ನಂದಿ ಬೆಟ್ಟದಿಂದ ತಾಯಿ ಅರ್ಕಾವತಿ ಹರಿಯಲು ಇನ್ನೂ ಅನುವು ಮಾಡಿಕೊಟ್ಟಿಲ್ಲ. ನದಿ ಪುನಶ್ಚೇತನದ ಮಾತು, ಪಾದಯಾತ್ರೆ ಮಾತ್ರ ಆಗಿದೆ. ಒತ್ತುವರಿ ತೆರವಿಗೆ ಒಂದಿಷ್ಟೂ ಮನೋನಿರ್ಧಾರವಾಗಿದೆ. ಅಷ್ಟರಲ್ಲೇ, ವರುಣ ಕೃಪೆ ತೋರಿದ್ದಾನೆ. 10 ವರ್ಷಗಳ ನಂತರ ಹೆಸರಘಟ್ಟ ಜಲಾಶಯಕ್ಕೆ ಹೆಚ್ಚಿನ ನೀರು ಹರಿಸಿದ್ದಾನೆ. ಈ ನೀರೆಲ್ಲ ಹೆಸರಘಟ್ಟ ಸುತ್ತಮುತ್ತಲಿಂದ ಬಂದದ್ದು. ನಂದಿಯಲ್ಲಿನ ಮಳೆ ಕಾಲುವೆ ಮೂಲಕ ನೇರವಾಗಿ ಹರಿದಿದ್ದರೆ ಹೆಸರಘಟ್ಟ ಇನ್ನೆಷ್ಟು ನೀರು ತುಂಬಿಕೊಳ್ಳುತ್ತಿತ್ತು? ಅಂದರೆ, ಈಗ ಸುರಿಯುತ್ತಿರುವ ಮಳೆಯ ಪ್ರಮಾಣದಲ್ಲೇ ಹೆಸರಘಟ್ಟಕ್ಕೆ ನೀರು ಹರಿಸಬಹುದೆಂಬುದು ಸಾಬೀತಾಗಿದೆ ಅಲ್ಲವೆ? ಇನ್ನೇಕೆ ತಡ? ಕಾರ್ಯಾರಂಭವಾಗಲಿ....
- ಬೆಂಗಳೂರಿಗೆ ಪ್ರಥಮ ಬಾರಿಗೆ ಸಂಸ್ಕರಿತ ನೀರು ಪೂರೈಸಿದ ಹೆಸರಘಟ್ಟ ಜಲಾಶಯ ಹತ್ತು ವರ್ಷಗಳ ನಂತರ 7 ಅಡಿ ನೀರಿನ ಸೌಭಾಗ್ಯ ಕಂಡಿದೆ. ನಂದಿ ಬೆಟ್ಟದಲ್ಲಿ ಹುಟ್ಟುವ ಅರ್ಕಾವತಿ ನದಿಯೇ ಇದಕ್ಕೆ ಪ್ರಮುಖ ಆಸರೆಯಾಗಿದ್ದು, ಕಳೆದ7ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ನೀರಿನ ಹರಿವು ಹೆಚ್ಚಾಗಿದೆ.
ಹೆಸರಘಟ್ಟಕ್ಕೆ ನೀರು ಬರಬೇಕೆಂದರೆ ಬ್ಯಾತ ಹಾಗೂ ಕಾಕೋಳು ಕೆರೆಗಳು ಕೋಡಿ ಆಗಬೇಕು. ಇದರಲ್ಲಿ ಬ್ಯಾತ ಕೆರೆ ಕೋಡಿ ಹರಿಯುತ್ತಿದ್ದು, ಹೆಚ್ಚಿನ ನೀರು ಈ ಮೂಲಕವೇ ಹೆಸರಘಟ್ಟಕ್ಕೆ ಹರಿಯುತ್ತಿದೆ. 20 ದಿನಗಳ ಹಿಂದಷ್ಟೇ ಗಾಲ್ಫ್ ಮೈದಾನದಂತಾಗಿದ್ದ ಹೆಸರಘಟ್ಟ, ಇಂದು ಹತ್ತು ವರ್ಷಗಳ ಹಿಂದಿನ ವೈಭವಕ್ಕೆ ಮರಳಿದೆ. ಜಲಾಶಯದ ಏರಿಯಿಂದ ನೋಡಿದ ದೂರದಷ್ಟೂ ನೀರು ಕಾಣುತ್ತಿದೆ. 1998ರಲ್ಲಿ 8 ಅಡಿ ನೀರು ಬಂದಿತ್ತು. ಅದಾದ ಮೇಲೆ 3-4 ಅಡಿಯಷ್ಟು ನೀರಿನ ಸಂಗ್ರಹ ಮಾತ್ರ ಇಲ್ಲಿ ದಾಖಲಾಗುತ್ತಿತ್ತು.
ಹೆಸರಘಟ್ಟದಲ್ಲಿರುವ ನೀರಿನ ಮಾಪನದಲ್ಲಿ 49 ಅಡಿ ಎಂದು ಸೂಚಿಸುತ್ತಿದೆ. ಆದರೆ, ಗಣನೆಗೆ ತೆಗೆದುಕೊಳ್ಳುವುದು ೪೨ ಅಡಿ ಯಿಂದ. ಉಳಿದದ್ದು ಹೂಳು ತುಂಬಿದೆ. ಹೆಸರಘಟ್ಟ ಜಲಾಶಯದಲ್ಲಿ ಹೂಳು ಏಕೆ ತೆಗೆಯುತ್ತೀರಿ? ನೀರು ಬರೋಲ್ಲ ಎಂದು ಕೊಂಕು ನುಡಿದಿದ್ದವರಿಗೆ ವರುಣ ಸೂಕ್ತ ಉತ್ತರ ನೀಡಿದ್ದಾನೆ. ಅದಕ್ಕೇ ದಿನವೂ ನೂರಾರು ಜನರು ಹೆಸರಘಟ್ಟಕ್ಕೆ ಬಂದು ನೀರಿನ ಸಂಗ್ರಹದ ಸೊಬಗು ಸವಿಯುತ್ತಿದ್ದಾರೆ.
ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೂ ಈ ವರ್ಷ ಹೆಚ್ಚಿನ ನೀರು ಹರಿದುಬರುತ್ತಿದೆ. ಹಿಂದೆ ಕೇವಲ ಕಲ್ಮಶಯುಕ್ತ ನೀರು ಮಾತ್ರ ತಿಪ್ಪಗೊಂಡನಹಳ್ಳಿ ಸೇರುತ್ತಿತ್ತು. ಈ ಬಾರಿ ಸ್ವಚ್ಛ ಮಳೆ ನೀರು ಹರಿದುಬರುತ್ತಿರುವುದು ಜಲಮಂಡಳಿ ಅಧಿಕಾರಿಗಳಲ್ಲಿ ಹರ್ಷ ತಂದಿದೆ. ಕಳೆದ ಐದಾರು ವರ್ಷಗಳಲ್ಲಿ ಇಷ್ಟು ನೀರಿನ ಹರಿವು ಅರ್ಕಾವತಿ ನದಿಯಿಂದ ತಿಪ್ಪಗೊಂಡನಹಳ್ಳಿಗೆ ಬಂದಿರಲಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.
ಅರ್ಕಾವತಿ ನದಿ ಹರಿದರೆ ಹೆಸರಘಟ್ಟ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯ ತುಂಬುತ್ತವೆ. ನಂದಿಬೆಟ್ಟದಿಂದ ಕಾಲುವೆಗಳನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ, ಒತ್ತುವರಿ ತೆರವುಗೊಳಿಸಿ, ನದಿ ಪುನಶ್ಚೇತನವಾದರೆ ಹೆಸರಘಟ್ಟಕ್ಕೆ ನೀರು ತುಂಬುತ್ತದೆ ಎಂದು 'ವಿಜಯ ಕರ್ನಾಟಕ' ವರದಿ ಮಾಡಿತ್ತು. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದರು. ಸರಕಾರ ಪುನಶ್ಚೇತನಕ್ಕೆ ಸಮಿತಿ ರಚಿಸುವ ಭರವಸೆಯನ್ನೂ ನೀಡಿದೆ. ಈ ಪುನಶ್ಚೇತನದ ಪ್ರಕ್ರಿಯೆ ಆರಂಭವಾಗುವ ಮುನ್ನವೇ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಬಂದಿದೆ. ಇನ್ನು ರಾಜಕಾಲುವೆ ಒತ್ತುವರಿ ತೆರವುಗೊಳಿಸಿದ್ದರೆ ಇನ್ನೆಷ್ಟು ನೀರು ಬಂದಿರುತ್ತಿತ್ತು? ಈ ಬಗ್ಗೆ ಆಲೋಚಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಕೂಡಲೇ ಕ್ರಮ ಕೈಗೊಳ್ಳಬೇಕು.
No comments:
Post a Comment