Tuesday, September 29, 2009

ಹೆಸರಘಟ್ಟ ಜಲಾಶಯದಲ್ಲಿ 7 ಅಡಿ ನೀರು

ನಂದಿ ಬೆಟ್ಟದಿಂದ ತಾಯಿ ಅರ್ಕಾವತಿ ಹರಿಯಲು ಇನ್ನೂ ಅನುವು ಮಾಡಿಕೊಟ್ಟಿಲ್ಲ. ನದಿ ಪುನಶ್ಚೇತನದ ಮಾತು, ಪಾದಯಾತ್ರೆ ಮಾತ್ರ ಆಗಿದೆ. ಒತ್ತುವರಿ ತೆರವಿಗೆ ಒಂದಿಷ್ಟೂ ಮನೋನಿರ್ಧಾರವಾಗಿದೆ. ಅಷ್ಟರಲ್ಲೇ, ವರುಣ ಕೃಪೆ ತೋರಿದ್ದಾನೆ. 10 ವರ್ಷಗಳ ನಂತರ ಹೆಸರಘಟ್ಟ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಿದ್ದಾನೆ. ನೀರೆಲ್ಲ ಹೆಸರಘಟ್ಟ ಸುತ್ತಮುತ್ತಲಿಂದ ಬಂದದ್ದು. ನಂದಿಯಲ್ಲಿನ ಮಳೆ ಕಾಲುವೆ ಮೂಲಕ ನೇರವಾಗಿ ಹರಿದಿದ್ದರೆ ಹೆಸರಘಟ್ಟ ಇನ್ನೆಷ್ಟು ನೀರು ತುಂಬಿಕೊಳ್ಳುತ್ತಿತ್ತು? ಅಂದರೆ, ಈಗ ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲೇ ಹೆಸರಘಟ್ಟಕ್ಕೆ ನೀರು ಹರಿಸಬಹುದೆಂಬುದು ಸಾಬೀತಾಗಿದೆ ಅಲ್ಲವೆ? ಇನ್ನೇಕೆ ತಡ? ಕಾರ್ಯಾರಂಭವಾಗಲಿ....

  • ಬೆಂಗಳೂರಿಗೆ ಪ್ರಥಮ ಬಾರಿಗೆ ಸಂಸ್ಕರಿತ ನೀರು ಪೂರೈಸಿದ ಹೆಸರಘಟ್ಟ ಜಲಾಶಯ ಹತ್ತು ವರ್ಷಗಳ ನಂತರ 7 ಅಡಿ ನೀರಿನ ಸೌಭಾಗ್ಯ ಕಂಡಿದೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯೇ ಇದಕ್ಕೆ ಪ್ರಮುಖ ಆಸರೆಯಾಗಿದ್ದು, ಕಳೆದ7ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದೆ.

ಹೆಸರಘಟ್ಟಕ್ಕೆ ನೀರು ಬರಬೇಕೆಂದರೆ ಬ್ಯಾತ ಹಾಗೂ ಕಾಕೋಳು ಕೆರೆಗಳು ಕೋಡಿ ಆಗಬೇಕು. ಇದರಲ್ಲಿ ಬ್ಯಾತ ಕೆರೆ ಕೋಡಿ ಹರಿಯುತ್ತಿದ್ದು, ಹೆಚ್ಚಿನ ನೀರು ಈ ಮೂಲಕವೇ ಹೆಸರಘಟ್ಟಕ್ಕೆ ಹರಿಯುತ್ತಿದೆ. 20 ದಿನಗಳ ಹಿಂದಷ್ಟೇ ಗಾಲ್ಫ್ ಮೈದಾನದಂತಾಗಿದ್ದ ಹೆಸರಘಟ್ಟ, ಇಂದು ಹತ್ತು ವರ್ಷಗಳ ಹಿಂದಿನ ವೈಭವಕ್ಕೆ ಮರಳಿದೆ. ಜಲಾಶಯದ ಏರಿಯಿಂದ ನೋಡಿದ ದೂರದಷ್ಟೂ ನೀರು ಕಾಣುತ್ತಿದೆ. 1998ರಲ್ಲಿ 8 ಅಡಿ ನೀರು ಬಂದಿತ್ತು. ಅದಾದ ಮೇಲೆ 3-4 ಅಡಿಯಷ್ಟು ನೀರಿನ ಸಂಗ್ರಹ ಮಾತ್ರ ಇಲ್ಲಿ ದಾಖಲಾಗುತ್ತಿತ್ತು.
ಹೆಸರಘಟ್ಟದಲ್ಲಿರುವ ನೀರಿನ ಮಾಪನದಲ್ಲಿ 49 ಅಡಿ ಎಂದು ಸೂಚಿಸುತ್ತಿದೆ. ಆದರೆ, ಗಣನೆಗೆ ತೆಗೆದುಕೊಳ್ಳುವುದು ೪೨ ಅಡಿ ಯಿಂದ. ಉಳಿದದ್ದು ಹೂಳು ತುಂಬಿದೆ. ಹೆಸರಘಟ್ಟ ಜಲಾಶಯದಲ್ಲಿ ಹೂಳು ಏಕೆ ತೆಗೆಯುತ್ತೀರಿ? ನೀರು ಬರೋಲ್ಲ ಎಂದು ಕೊಂಕು ನುಡಿದಿದ್ದವರಿಗೆ ವರುಣ ಸೂಕ್ತ ಉತ್ತರ ನೀಡಿದ್ದಾನೆ. ಅದಕ್ಕೇ ದಿನವೂ ನೂರಾರು ಜನರು ಹೆಸರಘಟ್ಟಕ್ಕೆ ಬಂದು ನೀರಿನ ಸಂಗ್ರಹದ ಸೊಬಗು ಸವಿಯುತ್ತಿದ್ದಾರೆ.
ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ಈ ವರ್ಷ ಹೆಚ್ಚಿನ ನೀರು ಹರಿದುಬರುತ್ತಿದೆ. ಹಿಂದೆ ಕೇವಲ ಕಲ್ಮಶಯುಕ್ತ ನೀರು ಮಾತ್ರ ತಿಪ್ಪಗೊಂಡನಹಳ್ಳಿ ಸೇರುತ್ತಿತ್ತು. ಈ ಬಾರಿ ಸ್ವಚ್ಛ ಮಳೆ ನೀರು ಹರಿದುಬರುತ್ತಿರುವುದು ಜಲಮಂಡಳಿ ಅಧಿಕಾರಿಗಳಲ್ಲಿ ಹರ್ಷ ತಂದಿದೆ. ಕಳೆದ ಐದಾರು ವರ್ಷಗಳಲ್ಲಿ ಇಷ್ಟು ನೀರಿನ ಹರಿವು ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅರ್ಕಾವತಿ ನದಿ ಹರಿದರೆ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ತುಂಬುತ್ತವೆ. ನಂದಿಬೆಟ್ಟದಿಂದ ಕಾಲುವೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಒತ್ತುವರಿ ತೆರವುಗೊಳಿಸಿ, ನದಿ ಪುನಶ್ಚೇತನವಾದರೆ ಹೆಸರಘಟ್ಟಕ್ಕೆ ನೀರು ತುಂಬುತ್ತದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದರು. ಸರಕಾರ ಪುನಶ್ಚೇತನಕ್ಕೆ ಸಮಿತಿ ರಚಿಸುವ ಭರವಸೆಯನ್ನೂ ನೀಡಿದೆ. ಈ ಪುನಶ್ಚೇತನದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ್ದರೆ ಇನ್ನೆಷ್ಟು ನೀರು ಬಂದಿರುತ್ತಿತ್ತು? ಈ ಬಗ್ಗೆ ಆಲೋಚಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು.

ಮಳೆ: ಒಳಭಾಗದಲ್ಲಿ ಕಿರಿಕಿರಿ; ಹೊರಭಾಗದಲ್ಲಿ ನಲಿನಲಿ

ಭಾರಿ ಮಳೆ ಬಂದಾಗ ಮಹಾನಗರ ತತ್ತರಿಸುತ್ತದೆ. ಒಳಭಾಗದಲ್ಲಿರುವ ಜನರ ಶಾಪಕ್ಕೂ ಗುರಿಯಾಗುತ್ತದೆ. ಏಕೆಂದರೆ, ಇಲ್ಲಿ ಬರೀ ನೀರಲ್ಲ, ಕೊಳಕೂ ಮನೆ ಒಳಗೆ ನುಗ್ಗುತ್ತದೆ. ಆದರೆ, ಹೊರವಲಯ ಹಾಗಲ್ಲ. ಮಳೆಯಲ್ಲಿ ಮಿಂದೇಳಲು ಬಯಸುತ್ತದೆ. ಅದಕ್ಕೇ, ಉದ್ಯಾನನಗರಿಯ ಅಂಚಿನಲ್ಲಿ ನದಿಯೊಂದು ದಶಕದ ನಂತರ ಸ್ವಚ್ಛವಾಗಿ ಹರಿಯುತ್ತಿದೆ.
ಸೋಮವಾರದಿಂದ ಬೆಂಗಳೂರು ಭಾರಿ ಮಳೆ ಸುರಿಯುತ್ತಿದೆ. ನೂರಾರು ಮಿಲಿಮೀಟರ್‌ನಷ್ಟು ಮಳೆಯಾಗಿದೆ. ನಗರದಲ್ಲಿ ನೂರಾರು ಕೆರೆಗಳಿದ್ದರೂ ಈ ನೀರನ್ನು ತಮ್ಮ ಒಡಲಿಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿವೆ. ರಾಜಕಾಲುವೆ ಹಾಗೂ ಮಳೆ ನೀರು ಕೆರೆಗೆ ಹರಿಯುವ ವ್ಯವಸ್ಥೆ ಇಲ್ಲ. ಆದ್ದರಿಂದಲೇ ನಗರ ಹಲವು ಭಾಗದಲ್ಲಿ ಒಳಚರಂಡಿ ನೀರು ಮನೆಯೊಳಗೆ ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೀಗಿದ್ದರೂ, ವೃಷಭಾವತಿ ನದಿ ಮಾತ್ರ ಅಲ್ಪ ಕೊಳೆ ಕಳೆದುಕೊಂಡಿದೆ.
ನಗರದಲ್ಲಿರುವ ಕೆರೆಗಳಿಗೆ ಮಳೆ ನೀರು ಹರಿಸುವ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಬೆಂಗಳೂರು ನಗರ ಮಳೆಗೆ ತತ್ತರಿಸುವಂತಾಗಿರುವುದಕ್ಕೆ ಪ್ರಮುಖ ಕಾರಣ. ಮಡಿವಾಳ, ಅಗರ, ಬೇಗೂರು, ದೊರೆಕೆರೆ, ಸಾರಕ್ಕಿ, ಪುಟ್ಟೇನಹಳ್ಳಿಯಂತಹ ದೊಡ್ಡ ಕೆರೆಗಳು ಇಂದಿಗೂ ಕೋಡಿ ಹೋಗಿಲ್ಲ. ಏಕೆಂದರೆ, ಸಾಮಾನ್ಯ ಹರಿವೇ ಹೊರಹೋಗುತ್ತಿದೆ. ಅಂದರೆ, ಒಳಚರಂಡಿ ನೀರು ಬಿಟ್ಟರೆ ಮಳೆ ನೀರು ಇಲ್ಲಿಗೆ ಹರಿಯುತ್ತಿಲ್ಲ. ನಗರದಲ್ಲಿ ಹಲವು ಕೆರೆಗಳಿಗೆ ಮಳೆ ನೀರು ಹರಿಯಲು ಮಾರ್ಗವೇ ಇಲ್ಲ. ಕೆಲವು ಕೆರೆಗಳಿಗೆ ನೀರು ಹರಿದರೂ, ಅಲ್ಲಿ ನೀರಿನ ಸಂಗ್ರಹಕ್ಕೆ ಸ್ಥಳವೇ ಇಲ್ಲ. ಹೂಳು ಯಥೇಚ್ಛವಾಗಿ ತುಂಬಿದೆ.
ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮಳೆ ನೀರು ಹರಿಯಲು ರಾಜಕಾಲುವೆಗಳನ್ನು ಸೂಕ್ತವಾಗಿ ನಿರ್ವಹಿಸಲಾಗಿದೆ. ಕೆರೆಗೆ ನೀರು ಹರಿಸಿ, ಪ್ರವಾಹ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಬೇಸಿಗೆ ಕಾಲದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು. ಆದರೆ, ಕಳೆದ ವಾರದ ನಾಲ್ಕು ದಿನ ಮಳೆ ಇದನ್ನು ಅಲ್ಲಗಳೆದಿದೆ. ಬಿಬಿಎಂಪಿ ಯಾವುದೇ ಮುನ್ನೆಚ್ಚರಿಕೆ ಕಾರ್ಯ ಕೈಗೊಂಡಿಲ್ಲ, ಕೆರೆಯಲ್ಲಿ ಹೂಳು ಎತ್ತಿಲ್ಲ ಎಂಬುದು ಸಾಬೀತಾಗಿದೆ. ಕೆರೆಗಳ ಮಹತ್ವ ಬಿಬಿಎಂಪಿ ಅರಿವಿಗೆ ಇನ್ನಾದರೂ ಬಂದೀತೇ?
ಹೊರವಲಯದಲ್ಲಿ ಖುಷಿ
ನಗರದ ಒಳಗೆ ಮಳೆ ಏಕೆ ಬರುತ್ತೋ ಎಂದು ಜನ ಒಲ್ಲದ ಮನಸ್ಸಿನಿಂದ ಶಾಪ ಹಾಕುತ್ತಿದ್ದರೆ, ಹೊರಭಾಗದಲ್ಲಿ ಮಳೆ ಇನ್ನಷ್ಟು ಬಂದಿದ್ದರೆ ನಮ್ಮ ಕೆರೆ ತುಂಬುತ್ತಿತ್ತು. ಬೋರ್‌ವೆಲ್‌ನಲ್ಲಿ ನೀರು ಹೆಚ್ಚಾಗುತ್ತಿತ್ತು. ನಮ್ಮ ಜಲಾಶಯ ತುಂಬುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ. ಮಾಕಳಿಯಲ್ಲಿ ಅರ್ಕಾವತಿ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮಕ್ಕಳು, ಹಿರಿಯರು ಸಂತಸಪಡುತ್ತಿದ್ದಾರೆ.
ಹೆಸರಘಟ್ಟ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದಂತೆ ಅಲ್ಲಿಂದ, ತಿಪ್ಪಗೊಂಡನಹಳ್ಳಿಯವರೆಗೆ ಅರ್ಕಾವತಿ ನದಿ ಹರಿವು ಕೂಡ ಹೆಚ್ಚಾಗಿದೆ. ತರಬನಹಳ್ಳಿ ಸಮೀಪವಿರುವ ರೈಲ್ವೆ ಸೇತುವೆ ಕೆಳಗೆ ಅರ್ಕಾವತಿ ಹೊಳೆ ಮೈದುಂಬಿ ಹರಿಯುತ್ತಿದೆ. ೧೫ ದಿನಗಳ ಹಿಂದ ವಾಹನ ಓಡಾಡುವ ರಸ್ತೆಯಾಗಿದ್ದ ಈ ಪ್ರದೇಶದಲ್ಲಿ ಈಗ ನೀರಿನ ಸಾಮ್ರಾಜ್ಯ.
ಮಾಕಳಿಯ ಬಳಿಯಿರುವ ಭೀರೇಶ್ವರ ಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಹೊಳೆಯ ಹರಿವು ವೃದ್ಧಿಯಾಗಿದೆ. ಶಾಲಾ ಮಕ್ಕಳು ಈ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮೋಜು ಅನುಭವಿಸುತ್ತಿದ್ದಾರೆ. ಯಾವಾಗಲೂ, ಕಲ್ಮಶವನ್ನು ಮೈಗಂಟಿಕೊಂಡು ಸಣ್ಣದಾಗಿ ಹರಿಯುತ್ತಿದ್ದ ಅರ್ಕಾವತಿ ನದಿ, ಈಗ ಇಲ್ಲಿ ಮೀನುಗಾರರಿಗೆ ಕೆಲಸ ನೀಡಿದ್ದಾಳೆ. ಅಲ್ಲಲ್ಲಿ ಸಣ್ಣ ಬಲೆಗಳನ್ನು ಹಾಕಿ ಮೀನು ಹಿಡಿಯುವ ಕಾರ್ಯ ನಡೆಯುತ್ತಿದೆ.
ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೂ ಅರ್ಕಾವತಿ ನದಿ ಹರಿವು ಹತ್ತು ವರ್ಷಗಳ ನಂತರ ಉತ್ತಮವಾಗಿದೆ. ಸೊಂಡೆಕೊಪ್ಪ, ವರ್ತೂರು ಬಳಿಯ ಹೊಳೆಯ ಹರಿವು ಕಂಡು ಜನ ಸಂತಸಗೊಂಡಿದ್ದಾರೆ. ಅಬ್ಬಾ, ನಮ್ಮ ನದಿ ಮತ್ತೊಮ್ಮೆ ಹರಿಯುತ್ತಿದೆಯಲ್ಲ ಎಂದು ಹಿರಿಯರು ಸಮಾಧಾನ ಪಡುತ್ತಿದ್ದಾರೆ. ಯುವಕರಿಗೆ ಉಲ್ಲಾಸ ಮೈತುಂಬಿದ್ದರೆ, ಮಕ್ಕಳು ಕಣ್ಣರಳಿಸಿಕೊಂಡು ಹೊಳೆಯನ್ನು ನೋಡುತ್ತಿದ್ದಾರೆ. ನೀರು ಹರಿಯುತ್ತಿರುವ ಎಲ್ಲ ಕಡೆಯೂ ಜನ ಅಚ್ಚರಿಯಿಂದ ದೃಷ್ಟಿ ಹರಿಸುತ್ತಿದ್ದಾರೆ.

Monday, September 21, 2009

ದೊರೆ ಕೊಳಕು ಸಾಮ್ರಾಜ್ಯಕ್ಕೆ ತೆರೆ; ಹೈಟೆಕ್ ಹೊಳೆ

ಬೆಂಗಳೂರು ದಕ್ಷಿಣದ ಉತ್ತರಹಳ್ಳಿಯಲ್ಲಿರುವ ದೊರೆ ಕೆರೆಯ 29 ಎಕರೆ ಸಾಮ್ರಾಜ್ಯ ಕಲ್ಮಶದಿಂದ ಮುಕ್ತವಾಗಿದೆ. ಒಳಚರಂಡಿ ನೀರಿಗೆ ತನ್ನ ಸೆರಗಿನಲ್ಲಿ ರೂಪಿಸಿರುವ ಕಾಲುವೆಯಲ್ಲಿ ದಾರಿ ಮಾಡಿಕೊಟ್ಟು, ಹೈಟೆಕ್ ರೂಪಪಡೆದುಕೊಂಡು, ಪ್ರಕಾಶ ಬೀರಲು ಸಜ್ಜಾಗುತ್ತಿದೆ.
ದೊರೆಕೆರೆಗೆ ಒಳಚರಂಡಿ ನೀರು ಈಗ ಹೋಗುತ್ತಿಲ್ಲ. ಕೆರೆಯನ್ನು ಸಂಪೂರ್ಣ ಒಣಗಿಸಲಾಗಿದೆ. ಮಳೆ ನೀರು ಮಾತ್ರ ಕೆರೆಗೆ ಹರಿಯುತ್ತಿದೆ. ಒಳಚರಂಡಿ ನೀರಿಗೆ ಕೆರೆಯ ಅಂಚಿನಲ್ಲಿ ಕಾಲುವೆ ನಿರ್ಮಿಸಿ ಅಲ್ಲಿಂದ ಹರಿದು ಹೋಗುವಂತೆ ಮಾಡಲಾಗಿದೆ. ಕೆರೆಯ ಒಳಗೆ ಎರಡು ದ್ವೀಪಗಳನ್ನು ಸೃಷ್ಟಿಸಲಾಗಿದೆ. ಅಷ್ಟೇಅಲ್ಲ, ಕೆರೆಯ ಅಂಗಳಕ್ಕೆ ಬೇಲಿ ಹಾಕಲಾಗಿದೆ. ಆದರೆ, ಮೂಲ ಸ್ವರೂಪ ಅಥವಾ ವ್ಯಾಪ್ತಿಗೆ ಬೇಲಿ ಹಾಕಿಲ್ಲ ಎಂಬುದು ಅಚ್ಚರಿ ಸಂಗತಿ. ಇಷ್ಟಾದರೂ, ಕೆರೆಗೊಂದು ಬೇಲಿ, ಕಲ್ಮಶಮುಕ್ತ ವಾತಾವರಣ ರೂಪಿಸಲಾಗಿರುವುದು ಸಮಾಧಾನಕರ. ದಾಖಲೆಯಲ್ಲಿರುವ ದೊರೆ ಕೆರೆಯ ವಿಸ್ತೀರ್ಣ 31 ಎಕರೆ 32.88 ಗುಂಟೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವತಿಯಿಂದ 1.20 ಕೋಟಿ ರೂ. ವೆಚ್ಚದಲ್ಲಿ ದೊರೆ ಕೆರೆಯ ಅಭಿವೃದ್ಧಿ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಕೆರೆಯನ್ನು ಒಣಗಿಸಿ, ಅದರಲ್ಲಿನ ಕಲ್ಮಶವನ್ನು ಹೊರಹಾಕಲಾಗಿದೆ. ಅದರೊಳಗೆ ಎರಡು ದ್ವೀಪ ನಿರ್ಮಾಣವಾಗಿದೆ. ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಕೆರೆಗೆ ಮಳೆನೀರು ಮಾತ್ರ ಒಳಬರುವ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಇದಲ್ಲದೆ, ಬೋಟಿಂಗ್ ವ್ಯವಸ್ಥೆ, ಶೌಚಾಲಯ, ನೀರು ಸಂಸ್ಕರಣ ಘಟಕ, ವಾಚ್‌ಮೆನ್ ಶೆಡ್, ಧ್ಯಾನ ಕೇಂದ್ರ ಒಳಗೊಂಡಂತೆ ಹೈಟೆಕ್ ಮಾದರಿಯಲ್ಲಿ (ನೀಲನಕ್ಷೆ ನೋಡಿ) ದೊರೆಕೆರೆ ಅಭಿವೃದ್ಧಿಯಾಗಲಿದೆ.
ದೊರೆಕೆರೆಯನ್ನು ನಗರಕ್ಕೆ ಮಾದರಿ ಕೆರೆಯನ್ನಾಗಿ ಪರಿವರ್ತಿಸಲಾಗುವುದು. ಈಗಾಗಲೇ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ಇನ್ನಾರು ತಿಂಗಳಲ್ಲಿ ಕೆರೆಗೆ ಹೊಸ ಸ್ವರೂಪ ನೀಡಲಾಗುತ್ತದೆ. ದೊರೆ ಕೆರೆ ಈ ಕ್ಷೇತ್ರದಲ್ಲಿ ಅತ್ಯಂತ ದೊಡ್ಡ ಕೆರೆಗಳಲ್ಲಿ ಒಂದಾಗಿದೆ. ಎಲ್ಲ ರೀತಿಯ ಒತ್ತುವರಿಯನ್ನು ತೆರವುಗೊಳಿಸಿ, ಕೆರೆಗೆ ಹೈಟೆಕ್ ಸ್ವರೂಪ ನೀಡಲಾಗುತ್ತದೆ. ಈ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿಸುವ ನಿಟ್ಟಿನಲ್ಲಿ ದ್ವೀಪ, ಬೋಟಿಂಗ್ ವ್ಯವಸ್ಥೆಗಳನ್ನೂ ಮಾಡಲಾಗುತ್ತದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ 14 ದೊಡ್ಡ ಕೆರೆಗಳಿವೆ. ಅವುಗಳೆಲ್ಲವನ್ನೂ ಉನ್ನತ ದರ್ಜೆಯಲ್ಲಿಯೇ ಅಭಿವೃದ್ಧಿ ಮಾಡಲಾಗುತ್ತದೆ. ಬಿಡಿಎ, ಬಿಬಿಎಂಪಿ ವತಿಯಿಂದ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತದೆ. ಎಲ್ಲ ಪ್ರಥಮ ಹಂತದ ಕಾಮಗಾರಿಯಲ್ಲಿ ಕೆರೆಗಳೂ ಕಲ್ಮಶಂiಮುಕ್ತವಾಗುವಂತೆ ಮಾಡಲಾಗುತ್ತದೆ. ಮುಂದಿನ ಒಂದೂವರೆ ವರ್ಷಗಳಲ್ಲಿ ಈ ಎಲ್ಲ ಕೆರೆಗಳನ್ನೂ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆಗಳೆಂದರೆ ಹೀಗಿರಬೇಕು ಎಂದು ಪರಿಸರವಾದಿಗಳು ಸೇರಿದಂತೆ ಸ್ಥಳೀಯ ಜನರು ಹೆಮ್ಮೆ ಪಟ್ಟುಕೊಂಡು ಹೇಳಬೇಕು. ಆ ರೀತಿ ಈ ಕೆರೆಗಳು ಅಭಿವೃದ್ಧಿ ಆಗಲಿವೆ.
ಕೊತ್ತನೂರು, ಚುಂಚಘಟ್ಟ ಕೆರೆ ಕಲ್ಮಶ ಮುಕ್ತ
ಕೊತ್ತನೂರು ಹಾಗೂ ಚುಂಚಘಟ್ಟ ಕೆರೆಗೆ ಸುತ್ತಮುತ್ತಲ ಪ್ರದೇಶದ ಒಳಚರಂಡಿ ನೀರು ಸಂಪೂರ್ಣವಾಗಿ ಹರಿಯುತ್ತಿದೆ. ಈ ಕಲ್ಮಶವನ್ನು ಕೆರೆಯ ಹೊರಭಾಗದಿಂದ ಹರಿಯುವಂತೆ ಮಾಡಿ, ಅದಕ್ಕಾಗಿ ವಿಶೇಷ ರೀತಿಯ ಕಾಮಗಾರಿಯನ್ನು ಕೈಗೊಳ್ಳಲು ಬೆಂಗಳೂರು ಒಳಚರಂಡಿ ಮಂಡಳಿ ಅಣಿಯಾಗಿದೆ. ಈ ಎರಡೂ ಕೆರೆಗಳ ಅಂಚಿನಿಂದ ಪೈಪ್‌ಲೈನ್ ಮೂಲಕ ಒಳಚರಂಡಿ ನೀರು ಹರಿಯುವಂತೆ ಮಾಡಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹೋಗದಂತೆ ತಡೆ ಹಾಕಲಾಗುತ್ತದೆ.
ಈ ಎರಡೂ ಕೆರೆಗಳನ್ನು ಕಲ್ಮಶಮುಕ್ತವನ್ನಾಗಿಸುವ ಯೋಜನೆಗೆ ಇನ್ನು ಮೂರು ತಿಂಗಳಲ್ಲಿ ಚಾಲನೆ ದೊರೆಯಲಿದೆ. ಈಗಾಗಲೇ ಯೋಜನೆ ರಚನೆಯಾಗಿದ್ದು, ಟೆಂಡರ್ ಪ್ರಕ್ರಿಯೆ ಆರಂಭವಾಗಲಿದೆ. ಇದು ಪೂರ್ಣಗೊಂಡ ಕೂಡಲೇ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ. ಮೂರು ಅಥವಾ ನಾಲ್ಕು ತಿಂಗಳಲ್ಲೆ ಚುಂಚಘಟ್ಟ ಹಾಗೂ ಕೊತ್ತನೂರು ಕೆರೆಗಳು ಕಲ್ಮಶದಿಂದ ಮುಕ್ತವಾಗುತ್ತದೆ.
ಕೊತ್ತನೂರು ಕೆರೆಯನ್ನು ಬಿಡಿಎ ಅಭಿವೃದ್ಧಿಪಡಿಸಲು 3.6 ಕೋಟಿ ರೂ. ವೆಚ್ಚದ ಯೋಜನೆಯನ್ನು ರೂಪಿಸಿದೆ. ಈ ಕಾಮಗಾರಿಗೆ ಇನ್ನೂ ಚಾಲನೆ ದೊರೆತಿಲ್ಲವಾದರೂ, ಇದನ್ನು ಕೂಡಲೇ ಆರಂಭಿಸಲು ಬಿಡಿಎ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಇನ್ನೊಂದು ವರ್ಷದಲ್ಲಿ ಕೊತ್ತನೂರು ಕೆರೆ ಅಭಿವೃದ್ಧಿ ಆಗಲಿದೆ.
ಚುಂಚಘಟ್ಟ ಕೆರೆಯನ್ನು ಬಿಬಿಎಂಪಿ ವತಿಯಿಂದ ಅಭಿವೃದ್ಧಿಪಡಿಸಲಾಗುತ್ತದೆ. ಕೆರೆ ಸಂಪೂರ್ಣ ಕಲ್ಮಶಗೊಂಡಿರುವುದರಿಂದ ಏರಿಯ ಕೆಳಭಾಗದಲ್ಲಿ ಕೊಳವೆ ಬಾವಿಯಲ್ಲಿ ಕಲ್ಮಶ ನೀರು ಬರುತ್ತಿದೆ. ಆದ್ದರಿಂದ, ಮೊದಲ ಹಂತದಲ್ಲಿ ಒಳಚರಂಡಿ ನೀರಿಗೆ ತಡೆ ಹಾಕಲಾಗುತ್ತದೆ. ನಂತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುತ್ತದೆ ಎನ್ನುತ್ತಾರೆ ಶಾಸಕ ಎಂ. ಕೃಷ್ಣಪ್ಪ.
ಗೊಟ್ಟಿಗೆರೆ ಊರ ಬಂಡೆ ಮೇಲೆ ಜಲಸಂಗ್ರಹಗಾರ
ಗೊಟ್ಟಿಗೆರೆ ಕೆರೆ ನೈಸ್ ರಸ್ತೆಯ ಕಾಮಗಾರಿಯಿಂದ ಪ್ರಚಲಿತವಾಗಿದೆ. ಈ ಕೆರೆಯ ಮೇಲೆ ನೈಸ್ ರಸ್ತೆ ಸಾಗದಂತೆ ಸ್ಥಳೀಯರು ಹಾಗೂ ಪರಿಸರವಾದಿಗಳು ಒತ್ತಾಯಿಸುತ್ತಿದ್ದಾರೆ. ಅದಕ್ಕೆ ಹೈಕೋರ್ಟ್ ಕೂಡ ಸಾಕಷ್ಟು ಸಹಕರಿಸುತ್ತಿದೆ. ಇದೇ ಗೊಟ್ಟಿಗೆರೆಯ ಊರಬಂಡೆ, ಇದೀಗ ಸುದ್ದಿಯಲ್ಲಿದೆ. ನೂರಾರು ಬಡಾವಣೆಗಳಿಗೆ ನೀರು ಕಾವೇರಿ ನೀರು ಕೊಡುವ ಜಲಾಗಾರಕ್ಕೆ ಈ ಊರಬಂಡೆ ಆಶ್ರಯ ನೀಡಲು ಅಣಿಯಾಗುತ್ತಿದೆ.
ಕಾವೇರಿ ನದಿಯಿಂದ ಬೆಂಗಳೂರಿಗೆ ನೀರು ಸರಬರಾಜು ಮಾಡುವ ನಾಲ್ಕನೇ ಹಂತದ 2ನೇ ಘಟ್ಟಕ್ಕೆ ಜಲಸಂಗ್ರಹಗಾರಕ್ಕಾಗಿ ಪ್ರದೇಶವನ್ನು ಹುಡುಕಲಾಗುತ್ತಿತ್ತು. 950 ಮೀಟರ್ ಎತ್ತರವಿರುವ, ಗೊಟ್ಟಿಗೆರೆ ಊರಬಂಡೆ ಪ್ರದೇಶವನ್ನು ಇದೀಗ ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಊರಬಂಡೆ ಜಾಗದಲ್ಲಿ ತೋಟಗಾರಿಕೆ ಇಲಾಖೆ ಈಗಾಗಲೇ ಉದ್ಯಾನ ನಿರ್ಮಿಸುವ ಕಾಮಗಾರಿ ಕೈಗೊಂಡಿದೆ. ಇದೀಗ ಜಲಸಂಗ್ರಹಗಾರಕ್ಕೆ 6 ಎಕರೆ ಪ್ರದೇಶವನ್ನು ನೀಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಊರಬಂಡೆ ಪಾತ್ರವಾಗುತ್ತದೆ.
ನಗರದ ಅತ್ಯಂತ ಎತ್ತರ ಪ್ರದೇಶವಾಗಿರುವ ಈ ಊರಬಂಡೆಯಲ್ಲಿ ಜಲಸಂಗ್ರಹಗಾರ ನಿರ್ಮಿಸಿದರೆ, ಪಂಪಿಂಗ್‌ನ ಅಗತ್ಯವಿಲ್ಲದೆ ಗುರುತ್ವಾಕರ್ಷಣೆಯಿಂದಲೇ ನೀರನ್ನು ಪೂರೈಸಬಹುದು. 22 ದಶಲಕ್ಷ ಲೀಟರ್ ನೀರು ಪೂರೈಸಬಹುದು. ಆದ್ದರಿಂದ, ಈ ಪ್ರದೇಶವನ್ನು ಜಲಮಂಡಳಿಗೆ ನೀಡಲು ತೀರ್ಮಾನಿಸಲಾಗಿದೆ. ಈ ಕಾಮಗಾರಿಗೆ ಜಲಮಂಡಳಿ ಖಾತೆ ಸಚಿವ ಕಟ್ಟಾ ಸುಬ್ರಹ್ಮಣನಾಯ್ಡು ಅವರೇ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಎಂ. ಕೃಷ್ಣಪ್ಪ ತಿಳಿಸಿದ್ದಾರೆ.
ಪರಿಸರ ರಕ್ಷಣೆಯಲ್ಲಿ ಉದ್ಯಾನವನಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದ್ದರಿಂದ ಬೆಂಗಳೂರು ದಕ್ಷಿಣ ವಿಧಾನಸಭೆ ಕ್ಷೇತ್ರದಲ್ಲಿ 50 ಉದ್ಯಾನವನಗಳನ್ನು ನಿರ್ಮಿಸಲಾಗುತ್ತದೆ. ಇದರಲ್ಲಿ 15 ಉದ್ಯಾನಗಳನ್ನು ಇನ್ನು 15 ದಿನಗಳಲ್ಲಿ ಉದ್ಘಾಟಿಸಲಾಗುತ್ತದೆ. ಕೆಲವು ಉದ್ಯಾನಗಳಲ್ಲಿ ಸಂಗೀತದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತದೆ.

Wednesday, September 16, 2009

ಪುನಶ್ಚೇತನ ಸಮಿತಿ ಸಾಲದು; ಪ್ರಾಮಾಣಿಕ ಪ್ರಯತ್ನ ಅತ್ಯಗತ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಆಡಳಿತಾರೂಢ ಪಕ್ಷ ಶಾಸಕರು ಹಾಗೂ ಸಚಿವರು ಪಾದಯಾತ್ರೆ ಮಾಡಿ, ಯಶಸ್ಸೂ ಸಾಧಿಸಿದ್ದಾರೆ. ಅಧಿಕಾರದಲ್ಲಿರುವವರು ಕ್ರಮ ಕೈಗೊಳ್ಳಬಹುದಲ್ಲವೇ? ಪಾದಯಾತ್ರೆ ಏಕೆ? ಎಂದು ಹತ್ತಾರು ದನಿಗಳು ಎದ್ದಿವೆ. ನದಿಪಾತ್ರದಲ್ಲಿನ ಒತ್ತುವರಿ ತೆರವಿಗೆ ಜನಜಾಗೃತಿಗಾಗಿ ಈ ಪಾದಯಾತ್ರೆ ಎಂಬುದು ಸ್ಪಷ್ಟ ಉತ್ತರ. ಇದಾದ ಮೇಲೆ ಮುಂದೇನು? ಎಂಬುದು ಈಗಿನ ಪ್ರಶ್ನೆ.ಅರ್ಕಾವತಿ ನದಿ ಸಂರಕ್ಷಣಾ ವೇದಿಕೆ ಹೆಸರಿನಡಿ ಶಾಸಕಸ್.ಆರ್. ವಿಶ್ವನಾಥ್ ಪಕ್ಷಾತೀತವಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಎಲ್ಲ ಪಕ್ಷದ ಶಾಸಕರನ್ನೂ ಆಹ್ವಾನಿಸಲಾಗಿತ್ತು. ಪರಿಸರವಾದಿಗಳು ಹಾಗೂ ಹಲವು ಸಂಘಟನೆಗಳು ಇದರಲ್ಲಿ ಪಾಲ್ಗೊಂಡು, ಯಶಸ್ವಿಗೊಳಿಸಿದರು. ಪ್ರತಿಪಕ್ಷಗಳ ಶಾಸಕರು ಬಿಜೆಪಿ ಶಾಸಕರೊಂದಿಗೆ ನಾವೇಕೆ ಗುರುತಿಸಿಕೊಳ್ಳಬೇಕೆಂದು ಸುಮ್ಮನಾದರು.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದವರೆಗೆ ಪ್ರಥಮ ಹಂತದಲ್ಲೇ ಕಾಲುವೆಗಳ ಒತ್ತುವರಿ ತೆರವುಗೊಳಿಸಬೇಕಿದೆ. ನಂತರ ಹಂತದಲ್ಲಿ ಒತ್ತುವರಿ ಸೇರಿಕೊಂಡಂತೆ ಮಾಲಿನ್ಯರಹಿತ ನದಿಪಾತ್ರ ಸೃಷ್ಟಿಸಬೇಕಿದೆ. ಕೈಗಾರಿಕೆಗಳ ಯಾವುದೇ ಒತ್ತಡಕ್ಕೆ ಮಣಿಯದೆ, ಕಾರ್ಖಾನೆಗಳನ್ನು ನದಿಪಾತ್ರದ ಒಂದು ಕಿಮೀ ದೂರದಿಂದ ಹೊರಗುಳಿಸಬೇಕಿದೆ. ಇದಕ್ಕೆಲ್ಲ ಸಾರ್ವಜನಿಕರು ಹಾಗೂ ಸ್ಥಳೀಯರ ಬೆಂಬಲವೂ ದೊರೆತಿದೆ. ಒತ್ತುವರಿ ತೆಗೆಸಿರಿ, ಇಲ್ಲದಿದ್ದರೆ ನೀರು ಹರಿಯುವುದಿಲ್ಲ. ಇದಕ್ಕಾಗಿ ನಾವೇನು ಮಾಡಬೇಕು ಹೇಳಿ? ನಮ್ಮ ಸಂಪೂರ್ಣ ಸಹಕಾರ ನಿಮಗಿದೆ ಎಂದು ನದಿಪಾತ್ರದ ಮುಖಂಡರು ಹಾಗೂ ನಾಗರಿಕರು ಪಾದಯಾತ್ರಿಗಳಿಗೆ ಭರವಸೆಯನ್ನು ನೀಡಿದ್ದಾರೆ.
ಅರ್ಕಾವತಿ ನದಿ ಪಾತ್ರದಲ್ಲಿರುವ ನಾಗರಿಕರು ನದಿ ಹರಿಸುವ ಕಾರ್ಯಕ್ಕೆ ಸಂಪೂರ್ಣ ಬೆಂಬಲ ಸೂಚಿಸಿದ್ದಾರೆ. ಆದರೆ, ಇವತ್ತು ಬಂದಿದ್ದಾರೆ ನಾಳೆ ಇದಕ್ಕೆ ಚಾಲನೆ ನೀಡುತ್ತಾರೆಯೇ? ಎಂಬ ಅನುಮಾನವೂ ಅವರಲ್ಲಿದೆ. ಇದನ್ನು ನಿವಾರಿಸಬೇಕೆಂದರೆ, ಪಾದಯಾತ್ರೆಯ ಜನಜಾಗೃತಿ ಉದ್ದೇಶ ಈಡೇರಬೇಕಿದೆ. ಭೇದಭಾವವಿಲ್ಲದೆ ನದಿ ಪುನಶ್ಚೇತನಕ್ಕೆ ಸಕಲ ಕ್ರಮವನ್ನೂ ಕೈಗೊಳ್ಳಬೇಕಿದೆ. ಸರಕಾರ ಇದಕ್ಕೆ ಸ್ಪಂದಿಸಿ ಅರ್ಕಾವತಿ ನದಿ ಪುನಶ್ಚೇತನ ಸಮಿತಿಯನ್ನು ರಚಿಸುವ ಭರವಸೆಯನ್ನೂ ನೀಡಿದೆ.
ನದಿ ಪುನಶ್ಚೇತನಕ್ಕೆ ಪಾದಯಾತ್ರೆ, ಸಮಿತಿ ರಚನೆ ಅಷ್ಟೇ ಸಾಲದು. ಇಷ್ಟಾಯಿತಲ್ಲ ಎಂದು ವಿರಮಿಸಿದರೆ, ಇದೊಂದು ಗಿಮಿಕ್ ಎಂದೆನಿಸಿಬಿಡುತ್ತದೆ. ನದಿ ಪುನಶ್ಚೇತನಕ್ಕೆ ಪ್ರಾಮಾಣಿಕ ಕೆಲಸ ಆಗಬೇಕೆಂದರೆ, ರಚಿಸುವ ಸಮಿತಿಗೆ ಸಂಪೂರ್ಣ ಅಧಿಕಾರವನ್ನು ನೀಡಲೇಬೇಕು. ಎಲ್ಲ ಇಲಾಖೆಗಳಿಂದಲೂ ಕೆಲಸ ಮಾಡಿಸುವ ಅಧಿಕಾರ ಈ ಸಮಿತಿಗೆ ಇರಬೇಕು. ಅರ್ಕಾವತಿ ನದಿ ಪಾತ್ರ ಸಂರಕ್ಷಣೆಗೆ ೨೦೦೩ರಲ್ಲಿ ಸರಕಾರ ಹೊರಡಿಸಿರುವ ಅಧಿಸೂಚನೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನ ತರುವ ಜವಾಬ್ದಾರಿಯೂ ಈ ಸಮಿತಿಗೆ ಇರಬೇಕು.
ನದಿ ಪುನಶ್ಚೇತನಕ್ಕೆ ವಿಧಾನಸೌಧದಲ್ಲಿ ಗಟ್ಟಿಯಾಗಿ ಕುಳಿತು ಯೋಜನೆ ರೂಪಿಸಬೇಕಿತ್ತು. ಇದನ್ನು ಬಿಟ್ಟು ಸರಕಾರದ ಸಚಿವರು, ಶಾಸಕರು ಪಾದಯಾತ್ರೆ ಮಾಡಿರುವುದು ಹಾಸ್ಯಾಸ್ಪದ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಈಗಾಗಲೇ ಆಪಾದಿಸಿದ್ದಾರೆ. ಪಾದಯಾತ್ರೆ-ಸಮಿತಿ ರಚನೆ ಭರವಸೆ ಹಂತದಲ್ಲಿಯೇ ಈ ರೀತಿಯ ಆಪಾದನೆ ಆರಂಭವಾಗಿದೆ ಎಂದರೆ, ಮುಂದಿನ ದಿನಗಳಲ್ಲಿ ಇನ್ಯಾವ ರೀತಿ ಆಪಾದನೆಗಳು ಎದುರಾಗಬಹುದು ಎಂಬುದನ್ನು ಅರಿತು, ಸರಕಾರ ಹೆಜ್ಜೆ ಇರಿಸಬೇಕಿದೆ.
ಅರ್ಕಾವತಿ ನದಿ ಪುನಶ್ಚೇತನ ಕಾರ್ಯಕ್ಕೆ ಪಕ್ಷಾತೀತ ಸಹಕಾರವೂ ಅಗತ್ಯ. ಪ್ರತಿಪಕ್ಷ ಕೇವಲ ಆಪಾದನೆಯನ್ನಷ್ಟೇ ಮಾಡಬಾರದು. ಒತ್ತುವರಿ ಮಾಡಿಕೊಂಡಿರುವವರಲ್ಲಿ ಎಲ್ಲ ಪಕ್ಷದ ಮುಖಂಡರೂ ಇದ್ದಾರೆ. ಅವರೆಲ್ಲನ್ನೂ ತೆರವುಗೊಳಿಸಬೇಕು. ಇದಕ್ಕೊಂದು ಸ್ಪಷ್ಟ ನೀತಿ, ನಿರ್ದಾಕ್ಷಿಣ್ಯ ಕ್ರಮ ಅತ್ಯಗತ್ಯ. ಈ ಕಾರ್ಯ ಪ್ರಾಮಾಣಿಕವಾಗಿ ಆಗದಿದ್ದರೆ, ಪಾದಯಾತ್ರೆಯ ಉದ್ದೇಶ ಈಡೇರುವುದಿಲ್ಲ. ಇತಿಹಾಸದಲ್ಲಿ ಒಂದು ಕಾರ್ಯಕ್ರಮವಾಗಿ ಮಾತ್ರ ಉಳಿಯುತ್ತದೆ. ಹಾಗಾಗದಿರಲಿ, ಅರ್ಕಾವತಿ ಹರಿಯಲಿ, ರೈತರು, ಪಟ್ಟಣವಾಸಿಗಳಿಗೆ ನೀರು ಲಭಿಸಲಿ.

Tuesday, September 8, 2009

ತಿಪ್ಪಗೊಂಡನಹಳ್ಳಿಯಲ್ಲಿ ಅಂತ್ಯ; ಪುನಶ್ಚೇತನಕ್ಕೆ ಮುನ್ನುಡಿ

ಅರ್ಕಾವತಿ ಪಾದಯಾತ್ರೆ-ದಿನ-4: ಸೆಪ್ಟೆಂಬರ್ 6, 2009
ಸರ್ ಎಂ. ವಿಶ್ವೇಶ್ವರಯ್ಯ ನೇತೃತ್ವದಲ್ಲಿ ತಿಪ್ಪಗೊಂಡನಹಳ್ಳಿ ಜಲಾಶಯ ನಿರ್ಮಾಣವಾಗುತ್ತಿದ್ದಾಗ ಸಾವಿರಾರು ಜನರು ಕಾಮಗಾರಿಯಲ್ಲಿ ತೊಡಗಿದ್ದರು. ಅದಾದ ಮೇಲೆ, ಸುಮಾರು 76 ವರ್ಷಗಳ ನಂತರ, ಈ ಜಲಾಶಯದಲ್ಲಿ ಸಾವಿರಾರು ಜನರು ಒಂದೇ ಬಾರಿಗೆ ಇದ್ದದ್ದು ಸೆಪ್ಟೆಂಬರ್ 6, 2009ರ ಭಾನುವಾರ. ಅಂದು ಅರ್ಕಾವತಿ ನದಿ ನೀರಿಗೆ ಅಡ್ಡಲಾಗಿ ಕಾಮಗಾರಿ ನಡೆಯುತ್ತಿದ್ದು, ಇಂದು ಆ ನದಿಗೆ ನೀರು ಹರಿಸಲು ಗಂಗಾಪೂಜೆ ನೆರವೇರಿಸಲು ಜನಪ್ರತಿನಿಧಿಗಳೊಂದಿಗೆ ನಾಗರಿಕರು ಸೇರಿದ್ದರು.
ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರಿಗೆ ಅರ್ಕಾವತಿ ಸಂರಕ್ಷಣಾ ವೇದಿಕೆ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದ ನಾಲ್ಕು ದಿನದ 106 ಕಿಲೋಮೀಟರ್‌ಗಳ ಪಾದಯಾತ್ರೆ ತಿಪ್ಪಗೊಂಡನಹಳ್ಳಿಯಲ್ಲಿ ಭಾನವಾರ ಮುಕ್ತಾಯವಾಯಿತು. ಪಾದಯಾತ್ರೆಯ ಅಂತಿಮಸ್ತರದಲ್ಲಿ ಸಂಸದ ಅನಂತಕುಮಾರ್, ಸಾರಿಗೆ ಸಚಿವ ಆರ್. ಅಶೋಕ್, ಶಾಸಕರಾದ ಎಸ್. ಮುನಿರಾಜು, ರವಿಸುಬ್ರಹ್ಮಣ್ಯ, ವಿಜಯಕುಮಾರ್ ಅವರೊಂದಿಗೆ ಎರಡು ಸಾವಿರಕ್ಕೂ ಹೆಚ್ಚು ಜನರು ಪಾದಯಾತ್ರೆಯನ್ನು ಸೇರಿಕೊಂಡು, ಗಂಗಾಪೂಜೆಗೆ ಸಾಕ್ಷೀಭೂತರಾದರು.
ಅಂತಿಮ ದಿನದ ಪಾದಯಾತ್ರೆ ಸೊಂಡೆಕೊಪ್ಪದಿಂದ ಭಾನುವಾರ ಬೆಳಗ್ಗೆ ಆರಂಭವಾಯಿತು. ಮಲ್ಲಸಂದ್ರದ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ತಿಪ್ಪಗೊಂಡನಹಳ್ಳಿಯವರೆಗಿನ ಪ್ರತಿ ಹಳ್ಳಿಯಲ್ಲಿಯೂ ಹಸಿರತೋರಣದ ಸ್ವಾಗತದೊಂದಿಗೆ ಜನಜಾಗೃತಿ ಸಭೆಗಳು ನಡೆದವು. ಹಾಗೆಯೇ, 200ರ ಆಸುಪಾಸಿನಲ್ಲಿದ್ದ ಪಾದಯಾತ್ರಿಗಳ ಗಣನೆ ಎರಡು ಸಾವಿರಕ್ಕೂ ಹೆಚ್ಚಿನ ಸಂಖ್ಯೆಗೆ ವಿಸ್ತರಿಸುತ್ತಾ ಹೋಯಿತು. ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದ ಪಾದಯಾತ್ರೆಗೆ ಚೋಳನಾಯಕಹಳ್ಳಿ ಸಮೀಪ ಸಂಸದ ಅನಂತಕುಮಾರ್, ಸಚಿವ ಆರ್. ಅಶೋಕ್, ಶಾಸಕರಾದ ರವಿಸುಬ್ರಹ್ಮಣ್ಯ, ವಿಜಯ್‌ಕುಮಾರ್ ಸೇರಿಕೊಂಡು, ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಹೆಜ್ಜೆ ಹಾಕಿದರು.
ಜಲಾಶಯದ ಹಿಂಭಾಗಕ್ಕೆ ಸಾಗಿದ ಪಾದಯಾತ್ರೆ, ಗಣೇಶನಂತೆ ಆಕಾರ ಹೊಂದಿರುವ ಕಲ್ಲಿಗೆ ವಿಘ್ನೇಶನ ಪೂಜೆ ನೆರವೇರಿಸಿತು. ಅಲ್ಲಿ ನಡೆದ ಗಂಗಾಪೂಜೆಯಲ್ಲಿ ಎಲ್ಲರೂ ಭಾಗವಹಿಸಿದರು. ಅರ್ಕಾವತಿ ಉಗಮಸ್ಥಾನದಿಂದ ಪಾದಯಾತ್ರೆಯಲ್ಲಿ ರಥದ ಮೂಲಕ ತಂದಿದ್ದ ಪಂಚಕುಂಭಗಳಲ್ಲಿನ ನೀರನ್ನು ವಿಶ್ವನಾಥ್ ಹಾಗೂ ಮುನಿರಾಜು ದಂಪತಿ ಮತ್ತು ಅನಂತಕುಮಾರ್, ಅಶೋಕ್ ಅವರು ಜಲಾಶಯಕ್ಕೆ ಸಮರ್ಪಿಸಿದರು. ನಂದಿಬೆಟ್ಟದಲ್ಲಿ ಉಗಮಿಸುವ ಅರ್ಕಾವತಿ ಇಲ್ಲಿಗೆ ಸರಾಗವಾಗಿ ಹರಿಯಲಿ ಎಂದು ಪ್ರಾರ್ಥಿಸಿದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಚಿವರ ನೇತೃತ್ವದಲ್ಲಿ ಉನ್ನತಾಧಿಕಾರಿಗಳ ಸಮಿತಿ ರಚಿಸಬೇಕೆಂಬ ಮನವಿ ಪತ್ರವನ್ನು ಪಾದಯಾತ್ರಿಗಳ ಪರವಾಗಿ ವಿಶ್ವನಾಥ್ ಹಾಗೂ ಮುನಿರಾಜು ಅವರು ಸಂಸದ ಅನಂತಕುಮಾರ್, ಸಚಿವ ಅಶೋಕ್ ಅವರಿಗೆ ನೀಡಿದರು. ಮುಖ್ಯಮಂತ್ರಿಯವರಿಗೆ ಈ ಮನವಿ ಪತ್ರ ತಲುಪಿಸಲು ಕೋರಲಾಯಿತು. ಅರ್ಕಾವತಿ ಪುನಶ್ಚೇತನ ಸಮಿತಿಗೆ ಎಲ್ಲ ಇಲಾಖೆಗಳೂ ನಿರ್ದೇಶನ ನೀಡುವ, ಅವರಿಂದ ಕೆಲಸ ಮಾಡುವ ಅಧಿಕಾರ ಸೇರಿದಂತೆ ಸರ್ವ ಅಧಿಕಾರ ನೀಡಬೇಕು ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ.
ಇಂತಹ ಇತಿಹಾಸ ರಚಿಸಿದ ಪಾದಯಾತ್ರೆಯ ಉದ್ದೇಶವನ್ನು ಈಡೇರಿಸುವ ಸ್ಪಷ್ಟ ಸೂಚನೆಯನ್ನೂ ರಾಜ್ಯ ಸರಕಾರ ನೀಡಿದೆ. ಸಚಿವರನ್ನು ಒಳಗೊಂಡ ಉನ್ನತಾಧಿಕಾರಿಗಳ ಸಮಿತಿ ರಚನೆಯನ್ನು ಮಾಡುವುದಾಗಿ ಹೇಳಿದೆ. ಇದು ಹೇಳಿಕೆಗೆ ಮಾತ್ರ ಸೀಮಿತವಾಗದೆ, ನದಿಯೊಂದನ್ನು ಪುನಶ್ಚೇತನಗೊಳಿಸಿ ಇತಿಹಾಸ ರಚನೆಯ ಕೆಲಸ ರಾಜ್ಯ ಸರಕಾರದಿಂದ ಪ್ರಾಮಾಣಿಕವಾಗಿ ಆಗಬೇಕಿದೆ. ಆಗ, ಇಡೀ ರಾಷ್ಟ್ರಕ್ಕೆ ಅರ್ಕಾವತಿ ನದಿ ಪುನಶ್ಚೇತನ ಮಾದರಿಯಾಗುತ್ತದೆ.

ಏನೆಂದರು?
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರಾಷ್ಟ್ರೀಯ ಜಲನೀತಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಪೂರ್ಣವಾಗಿ ಸಮ್ಮತವಾಗುತ್ತದೆ. ನದಿ ಪುನಶ್ಚೇತನದ ಅವರ ಕನಸನ್ನು ರಾಜ್ಯಮಟ್ಟದಲ್ಲಿ ಪೂರ್ಣಗೊಳಿಸುವ ಕಾರ್ಯ ಅರ್ಕಾವತಿಯಿಂದಲೇ ಆರಂಭವಾಗಲಿದೆ. ಬೆಂಗಳೂರಿನಲ್ಲಿ ಹರಿಯುತ್ತಿದ್ದ ನದಿಯನ್ನು ನಾವು ಬತ್ತಿಸಿದ್ದೇವೆ. ಎಲ್ಲವನ್ನೂ ಹೊಂದಿರುವ ಈ ಮಹಾನಗರಿಗೆ ನದಿ ದಂಡೆಯ ವೈಭವವೂ ಲಭಿಸಿದರೆ ಉದ್ಯಾನನಗರಿಯ ಸೊಬಗು ಮತ್ತಷ್ಟು ವೃದ್ಧಿಸುತ್ತದೆ. ಅಷ್ಟೇಅಲ್ಲ, ಕೃಷಿ ಚಟುವಟಿಕೆಗೆ ಬೆನ್ನೆಲುಬಾಗುವ ಅರ್ಕಾವತಿ ನದಿ ಪುನಶ್ಚೇತನದ ಕನಸನ್ನು ರಾಜ್ಯ ಸರಕಾರ ನನಸು ಮಾಡುತ್ತದೆ. ಕೇಂದ್ರದ ಪ್ರತಿನಿಧಿಗಳು ಇದರಲ್ಲಿರುತ್ತಾರೆ. -ಅನಂತಕುಮಾರ್, ಸಂಸದ
ಮುಂದಿನ ದಿನಗಳಲ್ಲಿ ನೀರಿನ ಬವಣೆ ಹೆಚ್ಚಾಗಲಿದೆ. ಇದನ್ನು ಅರಿತಿರುವ ಸರಕಾರ ಮುಂದಾಲೋಚನೆ ದೃಷ್ಟಿಯಿಂದ ಅರ್ಕಾವತಿ ನದಿ ಪುನಶ್ಚೇತನವನ್ನು ಗಂಭೀರವಾಗಿ ಪರಿಗಣಿಸಿದೆ. ಇದನ್ನು ಮತ್ತೊಂದು ವೃಷಭಾವತಿ ಆಗಲು ಬಿಡುವುದಿಲ್ಲ. ಅರ್ಕಾವತಿ ನದಿಯನ್ನು ಮಲೀನ ಮಾಡುತ್ತಿರುವವರು, ಒತ್ತುವರಿ ಮಾಡಿಕೊಂಡಿರುವರು, ನದಿ ಪಾತ್ರದಲ್ಲಿ ಕೈಗಾರಿಕೆ, ಗಣಿಗಾರಿಕೆ, ಮರಳುಸಾಗಣೆ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಮರಳು ನೀತಿಯಲ್ಲಿ ಇವೆಲ್ಲವನ್ನು ಸೇರಿಸಿಕೊಳ್ಳಲು ಕಾನೂನಿಗೆ ತಿದ್ದುಪಡಿ ತರಲಾಗುತ್ತದೆ. ಮುಂದಿನ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುತ್ತದೆ. ಮುಖ್ಯಮಂತ್ರಿಗಳು ನಗರಕ್ಕೆ ಬಂದ ಕೂಡಲೇ ಉನ್ನತಾಧಿಕಾರಿಗಳ ಸಮಿತಿ ರಚನೆ ಆಗಲಿದೆ. ಅರ್ಕಾವತಿ ಮತ್ತೆ ಹರಿಯಲಿ. ಇದಕ್ಕೆ ಸರಕಾರ ಪ್ರಾಮಾಣಿಕ ಪ್ರಯತ್ನ ಮಾಡುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ
ಅರ್ಕಾವತಿ ನದಿ ಪುನಶ್ಚೇತನದಿಂದ ಬೆಂಗಳೂರಿಗೆ ನೀರು ದೊರೆಯುವುದು ಮಾತ್ರವಲ್ಲ, ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಗ್ರಾಮಗಳಲ್ಲಿ ಕೃಷಿಗೆ ಅನುಕೂಲವಾಗುತ್ತದೆ. ಅಂತರ್ಜಲ ಮಟ್ಟ ವೃದ್ಧಿಸುತ್ತದೆ. ಇದರಿಂದ ಪರಿಸರದಲ್ಲಿರುವ ಸಾವಿರಾರು ರೀತಿಯ ಜಲಚರ, ಪ್ರಾಣಿಪಕ್ಷಿಗಳಿಗೆ ಪ್ರಯೋಜನವಾಗುತ್ತದೆ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಜನಜಾಗೃತಿಗೆ ಈ ಪಾದಯಾತ್ರೆ ನಡೆಸಲಾಯಿತು. ಅರ್ಕಾವತಿ ನದಿ ನಂದಿಬೆಟ್ಟಯಿಂದ ಹರಿದು ಹೆಸರಘಟ್ಟ ತುಂಬಿದರೆ, ಅಲ್ಲಿಂದ ನಂದಿಗೆ ಪಾದಯಾತ್ರೆ ಮಾಡುತ್ತೇನೆ. ಆ ತಾಯಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ. -ಎಸ್.ಆರ್. ವಿಶ್ವನಾಥ್, ಶಾಸಕ
ಅರ್ಕಾವತಿ ನದಿ ಹರಿದು ಹೆಸರಘಟ್ಟ ತುಂಬಿದರೆ, ಈಗಿರುವ ವ್ಯವಸ್ಥೆಯಿಂದ ದಾಸರಹಳ್ಳಿ ಕ್ಷೇತ್ರಕ್ಕೆ ಕೂಡಲೇ ಕುಡಿಯುವ ನೀರು ನೀಡಬಹುದು. ಇದು ನನ್ನ ಕ್ಷೇತ್ರದ ಜನರ ಪಾಲಿನ ಜೀವಗಂಗೆ. ಈ ನದಿಯನ್ನು ಹರಿಸಿದರೆ, ಬೆಂಗಳೂರಿನ ಶೇ.25ರಷ್ಟು ಭಾಗಕ್ಕೆ ನೀರು ಕೊಡಬಹುದು. ಆದ್ದರಿಂದ ಈ ನದಿ ಪುನಶ್ಚೇತನಕ್ಕಾಗಿ ಸರ್ವಪ್ರಯತ್ನ ಮಾಡುತ್ತೇನೆ. -ಎಸ್. ಮುನಿರಾಜು, ಶಾಸಕ

ಯಾರು ಎಷ್ಟು ನಡೆದರು?
ಅರ್ಕಾವತಿ ಪುನಶ್ಚೇತನ ವೇದಿಕೆಯಡಿ ಆಯೋಜಿಸಲಾಗಿದ್ದ ಈ ಪಾದಯಾತ್ರೆ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ 106 ಕಿಮೀ ಹೆಜ್ಜೆ ಹಾಕಿತು. ಈ ಸಂಪೂರ್ಣ ನಾಲ್ಕು ದಿನ, ಒಂದು ನಿಮಿಷವೂ ವಾಹನ ಹತ್ತದೆ, ಸಂಪೂರ್ಣ ನಡಿಗೆಯಲ್ಲಿ ಪಾಲ್ಗೊಂಡಿದ್ದು ಶಾಸಕ ಎಸ್. ವಿಶ್ವನಾಥ್. ಪಾದಯಾತ್ರೆಯ ರೂವಾರಿ ಆಗಿದ್ದ ವಿಶ್ವನಾಥ್, ಭಾಷಣ ಮಾಡುವಾಗ ಮಾತ್ರ ಮೈಕ್‌ಗಾಗಿ ವಾಹನ ಹತ್ತಿದ್ದು ಬಿಟ್ಟರೆ, ಅಂತಿಮ ದಿನ ಬೆರಳ ಸಂದಿಯಲ್ಲಿ ರಕ್ತ ಸುರಿಯುತ್ತಿದ್ದರೂ 106 ಕಿಮೀ ದೂರವನ್ನು ನಡಿಗೆಯಲ್ಲೇ ಪೂರ್ಣಗೊಳಿಸಿದರು.
ವಿಶ್ವನಾಥ್ ಜತೆಗೆ ಪೂರ್ಣ ಪಾದಯಾತ್ರೆ ಸುಮಾರು 100 ಜನರು ಹೆಜ್ಜೆ ಹಾಕಿದರು. ಶಾಸಕ ಎಸ್. ಮುನಿರಾಜು ನಾಲ್ಕು ದಿನ ಬಹುತೇಕ (ಸುಮಾರು 80 ಕಿ.ಮೀ.) ಹೆಜ್ಜೆ ಹಾಕಿದರು. ನಾಗದಳ ತಂಡ ನಂದಿಬೆಟ್ಟದಿಂದ ದೊಡ್ಡಬಳ್ಳಾಪುರ (30 ಕಿಮೀ); ಪರಿಸರವಾದಿ ಮಹೇಶ್ ಭಟ್ 12 ಕಿಮೀ (ಹನಿಯೂರಿನಿಂದ ಹೆಸರಘಟ್ಟ); ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ತಂಡ 11 ಕಿಮೀ (ನಂದಿಬೆಟ್ಟದಿಂದ ಸೀಗೇಹಳ್ಳಿ ಗೇಟ್); ಸಚಿವ ಸುರೇಶ್ ಕುಮಾರ್ 8 ಕಿಮೀ (ನಂದಿಬೆಟ್ಟದಿಂದ ಕ್ರಾಸ್‌ವರೆಗೆ); ಸಚಿವ ಆರ್ ಅಶೋಕ್ 7 ಕಿಮೀ (ತರಬನಹಳ್ಳಿಯಿಂದ ರೈಲ್ವೆ ಸೇತುವೆ ಹೊಳೆ ಹಾಗೂ ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಸಚಿವ ರಾಮಚಂದ್ರಗೌಡ 6 ಕಿಮೀ (ರಾವುತ್ತನಹಳ್ಳಿಯಿಂದ ಸೊಂಡೆಕೊಪ್ಪ); ಶಾಸಕ ನರಸಿಂಹಸ್ವಾಮಿ ದೊಡ್ಡಬಳ್ಳಾಪುರದ ವೀರಾಪುರದವರೆಗೆ (ಸುಮಾರು 6 ಕಿಮೀ), ಸಂಸದ ಅನಂತಕುಮಾರ‍್, ಶಾಸಕರಾದ ರವಿಸುಬ್ರಹ್ಮಣ್ಯ ಹಾಗೂ ವಿಜಯಕುಮಾರ್ 5 ಕಿಮೀ (ಚೋಳನಾಯಕನಹಳ್ಳಿಯಿಂದ ತಿಪ್ಪಗೊಂಡನಹಳ್ಳಿ); ಶಾಸಕ ನಾಗರಾಜ್ 4 ಕಿಮೀ(ಸೊಂಡೆಕೊಪ್ಪದ ಸಮೀಪದಲ್ಲಿ). ಇವರಲ್ಲದೆ, ಯಲಹಂಕ, ದಾಸರಹಳ್ಳಿಯ ಮುಖಂಡರು ಹಾಗೂ ನೂರಾರು ಜನರು ದಿನಕ್ಕೆ ಹತ್ತಾರು ಕಿಮೀ ದೂರ ಪಾದಯಾತ್ರೆಯಲ್ಲಿ ಸಾಗಿದರು.

ಇತಿಹಾಸ ರಚನೆ
ಅರ್ಕಾವತಿ ನದಿ ಪುನಶ್ಚೇತನಕ್ಕೆ ಜನಪ್ರತಿನಿಧಿಗಳನ್ನು ಒಳಗೊಂಡ ನಾಲ್ಕು ದಿನಗಳ ಪಾದಯಾತ್ರೆ ಹೊಸ ಇತಿಹಾಸ ರಚಿಸಿತು. ನದಿ ಪುನಶ್ಚೇತನ ಹಾಗೂ ಸಂರಕ್ಷಣೆ ಬಗ್ಗೆ ಜನಜಾಗೃತಿಯ ಮೂಲ ಉದ್ದೇಶವನ್ನು ಹೊಂದಿದ್ದ ಪಾದಯಾತ್ರೆ, ಪಕ್ಷಾತೀತವಾಗಿ ಹೆಜ್ಜೆಹಾಕಿತ್ತು. ಸಚಿವರು ಹಾಗೂ ಶಾಸಕರು ಸೇರಿದಂತೆ ಪರಿಸರವಾದಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್, ಮಹೇಶ್ ಭಟ್, ಸೀತಾರಾಂ, ಶಿವಮಲ್ಲು, ಕೆ.ಸಿ. ಶಿವರಾಂ, ಕರ್ನಾಟಕ ರಕ್ಷಣಾ ವೇದಿಕೆ, ಜಯ ಕರ್ನಾಟಕ, ಅರ್ಕಾವತಿ ಪುನಶ್ಚೇತನ ಸಮಿತಿ, ನಾಗದಳ, ಕುಮುದ್ವತಿ ನೆಲ-ಜಲ ರಕ್ಷಣಾ ಸಮಿತಿ, ಅರ್ಕಾವತಿ ಜನಜಾಗೃತಿ ಸಮಿತಿ, ಜನಧ್ವನಿ, ಕರ್ನಾಟಕ ಸುರಕ್ಷಾ ಸೇನಾಪಡೆ ಸೇರಿದಂತೆ ಹತ್ತಾರು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಪಾದಯಾತ್ರೆಯ ಸಂದರ್ಭದಲ್ಲಿ ಮೂರು ದಿನ ಸುಗಮಸಂಗೀತದ ದಿಗ್ಗಜರಾದ ಡಾ. ಸಿ. ಅಶ್ವತ್ಥ್, ಡಾ. ಶಿವಮೊಗ್ಗ ಸುಬ್ಬಣ್ಣ, ವೈ.ಕೆ. ಮುದ್ದುಕೃಷ್ಣ, ಕಿಕ್ಕೇರಿ ಕೃಷ್ಣಮೂರ್ತಿ ತಂಡ ಪರಿಸರ ಗೀತೆಗಳ ಸುಧೆಹರಿಸಿ, ಪರಿಸರ-ನದಿ ಉಳಿಸುವ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಸಾರಿದ್ದು ಗಮನಾರ್ಹವಾಗಿತ್ತು.
ಈ ಹಿಂದೆ, 2007ರ ಜನವರಿಯಲ್ಲಿ ಹಲವು ಸಂಘ-ಸಂಸ್ಥೆಗಳು, ಪರಿಸರವಾದಿಗಳು ಸೇರಿಕೊಂಡು ಕೆ.ಸಿ. ಶಿವರಾಂ ಸಂಘಟನೆಯಲ್ಲಿ ನಂದಿಬೆಟ್ಟದಿಂದ ಕನಕಪುರದ ಸಂಗಮದವರೆಗೆ 190 ಕಿಮೀ ದೂರವನ್ನು ಒಂಬತ್ತು ದಿನದಲ್ಲಿ ಪಾದಯಾತ್ರೆ ಮೂಲಕ ಕ್ರಮಿಸಿದ್ದರು.

ನಿರೀಕ್ಷೆಗೂ ಮೀರಿದ ಸ್ಪಂದನೆ, ಉನ್ನತ ಸಮಿತಿ ರಚನೆ

ಅರ್ಕಾವತಿ ಪಾದಯಾತ್ರೆ-ದಿನ-3: ಸೆಪ್ಟೆಂಬರ್ 5, 2009
ಅರ್ಕಾವತಿ ನದಿ ಪುನಶ್ಚೇತನ, ಜನಜಾಗೃತಿ ಪಾದಯಾತ್ರೆಗೆ ಮೂರನೇ ದಿನ ನಿರೀಕ್ಷೆಗೂ ಮೀರಿದ ಬೆಂಬಲ ವ್ಯಕ್ತವಾಯಿತು. ಜತೆಗೆ, ನದಿ ಪುನಶ್ಚೇತನಕ್ಕೆ ಮೂರು ಸಚಿವರನ್ನೊಳಗೊಂಡ ಸರಕಾರದ ಉನ್ನತ ಸಮಿತಿ ರಚನೆಗೂ ಮನ್ನಣೆ ಸಿಕ್ಕಿತು. ಸಾರಿಗೆ ಸಚಿವ ಆರ್. ಅಶೋಕ್ ಹಾಗೂ ವೈದ್ಯಕೀಯ ಶಿಕ್ಷಣ ಖಾತೆಸಚಿವ ರಾಮಚಂದ್ರಗೌಡ ಅವರು ಪಾದಯಾತ್ರೆಯಲ್ಲಿ ಕೊಂಚದೂರ ಹೆಜ್ಜೆ ಹಾಕಿ ನದಿ ಪುನಶ್ಚೇತನಕ್ಕೆ ಸರಕಾರ ಕಂಕಣಬದ್ಧರಾಗಿರುವುದಾಗಿ ಪ್ರಕಟಿಸಿದ್ದು, ಶನಿವಾರದ ಪಾದಯಾತ್ರೆಯ ಹೈಲೈಟ್.
ಹೆಸರಘಟ್ಟದಿಂದ ಬೆಳಗ್ಗೆ 7.15ಕ್ಕೆ ಆರಂಭವಾದ ಮೂರನೇ ದಿನದಪಾದಯಾತ್ರೆಗೆ ತರಬನಹಳ್ಳಿಯಲ್ಲಿ ಊರ ಹಬ್ಬದ ಮೆರವಣಿಗೆ ಸೊಗಡಿನ ಸ್ವಾಗತ ದೊರೆಯಿತು. ಶಾಸಕರಾದ ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದಪಾದಯಾತ್ರೆಗೆಸಾರಿಗೆ ಸಚಿವ ಆರ್. ಅಶೋಕ್ ಸ್ವಾಗತಿಸಿ, ಕೊಂಚ ದೂರ ಹೆಜ್ಜೆ ಹಾಕಿದರು. ಅಲ್ಲದೆ, ಮಹಿಳೆಯರು ಹೊತ್ತುತಂದಿದ್ದ ಕಳಸದ ನೀರನ್ನು ಅರ್ಕಾವತಿ ನದಿ ಪಾತ್ರದಲ್ಲಿ ಸುರಿಯುವ ಮೂಲಕ ಪುನಶ್ಚೇತನದ ಶಪಥ ಮಾಡಿದರಲ್ಲದೆ, ಅದನ್ನೇ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಹಾಗೂ ನಾಗರಿಕರಿಗೆ ಬೋಧಿಸಿದರು.
ತರಬನಹಳ್ಳಿಯಿಂದ ಹೆಗ್ಗಡದೇವನಪುರದವರೆಗೆ ಡೊಳ್ಳುಕುಣಿತ, ತಮಟೆ, ದೊಡ್ಡ ಮುಖವಾಡದ ಗೊಂಬೆಗಳು, ಪೂಜಾಕುಣಿತದೊಂದಿಗೆ ಸಾವಿರಾರು ಜನರು ಪ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸುಮಾರ 6 ಕಿಮೀ ದೂರ ನದಿ ಪಾತ್ರದಲ್ಲೇ ಪಾದಯಾತ್ರೆ ಸಾಗಿತು. ಮಾಕಳಿ ಮೂಲಕ, ರಾವುತ್ತನಹಳ್ಳಿ ಕ್ರಾಸ್ ಮೂಲಕ ಸೊಂಡೆಕೊಪ್ಪ ತಲುಪಿದ ಪಾದಯಾತ್ರಿಗಳಲ್ಲಿ ನದಿ ಪುನಶ್ಚೇತನ ಸಮಿತಿ ರಚನೆಯ ಸಂತಸ ನಡಿಗೆಯ ಉತ್ಸಾಹವನ್ನು ಮರೆಮಾಡಿತ್ತು. ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಹಾಗೂ ಕಿಕ್ಕೇರಿ ಕೃಷ್ಣಮೂರ್ತಿ ತಂಡದ ಸುಗಮ ಸಂಗೀತ ಗಾಯನ, ಪರಿಸರ ರಕ್ಷಣೆಯಲ್ಲಿ ಮತ್ತಷ್ಟು ತೊಡಗಿಸಿಕೊಳ್ಳಲು ಪಾದಯಾತ್ರಿಗಳನ್ನುಪ್ರೇರೇಪಿಸಿತು.
ಮಾಕಳಿಯಲ್ಲಿ ಕೈಗಾರಿಕೆಗಳ ಬೆಂಬಲ
ಅರ್ಕಾವತಿ ನದಿ ಪಾತ್ರವನ್ನು ಉಳಿಸಿ, ಹರಿಸಲು ಹಾಗೂ ಒತ್ತುವರಿ ತೆರವು, ಮಾಲಿನ್ಯ ಬಿಡುವ ಕೈಗಾರಿಕೆಗಳನ್ನು ತೆರವುಗೊಳಿಸಲು ಅರ್ಕಾವತಿ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘ ಬೆಂಬಲ ಸೂಚಿಸಿದೆ.
ಪಾದಯಾತ್ರಿಗಳನ್ನು ಸ್ವಾಗತಿಸಲು ಸಂಘ ಮಾಕಳಿಯಲ್ಲಿ ಸಭೆ ಆಯೋಜಿಸಿತ್ತು. ನದಿ ಪಾತ್ರದ ಒಂದು ಕಿಮೀ ಆಸುಪಾಸು ಮಾಲಿನ್ಯ ಉಂಟು ಮಾಡದ ಕಾರ್ಖಾನೆ ಹಾಗೂ ಗಾರ್ಮೆಂಟ್ಸ್‌ಗಳನ್ನು ಉಳಿಸಿಕೊಳ್ಳಲು ಸಂಘ ಮನವಿ ಮಾಡತು. ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸುವುದಾಗಿ ವಿಶ್ವನಾಥ್ ಭರವಸೆ ನೀಡಿದರು.
ವಿರೋಧ
ಸರಕಾರ 2003ರಲ್ಲಿ ಹೊರಡಿಸಿರುವ ಅಧಿಸೂಚನೆ ಪ್ರಕಾರ, ನದಿ ಪಾತ್ರದಿಂದ 1 ಕಿಮೀ ಆಸುಪಾಸು ಯಾವುದೇ ಕಾರ್ಖಾನೆಗಳಿರುವಂತಿಲ್ಲ. ಮಾಲಿನ್ಯ- ಮಾಲಿನ್ಯ ರಹಿತ ಕಾ ರ್ಖಾನೆಗಳೆಂದು ವಿಂಗಡಿಸಿಲ್ಲ. ಆದ್ದರಿಂದ ಎಲ್ಲ ಕೈಗಾರಿಕೆಗಳನ್ನು ತೆರವುಗೊಳಿಸಬೇಕು. ಯಾವ ಒತ್ತಡಕ್ಕೂ ಮಣಿಯಬಾರದು ಎಂದು ಪರಿಸರವಾದಿಗಳು ಹಾಗೂ ಸ್ಥಳೀಯರು ಅಭಿಪ್ರಾಯಪಟ್ಟರು. ಕೈಗಾರಿಕೆಗಳು ಉಳಿಯಲು ಅನುವು ಮಾಡಿಕೊಟ್ಟರೆ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದ್ದಾರೆ.

ಏನೆಂದರು?
ಕಂದಾಯ ಸಚಿವ, ಜಲಮಂಡಳಿ ಸಚಿವ ಹಾಗೂ ನೀರಾವರಿ ಸಚಿವರು ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಒಳಗೊಂಡ ಉನ್ನತ ಸಮಿತಿಯನ್ನು ಅರ್ಕಾವತಿ ನದಿ ಪುನಶ್ಚೇತನಕ್ಕೆ ರಚಿಸಲಾಗುತ್ತದೆ. ಮುಖ್ಯಮಂತ್ರಿ ಅವರು ಚೀನಾದಿಂದ ಬಂದಕೂಡಲೇ ಇದಕ್ಕೆ ಚಾಲನೆ ನೀಡಲಾಗುತ್ತದೆ. ಇದು ಕೇವಲ ಪಾದಯಾತ್ರೆ ಅಲ್ಲ, ಸರಕಾರದ ಹಣದ ಸದುಯೋಗ ಹಾಗೂ ಪರಿಸರ ಉಳಿಸುವ ಅರಿವನ್ನು ಜನರಲ್ಲಿ ಮೂಡಿಸುವ ಆಂದೋಲನ. ನದಿ-ಕೆರೆ ಒತ್ತುವರಿಯನ್ನು ಸರಕಾರ ಸಹಿಸುವುದಿಲ್ಲ. ಕೈಗಾರಿಕೆಗಳು ಸೇರಿದಂತೆ ಯಾರೇ ಒತ್ತುವರಿ ಮಾಡಿಕೊಂಡಿದ್ದರೂ, ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತದೆ. -ಆರ್. ಅಶೋಕ್, ಸಾರಿಗೆ ಸಚಿವ

ಕಲುಷಿತ ನೀರನ್ನು ನದಿಗೆ ಬಿಡುವ ಕಾರ್ಖಾನೆಗಳು ಹಾಗೂ ನದಿಪಾತ್ರದಲ್ಲಿ ಬಡಾವಣೆ ನಿರ್ಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಕಾರ್ಖಾನೆಯನ್ನು ಬದಲಿಸಬಹುದು. ಆದೆ ನದಿಯನ್ನು, ಅದರ ಹರಿವನ್ನು ಬದಲಿಸಲು ಸಾಧ್ಯವಿಲ್ಲ. ಒತ್ತುವರಿ ತೆರವಿಗೆ ಯಾವ ಒತ್ತಡಕ್ಕೂ ಮಣಿಯುವುದಿಲ್ಲ. -ಎಸ್.ಆರ್. ವಿಶ್ವನಾಥ್, ಶಾಸಕ

ಪಾದಯಾತ್ರೆ ಹೆಜ್ಜೆಗಳು- ದಿನ-3
ಬೆಳಗ್ಗೆ 7.15: ಹೆಸರಘಟ್ಟದಿಂದ ಹೊರಟು ಐವರುಕಂಡ ಪುರದ ಮೂಲಕ ತಿರುಮಳಾಪುರ ಪ್ರವೇಶ. ಸ್ಥಳೀಯರಿಂದ ಹಸಿರುತೋರಣದ ಸ್ವಾಗತ.
9.30: ತರಬನಹಳ್ಳಿಯಲ್ಲಿ ಸಚಿವ ಆರ್. ಅಶೋಕ್ ಅವರಿಂದ ಸ್ವಾಗತ. ಊರಹಬ್ಬದ ಮೆರವಣಿಗೆಯಲ್ಲಿ ಪಾದಯಾತ್ರೆ ಹೆಜ್ಜೆ.
10.45: ಅಶೋಕ್ ಅವರಿಂದ ಅರ್ಕಾವತಿ ನದಿ ಪಾತ್ರಕ್ಕೆ ಕಳಸ ನೀರು ಸಮರ್ಪಣೆ. ಮೆರವಣಿಯಲ್ಲಿ ಮುನಿಯಯ್ಯನ ಪಾಳ್ಯ, ಆಲೂರಿಗೆ ಪ್ರವೇಶ. ಅಲ್ಲಿ ಸ್ವಾಗತ, ಜನಜಾಗೃತಿ ಸಭೆ.
12.30: ಹೆಗ್ಗಡದೇವನಪುರಕ್ಕೆ ಆಗಮನ. ನೃತ್ಯ ಹಾಗೂ ಡೊಳ್ಳು ಕುಣಿತದ ಸ್ವಾಗತ.
1.45: ಮಾಕಳಿಯಲ್ಲಿರುವ ಅಗಸ್ತ್ಯ ಮುನಿಗಳು ತಪಸ್ಸು ಮಾಡಿದ್ದ ಭೀಮೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ.
2.00: ಅರ್ಕಾವತಿ ಕೈಗಾರಿಕೆಗಳ ಕ್ಷೇಮಾಭಿವೃದ್ಧಿ ಸಂಘದೊಂದಿಗೆಸಭೆ.
3.20: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಮರದ ಕಾಲಿನ ಕುಣಿತ ಸ್ವಾಗತದೊಂದಿಗೆ ರಾವುತ್ತಹಳ್ಳಿ ಕ್ರಾಸ್ ಪ್ರವೇಶ.
4.30: ಶಿವಪುರದಲ್ಲಿ ಸ್ವಾಗತ ಸಭೆ.
5.20: ರಾವುತ್ತನಹಳ್ಳಿ ಪ್ರವೇಶ. ಗ್ರಾಮದಲ್ಲಿ ಸಭೆ. ಸಚಿವ ರಾಮಚಂದ್ರಗೌಡಪಾದಯಾತ್ರೆಗೆ ಸೇರ್ಪಡೆ.
6.00: ಸೊಂಡೆಕೊಪ್ಪ ಪ್ರವೇಶ. ಆದರ್ಶ ಸುಗಮಸಂಗೀತ ಅಕಾಡೆಮಿ ನೇತೃತ್ವದಲ್ಲಿ ವೈ.ಕೆ. ಮುದ್ದುಕೃಷ್ಣ ಅವರಿಂದ ಪರಿಸರಗೀತೆಗಳ ಗಾಯನ.

ಎರಡನೇ ದಿನ ಮುಗಿಲು ಮುಟ್ಟಿದ ಉತ್ಸಾಹ

ಅರ್ಕಾವತಿ ಪಾದಯಾತ್ರೆ-ದಿನ-2: ಸೆಪ್ಟೆಂಬರ್ 4, 2009
ಹಳ್ಳಿಗಳಲ್ಲಿ ಜನಪ್ರತಿನಿಧಿಗಳು, ಸ್ಥಳೀಯ ಮುಖಂಡರು ಅಲ್ಲಿನ ಬೀದಿಗಳಲ್ಲಿ ಸ್ವಾಗತ ಸಭೆ, ಮನವಿ ಮಾಡುವುದು ಸಾಮಾನ್ಯವಾಗಿ ಚುನಾವಣೆ ಸಮಯದಲ್ಲಿ ಮಾತ್ರ. ಆದರೆ, ಶುಕ್ರವಾರ ದೊಡ್ಡಬಳ್ಳಾಪುರ ಹಾಗೂ ಬೆಂಗಳೂರು ಉತ್ತರ ತಾಲೂಕು ಇದಕ್ಕೆ ತದ್ವಿರುದ್ಧವಾಗಿ ಪ್ರತಿಕ್ರಿಯಿಸಿತ್ತು
ಈ ತಾಲೂಕುಗಳಲ್ಲಿ ಶುಕ್ರವಾರ ಜನಪ್ರತಿನಿಧಿಗಳು ಹಾಗೂ ಮುಖಂಡರ ಜಾತ್ರೆಯೇ ನಡೆದಿತ್ತು. ಆದರೆ ಇದು ಚುನಾವಣೆ ಪ್ರಚಾರ ಆಗಿರಲಿಲ್ಲ. ಅದಕ್ಕಿಂತ ಹೆಚ್ಚಿನ ಉತ್ಸಾಹವೂ ಇತ್ತು. ಏಕೆಂದರೆ ಪಕ್ಷಭೇದ ಮರೆತು ಜನಪ್ರತಿನಿಧಿಗಳು ಅರ್ಕಾವತಿ ನದಿ ಸಂರಕ್ಷಣೆಗೆ ಮನವಿ ಮಾಡುತ್ತಿದ್ದರು. ಅದರ ಅಗತ್ಯವನ್ನು ತಿಳಿಹೇಳಿದರು.
ಅರ್ಕಾವತಿ ನದಿ ಪುನಶ್ಚೇತನ ಹಾಗೂ ಸಂರಕ್ಷಣೆಯ ಜನಜಾಗೃತಿ ಪಾದಯಾತ್ರೆಗೆ ಶುಕ್ರವಾರ ವಿಭಿನ್ನ ರಂಗೇರಿತ್ತು. ಜನಪ್ರತಿನಿಧಿಗಳು ಅತ್ಯುತ್ಸಾಹದಿಂದ ಪಾಲ್ಗೊಂಡಿದ್ದರು. ಅಷ್ಟೇಅಲ್ಲ, ಪಾದಯಾತ್ರಿಗಳ ಸಂಖ್ಯೆಯೂ ವೃದ್ದಿಸುತ್ತಾ ಹೋಯಿತು.
ಪಾದಯಾತ್ರೆಯ ಎರಡನೇ ದಿನ ದೊಡ್ಡಬಳ್ಳಾಪುರದ ಬಸವಭವನದಿಂದ ಶಾಸಕ ಎಸ್.ಆರ್. ವಿಶ್ವನಾಥ್ ನೇತೃತ್ವದಲ್ಲಿ ಆರಂಭವಾಯಿತು. ಅಲ್ಲಿಂದ ನಾಗರಕೆರೆ, ವೀರಾಪುರ, ಮಜರಾ ಹೊಸಹಳ್ಳಿ ಮೂಲಕ ಹನಿಯೂರು ಪ್ರವೇಶಿಸಿ, ಹೆಸರಘಟ್ಟ ತಲುಪಿತು.
ದೊಡ್ಡಬಳ್ಳಾಪುರದಲ್ಲಿ ಒಂದಷ್ಟು ದೂರ ಶಾಸಕ ನರಸಿಂಹಸ್ವಾಮಿ ಹೆಜ್ಜೆ ಹಾಕಿದರು. ನಾಗರಕೆರೆ ಸಂರಕ್ಷಣೆ ಹಾಗೂ ಒತ್ತುವರಿ ತೆರವಿಗೆ ತಾವು ಬದ್ಧ ಎಂದು ಹೇಳಿದ್ದು ಗಮನಾರ್ಹವಾಗಿತ್ತ. ಈ ಕೆರೆ ಉಳಿವಿಗಾಗಿ ನಾಗದಳ ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದೆ.
ಹನಿಯೂರು ತಲುಪಿದಾಗಲೇ ಪಾದಯಾತ್ರೆಗೆ ವಿಭಿನ್ನ ರೂಪ ದೊರೆತತ್ತು. ಪಾದಯಾತ್ರೆ ಹನಿಯೂರಿಗೆ ಆಗಮಿಸಿದಾಗ, ಮಾವಿನ ತೋರಣ, ಪೂರ್ಣಕುಂಭಗಳ ಮೂಲಕ ಹೂವಿನ ಮಳೆಯಲ್ಲಿ ಸ್ವಾಗತ ಕೋರಲಾಯಿತು. ಪರಿಸರವಾದಿ, ಕಲಾವಿದ ಸುರೇಶ್ ಹೆಬ್ಳೀಕರ್, ಶಾಸಕ ಎಸ್. ಮುನಿರಾಜು, ವಾಣಿಶ್ರೀ ವಿಶ್ವನಾಥ್, ಅರ್ಕಾವತಿ-ಕುಮುದ್ವತಿ ಪುನಶ್ಚೇತನ ಸಮಿತಿ ಅಧ್ಯಕ್ಷ ಮಹೇಶ್ ಭಟ್ ಇಲ್ಲಿ ಪಾದಯಾತ್ರೆಗೆ ಸೇರಿಕೊಂಡರು. ವಿಶ್ವನಾಥ್ ಇವರೆಲ್ಲರೊಂದಿಗೆ ಸೇರಿಕೊಂಡು ಹನಿಯೂರು ಕೆರೆಯಲ್ಲಿ ಗಂಗಾಪೂಜೆ ನೆರವೇರಿಸಿದರು.
ಬೆಂಗಳೂರು ಉತ್ತರ ತಾಲೂಕಿನಲ್ಲಿ ಪಾದಯಾತ್ರೆಗೆ ಅತ್ಯದ್ಭುತ ಸ್ವಾಗತ, ಪ್ರಶಂಸೆ ಹಾಗೂ ಭಾಗವಹಿಸುವಿಕೆ ಕಂಡುಬಂದಿತು. ಸಂಜೆ ಹೆಸರಘಟ್ಟ ಜಲಾಶಯದ ಹಿನ್ನೆಲೆಯಲ್ಲಿ, ಆದರ್ಶ ಸುಗಮಸಂಗೀತ ಅಕಾಡೆಮಿ ನೇತೃತ್ವದಲ್ಲಿ ಹಿರಿಯ ಗಾಯಕ ಡಾ. ಅಶ್ವತ್ಥ್ ಅವರಿಂದ ಸುಗಮ ಸಂಗೀತ ಆಯೋಜಿಸಲಾಗಿತ್ತು.

ಏನೆಂದರು?
ನದಿ ಪುನಶ್ಚೇತನಕ್ಕೆ ಅಧಿಕಾರದಲ್ಲಿರುವ ಜನಪ್ರತಿನಿಧಿಗಳು ಸೇರಿದಂತೆ ಎಲ್ಲ ಪಕ್ಷದವರು ಜತೆಗೂಡಿರುವುದು ರಾಷ್ಟ್ರದಲ್ಲೇ ಇದು ಪ್ರಥಮ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಹಮ್ಮಿಕೊಂಡಿರುವ ಈ ಪಾದಯಾತ್ರೆ ರಾಜ್ಯಕ್ಕೇ ಮಾದರಿ. -ಸುರೇಶ್ ಹೆಬ್ಳೀಕರ್, ಕಲಾವಿದ, ಪರಿಸರವಾದಿ
ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಅರಿವು ಮೂಡಿಸುವ ಕಾರ್ಯಕ್ಕೆ ನಾನು ಯಾವುದೇ ರೀತಿಯ ಹೋರಾಟಕ್ಕೂ ಸಿದ್ಧ. ಸದ್ಯ ನಡೆಯುತ್ತಿರುವ ಪಾದಯಾತ್ರೆಗೆ ಸರಕಾರದಿಂದ ಯಾವುದೇ ಸಕಾರಾತ್ಮಕ ಸ್ಪಂಧನೆ ಸಿಗದಿದ್ದರೆ, ಲಕ್ಷಾಂತರ ಜನರೊಂದಿಗೆ ವಿಧಾನಸೌಧಕ್ಕೆ ತೆರಳಿ ಅಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತೇನೆ. ಅರ್ಕಾವತಿ ಉಳಿವಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ. -ಡಾ. ಸಿ. ಅಶ್ವತ್ಥ್, ಹಿರಿಯ ಗಾಯಕರು.

ಪಾದಯಾತ್ರೆ ಹೆಜ್ಜೆಗಳು- ದಿನ-2
ಬೆಳಗ್ಗೆ 7.15: ದೊಡ್ಡಬಳ್ಳಾಪುರದ ಬಸವಭವನದಿಂದ ಪ್ರಾರಂಭವಾಗಿ, ನಾಗರಕೆರೆಏರಿ ಮೂಲಕ ರೈಲು ನಿಲ್ದಾಣ.
9.15: ಬಾಶೆಟ್ಟಿಹಳ್ಳಿ ಸ್ಥಳೀಯರಿಂದ ಸ್ವಾಗತ. ವೀರಾಪುರಕ್ಕೆ ಪ್ರವೇಶ.
10.30: ವೀರಾಪುರದ ಆಂಜನೇಯ ದೇವಾಲಯದಲ್ಲಿ ಪೂಜೆ ಮತ್ತು ಜನಜಾಗೃತಿ ಸಭೆ.
11.05: ಜಿಂಕೆ ಬಚ್ಚಹಳ್ಳಿ, ದೊಡ್ಡ ತುಮಕೂರಿಗೆ ಪ್ರವೇಶ. ತಮಟೆ ಮೂಲಕ ಸ್ವಾಗತ. ಗ್ರಾ.ಪಂ. ಗ್ರಂಥಾಲಯದಲ್ಲಿ ಸಭೆ. ಕೆರೆ ಒತ್ತುವರಿ ತೆರವಿಗೆ ಪಣ.
1 ಗಂಟೆ: ಹನಿಯೂರಿನಲ್ಲಿ ಅದ್ಧೂರಿ ಸ್ವಾಗತ. ಪೂರ್ಣಕುಂಭ, ಹಸಿರುತೋರಣ ಹಾಗೂ ಪಟಾಕಿ ಮೂಲಕ ಸ್ವಾಗತ. ಹನಿಯೂರು ಕೆರೆಯಲ್ಲಿ ಗಂಗಾಪೂಜೆ.
3.45: ಸೊಣ್ಣೇನಹಳ್ಳಿ ಕ್ರಾಸ್‌ಗೆ ಆಗಮನ. ಜನಜಾಗೃತಿ ಸಭೆ. ನಂತರ ಸೀಡ್ ಫಾರ್ಮ್ ಮೂಲಕ ಬ್ಯಾತಕೆರೆ ಮೂಲಕ ಹೆಸರಘಟ್ಟ ಜಲಾಶಯಕ್ಕೆ ಆಗಮನ.
ಸಂಜೆ 6 ಗಂಟೆಗೆ ಡಾ. ಅಶ್ವತ್ಥ್ ಅವರಿಂದ ಸುಗಮಸಂಗೀತ.

ರಾಜ್ಯದಲ್ಲಿ ಹೊಸ ಇತಿಹಾಸ ರಚನೆ

ಅರ್ಕಾವತಿ ಪಾದಯಾತ್ರೆ-ದಿನ-1: ಸೆಪ್ಟೆಂಬರ್ 3, 2009
ರಾಜ್ಯದಲ್ಲಿ ನಂದಿಬೆಟ್ಟ ಮನೆಮಾತು. ಒಂದು ದಿನದ ಮೋಜಿನ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಪ್ರೇಮಿಗಳಿಗಂತೂ ನೆಚ್ಚಿನ ವಾತಾವರಣ. ವರ್ಷದ ಬಹುತೇಕ ದಿನ ಮಂಜಿನಿಂದ ತುಂಬಿರುವ ನಂದಿಬೆಟ್ಟ, ಜನಪ್ರತಿನಿಧಿಗಳು, ಪರಿಸರವಾದಿಗಳು ಹಾಗೂ ಪರಿಸರ ಪ್ರೇಮಿಗಳ ಸಮೂಹದಲ್ಲಿ ಗುರುವಾರ ಮಿಂದೆತ್ತಿತ್ತು. ಅಷ್ಟೇಅಲ್ಲ, ರಾಜ್ಯದಲ್ಲಿ ಹೊಸ ಇತಿಹಾಸ ರಚನೆಗೆ ಸಾಕ್ಷಿಯಾಯಿತು.
ಅರ್ಕಾವತಿ ನದಿ ಸಂರಕ್ಷಣೆ ವೇದಿಕೆ ಅರ್ಕಾವತಿ ನದಿ ಉಳಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಪಾದಯಾತ್ರೆಯ ಚಿತ್ರಣ ನಂದಿಬೆಟ್ಟದಲ್ಲಿ ಅನಾವರಣಗೊಂಡಿದ್ದು ಹೀಗೆ.
ಅರ್ಕಾವತಿ ಉಗಮಸ್ಥಾನದಲ್ಲಿ ಮಂಜು ತುಂಬಿದ ವಾತಾವರಣದಲ್ಲೇ ಗುರುವಾರ ಬೆಳಗ್ಗೆ 6.30ರಿಂದ ಗಂಗಾಪೂಜೆ ಆರಂಭಗೊಂಡಿತ್ತು. ಸುಮಾರು ಎರಡು ಗಂಟೆ ನಡೆದ ಗಂಗಾಪೂಜೆಯ ಅಂತ್ಯದಲ್ಲಿ, ಶಾಸಕರಾದ ಎಸ್. ಆರ್. ವಿಶ್ವನಾಥ್, ಎಸ್. ಮುನಿರಾಜು ಹಾಗೂ ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಅರ್ಕಾವತಿಗೆ ಬಾಗಿನ ಅರ್ಪಿಸಿದರು. ಸಂಸದೀಯ ವ್ಯವಹಾರಗಳ ಸಚಿವ ಸುರೇಶ್‌ಕುಮಾರ್ 9.30ಕ್ಕೆ ಪಾದಯಾತ್ರೆಗೆ ಚಾಲನೆ ನೀಡಿದರು.
ಸಚಿವ ಸುರೇಶ್ ಕುಮಾರ್ ಪಾದಯಾತ್ರೆಗೆ ಚಾಲನೆ ನೀಡಿದಷ್ಟೇ ಅಲ್ಲ, 'ಹರಿಯಲಿ ಹರಿಯಲಿ ಅರ್ಕಾವತಿ ಹರಿಯಲಿ', 'ಅರ್ಕಾವತಿ ನದಿ ಪುನಶ್ಚೇತನ ಶೀಘ್ರ ಆಗಲಿ', 'ಬೇಕೇ ಬೇಕು ಅರ್ಕಾವತಿ ಬೇಕು' ಎಂಬ ಘೋಷಣೆಗಳನ್ನು ಕೂಗಿ ಪಾದಯಾತ್ರಿಗಳನ್ನು ಉತ್ತೇಜಿಸುತ್ತ, ಅತ್ಯಂತ ಉತ್ಸಾಹದಿಂದ ಸುಮಾರು 8 ಕಿಮೀ ಪಾದಯಾತ್ರೆ ಮಾಡಿದರು. ನಂತರ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಯಿತು.
ಪಕ್ಷಭೇಧ ಮರೆತು ರಾಜಕೀಯ ಮುಖಂಡರು, ಅರ್ಕಾವತಿ ಪುನಶ್ಚೇತನಕ್ಕೆ ರಚನೆಯಾಗಿರುವ ಸಂಘ-ಸಂಸ್ಥೆಗಳು, ಕರ್ನಾಟಕ ರಕ್ಷಾ ವೇದಿಕೆಯ ದೊಡ್ಡಬಳ್ಳಾಪುರ ಮತ್ತು ಚಿಕ್ಕಬಳ್ಳಾಪುರ ಘಟಕದ ಕಾರ್ಯಕರ್ತರು ಸೇರಿದಂತೆ ಅರ್ಕಾವತಿ ಉಗಮ ಸ್ಥಾನದಿಂದ ಸುಮಾರು 500ಕ್ಕೂ ಹೆಚ್ಚು ಜನರು ಈ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಇದರಿಂದ ನಂದಿಬೆಟ್ಟದ ರಸ್ತೆ ಸಂಪೂರ್ಣವಾಗಿ ಜನರಿಂದ ತುಂಬಿಹೋಗಿತ್ತು. ನಂದಿಬೆಟ್ಟದ ಇತಿಹಾಸದಲ್ಲೇ ಇಷ್ಟೊಂದು ಜನ ಸೇರಿದ್ದು ಇದೇ ಮೊದಲು ಎಂಬುದು ಸ್ಥಳೀಯರ ಮಾತಾಗಿತ್ತು.
ನದಿ ರಕ್ಷಣೆ-ಪುನಶ್ಚೇತನಕ್ಕಾಗಿ ಜನಪ್ರತಿನಿಧಿಗಳು, ಸಚಿವರು, ಪರಿಸರವಾದಿಗಳು ಒಂದುಗೂಡಿ ನಡೆಸಿದ ಪಾದಯಾತ್ರೆ ರಾಜ್ಯದ ಇತಿಹಾಸದಲ್ಲಿ ಇದೇ ಪ್ರಥಮ. ಇಂತಹ ಪ್ರಯತ್ನ ಕೆರೆ-ಕುಂಟೆ, ನದಿಗಳನ್ನು ಉಳಿಸಲು ಇತರೆ ಪ್ರದೇಶಗಳ ನಿವಾಸಿಗಳಿಗೆ ಮಾದರಿ.

ಯಾರು ಏನೆಂದರು?
ಮರಗಳನ್ನು ನೆಡಿ, ಕೆರೆಗಳನ್ನು ಕಟ್ಟಿ, ಪರಿಸರ ಬೆಳೆಸಿ ಎಂದು ಹಿಂದೆ ಹೇಳುತ್ತಿದ್ದರು. ಇಂದು, ಮರಗಳನ್ನು ಕಡಿ, ಕೆರೆಗಳನ್ನು ಮುಚ್ಚಿ, ನಿವೇಶನ ನಿರ್ಮಿಸಿ ಎಂದು ಇಂದು ಹೇಳುತ್ತಿದ್ದಾರೆ. ಬೆಂಗಳೂರಿನ ಜೀವನದಿ ಅರ್ಕಾವತಿ. ಈ ನದಿ ಉಳಿಸಿದರೆ, ಅಂತರ್ಜಲ ಹೆಚ್ಚಾಗುತ್ತದೆ. ಗ್ರಾಮಾಂತರ ಜಿಲ್ಲೆಯ ರೈತರಿಗೆ ಅನುಕೂಲವಾಗುತ್ತದೆ. ಆದ್ದರಿಂದ ಅರ್ಕಾವತಿ ನದಿ ಉಳಿವಿಗೆ ಸರಕಾರ ಸರ್ವ ಪ್ರಯತ್ನವನ್ನೂ ಮಾಡಲಿದೆ. -ಸುರೇಶ್ ಕುಮಾರ್, ಕಾನೂನು ಸಚಿವ

ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಪುನಶ್ಚೇತನಕ್ಕಾಗಿ ಪಕ್ಷಾತೀತವಾಗಿ ಈ ಪಾದಯಾತ್ರೆ ಮಾಡಲಾಗುತ್ತಿದೆ. ಕಾವೇರಿ ಮುಗಿದ ಮೇಲೆ ಬೆಂಗಳೂರಿಗೆ ನೀರಿನ ಬರ ಉಂಟಾಗುತ್ತದೆ. ಅದನ್ನು ನೀಗಿಸಲು ಅರ್ಕಾವತಿ ನದಿಯನ್ನು ಹರಿಸಬೇಕು. ಇದರಿಂದ ಅಂತರ್ಜಲ ವೃದ್ದಿಯಾಗಲಿದ್ದು, ಕೆಲವೇ ನೂರು ಅಡಿಗಳಲ್ಲಿ ರೈತರಿಗೆ ಕೊಳವೆ ಬಾವಿಯಲ್ಲಿ ನೀರು ಸಿಗುತ್ತದೆ. ನದಿ ಸಂರಕ್ಷಣೆಗೆ ಸರಕಾರದಿಂದ ಸದ್ಯವೇ ಉನ್ನತ ಮಟ್ಟದ ಸಮಿತಿ ರಚನೆಯಾಗಲಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಈ ಉಗಮಸ್ಥಾನದಲ್ಲಿ ನಾವೆಲ್ಲ ಶಪಥ ಮಾಡೋಣ. -ಎಸ್.ಆರ್. ವಿಶ್ವನಾಥ್, ಶಾಸಕ

ಅರ್ಕಾವತಿ ನದಿ ಉಳಿದರೆ ರೈತರ ಬಾಳು ಬೆಳಗುತ್ತದೆ. ಕೃಷಿಗೆ ನೀರು ಹೆಚ್ಚಿನ ಮಟ್ಟದಲ್ಲಿ ಲಭ್ಯವಾಗುತ್ತದೆ. ಈಗಾಗಲೇ 1000 ಅಡಿ ಕೊರೆಯಲಾಗುತ್ತದೆ. ನದಿ ಪುನಶ್ಚೇತನವಾದರೆ 1500 ಅಡಿ ಕೊರೆಯಬೇಕಾಗುತ್ತದೆ. ಆಗ ಸಿಗುವ ನೀರು ವಿಷಮಯವಾಗಿರುತ್ತದೆ. ಆದ್ದರಿಂದ ನಾವೆಲ್ಲ ಎಚ್ಚೆತ್ತು ಒತ್ತುವರಿ ತೆರವುಗೊಳಿಸಿ, ಅರ್ಕಾವತಿ ಹರಿಸಬೇಕು. -ಎಸ್. ಮುನಿರಾಜು, ಶಾಸಕ

ಭೂಮಿ ತಾಯಿಯ ಚರ್ಮವನ್ನು ಸುಲಿಯುತ್ತಿದ್ದೇವೆ. ಮೇಲ್ಪದರವನ್ನು ಘಾಸಿಗೊಳಿಸಿ, ಅಂತರ್ಜಲಕ್ಕೆ ಪೆಟ್ಟು ನೀಡುತ್ತಿದ್ದೇವೆ. ಇದು ಹೀಗೆ ಮುಂದುವರಿದರೆ, ಕುಡಿಯಲು ನೀರಿಗಾಗಿ ಹೋರಾಟ ಮಾಡಬೇಕಾಗುತ್ತದೆ. ಆದ್ದರಿಂದ, ಅರ್ಕಾವತಿ ನದಿ ಪುನಶ್ಚೇತನಗೊಳಿಸಿ, ಪರಿಸರ ಹಾಗೂ ಅಂತರ್ಜಲ ವೃದ್ಧಿಸಬೇಕಾದ್ದು ಅನಿವಾರ್ಯ. -ಡಾ. ಅ.ನ. ಯಲ್ಲಪ್ಪ ರೆಡ್ಡಿ

ಪಾದಯಾತ್ರೆ ಹೆಜ್ಜೆಗಳು- ದಿನ-1
ಬೆ. 6.30 ಗಂಟೆ: ಅರ್ಕಾವತಿ ಉಗಮಸ್ಥಾನದಿಂದ ಬೆಳಗ್ಗೆ 6.30ರಿಂದ ಗಂಗಾಪೂಜೆ. ಪಾದಯಾತ್ರೆ ನೆನಪಿಗೆ ಕಲ್ಲಿನ ಫಲಕ ಪ್ರತಿಷ್ಠಾಪನೆ.
10 ಗಂಟೆ: ಸಚಿವ ಸುರೇಶ್‌ಕುಮಾರ್ ಅವರಿಂದ ಪಾದಯಾತ್ರೆಗೆ ಚಾಲನೆ. ಸಚಿವರಿಂದ 8 ಕಿಮೀ ನಡಿಗೆ. ನಂತರ ಶಾಸಕರಾದ ವಿಶ್ವನಾಥ್ ಹಾಗೂ ಮುನಿರಾಜು ನೇತೃತ್ವದಲ್ಲಿ ಪಾದಯಾತ್ರೆ ಮುಂದುವರಿಕೆ.
11.30: ಹೆಗ್ಗಡಿ ಹಳ್ಳಿ ಕೆರೆಗೆ ಆಗಮನ. ಮಾರ್ಗಮಧ್ಯದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ದೊಡ್ಡಬಳ್ಳಾಪುರ ಘಟಕದ ಕಾರ್ಯಕರ್ತರಿಂದ ಪಾದಯಾತ್ರಿಗಳಿಗೆ ಸ್ವಾಗತ.
12.30 ಗಂಟೆ: ಸೀಗೇಹಳ್ಳಿ ಮೂಲಕ ಮೇಳೇಕೋಟೆಗೆ ಆಗಮನ. ಅಲ್ಲಿನ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರಿಂದ ಸ್ವಾಗತ. ಅರ್ಕಾವತಿ ನದಿ ಪುನಶ್ಚೇತನಕ್ಕೆ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅರಿವು ಮೂಡಿಸಲು ನಿರ್ಧಾರ.
2.00 ಗಂಟೆ: ಲಿಂಗನಹಳ್ಳಿ ಕ್ರಾಸ್‌ನಲ್ಲಿ ಅದ್ಧೂರಿ ಸ್ವಾಗತ. ರಸ್ತೆಯ ಇಕ್ಕೆಲಗಳಲ್ಲಿ ಬಾಳೆಕಂಬ ಕಟ್ಟಿ, ಹೂಮಾಲೆ ಹಾಕಲಾಗಿತ್ತು. ಪಾದಯಾತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡ ಸ್ಥಳೀಯರು, ನದಿ ಪುನಶ್ಚೇತನಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದರು.
2.30 ಗಂಟೆ: ರಾಜಘಟ್ಟದಲ್ಲಿ ಗಾಂಧಿವಾದಿ ಶಂಕರಲಿಂಗೇಗೌಡರು ಸೈಕಲ್ ಮೇಲೆ ರಾಷ್ಟ್ರಧ್ವಜ ಹಾಗೂ ನಾಡ ಬಾವುಟವನ್ನು ಕಟ್ಟಿಕೊಂಡು ಬಂದು, ಪಾದಯಾತ್ರಿಗಳಿಗೆ ಸ್ವಾಗತ ಕೋರಿದರು. ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಹಾಜರಿದ್ದರು.
3.00 ಗಂಟೆ ರಾಜಘಟ್ಟದ ಆಂಜನೇಯ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಪಾದಯಾತ್ರಿಗಳು, ಅಲ್ಲಿ ಭೋಜನ ಮುಗಿಸಿದರು.
ಸಂ. 5 ಗಂಟೆ: ತಿಮ್ಮಸಂದ್ರದ ಮೂಲಕ ದೊಡ್ಡಬಳ್ಳಾಪುರಕ್ಕೆ ಪಾದಯಾತ್ರೆ ಆಗಮಿಸಿತು. ನಂತರ ಆಸ್ಪತ್ರೆ ವೃತ್ತದಲ್ಲಿ ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೇತೃತ್ವದಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ ಅವರಿಂದ ಪರಿಸರ ಗೀತೆಗಳ ಗಾಯನ ಹಾಗೂ ಜನಪ್ರತಿನಿಧಿಗಳು ಮತ್ತು ಸ್ಥಳೀಯರೊಂದಿಗೆ ಸಂವಾದ ನಡೆಯಿತು.

Wednesday, September 2, 2009

ಅರ್ಕಾವತಿ ನದಿ ಜಾಗೃತಿಗೆ ಪಾದಯಾತ್ರೆ

ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಪುನಶ್ಚೇತನದ ಅಗತ್ಯ ಕುರಿತಂತೆ ನದಿ ಪಾತ್ರದಲ್ಲಿರುವ ಹಳ್ಳಿ ಹಾಗೂ ಪಟ್ಟಣಗಳ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ರಾಜಕೀಯ ಮುಖಂಡರು, ಪರಿಸರವಾದಿಗಳು, ಸ್ವಾಮೀಜಿಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಅರ್ಕಾವತಿ ನದಿ ಪುನಶ್ಚೇತನಕ್ಕೆ ಈಗಾಗಲೇ ಸಾಕಷ್ಟು ಪ್ರಯತ್ನಪಡುತ್ತಿರುವ ಸಂಘಟನೆಗಳ ಕಾರ್ಯಕರ್ತರು ಸೆಪ್ಟೆಂಬರ 3ರಿಂದ 6ರವರೆಗೆ ನಂದಿಬೆಟ್ಟದ ಅರ್ಕಾವತಿ ಉಗಮಸ್ಥಾನದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಪಾದಯಾತ್ರೆ ಮಾಡಲಿದ್ದಾರೆ.

ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರಕಾರದಿಂದ ಒಂದು ಸಮಿತಿ ಅಥವಾ ಪ್ರಾಧಿಕಾರದ ರಚನೆ ಕುರಿತಂತೆ ಈಗಾಗಲೇ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಜತೆಗೆ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿಯನ್ನೂ ನೀಡಲಾಗಿದೆ. ಇದು ನನಸಾಗುವ ಕಾಲ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ ಪಕ್ಷಭೇಧ ಮರೆತು ಜನಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಅದರಲ್ಲೂ ಆಡಳಿತ ಪಕ್ಷದ ಶಾಸಕರು ಸಕ್ರಿಯವಾಗಿರುವುದು ನದಿ ಪುನಶ್ಚೇತನದ ದಿಕ್ಕಿನತ್ತ ಮಹತ್ವದ ಹೆಜ್ಜೆಯಾಗಿದೆ.
ಶಾಸಕ ಎಸ್‌.ಆರ್‌. ವಿಶ್ವನಾಥ್‌ ಪಾದಯಾತ್ರೆ ಮಾಡುವುದಾಗಿ ಈ ಹಿಂದೆಯೇ ಹೇಳಿದ್ದರು. ಅರ್ಕಾವತಿ ನದಿ ಪುನಶ್ಚೇತನದ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಉಗಮಕ್ಷೇತ್ರದಿಂದ ಪಾದಯಾತ್ರೆ ಮಾಡುವುದಾಗಿ ‘ಅರ್ಕಾವತಿ ಏಕೀ ದುರ್ಗತಿ’ ಲೇಖನ ಮಾಲಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಶಾಸಕ ಎಸ್‌. ಮುನಿರಾಜು ಕೂಡ ಬೆಂಬಲ ನೀಡಿದ್ದರು. ಈ ಮಾತನ್ನು ಇವರಿಬ್ಬರೂ ಇದೀಗ ಪೂರೈಸಲು ಮುಂದಾಗಿದ್ದಾರೆ. ಜತೆಗೆ ದೊಡ್ಡಬಳ್ಳಾಪುರದ ಶಾಸಕ ನರಸಿಂಹಸ್ವಾಮಿ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ. ದೊಡ್ಡಬಳ್ಳಾಪುರದ ಪ್ರಮುಖ ಕೆರೆ ಹಾಗೂ ಅರ್ಕಾವತಿ ಕ್ಷೇತ್ರದ ಜೀವಾಳ ನಾಗರಕೆರೆಯನ್ನು ಮುಚ್ಚಿ ಬಸ್‌ ನಿಲ್ದಾಣ ಮಾಡುವುದಾಗಿ ಹೇಳುತ್ತಿರುವ ನರಸಿಂಹಸ್ವಾಮಿ, ಪಾದಯಾತ್ರೆಯಲ್ಲಿರುತ್ತಾರಂತೆ. ಅಂದರೆ ನಾಗರಕೆರೆ ಕೆರೆಯಾಗಿಯೇ ಉಳಿದೀತೇ? ಈ ಪ್ರಶ್ನೆಯನ್ನು ಅವರನ್ನು ನೇರವಾಗಿ ಕೇಳಬೇಕಿದೆ, ಅದೇ ಪಾದಯಾತ್ರೆಯಲ್ಲಿ.
ನಾಲ್ಕು ದಿನಗಳ ಈ ಪಾದಯಾತ್ರೆ ಸಾಧ್ಯವಾಗುತ್ತಿರುವುದು ಎಸ್‌.ಆರ್‌. ವಿಶ್ವನಾಥ್‌ ಅವರ ಕಾಳಜಿಯಿಂದ. ಈ ಪಾದಯಾತ್ರೆಗೆ ಎಲ್ಲ ರೀತಿಯ ಸಂಘಟನೆಗೆ ಅವರೇ ಕಾರಣ. ಎಲ್ಲರನ್ನೂ ಒಂದುಗೂಡಿಸಿ ಪಕ್ಷಾತೀತವಾಗಿ, ರಾಜಕೀಯ ಸೇರಿಸದೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸರಕಾರ ಕೂಡಲೇ ಇತ್ತ ಗಮನಹರಿಸಿ ಕಾರ್ಯೋನ್ಮುಖವಾಗಬೇಕೆಂಬ ಉದ್ದೇಶದೊಂದಿಗೆ ಪಾದಯಾತ್ರೆ ಆಯೋಜಿಸಿದ್ದಾರೆ. ಇದಕ್ಕೆ ಎಲ್ಲ ವಲಯದ ಮುಖಂಡರೂ ಸೇರಿಕೊಂಡಿರುವುದು ಒಳ್ಳೆಯ ಬೆಳವಣಿಗೆ.
ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ, ಪರಿಸರ ರಕ್ಷಣೆ ಹೋರಾಟಗಾರ ಸುರೇಶ್‌ ಹೆಬ್ಳೀಕರ್‌ ಸೇರಿದಂತೆ ದೊಡ್ಡಬಳ್ಳಾಪುರದ ಹಲವು ಸಂಘಟನೆಗಳ ಮುಖಂಡರು ಈ ಪಾದಯಾತ್ರೆಯಲ್ಲಿರುತ್ತಾರೆ. ಅಲ್ಲದೆ, ಹಲವು ಮಠಗಳ ಸ್ವಾಮೀಜಿಗಳೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ. ಅಷ್ಟೇ ಅಲ್ಲ, ಸುಗಮಸಂಗೀತ ಕ್ಷೇತ್ರದ ದಿಗ್ಗಜರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷಕರ. ಈ ಪಾದಯಾತ್ರೆ ನಾನು ಸಂಪೂರ್ಣವಾಗಿ ಭಾಗವಹಿಸುತ್ತಿದ್ದು, ಸಮಗ್ರ ವಿವರವನ್ನು ನಿಮ್ಮ ಮುಂದಿಡಲಿದ್ದೇನೆ.
ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಅರ್ಕಾವತಿ ಕ್ಷೇತ್ರ (ಸೆ.೩)ದಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ, ಹೆಸರಘಟ್ಟದಲ್ಲಿ (ಸೆ.೪) ಡಾ. ಸಿ. ಅಶ್ವತ್ಥ್‌ ಹಾಗೂ ಸೊಂಡೆಕೊಪ್ಪದಲ್ಲಿ (ಸೆ.೫) ವೈ.ಕೆ. ಮುದ್ದುಕೃಷ್ಣ ಅವರ ಜತೆ ಕಿಕ್ಕೇರಿ ಕೃಷ್ಣಮೂರ್ತಿ ಅವರ ತಂಡ ಸಂಜೆಯ ಸಮಯದಲ್ಲಿ ಸಂಗೀತ ಸುಧೆ ಹರಿಸಲಿದೆ.
ಅರ್ಕಾವತಿ ಉಗಮಸ್ಥಾನ ನಂದಿಬೆಟ್ಟದಿಂದ ಆರಂಭವಾಗುವ ಪಾದಯಾತ್ರೆ, ಹೆಗ್ಗಡಿಹಳ್ಳಿ, ಸೀಗೆಹಳ್ಳಿ, ಮೇಳೆಕೋಟೆ, ಬೀಡಿಕೆರೆ, ರಾಜಘಟ್ಟ, ತಿಮ್ಮಸಂದ್ರ, ದೊಡ್ಡಬಳ್ಳಾಪುರ ಡಿಕ್ರಾಸ್, ಅರ್ಕಾವತಿ ಕ್ಷೇತ್ರವನ್ನು ತಲುಪುತ್ತದೆ. ಮಾರನೆ ದಿನ ಅಂದರೆ ಸೆಪ್ಟೆಂಬರ‍್ ೪ರಂದು ಬೆಳಗ್ಗೆ ಅರ್ಕಾವತಿ ಕ್ಷೇತ್ರದಿಂದ ನಾಗರಕೆರೆ ಏರಿ ಮೂಲಕ ಸಾಗಿ, ಬಾಶೆಟ್ಟಿಹಳ್ಳಿ ಕ್ರಾಸ್‌, ವೀರಾಪುರ, ಚಿಕ್ಕ ತುಮಕೂರು, ಮಜರಾ ಹೊಸಹಳ್ಳಿ, ಜಿಂಕೆ ಬಚ್ಚಹಳ್ಳಿ, ದೊಡ್ಡ ತುಮಕೂರು, ಗೌಡಹಳ್ಳಿ, ಹನಿಯೂರು ಮೂಲಕ ಹೆಸರಘಟ್ಟ ಜಲಾಶಯ ತಲುಪಲಿದೆ. ಮುಂದಿನ ದಿನ ಅಂದರೆ ಸೆಪ್ಟೆಂಬರ‍್ ೫ರಂದು ಹೆಸರಘಟ್ಟದಿಂದ ತಿರುಮಲಾಪುರ, ಹೊರಳಿ ಚಿಕ್ಕನಹಳ್ಳಿ, ತಬರನಹಳ್ಳಿ, ಮುನಿಯಪ್ಪನಪಾಳ್ಯ, ಆಲೂರು, ಹೆಗ್ಗಡೆದೇವನಪುರ, ಮಾಕಳಿ, ಅಡಕಮಾರನಹಳ್ಳಿ ಗೇಟ್‌, ರಾವುತ್ತನಹಳ್ಳಿ ಕ್ರಾಸ್‌, ಗೌಡಹಲ್ಳಿ ಕಾಲನಿ, ರಾವುತ್ತನಹಳ್ಳಿ ಮೂಲಕ ಸೊಂಡೇಕೊಪ್ಪ ತಲುಪಲಿದೆ. ಕೊನೆಯ ದಿನ ಅಂದರೆ ಸೆಪ್ಟೆಂಬರ‍್ ೬ರಂದು ಸೊಂಡೇಕೊಪ್ಪದಿಂದ ಮಲ್ಲಸಂದ್ರ, ವರ್ತೂರು ಕೆರೆ, ಬೈಚನಗುಪ್ಪೆ ಗೇಟ್, ದೇವಮಾಚನಹಳ್ಳಿ, ಮಾರೇನಹಳ್ಳಿ, ಚೋಳನಾಯಕನಹಳ್ಳಿ ಮೂಲಕ ತಿಪ್ಪಗೊಂಡನಹಳ್ಳಿ ತಲುಪಲಿದೆ.
ಅರ್ಕಾವತಿ ಉಗಮಸ್ಥಾನದಿಂದ ಪಂಚಕಳಸಗಳಲ್ಲಿ ನೀರನ್ನು ತೆಗೆದುಕೊಂಡು ತಿಪ್ಪಗೊಂಡನಹಳ್ಳಿಯಲ್ಲಿ ಅದನ್ನು ಸಮರ್ಪಿಸಲಾಗುತ್ತದೆ. ಅರ್ಕಾವತಿಯನ್ನು ಹರಿಸುವ ಉದ್ದೇಶವನ್ನು ಇದು ಸಾರುತ್ತದೆ.
ಪರಿಸರ ಕಾಳಜಿಯುಳ್ಳ ಮನಸ್ಸುಳ್ಳ ಎಲ್ಲ ನಾಗರಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ, ಜಾಗೃತಿ ಮೂಡಿಸಲಿ ಎಂಬುದೇ ಆಶಯ.

Tuesday, September 1, 2009

ಅಕ್ಷಯನಗರ ಕೆರೆಗೆ ನಾಗರಿಕರ ಕಟಾಕ್ಷ

ಬೆಂಗಳೂರಿನಲ್ಲಿ ಕೆರೆಗಳನ್ನು ಉಳಿಸಬೇಕೆಂದರೆ, ಅದರ ಅಭಿವೃದ್ಧಿ ಆಗಬೇಕೆಂದರೆ ಸರಕಾರವೇ ಮನಸ್ಸು ಮಾಡಬೇಕು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವೇ ಮೊದಲು ಕೆಲಸ ಕೈಗೆತ್ತಿಕೊಳ್ಳಬೇಕು. ಇಂತಹ ಸ್ವಘೋಷಿತ ನಿಯಮವೇ ಜಾರಿಯಲ್ಲಿದೆ. ಆದರೆ, ಇದನ್ನು ತೊಡೆದು ಹಾಕುವ ಹಾಗೂ ಇತರೆ ಬಡಾವಣೆಯ ನಾಗರಿಕರಿಗೆ ಮಾದರಿ ಎನಿಸುವ ಕಾರ್ಯವನ್ನು ಅಕ್ಷಯನಗರದ ನಿವಾಸಿಗಳು ಕೈಗೆತ್ತಿಕೊಂಡಿದ್ದಾರೆ.
ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಸ್ಥಳೀಯರ ಪಾತ್ರ ಅತ್ಯಂತ ಪ್ರಮುಖ. ಸಾರ್ವಜನಿಕ ಸಹಭಾಗಿತ್ವದಲ್ಲಿ ಕೆರೆಗಳು ಅಭಿವೃದ್ಧಿ ಆಗಬೇಕು ಎಂಬುದೇ ಆಶಯ. ಆದರೆ, ಇಂದಿನ ಯಾಂತ್ರಿಕ ಬದುಕಿನಲ್ಲಿ ಅಂತಹ ಪ್ರಯತ್ನಕ್ಕೆ ಕೈಹಾಕುವವರು ವಿರಳ. ಇಂತಹ ಸಾಹಸವನ್ನು ಅಕ್ಷಯನಗರದ ನಿವಾಸಿಗಳು ಮಾಡುತ್ತಿದ್ದಾರೆ. ವಾರಾಂತ್ಯದಲ್ಲಿ ಶ್ರಮದಾನ ಮಾಡುವ ಮೂಲಕ ಕೆರೆಯನ್ನು ಶುಚಿಗೊಳಿಸುತ್ತಿದ್ದಾರೆ. ಅಷ್ಟೇ ಅಲ್ಲ, ತಾವೇ ಹಣ ಒಟ್ಟುಗೂಡಿಸಿ, ಅಭಿವೃದ್ಧಿ ಕಾರ್ಯಗಳನ್ನೂ ಮಾಡುತ್ತಿದ್ದಾರೆ.
ಬನ್ನೇರುಘಟ್ಟ ರಸ್ತೆಯ ಬೇಗೂರು-ಜಿಗಣಿ ರಸ್ತೆಯಲ್ಲಿರುವ ಅಕ್ಷಯನಗರದಲ್ಲಿ ಸುಮಾರು 300 ಮನೆಗಳಿವೆ. 800 ಹೆಚ್ಚು ಖಾಲಿ ನಿವೇಶನಗಳೂ ಇವೆ. ಇವರೆಲ್ಲರೂ ಸೇರಿಕೊಂಡಿರುವ, ಅಕ್ಷಯನಗರ ನಿವಾಸಿಗಳು ಮತ್ತು ನಿವೇಶನ ಮಾಲೀಕರ ಕಲ್ಯಾಣ ಸಂಸ್ಥೆ ವತಿಯಿಂದ ಅಕ್ಷಯನಗರ ಕೆರೆಯನ್ನು ಉಳಿಸಲು ಅಕ್ಷಯನಗರ ಕೆರೆ ಅಭಿವೃದ್ಧಿ ಕಾರ್ಯಪಡೆ ರಚಿಸಿಕೊಂಡಿದ್ದಾರೆ. ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಮಾರ್ಗದರ್ಶನದಲ್ಲಿ ಕೆರೆ ಸಂರಕ್ಷಿಸುವ ಹಾಗೂ ಶುಚಿಗೊಳಿಸುವ ಕಾರ್ಯ ಮಾಡುತ್ತಿದ್ದಾರೆ.
ಸುಮಾರು 4 ಎಕರೆ ಪ್ರದೇಶದಲ್ಲಿರುವ ಅಕ್ಷಯನಗರ ಕೆರೆ ಹೂಳು ಹಾಗೂ ಮಾಲಿನ್ಯ ತುಂಬಿಹೋಗಿದೆ. ಅಲ್ಲದೆ ರಾಜಕಾಲುವೆಗಳು ಮುಚ್ಚಿಹೋಗಿವೆ. ಇದರಿಂದ ಮಳೆ ನೀರು ಕೆರೆಗೆ ಹರಿದು ಬರುತ್ತಿಲ್ಲ. ಅಲ್ಲದೆ, ದಂಡೆ ಕೂಡ ದುರ್ಬಲವಾಗಿದ್ದು ನೀರು ನಿಲ್ಲುತ್ತಿಲ್ಲ. ಒಳಚರಂಡಿ ನೀರು ಇಲ್ಲಿಗೆ ಬಂದು ಸೇರುತ್ತಿದೆ. ಇದೆಲ್ಲವನ್ನು ಅರ್ಥೈಸಿಕೊಂಡಿರುವ ಈ ಕೆರೆ ಅಭಿವೃದ್ಧಿ ಕಾರ್ಯಪಡೆ, ಯಲ್ಲಪ್ಪರೆಡ್ಡಿ ಮಾರ್ಗದರ್ಶನದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸುತ್ತಿದೆ. ಪ್ರತಿ ಭಾನುವಾರ ಸ್ಥಳೀಯ ನಿವಾಸಿಗಳು ಅವರ ಮಕ್ಕಳೊಂದಿಗೆ ಒಂದು ಗಂಟೆಗಳ ಕಾಲ ಶ್ರಮದಾನದ ಮೂಲಕ ಕೆರೆಯನ್ನು ಶುಚಿಗೊಳಿಸುತ್ತಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿರುವ ಗ್ಲೋಬಲ್‌ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್‌ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥರಾದ ಪ್ರೊ. ಲಿಂಗರಾಜು ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೆರೆ ಅಭಿವೃದ್ಧಿಗೆ ತಂತ್ರಜ್ಞಾನದ ಸಲಹೆ ನೀಡುತ್ತಿದ್ದಾರೆ.
ಕೆರೆಯನ್ನು ಅಭಿವೃದ್ಧಿಪಡಿಸಬೇಕಾದರೆ ಸ್ಥಳೀಯ ಜನಸಮೂದಾಯದ ಪಾಲುದಾರಿಕೆ ಹಾಗೂ ವಂತಿಕೆ ಪಡೆಯುವುದು ವಾಡಿಕೆ. ಇದನ್ನು ಸ್ವಯಂಪ್ರೇರಿತವಾಗಿ ನಿರ್ವಹಿಸುತ್ತಿರುವ ಅಕ್ಷಯನಗರದ ನಿವಾಸಿಗಳು, ಕೆಲವು ಲಕ್ಷಗಳನ್ನು ಇಲ್ಲಿನ ವಾಸಿಗಳು ಹಾಗೂ ಕೊಡುಗೆಯಿಂದ ಬಿಬಿಎಂಪಿಗೆ ನೀಡುವ ಪಣತೊಟ್ಟಿದ್ದಾರೆ. ಇವರ ಈ ಪ್ರಯತ್ನಕ್ಕೆ ಸ್ಥಳೀಯ ಶಾಸಕ ಎಂ. ಕೃಷ್ಣಪ್ಪ ಅವರ ಬೆಂಬಲ ಇದ್ದು, ಅವರು ಸಹ ತಮ್ಮ ಶಾಸಕರ ನಿಧಿಯಿಂದ ಹಣವನ್ನು ನೀಡಲಿದ್ದಾರೆ.
ಶಾಸ್ತ್ರೀಯ ಸಂಗೀತ
ಅಕ್ಷಯನಗರ ಕೆರೆ ಅಭಿವೃದ್ಧಿಗೆ ಹಣ ಸಂಗ್ರಹಿಸಲು ಸ್ಥಳೀಯ ನಿವಾಸಿಗಳು ಸಂಗೀತ ವಿದ್ವಾನ್ ಆರ್.ಕೆ. ಪದ್ಮನಾಭ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಆಯೋಜಿಸಿದೆ. ಆಗಸ್ಟ್ ೩೦ರಂದು ಭಾನುವಾರ ಬೆಳಗ್ಗೆ ೧೦ಗಂಟೆಯಿಂದ ಅಕ್ಷಯನಗರದಲ್ಲಿರುವ ವೈದರಾಜ ಕಲ್ಯಾಣಭವನದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಒಂದು ಕೆರೆಯನ್ನು ಉಳಿಸಲು ಸ್ಥಳೀಯರ ಆಸಕ್ತಿ ಹಾಗೂ ಜವಾಬ್ದಾರಿ ಏನು ಎಂಬುದನ್ನು ಅಕ್ಷಯನಗರದ ನಿವಾಸಿಗಳು ತಿಳಿದುಕೊಂಡಿದ್ದಾರೆ. ಅದರಂತೆ, ಅಕ್ಷಯನಗರ ಕೆರೆಯನ್ನು ಉಳಿಸಲು ಅವರು ಕೇವಲ ಹೋರಾಟ ಮಾಡುತ್ತಿಲ್ಲ. ಬದಲಿಗೆ, ತಾವು ಏನು ಮಾಡಬಹುದು ಎಂಬುದನ್ನು ಅರಿತುಕೊಂಡು ಕಾರ್ಯಪ್ರವೃತರಾಗಿದ್ದಾರೆ. ಇಂತಹುದೇ ಸಂಘಟನೆಗಳು ಅಥವಾ ಕಾರ್ಯಪಡೆಗಳು ನಗರದ ಹಲವು ಬಡಾವಣೆಗಳಲ್ಲಿ ಹುಟ್ಟಿಕೊಂಡರೆ, ನಮ್ಮ ಕೆರೆಗಳು ಉಳಿಯುವುದಷ್ಟೇ ಅಲ್ಲ, ಅಭಿವೃದ್ಧಿ ಕಾಣುವಲ್ಲಿ ಸಂಶಯವಿಲ್ಲ.
ಕೆರೆ ಸಂರಕ್ಷಿಸುವ ಹಾಗೂ ಅಭಿವೃದ್ಧಿಪಡಿಸುವ ಕೆಲಸ ಸರಕಾರ ಅಥವಾ ಇಲಾಖೆಗಳದ್ದಷ್ಟೇ ಅಲ್ಲ. ಅವರೇ ಮಾಡಲಿ ಎಂದು ಕೈಕಟ್ಟಿ ಕುಳಿತರೆ, ಇನ್ನಷ್ಟು ಕೆರೆಗಳು ನೆಲಸಮವಾಗುತ್ತದೆ. ಅಕ್ಷಯನಗರದ ನಿವಾಸಿಗಳಂತೆ ಸ್ವಯಂಪ್ರೇರಿತವಾಗಿ ಕಾರ್ಯೋನ್ಮುಖವಾದರೆ, ಬೆಂಗಳೂರು ಮತ್ತೊಮ್ಮೆ ‘ಕೆರೆಗಳ ನಗರಿ’ ಎಂಬ ಖ್ಯಾತಿಗೆ ಪಾತ್ರವಾಗುತ್ತದೆ.