Tuesday, April 6, 2010

ಐಟಿಐಆರ್: 12 ಸಾವಿರ ಎಕರೆ ವಶ; 29 ಗ್ರಾಮಗಳು ನೆಲಸಮ

ಅರ್ಕಾವತಿ ಹೊಳೆ ಪ್ರದೇಶ ನಾಶ
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಜೀವಜಲವಾಗಿರುವ ಅರ್ಕಾವತಿ ನದಿ ಈಗಾಗಲೇ ಅಳಿವಿನ ಅಂಚಿನಲ್ಲಿದ್ದು, ಅದರ ಪುನರುಜ್ಜೀವನಕ್ಕೆ ರಾಜ್ಯ ಬಜೆಟ್‌ನಲ್ಲೇ ಯೋಜನೆಯನ್ನು ರೂಪಿಸಲಾಗಿದೆ. ಇದರ ಬೆನ್ನೆಲ್ಲಿ, ನದಿಯ ಮೂಲ ಪ್ರದೇಶಗಳನ್ನೇ 'ಐಟಿಬಿಆರ್:12000' ಯೋಜನೆಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಅರ್ಕಾವತಿ ನದಿ ಸಂಪೂರ್ಣ ನಾಶವಾಗುವ ಸಂಭವವೇ ಹೆಚ್ಚಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿದುಬರುವ ಅರ್ಕಾವತಿ ನದಿಪಾತ್ರದ ಸುತ್ತಮುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೈಗಾರಿಕೆ ಚಟುವಟಿಕೆ, ಕಾರ್ಖಾನೆಗಳಿರಬಾರದು ಎಂಬ ಅಧಿಸೂಚನೆ 200೩ರಲ್ಲಿ ಹೊರಬಿದ್ದಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಸದರಾದ ಅನಂತಕುಮಾರ್, ಸಚಿವರಾದ ಆರ್. ಅಶೋಕ್, ರಾಮಚಂದ್ರೇಗೌಡ, ಸುರೇಶ್‌ಕುಮಾರ್ ಎಲ್ಲರೂ ಅರ್ಕಾವತಿ ಉಳಿಸುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ. ಆದರೆ ಇದೀಗ ಐಟಿ ಹೂಡಿಕೆ ವಲಯದಿಂದ ನದಿ ನಾಶವಾಗುವ ದಿಕ್ಕಿನತ್ತ ಸಾಗಿದೆ.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲೇ ಸಮಿತಿ ರಚನೆ ಆಗಿದೆ. ಬಿಬಿಎಂಪಿ ಚುನಾವಣೆ ಬಿಜೆಪಿ ಪ್ರಣಾಳಿಕೆಯಲ್ಲಿ ಅರ್ಕಾವತಿ ಹರಿಸುತ್ತೇವೆ ಎಂದಿದ್ದಾರೆ. ಇದೆಲ್ಲ ಕಣ್ಣೊರೆಸುವ ತಂತ್ರವೇ?

ಐಟಿಐಆರ್: 12 ಸಾವಿರ ಎಕರೆ ವಶ; 29 ಗ್ರಾಮಗಳು ನೆಲಸಮ
ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದ ಸೃಷ್ಟಿಗಾಗಿ ಗ್ರಾಮಾಂತರ ಜಿಲ್ಲೆಯ 29 ಗ್ರಾಮಗಳ ರೈತರು ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ. 12 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಕಸಿದುಕೊಳ್ಳುವ ಎಲ್ಲ ಪ್ರಕ್ರಿಯೆಯನ್ನೂ ಸದ್ಯದಲ್ಲಿಯೇ ಆರಂಭಿಸಲಿದೆ.
ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್) ಕೇಂದ್ರ ಸರಕಾರದ ಸಹಯೋಗದ ಯೋಜನೆಯಾಗಿದ್ದು, ಇದಕ್ಕಾಗಿ 40 ಚದರ ಕಿಲೋಮೀಟರ್ ಭೂಮಿಯ ಅಗತ್ಯವಿದೆ. ಕೃಷಿ ಭೂಮಿ ಹೊರತುಪಡಿಸಿದಂತೆ ಭೂಮಿ ಒದಗಿಸಬೇಕೆಂಬ ಸೂಕ್ತ ನಿರ್ದೇಶನವಿದ್ದರೂ, ನೀರಾವರಿ, ಕೃಷಿ ಹಾಗೂ ನದಿಪಾತ್ರದ ಭೂಮಿಯನ್ನೇ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರಕಾರ ಸರ್ವಸನ್ನದ್ಧವಾಗಿದೆ.
ಬೆಂಗಳೂರು-ಬಿಐಎಎಲ್ ಕಾರಿಡಾರ್ ವ್ಯಾಪ್ತಿಯಲ್ಲಿ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ನಡುವಿನ ದಾಬಸ್‌ಪೇಟೆಯತ್ತ ಸಾಗುವ 40 ಚದರ ಕಿಲೋ ಮೀಟರ್ ಭೂಮಿ ಐಟಿಐಆರ್ ವಲಯವಾಗಿ ಸೃಷ್ಟಿಯಾಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗಿಂತ ಮೂರು ಪಟ್ಟು ಹೆಚ್ಚು ಭೂಮಿ ಈ ವಲಯಕ್ಕೆ ಸ್ವಾಧೀನವಾಗಲಿದೆ. ರಾಜ್ಯ ಮಂತ್ರಿಮಂಡಲ ಭೂಸ್ವಾಧೀನಕ್ಕೆ ಜನವರಿ ಅಂತ್ಯದಲ್ಲಿ ಅನುಮತಿ ನೀಡಿದೆ. ಚುನಾವಣೆಗಳ ಸಂಬಂಧ ಈ ಪ್ರಕ್ರಿಯೆ ವಿಳಂಬವಾಗಿದ್ದು, ಇದೀಗ ಚುರುಕುಗೊಳ್ಳಲಿದೆ.
ರೈತರ ಭೂಮಿ ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಜತೆಗೆ, ರೈತರ ಸಾವಿರಾರು ಎಕರೆ ಭೂಮಿ ವಶಪಡಿಸುವ ಯೋಜನೆಗೆ ಸಹಿಯನ್ನೂ ಮಾಡುತ್ತಿರುತ್ತಾರೆ. ಒಂದು ಕಡೆ ಕಣ್ಣೊರೆಸಿ, ಮತ್ತೊಂದೆಡೆ ಕುತ್ತಿಗೆ ಹಿಸುಕುವ ಪ್ರಕ್ರಿಯೆ ಇದಾಗಿದೆ. ಇದಕ್ಕೆ 'ಐಟಿಐಆರ್:12000' ಯೋಜನೆ ತಾಜಾ ಉದಾಹರಣೆ.
ನಂದಿ ಬೆಟ್ಟದ ತಪ್ಪಲು ಕೂಡ ಈ ಹೂಡಿಕೆ ವಲಯಕ್ಕೆ ವಶವಾಗಲಿರುವುದು ಶೋಚನೀಯ. ಇದಲ್ಲದೆ, ಈಗ ಗುರುತಿಸಿರುವ ಬಹುತೇಕ ಪ್ರದೇಶ ನೀರಾವರಿಯಿಂದ ಕೂಡಿದ್ದ, ಇಲ್ಲಿನ ಜನರು ಕೃಷಿ, ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ನೀರಾವರಿ ಪ್ರದೇಶ ಇದಾಗಿದ್ದು, ತರಕಾರಿ, ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಮನೆಗಳಲ್ಲೂ ಮೂರ್‍ನಾಲ್ಕು ಹಸುಗಳಿದ್ದು, ಹೈನುಗಾರಿಕೆ ಅಧಿಕವಾಗಿದೆ. ಇದರಿಂದ, ಹಾಲಿನ ಉತ್ಪಾದನೆಯೂ ಹೆಚ್ಚು. ಇವರೆಲ್ಲರನ್ನೂ ಇಲ್ಲಿಂದ ಓಡಿಸುವ ಯೋಜನೆ ಇದಾಗಿದ್ದು, ಗ್ರಾಮಾಂತರ, ನಗರ ಹಾಗೂ ರಾಮನಗರ ಜಿಲ್ಲೆಗಳಿಗೆ ನೀರಿನ ಮೂಲವಾಗಿರುವ ಅರ್ಕಾವತಿ ನದಿಯನ್ನೂ ಸಂಪೂರ್ಣ ನಾಶಪಡಿಸಲಿದೆ.
12 ಸಾವಿರ ಎಕರೆ ಭೂಮಿ ಸ್ವಾಧೀನ ವಿರೋಧಿಸಿ ಅಲ್ಲಲ್ಲಿ ರೈತರು ಸಾಕಷ್ಟು ಹೋರಾಟ ನಡೆಸಿ, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮನವಿ ಪತ್ರ ಕೊಟ್ಟಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರಿಗೆ ಈ ಬಗ್ಗೆ ಮನವಿ ಮಾಡಿಕೊಂಡರೂ ಉಪಯೋಗವಾಗಿಲ್ಲ. ಇದೀಗ ರೈತರೆಲ್ಲ ಒಂದುಗೂಡಿದ್ದು, ಸಂಘಟಿತ ಹೋರಾಟ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಭೂ ಹೋರಾಟ ಸಮಿತಿ ಜನ್ಮ ತಾಳಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಭಾಗದ ನೂರಾರು ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಇದೀಗ ಐಟಿಐಆರ್‌ನಿಂದ 29 ಗ್ರಾಮಗಳೇ ನೆಲಸಮವಾಗಲಿವೆ. ಇದು ಈ ಭಾಗದಲ್ಲೇ ಆಗಬೇಕೆ ಎಂಬುದು ಮೂಲ ಪ್ರಶ್ನೆ. ಅಲ್ಲದೆ, ವಸತಿ ಪ್ರದೇಶ ಹಾಗೂ ಟೌನ್‌ಶಿಪ್‌ಗೆ ಹೆಚ್ಚಿನ ಆದ್ಯತೆ ನೀಡುವ ಈ ಯೋಜನೆಯನ್ನು ರಿಯಲ್ ಎಸ್ಟೇಟ್ ದಂಧೆಗಾಗಿಯೇ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚಿನ ಹಣ ತಂದುಕೊಡುವ ಈ ಪ್ರದೇಶವನ್ನೇ ಆಯ್ದುಕೊಳ್ಳಲಾಗಿದೆ ಎಂಬ ಆರೋಪವೂ ಇದೆ. ಇದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಬೆಂಗಳೂರು ಹಾಗೂ ಸುತ್ತಮುತ್ತ ಐಟಿ ಹೆಚ್ಚು ಅಭಿವೃದ್ಧಿಯಾಗಿದೆ. ಇನ್ನು ಮುಂದೆ ಆ ಕ್ಷೇತ್ರದ ಅಭಿವೃದ್ಧಿಗೆ ಇತರೆ ನಗರಗಳೇ ಆದ್ಯತೆ ಎಂದು ಸರಕಾರ ಹೇಳುತ್ತಿದ್ದರೂ, ರಿಯಲ್ ಎಸ್ಟೇಟ್ ದಂಧೆ ಇಲ್ಲೇ ಅಧಿಕ ಹಣ ನೀಡುವುದರಿಂದ ಬೆಂಗಳೂರು ಹೊರವಲಯದಲ್ಲೇ ಮತ್ತೆ ಯೋಜನೆ ಆರಂಭಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿ, ಅವರ ಅಸ್ತಿತ್ವವನ್ನೇ ಕಸಿದುಕೊಳ್ಳುವ ಇಂತಹ ಯೋಜನೆಗಳ ಅಗತ್ಯವಾದರೂ ಏನು? ಜತೆಗೆ, ಅರಣ್ಯ, ನದಿ ಹಾಗೂ ಜಲಮೂಲಗಳಂತಹ ನೈಸರ್ಗಿಕ ಸಂಪತ್ತನ್ನು ನಾಶಗೊಳಿಸಿ, ಅದರ ಸಮಾಧಿ ಮೇಲೆ ಸೌಧ ಕಟ್ಟಿದರೆ ವಾಯು-ಜಲಕ್ಕೆ ಆಶ್ರಯಿಸುವುದಾದರೂ ಏನನ್ನು? ಈ ಪ್ರಶ್ನೆಗಳಿಗೆ ಯೋಜನೆಗೆ ಕುಮ್ಮಕ್ಕು ನೀಡುತ್ತಿರುವ ಆಡಳಿತ-ಅಧಿಕಾರಿ ವರ್ಗ ಉತ್ತರಿಸಬೇಕು.

ಸ್ವಾಧೀನವಾಗಲಿರುವ ಗ್ರಾಮಗಳು
ದೇವನಹಳ್ಳಿ ತಾಲೂಕು: ವಿಶ್ವನಾಥಪುರ, ಕೊಯಿರಾ, ಮನಗೊಂಡನಹಳ್ಳಿ, ಚಿಕ್ಕ ಓಬನಹಳ್ಳಿ, ಮಾಯಸಂದ್ರ, ರಾಮನಾಥಪುರ, ಅರುವನಹಳ್ಳಿ, ವಾಜರಹಳ್ಳಿ, ಬೈರದೇನಹಳ್ಳಿ, ಗೂಡ್ಲಹಳ್ಳಿ, ಚಿಕ್ಕ ಗೊಲ್ಲಹಳ್ಳಿ, ಚಪ್ಪರದಹಳ್ಳಿ, ದೊಡ್ಡ ಗೊಲ್ಲಹಳ್ಳಿ, ಬೀರಸಂದ್ರ, ರಬ್ಬನಹಳ್ಳಿ, ಮೀಸಗಾನಹಳ್ಳಿ, ತೈಲಗೆರೆ, ಮನಗೊಂಡನಹಳ್ಳಿ, ಸೊಣ್ಣೇನಹಳ್ಳಿ.
ದೊಡ್ಡಬಳ್ಳಾಪುರ ತಾಲೂಕು: ಕೋನಘಟ್ಟ, ನಾಗದೇವನಹಳ್ಳಿ, ಸೊಣ್ಣಪ್ಪನಹಳ್ಳಿ, ಗೋವಿಂದಪುರ, ಶಿವಪುರ ಅಮಾನಿಕೆರೆ, ಶಿವಪುರ, ರಾಜಘಟ್ಟ ಅಮಾನಿಕೆರೆ, ರಾಜಘಟ್ಟ, ದಾಸಗೊಂಡನಹಳ್ಳಿ, ಲಿಂಗನಹಳ್ಳಿ.

ಏನಿದು ಐಟಿಐಆರ್?
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸುವ ಯೋಜನೆಯೇ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್). ಕನಿಷ್ಠ 40 ಚದರ ಕಿಮೀ ಭೂಮಿ ಅಗತ್ಯ. ಕೃಷಿಯೇತರ ಭೂಮಿಗೆ ಪ್ರಾಮುಖ್ಯ ನೀಡಬೇಕು. ಉತ್ಪಾದನಾ ಘಟಕ, ಸಾರ್ವಜನಿಕ ಸೌಲಭ್ಯ, ಸಾಗಣೆ, ವಸತಿ ಪ್ರದೇಶ, ಆಡಳಿತ ಸೇವೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳೂ ಇಲ್ಲಿರಬೇಕು. ಸಮಗ್ರ ಟೌನ್‌ಶಿಪ್ ಕೂಡ ಇಲ್ಲಿ ನಿರ್ಮಾಣ ಮಾಡಬಹುದು.
ಕೇಂದ್ರ ಹಾಗೂ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆಗೆ ಸಮ್ಮತಿಸಿದ್ದು, ದೊಡ್ಡಬಳ್ಳಾಪುರ, ದೇವನಹಳ್ಳಿಯಿಂದ ದಾಬಸ್‌ಪೇಟೆ ವ್ಯಾಪ್ತಿಯ 12 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿದ್ದಾರೆ. ಐಟಿಐಆರ್‌ಗೆ ಅಗತ್ಯವಾದ ಭೂಮಿಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸ್ವಾಧೀನಪಡಿಸಿಕೊಳ್ಳಲಿದೆ. ನಂತರ, ಸರಕಾರ, ಖಾಸಗಿ ಸಹಭಾಗಿತ್ವದಡಿ ಕೈಗಾರಿಕೆ ಪ್ರದೇಶವಲ್ಲದೆ ಟೌನ್‌ಶಿಪ್ ನಿರ್ಮಾಣ ಮಾಡಬಹುದು.

No comments:

Post a Comment