವೆ ಬಾವಿಯಲ್ಲಿ ಕಲ್ಮಶ ನೀರು ಬರುತ್ತಿದೆ. ಆದ್ದರಿಂದ, ಮೊದಲ ಹಂತದಲ್ಲಿ ಒಳಚರಂಡಿ ನೀರಿಗೆ ತಡೆ ಹಾಕಲಾಗುತ್ತದೆ. ನಂತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎನ್ನುತ್ತಾರೆ ಶಾಸಕ ಎಂ. ಕೃಷ್ಣಪ್ಪ.
ಗೊಟ್ಟಿಗೆರೆ ಊರ ಬಂಡೆ ಮೇಲೆ ಜಲಸಂಗ್ರಹಗಾರ
ಗೊಟ್ಟಿಗೆರೆ ಕೆರೆ ನೈಸ್ ರಸ್ತೆಯ ಕಾಮಗಾರಿಯಿಂದ ಪ್ರಚಲಿತವಾಗಿದೆ. ಈ ಕೆರೆಯ ಮೇಲೆ ನೈಸ್ ರಸ್ತೆ ಸಾಗದಂತೆ ಸ್ಥಳೀಯರು ಹಾಗೂ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಹೈಕೋರ್ಟ್ ಕೂಡ ಸಾಕಷ್ಟು ಸಹಕರಿಸುತ್ತಿದೆ. ಇದೇ ಗೊಟ್ಟಿಗೆರೆಯ ಊರಬಂಡೆ, ಇದೀಗ ಸುದ್ದಿಯಲ್ಲಿದೆ. ನೂರಾರು ಬಡಾವಣೆಗಳಿಗೆ ನೀರು ಕಾವೇರಿ ನೀರು ಕೊಡುವ ಜಲಾಗಾರಕ್ಕೆ ಈ ಊರಬಂಡೆ ಆಶ್ರಯ ನೀಡಲು ಅಣಿಯಾಗುತ್ತಿದೆ.
ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ನಾಲ್ಕನೇ ಹಂತದ 2ನೇ ಘಟ್ಟಕ್ಕೆ ಜಲಸಂಗ್ರಹಗಾರಕ್ಕಾಗಿ ಪ್ರದೇಶವನ್ನು ಹುಡುಕಲಾಗುತ್ತಿತ್ತು. 950 ಮೀಟರ್ ಎತ್ತರವಿರುವ, ಗೊಟ್ಟಿಗೆರೆ ಊರಬಂಡೆ ಪ್ರದೇಶವನ್ನು ಇದೀಗ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಊರಬಂಡೆ ಜಾಗದಲ್ಲಿ ತೋಟಗಾರಿಕೆ ಇಲಾಖೆ ಈಗಾಗಲೇ ಉದ್ಯಾನ ನಿರ್ಮಿಸುವ ಕಾಮಗಾರಿ ಕೈಗೊಂಡಿದೆ. ಇದೀಗ ಜಲಸಂಗ್ರಹಗಾರಕ್ಕೆ 6 ಎಕರೆ ಪ್ರದೇಶವನ್ನು ನೀಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಊರಬಂಡೆ ಪಾತ್ರವಾಗುತ್ತದೆ.
ನಗರದ ಅತ್ಯಂತ ಎತ್ತರ ಪ್ರದೇಶವಾಗಿರುವ ಈ ಊರಬಂಡೆಯಲ್ಲಿ ಜಲಸಂಗ್ರಹಗಾರ ನಿರ್ಮಿಸಿದರೆ, ಪಂಪಿಂಗ್‌ನ ಅಗತ್ಯವಿಲ್ಲದೆ ಗುರುತ್ವಾಕರ್ಷಣೆಯಿಂದಲೇ ನೀರನ್ನು ಪೂರೈಸಬಹುದು. 22 ದಶಲಕ್ಷ ಲೀಟರ್ ನೀರು ಪೂರೈಸಬಹುದು. ಆದ್ದರಿಂದ, ಈ ಪ್ರದೇಶವನ್ನು ಜಲಮಂಡಳಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಕಾಮಗಾರಿಗೆ ಜಲಮಂಡಳಿ ಖಾತೆ ಸಚಿವ ಕಟ್ಟಾ ಸುಬ್ರಹ್ಮಣನಾಯ್ಡು ಅವರೇ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಪರಿಸರ ರಕ್ಷಣೆಯಲ್ಲಿ ಉದ್ಯಾನವನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 50 ಉದ್ಯಾನವನಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ 15 ಉದ್ಯಾನಗಳನ್ನು ಇನ್ನು 15 ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ. ಕೆಲವು ಉದ್ಯಾನಗಳಲ್ಲಿ ಸಂಗೀತದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

Wednesday, September 16, 2009

ಪುನಶ್ಚೇತನ ಸಮಿತಿ ಸಾಲದು; ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಆಡಳಿತಾರೂಢ ಪಕ್ಷ ಶಾಸಕರು ಹಾಗೂ ಸಚಿವರು ಪಾದಯಾತ್ರೆ ಮಾಡಿ, ಯಶಸ್ಸೂ ಸಾಧಿಸಿದ್ದಾರೆ. ಅಧಿಕಾರದಲ್ಲಿರುವವರು ಕ್ರಮ ಕೈಗೊಳ್ಳಬಹುದಲ್ಲವೇ? ಪಾದಯಾತ್ರೆ ಏಕೆ? ಎಂದು ಹತ್ತಾರು ದನಿಗಳು ಎದ್ದಿವೆ. ನದಿಪಾತ್ರದಲ್ಲಿನ ಒತ್ತುವರಿ ತೆರವಿಗೆ ಜನಜಾಗೃತಿಗಾಗಿ ಈ ಪಾದಯಾತ್ರೆ ಎಂಬುದು ಸ್ಪಷ್ಟ ಉತ್ತರ. ಇದಾದ ಮೇಲೆ ಮುಂದೇನು? ಎಂಬುದು ಈಗಿನ ಪ್ರಶ್ನೆ.ಅರ್ಕಾವತಿ ನದಿ ಸಂರಕ್ಷಣಾ ವೇದಿಕೆ ಹೆಸರಿನಡಿ ಶಾಸಕಸ್.ಆರ್. ವಿಶ್ವನಾಥ್ ಪಕ್ಷಾತೀತವಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಎಲ್ಲ ಪಕ್ಷದ ಶಾಸಕರನ್ನೂ ಆಹ್ವಾನಿಸಲಾಗಿತ್ತು. ಪರಿಸರವಾದಿಗಳು ಹಾಗೂ ಹಲವು ಸಂಘಟನೆಗಳು ಇದರಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಿದರು. ಪ್ರತಿಪಕ್ಷಗಳ ಶಾಸಕರು ಬಿಜೆಪಿ ಶಾಸಕರೊಂದಿಗೆ ನಾವೇಕೆ ಗುರುತಿಸಿಕೊಳ್ಳಬೇಕೆಂದು ಸುಮ್ಮನಾದರು.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದವರೆಗೆ ಪ್ರಥಮ ಹಂತದಲ್ಲೇ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕಿದೆ. ನಂತರ ಹಂತದಲ್ಲಿ ಒತ್ತುವರಿ ಸೇರಿಕೊಂಡಂತೆ ಮಾಲಿನ್ಯರಹಿತ ನದಿಪಾತ್ರ ಸೃಷ್ಟಿಸಬೇಕಿದೆ. ಕೈಗಾರಿಕೆಗಳ ಯಾವುದೇ ಒತ್ತಡಕ್ಕೆ ಮಣಿಯದೆ, ಕಾರ್ಖಾನೆಗಳನ್ನು ನದಿಪಾತ್ರದ ಒಂದು ಕಿಮೀ ದೂರದಿಂದ ಹೊರಗುಳಿಸಬೇಕಿದೆ. ಇದಕ್ಕೆಲ್ಲ ಸಾರ್ವಜನಿಕರು ಹಾಗೂ ಸ್ಥಳೀಯರ ಬೆಂಬಲವೂ ದೊರೆತಿದೆ. ಒತ್ತುವರಿ ತೆಗೆಸಿರಿ, ಇಲ್ಲದಿದ್ದರೆ ನೀರು ಹರಿಯುವುದಿಲ್ಲ. ಇದಕ್ಕಾಗಿ ನಾವೇನು ಮಾಡಬೇಕು ಹೇಳಿ? ನಮ್ಮ ಸಂಪೂರ್ಣ ಸಹಕಾರ ನಿಮಗಿದೆ ಎಂದು ನದಿಪಾತ್ರದ ಮುಖಂಡರು ಹಾಗೂ ನಾಗರಿಕರು ಪಾದಯಾತ್ರಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ಅರ್ಕಾವತಿ ನದಿ ಪಾತ್ರದಲ್ಲಿರುವ ನಾಗರಿಕರು ನದಿ ಹರಿಸುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಆದರೆ, ಇವತ್ತು ಬಂದಿದ್ದಾರೆ ನಾಳೆ ಇದಕ್ಕೆ ಚಾಲನೆ ನೀಡುತ್ತಾರೆಯೇ? ಎಂಬ ಅನುಮಾನವೂ ಅವರಲ್ಲಿದೆ. ಇದನ್ನು ನಿವಾರಿಸಬೇಕೆಂದರೆ, ಪಾದಯಾತ್ರೆಯ ಜನಜಾಗೃತಿ ಉದ್ದೇಶ ಈಡೇರಬೇಕಿದೆ. ಭೇದಭಾವವಿಲ್ಲದೆ ನದಿ ಪುನಶ್ಚೇತನಕ್ಕೆ ಸಕಲ ಕ್ರಮವನ್ನೂ ಕೈಗೊಳ್ಳಬೇಕಿದೆ. ಸರಕಾರ ಇದಕ್ಕೆ ಸ್ಪಂದಿಸಿ ಅರ್ಕಾವತಿ ನದಿ ಪುನಶ್ಚೇತನ ಸಮಿತಿಯನ್ನು ರಚಿಸುವ ಭರವಸೆಯನ್ನೂ ನೀಡಿದೆ.
ನದಿ ಪುನಶ್ಚೇತನಕ್ಕೆ ಪಾದಯಾತ್ರೆ, ಸಮಿತಿ ರಚನೆ ಅಷ್ಟೇ ಸಾಲದು. ಇಷ್ಟಾಯಿತಲ್ಲ ಎಂದು ವಿರಮಿಸಿದರೆ, ಇದೊಂದು ಗಿಮಿಕ್ ಎಂದೆನಿಸಿಬಿಡುತ್ತದೆ. ನದಿ ಪುನಶ್ಚೇತನಕ್ಕೆ ಪ್ರಾಮಾಣಿಕ ಕೆಲಸ ಆಗಬೇಕೆಂದರೆ, ರಚಿಸುವ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಲೇಬೇಕು. ಎಲ್ಲ ಇಲಾಖೆಗಳಿಂದಲೂ ಕೆಲಸ ಮಾಡಿಸುವ ಅಧಿಕಾರ ಈ ಸಮಿತಿಗೆ ಇರಬೇಕು. ಅರ್ಕಾವತಿ ನದಿ ಪಾತ್ರ ಸಂರಕ್ಷಣೆಗೆ ೨೦೦೩ರಲ್ಲಿ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ತರುವ ಜವಾಬ್ದಾರಿಯೂ ಈ ಸಮಿತಿಗೆ ಇರಬೇಕು.
ನದಿ ಪುನಶ್ಚೇತನಕ್ಕೆ ವಿಧಾನಸೌಧದಲ್ಲಿ ಗಟ್ಟಿಯಾಗಿ ಕುಳಿತು ಯೋಜನೆ ರೂಪಿಸಬೇಕಿತ್ತು. ಇದನ್ನು ಬಿಟ್ಟು ಸರಕಾರದ ಸಚಿವರು, ಶಾಸಕರು ಪಾದಯಾತ್ರೆ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಆಪಾದಿಸಿದ್ದಾರೆ. ಪಾದಯಾತ್ರೆ-ಸಮಿತಿ ರಚನೆ ಭರವಸೆ ಹಂತದಲ್ಲಿಯೇ ಈ ರೀತಿಯ ಆಪಾದನೆ ಆರಂಭವಾಗಿದೆ ಎಂದರೆ, ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಆಪಾದನೆಗಳು ಎದುರಾಗಬಹುದು ಎಂಬುದನ್ನು ಅರಿತು, ಸರಕಾರ ಹೆಜ್ಜೆ ಇರಿಸಬೇಕಿದೆ.
ಅರ್ಕಾವತಿ ನದಿ ಪುನಶ್ಚೇತನ ಕಾರ್ಯಕ್ಕೆ ಪಕ್ಷಾತೀತ ಸಹಕಾರವೂ ಅಗತ್ಯ. ಪ್ರತಿಪಕ್ಷ ಕೇವಲ ಆಪಾದನೆಯನ್ನಷ್ಟೇ ಮಾಡಬಾರದು. ಒತ್ತುವರಿ ಮಾಡಿಕೊಂಡಿರುವವರಲ್ಲಿ ಎಲ್ಲ ಪಕ್ಷದ ಮುಖಂಡರೂ ಇದ್ದಾರೆ. ಅವರೆಲ್ಲನ್ನೂ ತೆರವುಗೊಳಿಸಬೇಕು. ಇದಕ್ಕೊಂದು ಸ್ಪಷ್ಟ ನೀತಿ, ನಿರ್ದಾಕ್ಷಿಣ್ಯ ಕ್ರಮ ಅತ್ಯಗತ್ಯ. ಈ ಕಾರ್ಯ ಪ್ರಾಮಾಣಿಕವಾಗಿ ಆಗದಿದ್ದರೆ, ಪಾದಯಾತ್ರೆಯ ಉದ್ದೇಶ ಈಡೇರುವುದಿಲ್ಲ. ಇತಿಹಾಸದಲ್ಲಿ ಒಂದು ಕಾರ್ಯಕ್ರಮವಾಗಿ ಮಾತ್ರ ಉಳಿಯುತ್ತದೆ. ಹಾಗಾಗದಿರಲಿ, ಅರ್ಕಾವತಿ ಹರಿಯಲಿ, ರೈತರು, ಪಟ್ಟಣವಾಸಿಗಳಿಗೆ ನೀರು ಲಭಿಸಲಿ.

Tuesday, September 8, 2009

ತಿಪ್ಪಗೊಂಡನಹಳ್ಳಿಯಲ್ಲಿ ಅಂತ್ಯ; ಪುನಶ್ಚೇತನಕ್ಕೆ ಮುನ್ನುಡಿ

ಅರ್ಕಾವತಿ ಪಾದಯಾತ್ರೆ-ದಿನ-4: ಸೆಪ್ಟೆಂಬರ್ 6, 2009
ಸರ್ ಎಂ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣವಾಗುತ್ತಿದ್ದಾಗ ಸಾವಿರಾರು ಜನರು ಕಾಮಗಾರಿಯಲ್ಲಿ ತೊಡಗಿದ್ದರು. ಅದಾದ ಮೇಲೆ, ಸುಮಾರು 76 ವರ್ಷಗಳ ನಂತರ, ಈ ಜಲಾಶಯದಲ್ಲಿ ಸಾವಿರಾರು ಜನರು ಒಂದೇ ಬಾರಿಗೆ ಇದ್ದದ್ದು ಸೆಪ್ಟೆಂಬರ್ 6, 2009ರ ಭಾನುವಾರ. ಅಂದು ಅರ್ಕಾವತಿ ನದಿ ನೀರಿಗೆ ಅಡ್ಡಲಾಗಿ ಕಾಮಗಾರಿ ನಡೆಯುತ್ತಿದ್ದು, ಇಂದು ಆ ನದಿಗೆ ನೀರು ಹರಿಸಲು ಗಂಗಾಪೂಜೆ ನೆರವೇರಿಸಲು ಜನಪ್ರತಿನಿಧಿಗಳೊಂದಿಗೆ ನಾಗರಿಕರು ಸೇರಿದ್ದರು.
ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರಿಗೆ ಅರ್ಕಾವತಿ ಸಂರಕ್ಷಣಾ ವೇದಿಕೆ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ನಾಲ್ಕು ದಿನದ 106 ಕಿಲೋಮೀಟರ್‌ಗಳ ಪಾದಯಾತ್ರೆ ತಿಪ್ಪಗೊಂಡನಹಳ್ಳಿಯಲ್ಲಿ ಭಾನವಾರ ಮುಕ್ತಾಯವಾಯಿತು. ಪಾದಯಾತ್ರೆಯ ಅಂತಿಮಸ್ತರದಲ್ಲಿ ಸಂಸದ ಅನಂತಕುಮಾರ್, ಸಾರಿಗೆ ಸಚಿವ ಆರ್. ಅಶೋಕ್, ಶಾಸಕರಾದ ಎಸ್. ಮುನಿರಾಜು, ರವಿಸುಬ್ರಹ್ಮಣ್ಯ, ವಿಜಯಕುಮಾರ್ ಅವರೊಂದಿಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯನ್ನು ಸೇರಿಕೊಂಡು, ಗಂಗಾಪೂಜೆಗೆ ಸಾಕ್ಷೀಭೂತರಾದರು.
ಅಂತಿಮ ದಿನದ ಪಾದಯಾತ್ರೆ ಸೊಂಡೆಕೊಪ್ಪದಿಂದ ಭಾನುವಾರ ಬೆಳಗ್ಗೆ ಆರಂಭವಾಯಿತು. ಮಲ್ಲಸಂದ್ರದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತಿಪ್ಪಗೊಂಡನಹಳ್ಳಿಯವರೆಗಿನ ಪ್ರತಿ ಹಳ್ಳಿಯಲ್ಲಿಯೂ ಹಸಿರತೋರಣದ ಸ್ವಾಗತದೊಂದಿಗೆ ಜನಜಾಗೃತಿ ಸಭೆಗಳು ನಡೆದವು. ಹಾಗೆಯೇ, 200ರ ಆಸುಪಾಸಿನಲ್ಲಿದ್ದ ಪಾದಯಾತ್ರಿಗಳ ಗಣನೆ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಗೆ ವಿಸ್ತರಿಸುತ್ತಾ ಹೋಯಿತು. ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದ ಪಾದಯಾತ್ರೆಗೆ ಚೋಳನಾಯಕಹಳ್ಳಿ ಸಮೀಪ ಸಂಸದ ಅನಂತಕುಮಾರ್, ಸಚಿವ ಆರ್. ಅಶೋಕ್, ಶಾಸಕರಾದ ರವಿಸುಬ್ರಹ್ಮಣ್ಯ, ವಿಜಯ್‌ಕುಮಾರ್ ಸೇರಿಕೊಂಡು, ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಹೆಜ್ಜೆ ಹಾಕಿದರು.
ಜಲಾಶಯದ ಹಿಂಭಾಗಕ್ಕೆ ಸಾಗಿದ ಪಾದಯಾತ್ರೆ, ಗಣೇಶನಂತೆ ಆಕಾರ ಹೊಂದಿರುವ ಕಲ್ಲಿಗೆ ವಿಘ್ನೇಶನ ಪೂಜೆ ನೆರವೇರಿಸಿತು. ಅಲ್ಲಿ ನಡೆದ ಗಂಗಾಪೂಜೆಯಲ್ಲಿ ಎಲ್ಲರೂ ಭಾಗವಹಿಸಿದರು. ಅರ್ಕಾವತಿ ಉಗಮಸ್ಥಾನದಿಂದ ಪಾದಯಾತ್ರೆಯಲ್ಲಿ ರಥದ ಮೂಲಕ ತಂದಿದ್ದ ಪಂಚಕುಂಭಗಳಲ್ಲಿನ ನೀರನ್ನು ವಿಶ್ವನಾಥ್ ಹಾಗೂ ಮುನಿರಾಜು ದಂಪತಿ ಮತ್ತು ಅನಂತಕುಮಾರ್, ಅಶೋಕ್ ಅವರು ಜಲಾಶಯಕ್ಕೆ ಸಮರ್ಪಿಸಿದರು. ನಂದಿಬೆಟ್ಟದಲ್ಲಿ ಉಗಮಿಸುವ ಅರ್ಕಾವತಿ ಇಲ್ಲಿಗೆ ಸರಾಗವಾಗಿ ಹರಿಯಲಿ ಎಂದು ಪ್ರಾರ್ಥಿಸಿದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಚಿವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಮಿತಿ ರಚಿಸಬೇಕೆಂಬ ಮನವಿ ಪತ್ರವನ್ನು ಪಾದಯಾತ್ರಿಗಳ ಪರವಾಗಿ ವಿಶ್ವನಾಥ್ ಹಾಗೂ ಮುನಿರಾಜು ಅವರು ಸಂಸದ ಅನಂತಕುಮಾರ್, ಸಚಿವ ಅಶೋಕ್ ಅವರಿಗೆ ನೀಡಿದರು. ಮುಖ್ಯಮಂತ್ರಿಯವರಿಗೆ ಈ ಮನವಿ ಪತ್ರ ತಲುಪಿಸಲು ಕೋರಲಾಯಿತು. ಅರ್ಕಾವತಿ ಪುನಶ್ಚೇತನ ಸಮಿತಿಗೆ ಎಲ್ಲ ಇಲಾಖೆಗಳೂ ನಿರ್ದೇಶನ ನೀಡುವ, ಅವರಿಂದ ಕೆಲಸ ಮಾಡುವ ಅಧಿಕಾರ ಸೇರಿದಂತೆ ಸರ್ವ ಅಧಿಕಾರ ನೀಡಬೇಕು ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಇಂತಹ ಇತಿಹಾಸ ರಚಿಸಿದ ಪಾದಯಾತ್ರೆಯ ಉದ್ದೇಶವನ್ನು ಈಡೇರಿಸುವ ಸ್ಪಷ್ಟ ಸೂಚನೆಯನ್ನೂ ರಾಜ್ಯ ಸರಕಾರ ನೀಡಿದೆ. ಸಚಿವರನ್ನು ಒಳಗೊಂಡ ಉನ್ನತಾಧಿಕಾರಿಗಳ ಸಮಿತಿ ರಚನೆಯನ್ನು ಮಾಡುವುದಾಗಿ ಹೇಳಿದೆ. ಇದು ಹೇಳಿಕೆಗೆ ಮಾತ್ರ ಸೀಮಿತವಾಗದೆ, ನದಿಯೊಂದನ್ನು ಪುನಶ್ಚೇತನಗೊಳಿಸಿ ಇತಿಹಾಸ ರಚನೆಯ ಕೆಲಸ ರಾಜ್ಯ ಸರಕಾರದಿಂದ ಪ್ರಾಮಾಣಿಕವಾಗಿ ಆಗಬೇಕಿದೆ. ಆಗ, ಇಡೀ ರಾಷ್ಟ್ರಕ್ಕೆ ಅರ್ಕಾವತಿ ನದಿ ಪುನಶ್ಚೇತನ ಮಾದರಿಯಾಗುತ್ತದೆ.

ಏನೆಂದರು?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರಾಷ್ಟ್ರೀಯ ಜಲನೀತಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಪೂರ್ಣವಾಗಿ ಸಮ್ಮತವಾಗುತ್ತದೆ. ನದಿ ಪುನಶ್ಚೇತನದ ಅವರ ಕನಸನ್ನು ರಾಜ್ಯಮಟ್ಟದಲ್ಲಿ ಪೂರ್ಣಗೊಳಿಸುವ ಕಾರ್ಯ ಅರ್ಕಾವತಿಯಿಂದಲೇ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಹರಿಯುತ್ತಿದ್ದ ನದಿಯನ್ನು ನಾವು ಬತ್ತಿಸಿದ್ದೇವೆ. ಎಲ್ಲವನ್ನೂ ಹೊಂದಿರುವ ಈ ಮಹಾನಗರಿಗೆ ನದಿ ದಂಡೆಯ ವೈಭವವೂ ಲಭಿಸಿದರೆ ಉದ್ಯಾನನಗರಿಯ ಸೊಬಗು ಮತ್ತಷ್ಟು ವೃದ್ಧಿಸುತ್ತದೆ. ಅಷ್ಟೇಅಲ್ಲ, ಕೃಷಿ ಚಟುವಟಿಕೆಗೆ ಬೆನ್ನೆಲುಬಾಗುವ ಅರ್ಕಾವತಿ ನದಿ ಪುನಶ್ಚೇತನದ ಕನಸನ್ನು ರಾಜ್ಯ ಸರಕಾರ ನನಸು ಮಾಡುತ್ತದೆ. ಕೇಂದ್ರದ ಪ್ರತಿನಿಧಿಗಳು ಇದರಲ್ಲಿರುತ್ತಾರೆ. -ಅನಂತಕುಮಾರ್, ಸಂಸದ
ಮುಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗಲಿದೆ. ಇದನ್ನು ಅರಿತಿರುವ ಸರಕಾರ ಮುಂದಾಲೋಚನೆ ದೃಷ್ಟಿಯಿಂದ ಅರ್ಕಾವತಿ ನದಿ ಪುನಶ್ಚೇತನವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಮತ್ತೊಂದು ವೃಷಭಾವತಿ ಆಗಲು ಬಿಡುವುದಿಲ್ಲ. ಅರ್ಕಾವತಿ ನದಿಯನ್ನು ಮಲೀನ ಮಾಡುತ್ತಿರುವವರು, ಒತ್ತುವರಿ ಮಾಡಿಕೊಂಡಿರುವರು, ನದಿ ಪಾತ್ರದಲ್ಲಿ ಕೈಗಾರಿಕೆ, ಗಣಿಗಾರಿಕೆ, ಮರಳುಸಾಗಣೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಮರಳು ನೀತಿಯಲ್ಲಿ ಇವೆಲ್ಲವನ್ನು ಸೇರಿಸಿಕೊಳ್ಳಲು ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳು ನಗರಕ್ಕೆ ಬಂದ ಕೂಡಲೇ ಉನ್ನತಾಧಿಕಾರಿಗಳ ಸಮಿತಿ ರಚನೆ ಆಗಲಿದೆ. ಅರ್ಕಾವತಿ ಮತ್ತೆ ಹರಿಯಲಿ. ಇದಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ
ಅರ್ಕಾವತಿ ನದಿ ಪುನಶ್ಚೇತನದಿಂದ ಬೆಂಗಳೂರಿಗೆ ನೀರು ದೊರೆಯುವುದು ಮಾತ್ರವಲ್ಲ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಗ್ರಾಮಗಳಲ್ಲಿ ಕೃಷಿಗೆ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಇದರಿಂದ ಪರಿಸರದಲ್ಲಿರುವ ಸಾವಿರಾರು ರೀತಿಯ ಜಲಚರ, ಪ್ರಾಣಿಪಕ್ಷಿಗಳಿಗೆ ಪ್ರಯೋಜನವಾಗುತ್ತದೆ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಜನಜಾಗೃತಿಗೆ ಈ ಪಾದಯಾತ್ರೆ ನಡೆಸಲಾಯಿತು. ಅರ್ಕಾವತಿ ನದಿ ನಂದಿಬೆಟ್ಟಯಿಂದ ಹರಿದು ಹೆಸರಘಟ್ಟ ತುಂಬಿದರೆ, ಅಲ್ಲಿಂದ ನಂದಿಗೆ ಪಾದಯಾತ್ರೆ ಮಾಡುತ್ತೇನೆ. ಆ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ. -ಎಸ್.ಆರ್. ವಿಶ್ವನಾಥ್, ಶಾಸಕ
ಅರ್ಕಾವತಿ ನದಿ ಹರಿದು ಹೆಸರಘಟ್ಟ ತುಂಬಿದರೆ, ಈಗಿರುವ ವ್ಯವಸ್ಥೆಯಿಂದ ದಾಸರಹಳ್ಳಿ ಕ್ಷೇತ್ರಕ್ಕೆ ಕೂಡಲೇ ಕುಡಿಯುವ ನೀರು ನೀಡಬಹುದು. ಇದು ನನ್ನ ಕ್ಷೇತ್ರದ ಜನರ ಪಾಲಿನ ಜೀವಗಂಗೆ. ಈ ನದಿಯನ್ನು ಹರಿಸಿದರೆ, ಬೆಂಗಳೂರಿನ ಶೇ.25ರಷ್ಟು ಭಾಗಕ್ಕೆ ನೀರು ಕೊಡಬಹುದು. ಆದ್ದರಿಂದ ಈ ನದಿ ಪುನಶ್ಚೇತನಕ್ಕಾಗಿ ಸರ್ವಪ್ರಯತ್ನ ಮಾಡುತ್ತೇನೆ. -ಎಸ್. ಮುನಿರಾಜು, ಶಾಸಕ

ಯಾರು ಎಷ್ಟು ನಡೆದರು?
ಅರ್ಕಾವತಿ ಪುನಶ್ಚೇತನ ವೇದಿಕೆಯಡಿ ಆಯೋಜಿಸಲಾಗಿದ್ದ ಈ ಪಾದಯಾತ್ರೆ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ 106 ಕಿಮೀ ಹೆಜ್ಜೆ ಹಾಕಿತು. ಈ ಸಂಪೂರ್ಣ ನಾಲ್ಕು ದಿನ, ಒಂದು ನಿಮಿಷವೂ ವಾಹನ ಹತ್ತದೆ, ಸಂಪೂರ್ಣ ನಡಿಗೆಯಲ್ಲಿ ಪಾಲ್ಗೊಂಡಿದ್ದು ಶಾಸಕ ಎಸ್. ವಿಶ್ವನಾಥ್. ಪಾದಯಾತ್ರೆಯ ರೂವಾರಿ ಆಗಿದ್ದ ವಿಶ್ವನಾಥ್, ಭಾಷಣ ಮಾಡುವಾಗ ಮಾತ್ರ ಮೈಕ್‌ಗಾಗಿ ವಾಹನ ಹತ್ತಿದ್ದು ಬಿಟ್ಟರೆ, ಅಂತಿಮ ದಿನ ಬೆರಳ ಸಂದಿಯಲ್ಲಿ ರಕ್ತ ಸುರಿಯುತ್ತಿದ್ದರೂ 106 ಕಿಮೀ ದೂರವನ್ನು ನಡಿಗೆಯಲ್ಲೇ ಪೂರ್ಣಗೊಳಿಸಿದರು.
ವಿಶ್ವನಾಥ್ ಜತೆಗೆ ಪೂರ್ಣ ಪಾದಯಾತ್ರೆ ಸುಮಾರು 100 ಜನರು ಹೆಜ್ಜೆ ಹಾಕಿದರು. ಶಾಸಕ ಎಸ್. ಮುನಿರಾಜು ನಾಲ್ಕು ದಿನ ಬಹುತೇಕ (ಸುಮಾರು 80 ಕಿ.ಮೀ.) ಹೆಜ್ಜೆ ಹಾಕಿದರು. ನಾಗದಳ ತಂಡ ನಂದಿಬೆಟ್ಟದಿಂದ ದೊಡ್ಡಬಳ್ಳಾಪುರ (30 ಕಿಮೀ); ಪರಿಸರವಾದಿ ಮಹೇಶ್ ಭಟ್ 12 ಕಿಮೀ (ಹನಿಯೂರಿನಿಂದ ಹೆಸರಘಟ್ಟ); ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ತಂಡ 11 ಕಿಮೀ (ನಂದಿಬೆಟ್ಟದಿಂದ ಸೀಗೇಹಳ್ಳಿ ಗೇಟ್); ಸಚಿವ ಸುರೇಶ್ ಕುಮಾರ್ 8 ಕಿಮೀ (ನಂದಿಬೆಟ್ಟದಿಂದ ಕ್ರಾಸ್‌ವರೆಗೆ); ಸಚಿವ ಆರ್ ಅಶೋಕ್ 7 ಕಿಮೀ (ತರಬನಹಳ್ಳಿಯಿಂದ ರೈಲ್ವೆ ಸೇತುವೆ ಹೊಳೆ ಹಾಗೂ ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಸಚಿವ ರಾಮಚಂದ್ರಗೌಡ 6 ಕಿಮೀ (ರಾವುತ್ತನಹಳ್ಳಿಯಿಂದ ಸೊಂಡೆಕೊಪ್ಪ); ಶಾಸಕ ನರಸಿಂಹಸ್ವಾಮಿ ದೊಡ್ಡಬಳ್ಳಾಪುರದ ವೀರಾಪುರದವರೆಗೆ (ಸುಮಾರು 6 ಕಿಮೀ), ಸಂಸದ ಅನಂತಕುಮಾರ‍್, ಶಾಸಕರಾದ ರವಿಸುಬ್ರಹ್ಮಣ್ಯ ಹಾಗೂ ವಿಜಯಕುಮಾರ್ 5 ಕಿಮೀ (ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಶಾಸಕ ನಾಗರಾಜ್ 4 ಕಿಮೀ(ಸೊಂಡೆಕೊಪ್ಪದ ಸಮೀಪದಲ್ಲಿ). ಇವರಲ್ಲದೆ, ಯಲಹಂಕ, ದಾಸರಹಳ್ಳಿಯ ಮುಖಂಡರು ಹಾಗೂ ನೂರಾರು ಜನರು ದಿನಕ್ಕೆ ಹತ್ತಾರು ಕಿಮೀ ದೂರ ಪಾದಯಾತ್ರೆಯಲ್ಲಿ ಸಾಗಿದರು.

ಇತಿಹಾಸ ರಚನೆ
ಅರ್ಕಾವತಿ ನದಿ ಪುನಶ್ಚೇತನಕ್ಕೆ ಜನಪ್ರತಿನಿಧಿಗಳನ್ನು ಒಳಗೊಂಡ ನಾಲ್ಕು ದಿನಗಳ ಪಾದಯಾತ್ರೆ ಹೊಸ ಇತಿಹಾಸ ರಚಿಸಿತು. ನದಿ ಪುನಶ್ಚೇತನ ಹಾಗೂ ಸಂರಕ್ಷಣೆ ಬಗ್ಗೆ ಜನಜಾಗೃತಿಯ ಮೂಲ ಉದ್ದೇಶವನ್ನು ಹೊಂದಿದ್ದ ಪಾದಯಾತ್ರೆ, ಪಕ್ಷಾತೀತವಾಗಿ ಹೆಜ್ಜೆಹಾಕಿತ್ತು. ಸಚಿವರು ಹಾಗೂ ಶಾಸಕರು ಸೇರಿದಂತೆ ಪರಿಸರವಾದಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್, ಮಹೇಶ್ ಭಟ್, ಸೀತಾರಾಂ, ಶಿವಮಲ್ಲು, ಕೆ.ಸಿ. ಶಿವರಾಂ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಅರ್ಕಾವತಿ ಪುನಶ್ಚೇತನ ಸಮಿತಿ, ನಾಗದಳ, ಕುಮುದ್ವತಿ ನೆಲ-ಜಲ ರಕ್ಷಣಾ ಸಮಿತಿ, ಅರ್ಕಾವತಿ ಜನಜಾಗೃತಿ ಸಮಿತಿ, ಜನಧ್ವನಿ, ಕರ್ನಾಟಕ ಸುರಕ್ಷಾ ಸೇನಾಪಡೆ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆಯ ಸಂದರ್ಭದಲ್ಲಿ ಮೂರು ದಿನ ಸುಗಮಸಂಗೀತದ ದಿಗ್ಗಜರಾದ ಡಾ. ಸಿ. ಅಶ್ವತ್ಥ್, ಡಾ. ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ ತಂಡ ಪರಿಸರ ಗೀತೆಗಳ ಸುಧೆಹರಿಸಿ, ಪರಿಸರ-ನದಿ ಉಳಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಸಾರಿದ್ದು ಗಮನಾರ್ಹವಾಗಿತ್ತು.
ಈ ಹಿಂದೆ, 2007ರ ಜನವರಿಯಲ್ಲಿ ಹಲವು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಸೇರಿಕೊಂಡು ಕೆ.ಸಿ. ಶಿವರಾಂ ಸಂಘಟನೆಯಲ್ಲಿ ನಂದಿಬೆಟ್ಟದಿಂದ ಕನಕಪುರದ ಸಂಗಮದವರೆಗೆ 190 ಕಿಮೀ ದೂರವನ್ನು ಒಂಬತ್ತು ದಿನದಲ್ಲಿ ಪಾದಯಾತ್ರೆ ಮೂಲಕ ಕ್ರಮಿಸಿದ್ದರು.