Friday, August 16, 2013
Saturday, August 10, 2013
ಒತ್ತುವರಿ ಸುಳಿಯಲ್ಲಿ 46 ಕೆರೆ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ವರ್ಷದಲ್ಲಿ 12 ಸಾವಿರ ಕೆರೆಗಳ ಸರ್ವೆ ನಡೆಸಿ, ಅವುಗಳ ಅಭಿವೃದ್ಧಿ ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ, ವರ್ಷಗಳಿಂದ ಕೆರೆಗಳ ಸರ್ವೆ ನಡೆದಿಲ್ಲ. ಇದಕ್ಕೆ ಕಾರಣ ಕಂದಾಯ ಇಲಾಖೆ. ತಹಸೀಲ್ದಾರರೇ ಈ ಕೆರೆಗಳ ಸರ್ವೆ ನಡೆಸಬೇಕು. ಸರ್ವೆ ನಡೆದರೆ ಒತ್ತುವರಿ ತೆರವಾಗುತ್ತಲ್ಲ ಎಂಬ ದೂ(ದು)ರಾಲೋಚನೆಯಿಂದ ಕಡತ ಮುಂದುವರಿಯುತ್ತಲೇ ಇಲ್ಲ.
ರಾಜ್ಯದ 33 ಸಾವಿರ ಕೆರೆಗಳ ಬಹುತೇಕ ಕೆರೆಗಳ ಸ್ಥಿತಿಯೂ ಇದೇ ರೀತಿಯಲ್ಲಿದ್ದು, ಬೆಂಗಳೂರು ನಗರ ಜಿಲ್ಲೆಯಲ್ಲಿ ಸರ್ವೆ ತಡೆ ಪ್ರಭಾವ ಅತಿಯಾಗಿದೆ. ಇದಕ್ಕೆ ಇಲ್ಲಿನ ರಾಜಕಾರಣಿಗಳು ಹಾಗೂ ಭೂದಾಹಿಗಳೇ ಕಾರಣ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊರತಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ 47 ಕೆರೆಗಳ ಒಳಪಡುತ್ತವೆ. ಇದರಲ್ಲಿ ಒಂದು ಕೆರೆಯನ್ನು ಬಿಡಿಎಗೆ ಹಸ್ತಾಂತರಿಸಲಾಗಿದೆ. ಉಳಿದ 46 ಕೆರೆಗಳನ್ನು ಐದಾರು ವರ್ಷಗಳಿಂದ ಅಭಿವೃದ್ಧಿ ಮಾಡಲಾಗುತ್ತಿದೆ ಎಂದೇ ಹೇಳಲಾಗುತ್ತಿದೆ. ಆದರೆ, ಈವರೆಗೆ ಒಂದು ಕೆರೆಯ ಅಭಿವೃದ್ಧಿಯೂ ಪೂರ್ಣಗೊಂಡಿಲ್ಲ.
ಬೆಂಗಳೂರು ನಗರ ಜಿಲ್ಲೆ ವ್ಯಾಪ್ತಿಯ 46 ಕೆರೆಗಳು ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿವೆ. ಇದರಲ್ಲಿ 39 ಕೆರೆಗಳು ಒತ್ತುವರಿಯಾಗಿವೆ. 148.49 ಹೆಕ್ಟೇರ್ (366 ಎಕರೆ) ಪ್ರದೇಶ ಒತ್ತುವರಿಯಾಗಿದೆ. 110.78 ಹೆಕ್ಟೇರ್ ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಹೇಳಲಾಗಿದ್ದರೂ, ಕೆರೆಗಳಿಗೆ ಬೇಲಿ ಹಾಕುವ ಕಾರ್ಯ ಆಗಿಲ್ಲ. ಏಕೆಂದರೆ ಗಡಿ ಪ್ರದೇಶ ಗುರುತಾಗಿಲ್ಲ.
ಆನೇಕಲ್‌ನಲ್ಲೇ ಹೆಚ್ಚು: ಸಣ್ಣ ನೀರಾವರಿ ಇಲಾಖೆಗೆ ನಗರ ಜಿಲ್ಲೆಯ ಆನೇಕಲ್ ತಾಲೂಕಿನಲ್ಲೇ 26 ಕೆರೆಗಳಿವೆ. ಈ ಕೆರೆಗಳ ಒಟ್ಟು ವಿಸ್ತೀರ್ಣ 1211.37 ಹೆಕ್ಟೇರ್ (2993 ಎಕರೆ). ಈ 26 ಕೆರೆಗಳ ಸರ್ವೆಯಲ್ಲೇ ಸಾಕಷ್ಟು ವಿಳಂಬವಾಗುತ್ತಿದೆ. ಕೆರೆಗಳ ಸರ್ವೆ ಕಾರ್ಯಕ್ಕೆ ಇಲಾಖೆ ತಹಸೀಲ್ದಾರ್ ಅವರಿಗೆ ಪತ್ರ ಬರೆದಿದ್ದರೂ ಇನ್ನೂ ಸರ್ವೆ ಕಾರ್ಯ ನಡೆಸಿಲ್ಲ. ಹೀಗಾಗಿ ಬೇಲಿ ನಿರ್ಮಿಸುವ ಪ್ರಥಮ ಕಾರ್ಯವೂ ಆಗಿಲ್ಲ.
ಆನೇಕಲ್ ತಾಲೂಕಿನಲ್ಲಿ ಬಹುಮಹಡಿ ಕಟ್ಟಡಗಳು ಹಾಗೂ ರಿಯಲ್ ಎಸ್ಟೇಟ್ ಚಟುವಟಿಕೆ ಹೆಚ್ಚಿರುವುದರಿಂದ ಕೆರೆಗಳ ಒತ್ತುವರಿ ಅತಿಹೆಚ್ಚಾಗಿದೆ. ಇಲ್ಲಿ ಸರ್ವೆ ಮಾಡಿದರೆ ಸಾಕಷ್ಟು ಕಟ್ಟಡಗಳು ನೆಲಸಮವಾಗಬೇಕಾಗುತ್ತದೆ. ಇದನ್ನು ತಡೆಯುವ ದೃಷ್ಟಿಯಿಂದ ಪಟ್ಟಭದ್ರ ಹಿತಾಸಕ್ತಿಗಳು ತಹಸೀಲ್ದಾರರ ಮೇಲೆ ಪ್ರಭಾವ ಬೀರುತ್ತಿವೆ. ಇದಕ್ಕೆ ತಹಸೀಲ್ದಾರ್ ಮಣಿದಿದ್ದಾರೆ. ಅದಕ್ಕೇ ಕೆರೆಗಳ ಒತ್ತುವರಿ ಹಾಗೇ ಉಳಿದುಕೊಂಡಿದೆ ಎಂಬ ಆರೋಪ ಬಲವಾಗಿದೆ.
ಬೆಂ.ನಗರ ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವ ಕೆರೆಗಳು
ಪೂರ್ವ ತಾಲೂಕು: ರಾಂಪುರ ಕೆರೆ, ಬಿದರಹಳ್ಳಿ ಕೆರೆ, ದೊಡ್ಡಗುಬ್ಬಿ ಕೆರೆ, ಕೊಡತಿ ಕೆರೆ, ಎಲೆಮಲ್ಲಪ್ಪಶೆಟ್ಟಿ ಕೆರೆ.
ಉತ್ತರ ತಾಲೂಕು: ಸಿಂಗನಾಯಕನಹಳ್ಳಿ ಕೆರೆ, ಬಾಗಲೂರು ಕೆರೆ, ದೊಡ್ಡಜಾಲ ಕೆರೆ, ಆಲೂರು ಕೆರೆ, ಬಂಡೆಕೊಡಗಿಹಳ್ಳಿ ಕೆರೆ, ಅಡ್ಡೆ ವಿಶ್ವನಾಥಪುರ ಕೆರೆ, ಮಹದೇವಕೊಡಿಗೆಹಳ್ಳಿ ಕೆರೆ, ಸೊಂಡೆಕೊಪ್ಪ ಕೆರೆ, ಕಾಚಕನಹಳ್ಳಿ ಕೆರೆ.
ದಕ್ಷಿಣ ತಾಲೂಕು: ಚಿಕ್ಕಲಿಂಗಶಾಸ್ತ್ರಿ ಕೆರೆ, ಗುಳಕಮಲೆ ಕೆರೆ, ವಡೇರಹಳ್ಳಿ ಕೆರೆ, ಊದಿಪಾಳ್ಯ ಕೆರೆ, ಅಗರ ಕೆರೆ.
ಆನೇಕಲ್ ತಾಲೂಕು: ಮುತ್ತನಲ್ಲೂರು ಅಮಾನಿ ಕೆರೆ, ಕರ್ಪೂರ ಕೆರೆ, ಬಿದರಗುಪ್ಪೆ ಅಮಾನಿ ಕೆರೆ, ಮಾಯಸಂದ್ರ ದೊಡ್ಡ ಕೆರೆ, ಮುಗಳೂರು ಕೋಡಿ ಕೆರೆ, ಮರಸೂರು ದೊಡ್ಡ ಕೆರೆ, ಅರೆಹಳ್ಳಿ ದೊಡ್ಡ ಕೆರೆ, ಸರ್ಜಾಪುರ ಕೆರೆ, ಪಂಡಿತನ ಅಗ್ರಹಾರ ಕೆರೆ, ಬೊಮ್ಮಸಂದ್ರ ಕೆರೆ, ಗಟ್ಟಿಹಳ್ಳಿ ಬೊಮ್ಮನಕೆರೆ, ಹುಸ್ಕೂರು ಕೆರೆ, ಸಿಂಗೇನಹಳ್ಳಿ ಅಗ್ರಹಾರ ಕೆರೆ, ಸರ್ಜಾಪುರ ಚಿಕ್ಕಕೆರೆ, ಬೊಮ್ಮುಂಡಹಳ್ಳಿ ಕೆರೆ, ಹೆನ್ನಾಗರ ಅಮಾನಿ ಕೆರೆ, ಬ್ಯಾಟರಾಯನದೊಡ್ಡಿ ಕೆರೆ, ಹುಲಿಮಂಗಲ ಕೆರೆ, ಸಕಲವಾರ ಭುಜಂಗದಾಸನ ಕೆರೆ, ಬಿದರಿ ಅಮಾನಿ ಕೆರೆ, ಜಿಗಣಿ ದೊಡ್ಡ ಕೆರೆ, ಹಾರಗದ್ದೆ ದೊಡ್ಡ ಕೆರೆ, ಬಗ್ಗನದೊಡ್ಡಿ ಕೆರೆ, ಆನೇಕಲ್ ರಾಜನಕೆರೆ, ಆನೇಕಲ್ ದೊಡ್ಡಕೆರೆ, ಬಿದರಕೆರೆ ದೊಡ್ಡಕೆರೆ.
ಕೆರೆಗಳ ಸರ್ವೆಗೆ ತಹಸೀಲ್ದಾರರಿಗೆ ಸೂಚಿಸಲಾಗಿದೆ. ಸರ್ವೆ ನಡೆದ ಮೇಲೆ ಅವರೇ ಒತ್ತುವರಿ ತೆರವುಗೊಳಿಸಿಕೊಡಬೇಕು. ಕೆರೆಗಳಿಗೆ ಕಲುಷಿತ ನೀರು- ತ್ಯಾಜ್ಯ ಸೇರದಂತೆ ತಡೆಗಟ್ಟಲು ನಮ್ಮ ಇಲಾಖೆಯ ಅಧಿಕಾರಿಗಳಿಗೆ ಆದೇಶಿಸಲಾಗಿದೆ.
- ಶಿವರಾಜ್ ಎಸ್. ತಂಗಡಗಿ, ಸಣ್ಣ ನೀರಾವರಿ ಸಚಿವ
Friday, August 9, 2013
Thursday, August 1, 2013
Saturday, July 27, 2013
Friday, July 26, 2013
ಸರ್ಕಾರಿ ಭೂಮಿ ಒತ್ತು'ವರಿ'-10 ಎಚ್ .ಡಿ.ಕುಮಾರಸ್ವಾಮಿ ಸಂದರ್ಶನ
ಸರ್ಕಾರಿ ಭೂಮಿ ಒತ್ತು'ವರಿ': ಎಚ್ .ಡಿ. ಕುಮಾರಸ್ವಾಮಿ ಸಂದರ್ಶನ
ರಾಜಕಾರಣಿಗಳಿಂದಲೇ ಭೂ ಕಬಳಿಕೆ!
ರಾಜಕಾರಣಿಗಳು, ಹಿಂಬಾಲಕರು, ಹಿತೈಷಿಗಳೂ ಎಲ್ಲರೂ ಫಲಾನುಭವಿಗಳು
Kere Manjunath ಕೆರೆ ಮಂಜುನಾಥ್
ಸರ್ಕಾರಿ ಭೂಮಿ ಒತ್ತು'ವರಿ'-8 ವಿ. ಬಾಲಸುಬ್ರಮಣಿಯನ್ ಸಂದರ್ಶನ
ಭೂ ಒತ್ತುವರಿಗೆ ರಾಜಕಾರಣಿಗಳದ್ದೇ ಶ್ರೀರಕ್ಷೆ!
Kere Manjunath ಕೆರೆ ಮಂಜುನಾಥ್
ಬೆಂಗಳೂರು: ರಾಜಕಾರಣಿಗಳು, ಸರ್ಕಾರಿ ನೌಕರರು ಹಾಗೂ ಭೂಮಾಫಿಯಾದವರೇ ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಗೆ ಪ್ರಮುಖ ಕಾರಣೀಭೂತರು.
ರಾಜಕಾರಣಿಗಳು ಅವರು ಯಾವುದೇ ಪಕ್ಷವಾಗಿರಲಿ ಅವರೇ ಭೂ ಒತ್ತುವರಿಯ ಪ್ರಮುಖ ಪಾತ್ರಧಾರಿಗಳು. ಅವರ ಜತೆಗೆ ಭೂ ಮಾಫಿಯಾ. ಬೆಂಗಳೂರು, ಹುಬ್ಬಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರಲ್ಲಿ ಭೂಮಿ ಮೌಲ್ಯ ಬಹಳ ಇದೆ. ಭೂಮಾಫಿಯಾದವರು ರಾಜಕಾರಣಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಾರೆ. ಅಪಾರ್ಟ್‌ಮೆಂಟ್ ಕಟ್ಟಿಸುತ್ತಾರೆ. ಅದರಲ್ಲಿ ಒಂದೆರಡು ಫ್ಲ್ಯಾಟ್‌ಗಳು ಶಾಸಕರಿಗೇ ಕೊಟ್ಟುಬಿಡುತ್ತಾರೆ...
ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಅವರ ನೇರ ನುಡಿಗಳಿವು. ಸರ್ಕಾರಿ ಭೂ ಒತ್ತುವರಿ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಒತ್ತು'ವರಿ' ಸರಣಿ ಕೆಲವರ ಕಣ್ಣನ್ನು ತೆರೆಸಿದೆ. ಅದರಂತೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣೂ ತೆರೆಯಬೇಕು ಎಂದು ವಿಶೇಷ ಸಂದರ್ಶನದಲ್ಲಿ ಆಶಿಸಿದ್ದಾರೆ.
ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮತ್ತೊಂದು ಸದನ ಸಮಿತಿ ಬೇಡ. ಎ.ಟಿ. ರಾಮಸ್ವಾಮಿ ಜಂಟಿ ಸದನ ಸಮಿತಿ ವರದಿ ಅನುಷ್ಠಾನ ಸೇರಿದಂತೆ ರಾಜ್ಯದ ಎಲ್ಲೆಡೆ ಒತ್ತುವರಿ ತೆರವಿಗೆ ಕಾರ್ಯಪಡೆಯನ್ನೇ ರಚಿಸುತ್ತೇವೆ ಎಂದು 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ತಿಳಿಸಿದ್ದರು. ಆಗ, ಮುಖ್ಯಕಾರ್ಯದರ್ಶಿ ಕಾರ್ಯಪಡೆ ಅಧ್ಯಕ್ಷರಾಗಬೇಕಿತ್ತು. ಅವರು ಕಾರ್ಯಒತ್ತಡದಿಂದ ಬೇಡ ಎಂದರು. ಜಂಟಿ ಸದನ ಸಮಿತಿಗೆ ಸಲಹೆಗಾರನಾಗಿದ್ದ ನನ್ನನ್ನೇ ಅಧ್ಯಕ್ಷನಾಗು ಎಂದರು. ಸೀರಿಯಸ್ ಆಗಿದ್ದರೆ ಮಾತ್ರ ನಾನು ಒಪ್ಪುತ್ತೇನೆ. ಇಲ್ಲ ಅಂದ್ರೆ ಕಾರ್ಯಪಡೆ ಮಾಡಿ ಉಪಯೋಗವಿಲ್ಲ. ಹಿಂದಿನ ಕಾರ್ಯಪಡೆಗಳಂತೆ ಹಳತಾಗುತ್ತದೆ ಅಷ್ಟೇ ಎಂದೆ. ನನಗೇ ಸರ್ಕಾರಿ ಆದೇಶ ತಯಾರು ಮಾಡಲು ಹೇಳಿದರು. ಅದರಂತೆ ಕಾರ್ಯಪಡೆ ತಯಾರಾಯಿತು. ಆದರೆ, ಒಂದು ಕಡೆ ಕಾರ್ಯಪಡೆ ರಚಿಸಿದ ಸಿಎಂ , ಮತ್ತೊಂದು ಕಡೆ ಅದರ ಕೆಲಸ ನಿಲ್ಲಿಸಿದರು.
ಕಾರ್ಯಪಡೆ 19 ತಿಂಗಳು ಕೆಲಸ ಮಾಡಿತು. ಕಾಲಾವಧಿ ಕೊಟ್ಟಿರಲಿಲ್ಲ. ಸರ್ಕಾರಿ ಭೂಮಿ ಒತ್ತುವರಿ ತೆರವಾಗುವವರೆಗೂ ಕೆಲಸವಿತ್ತು. ಕಾರ್ಯಪಡೆ ಕೆಲಸ ಮಾಡುವಾಗ ಸರ್ಕಾರದ ಅನೇಕ ನ್ಯೂನತೆಗಳು ಕಂಡು ಬಂದವು.
ಕಂದಾಯ ಇಲಾಖೆ ಕಾರ್ಯದರ್ಶಿಯವರೇ ಅಕ್ರಮವಾಗಿ ಭೂ ವಿನಿಮಯ, ಹರಾಜು ಮಾಡಿದ್ದರು. ಇದೆಲ್ಲವನ್ನೂ ನಮೂದಿಸಿ ವರದಿ ನೀಡುವುದಕ್ಕೆ ಮುನ್ನವೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆಗ ಅಂದಿನ ಪ್ರಧಾನ ಕಾರ್ಯದರ್ಶಿ ಮಧು ಕ್ರಮಕ್ಕೆ ಮುಂದಾದರು. ಪ್ರತಿಯೊಂದು ಫೈಲೂ ಕಂದಾಯ ಸಚಿವರಿಗೆ ಹೋಗಬೇಕು. ಆಗ ಕಂದಾಯ ಸಚಿವರಾಗಿದ್ದ ಕರುಣಾಕರ ರೆಡ್ಡಿ 'ಬಹಳ ತೊಂದರೆ ಬರ್ತಾ ಇದೆ' ಅಂತ ಹೇಳಿ ಈ ಕಾರ್ಯಪಡೇನೇ ಬೇಡ ಅಂತ ಹೇಳಿ ಜುಲೈ 4, 2011ರಂದು ತೆಗೆದುಹಾಕಿಬಿಟ್ಟರು. ಇದು ತಪ್ಪು. ರಾಜ್ಯದಲ್ಲಿ ಒಟ್ಟು 17 ಕಾರ್ಯಪಡೆಗಳಿವೆ. ಭೂ ಒತ್ತುವರಿ ತೆರವು ಕಾರ್ಯಪಡೆಯನ್ನು ಮಾತ್ರ ತೆಗೆದುಹಾಕಲಾಯಿತು. ಈ ಬಗ್ಗೆ ಎಲ್ಲರಿಗೂ ಪತ್ರ ಬರೆದಿದ್ದೇವೆ. ಆದರೆ ಏನೂ ಆಗಿಲ್ಲ.
ಕಾರ್ಯಪಡೆ ಕಾಲಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಗುರುತಿಸಿದೆವು. ಎಷ್ಟು ಜಮೀನು, ಯಾವ ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಒತ್ತುವರಿ ಎಷ್ಟು, ಯಾರು ಮಾಡಿದ್ದಾರೆ, ಸರ್ವೆ ನಂಬರ್ ಸಹಿತ ವಿವರ ತಯಾರು ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಒಂದರಂತೆ 10 ಸಂಪುಟಗಳ ವರದಿ ನೀಡಿದ್ದೇವೆ. 11 ಲಕ್ಷಕ್ಕೂ ಅಧಿಕ ಎಕರೆ ಭೂ ಒತ್ತುವರಿಯಾಗಿದೆ.
15 ಲಕ್ಷ ಜನರು ಭೂಕಬಳಿಕೆದಾರರು. ಇದು 2011ರ ಜೂನ್ ಅಂತ್ಯದ ಲೆಕ್ಕಾಚಾರ. ಈ ಒತ್ತುವರಿಯ ಮೌಲ್ಯ ಕಾಮನ್ ವೆಲ್ತ್, 2ಜಿ ಸ್ಪೆಕ್ಟ್ರಮ್, ಬಳ್ಳಾರಿ ಗಣಿ ಹಗರಣದ ಮೊತ್ತ ಒಟ್ಟು ಸೇರಿಸಿದರೂ ಸರಿ ಹೊಂದುವುದಿಲ್ಲ. ಈಗ ಸರ್ವೆ ಮಾಡಿದರೆ ನಮ್ಮ ವರದಿಗಿಂತ ದುಪ್ಪಟ್ಟು, ಮೂರು ಪಟ್ಟು ಹೆಚ್ಚು ಒತ್ತುವರಿ ಬಹಿರಂಗವಾಗಬಹುದು.
ಕಾಫಿ ತೋಟಗಳಲ್ಲೇ ಅತಿ ಹೆಚ್ಚು: ಅರಣ್ಯ ಒತ್ತುವರಿಯಲ್ಲಿ ಪ್ರಮುಖವಾಗಿರುವುದು ಪಶ್ಚಿಮ ಘಟ್ಟ. ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗ, ಕೊಡಗು, ಹಾಸನ ಐದಾರು ಜಿಲ್ಲೆಗಳಲ್ಲಿನ ಕಾಫಿ ತೋಟಗಳಲ್ಲೇ ಅತಿ ಹೆಚ್ಚು. ಕೊಪ್ಪದಲ್ಲಿ ದೊಡ್ಡ ಕಾಫಿ ತೋಟ ಮಾಡಿರುವವರು 10-20ರಿಂದ 200 ಎಕರೆವರೆಗೂ ಒತ್ತುವರಿ ಮಾಡಿದ್ದಾರೆ.
ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. 15 ದಿನ ಅವಧಿಯಿರುವ ನೋಟಿಸ್‌ನ ನಂತರವೂ ಉತ್ತರ ಬಂದಿಲ್ಲ, ಅಂತಿಮ ಆದೇಶವೂ ಆಗಿಲ್ಲ. ಜಿಲ್ಲಾಧಿಕಾರಿ ಎಲ್ಲರಿಗೂ ನೋಟೀಸ್ ನೀಡಿದಾಗ 2010ರಲ್ಲಿ ಸಂಸದರಾಗಿದ್ದ ಸದಾನಂದಗೌಡ, ಕಾಫಿ ತೋಟದವರೊಂದಿಗೆ ಬಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಅರ್ಧ, ಒಂದು ಎಕರೆ ಒತ್ತುವರಿ ಮಾಡಿಕೊಂಡವರಿಗೂ ನೋಟೀಸ್ ನೀಡಿ, ಬಹಳ ತೊಂದರೆ ಕೊಡುತ್ತಿದ್ದಾರೆ ಎಂದಿದ್ದರು. ಅರ್ಧ, ಒಂದು ಎಕರೆಯಲ್ಲಿ ಯಾರೂ ಕಾಫಿ ತೋಟ ಮಾಡುವುದಿಲ್ಲ. ಅಂತಹವರ ಹೆಸರು ಹೇಳಿಕೊಂಡ ಬಂದವರೊಂದಿಗೆ ಬಂದ ಸದಾನಂದಗೌಡ, ಮುಖ್ಯಮಂತ್ರಿ ಮೇಲೆ ಪ್ರಭಾವ ಬೀರಿ ಜಿಲ್ಲಾಧಿಕಾರಿಯವರು ಶಾಶ್ವತ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಸೂಚನೆ ನೀಡಿಸಿದರು.
ಇದೇ ಕಾನೂನುಬಾಹಿರ. ಸರ್ಕಾರಿ ಭೂ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿ ಅಥವಾ ಅರಣ್ಯಾಧಿಕಾರಿ ನೋಟಿಸ್ ನೀಡಿದ ಮೇಲೆ ಅದನ್ನು ನ್ಯಾಯಾಲಯ ಮಾತ್ರ ತಡೆಯಬಹುದು. ಇದೇ ಮಾನದಂಡವಾಗಿ ಇಡೀ ರಾಜ್ಯದಲ್ಲಿ ಒತ್ತುವರಿ ತೆರವು ನಿಂತುಹೋಯಿತು.
ಅವರಿಂದ ಅಕ್ರಮ, ಇಲ್ಲೇ ಬಂದು ಮಾತನಾಡಲಿ!
ಸರ್ವೆಗೆ ಹೋಗಿದ್ದಾಗ ರಮೇಶ್‌ಕುಮಾರ್ ಎಲ್ಲಿ ಎಂದೆ. ಅವರು ಒಳಗೆ ಕೂತುಕೊಂಡಿದ್ದರು. ಸುಮಾರು 20 ಜನ ಅಧಿಕಾರಿಗಳು ಹೋಗಿದ್ದೆವು. ಅವರು ನಿಮ್ಮನ್ನೇ ಒಳಗೆ ಕರೀತಿದ್ದಾರೆ ಎಂದರು. ಕಾನೂನು ಮುರಿದವರು ಅವರು. ಅವರೇನಾದರೂ ಹೇಳೋದು ಇದ್ರೆ ಅವರು ನಮ್ಮ ಮುಂದೆ ಬಂದು ಹೇಳಬೇಕು. ನಾವು ಒಳಗೆ ಹೋಗಿ ಅವರ ಹತ್ತಿರ ಮಾತನಾಡುವುದಿಲ್ಲ ಎಂದಿದ್ದೆ. 60 ಎಕರೆ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಸಾಕಷ್ಟು ನೋಟಿಸ್ ಕೊಟ್ಟಿತ್ತು. ಏನೂ ಆಗಿರಲಿಲ್ಲ. ಕೋಲಾರಕ್ಕೆ ಒಳ್ಳೆ ಡಿಸಿಎಫ್ ಬಂದರು. ರತನ್‌ಕುಮಾರ್ ಎಂಬ ಉತ್ತರ ಭಾರತ ಮೂಲದ ಅಧಿಕಾರಿ. ಒತ್ತುವರಿಯನ್ನು ಗಂಭೀರವಾಗಿ ತೆಗೆದುಕೊಂಡರು. ಇದನ್ನು ತೆರವುಗೊಳಿಸಿ ಎಂದು ನೋಟಿಸ್ ನೀಡಿದರು. ಅಪೀಲ್ ಹೋದರು. ರಾಜಕೀಯದ ಪ್ರಭಾವದಿಂದ ಎರಡು ವರ್ಷ ವಿಚಾರಣೆ ನಡೆಯದಂತೆ ನೋಡಿಕೊಂಡರು. ಪ್ರಾಂತೀಯ ಆಯುಕ್ತರ ಒಂದು ಮೀಟಿಂಗ್‌ನಲ್ಲಿ ಡಿಸಿಎಫ್ ರತನ್‌ಕುಮಾರ್ 'ದೊಡ್ಡದೊಡ್ಡವರು ಇದ್ದಾರೆ. ನಾವು ತೆರವು ಮಾಡಲು ಆಗುತ್ತಿಲ್ಲ. ಜಂಟಿ ಸರ್ವೆ ಮಾಡಬೇಕು. ಅದಕ್ಕೆ ಬಿಡುತ್ತಿಲ್ಲ. ನೀವೇ ಬನ್ನಿ' ಎಂದರು. ಆಗ ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿದ್ದೆವು. ಪೊಲೀಸರ ಸಹಾಯ ಪಡೆದುಕೊಂಡು ಗೇಟ್ ತೆರೆದು ಒಳಗೆ ಹೋದೆವು. ಕಂದಾಯ-ಅರಣ್ಯ ಇಲಾಖೆ ಪ್ರಕ್ರಿಯೆಯಂತೆ ಜಂಟಿ ಸರ್ವೆ ಆಯಿತು. ಅರಣ್ಯ ಭೂಮಿ ಇದೆ ಎಂಬುದು ಆಗಲೂ ಗೊತ್ತಾಯಿತು. ಆ ಒಳ್ಳೆ ಡಿಸಿಎಫ್ ವರ್ಗಾಯಿಸಿಬಿಟ್ಟರು. ಬೇರೆ ಯಾರೋ ಬಂದಿದ್ದಾರೆ. ಅವರೇನು ಕೆಲಸ ಮಾಡುತ್ತಿಲ್ಲ. ಈಗ ಸಿದ್ದರಾಮಯ್ಯ ಬಂದ ಮೇಲೆ ಏನು ಮಾಡುತ್ತಾರೆ ನೋಡಬೇಕು. ರಮೇಶ್‌ಕುಮಾರ್ ಕಾಂಗ್ರೆಸ್ ಎಂಎಲ್‌ಎ ಬೇರೆ. ರಮೇಶ್‌ಕುಮಾರ್ ಒಂದು ಸಲ ಆಫೀಸ್‌ಗೆ ಬಂದಿದ್ರು. ನಾನು ಸುಮಾರು 20 ಜನ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡುತ್ತಿದ್ದೆ. ಈ ಮೀಟಿಂಗ್ ಮಧ್ಯಾಹ್ನ 3 ಗಂಟೆವರೆಗೂ ಆಗುತ್ತದೆ. ಈಗ ಬಂದರೆ ಹೇಗೆ? ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರಲಿ ಎಂದು ಹೇಳಿದ್ದೆ ಅಷ್ಟೇ. ಆಮೇಲೆ ಹೋದವರು ನಂತರ ಬರಲೇ ಇಲ್ಲ. ನಿಜವಾಗಿ ಆದದ್ದು ಇಷ್ಟೇ.
ಶಾಶ್ವತ ಸಮಿತಿ ಇರಲಿ
ಸರ್ಕಾರಿ ಭೂಮಿ ಉಳಿಸಿಕೊಳ್ಳುವ ಉದ್ದೇಶವಿದ್ದರೆ ವಿಧಾನಮಂಡಲದಲ್ಲಿರುವ ಲೆಕ್ಕಪತ್ರ ಸಮಿತಿಯಂತೆ ಶಾಶ್ವತ ಸಮಿತಿ ರಚಿಸಬೇಕು. ಎಲ್ಲ ಪಕ್ಷದವರೂ ಸಮಿತಿಯಲ್ಲಿ ಇರುವುದರಿಂದ ಒಂದು ರೀತಿ ನ್ಯಾಯ ಸಿಗುತ್ತದೆ. ಆದರೆ, ರಮೇಶ್‌ಕುಮಾರ್ ಅವರಂತಹವರೇ ಸದಸ್ಯರಾದರೆ ಏನೂ ಆಗುವುದಿಲ್ಲ. ಇದೆಲ್ಲಕ್ಕಿಂತ ಮೊದಲು ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಅವರಿಗಿರುವ ತಡೆ ಆದೇಶ ತೆರವುಗೊಳಿಸಬೇಕು. ಎಲ್ಲ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.
ಮ್ಯಾನೇಜ್ ಮಾಡ್ತಾರೆ?
ಕೋಲಾರದ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ಪರಿಶೀಲನೆಗೆ ಹೋಗುವ ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿದ್ದ ಹತ್ತಾರು ಅಡ್ವೈಸರ್‌ಗಳಲ್ಲಿ ಒಬ್ಬರಾಗಿ ಕಾನೂನು ಸಲಹೆಗಾರ ದಿವಾಕರ್ ನನಗೆ ಫೋನ್ ಮಾಡಿದ್ದರು. 'ಸಾರ್ ತಾವೆಲ್ಲ ಯಾಕೆ ಹೋಗಬೇಕು. ನೀವೆಲ್ಲ ಅತ್ಯಂತ ಸೀನಿಯರ್ ಆಫೀಸರ್ಸ್ ಹೋಗೋದು ಬೇಡ. ಲೋಕಲ್ ಆಫೀಸರ್‌ಗಳೇ ಮ್ಯಾನೇಜ್ ಮಾಡುತ್ತಾರೆ' ಎಂದರು. ನೋಡ್ರಿ, ಲೋಕಲ್ ಆಫೀಸ್‌ನಲ್ಲಿ ಏನೂ ಆಗುತ್ತಿಲ್ಲ ಅಂತಾನೇ ನಾವು ಹೋಗುತ್ತಿರುವುದು ಎಂದೆ. 'ಅದಲ್ಲ ಸಾರ್, ಲಾ ಆ್ಯಂಡ್ ಆರ್ಡರ್ ಪ್ರಾಬ್ಲಂ ಆಗಬಹುದೇನೋ?' ಎಂದರು. ನನ್ನ ಜತೆ ಜಿಲ್ಲಾಧಿಕಾರಿ ಇದ್ದಾರೆ, ಎಸ್ಪಿ ಇದ್ದಾರೆ. ಏನಾದ್ರೂ ಆದರೆ ನೋಡಿಕೊಳ್ಳುತ್ತಾರೆ ಬಿಡಿ ಎಂದೆ.
ಯಾರ್ಯಾರಿಗೋ ಜಮೀನು
ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಅಥವಾ ಭೂಮಿ ಇಲ್ಲದವರಿಗೆ ಸಕ್ರಮದಲ್ಲಿ ಭೂಮಿ ನೀಡಲಾಗುತ್ತದೆ. ಅಂದು ಶಾಸಕರಾಗಿದ್ದ ಜೀವರಾಜ್ ಚಿಕ್ಕಮಗಳೂರಿನಲ್ಲಿ ಈ ಸಮಿತಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಯಾರ್ಯಾರಿಗೋ ಭೂಮಿ ಕೊಟ್ಟಿದ್ದಾರೆ. ಪರಿಶಿಷ್ಟರ ಹೆಸರಿನಲ್ಲಿ ಗೌಡರು, ಲಿಂಗಾಯತರಿಗೆಲ್ಲ ಕೊಟ್ಟಿದ್ದಾರೆ. ಇಂತಹ 122 ಪ್ರಕರಣಗಳಿವೆ. ಲೋಕಾಯುಕ್ತರೂ ಇದರ ಬಗ್ಗೆ ಕಾರ್ಯಪಡೆಯಿಂದ ವರದಿ ಕೇಳಿದ್ದರು. ನಾವು ನೀಡಿದ್ದೆವು. ಹಾಸನದ ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ಅವರೂ ಇದೇ ರೀತಿ ಮಾಡಿದ್ದಾರೆ.
Friday, July 19, 2013
Wednesday, July 10, 2013
ಅನ್ನಭಾಗ್ಯ 2013: Annabhagya for the poor from today
Annabhagya for the poor from today
Kere Manjunath ಕೆರೆ ಮಂಜುನಾಥ್
Fully Geared:
Purchase of Rice:
District wise details of Antyodaya and BPL cards
There is no shortage of rice for Annabhagya Yojana. This scheme will start simultaneously in all the district centers of the state from July 10. I will officially launch the project at Independence Park in Bangalore.
- Siddaramaiah, Chief Minister
Rice is available in almost all fair price shops. However, in the existing system, one fair price shop distributes rice one day at a time. So, no one needs to worry. One kg of rice is available for one rupee from the July ration itself. This project is continuous.
- Dinesh Gundurao, Minister of State for Food and Civil Supplies
Increased population
ಬಡವರಿಗೆ ಇಂದಿನಿಂದ ಅನ್ನಭಾಗ್ಯ
ಅಂದರೆ ರಾಜ್ಯದ ಶೇ.93ರಷ್ಟು ಜನರು 'ಅನ್ನಭಾಗ್ಯ' ಯೋಜನೆ ಸೌಲಭ್ಯಕ್ಕೆ ಪಾತ್ರರಾಗಲಿದ್ದಾರೆ. ಕಾಂಗ್ರೆಸ್ ತನ್ನ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದಂತೆ ಒಂದು ರುಪಾಯಿಗೆ ಒಂದು ಕೆಜಿ ಅಕ್ಕಿ ನೀಡುವ ಯೋಜನೆಗೆ ಬುಧವಾರ ಅಧಿಕೃತ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನವೇ ಸಿದ್ದರಾಮಯ್ಯ ಅವರು ಅಗ್ಗದ ಅಕ್ಕಿ ಯೋಜನೆ ಪ್ರಕಟಿಸಿದ್ದರು. ಜೂನ್‌ನಿಂದಲೇ ಆರಂಭವಾಗಬೇಕಿದ್ದ ಈ ಯೋಜನೆ ಒಂದು ತಿಂಗಳ ತಡವಾಗಿ ಪ್ರಾರಂಭವಾಗುತ್ತಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಅನ್ನಭಾಗ್ಯ ಯೋಜನೆಗೆ ಬುಧವಾರ ಚಾಲನೆ ನೀಡಲಿದ್ದಾರೆ. ರಾಜ್ಯದೆಲ್ಲೆಡೆಯೂ ಬುಧವಾರದಿಂದಲೇ ಯೋಜನೆ ಜಾರಿಗೆ ಬರಲಿದ್ದು, ಆಯಾ ನ್ಯಾಯಬೆಲೆ ಅಂಗಡಿಗಳು ಯಾವ ಕಾಲದಲ್ಲಿ ಅಕ್ಕಿ ವಿತರಿಸಲಾಗುತ್ತದೋ ಅಂದಿನಿಂದಲೇ 1ರು.ಗೆ ಒಂದು ಕೆಜಿ ಅಕ್ಕಿ ಖರೀದಿಸಬಹುದು.
ಅಂತ್ಯೋದಯ, ಬಡತನ ರೇಖೆಯಿಂದ ಕೆಳಗಿರುವ ಕಾರ್ಡ್‌ದಾರರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು. ಒಬ್ಬ ಸದಸ್ಯರಿದ್ದರೆ 10 ಕೆಜಿ, 2 ಸದಸ್ಯರಿದ್ದರೆ 20 ಕೆಜಿ ಹಾಗೂ ಇಬ್ಬರಿಗಿಂತ ಹೆಚ್ಚಿನ ಸದಸ್ಯರಿದ್ದರೆ ಪ್ರತಿ ತಿಂಗಳು 30 ಕೆಜಿ ಅಕ್ಕಿ ಪಡೆಯಲಿದ್ದಾರೆ. ಅಂತ್ಯೋದಯ ಕಾರ್ಡ್‌ನಲ್ಲಿ ಸದಸ್ಯರ ಲೆಕ್ಕಾಚಾರ ಇಲ್ಲ. ಆ ಕಾರ್ಡ್‌ಗೆ ಪ್ರತಿ ತಿಂಗಳು 35 ಕೆಜಿ ಅಕ್ಕಿ ನೀಡಲಾಗುತ್ತದೆ. ಬಿಪಿಎಲ್, ಅಂತ್ಯೋದಯದಲ್ಲಿ ಒಟ್ಟು 98,35,701 ಕಾರ್ಡ್‌ಗಳಿದ್ದು, 20,459 ನ್ಯಾಯಬೆಲೆ ಅಂಗಡಿಗಳ ಮೂಲಕ ಯೋಜನೆಯಡಿ ಅಕ್ಕಿ ಖರೀದಿಸಬಹುದು.
ಸಂಪೂರ್ಣ ಸಜ್ಜು: ಅನ್ನಭಾಗ್ಯ ಯೋಜನೆಯಡಿ ಅಕ್ಕಿ ವಿತರಿಸಲು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಂಪೂರ್ಣ ಸಜ್ಜಾಗಿದೆ. ಇದಕ್ಕೆ ಅಗತ್ಯವಿರುವ ಅಕ್ಕಿಯನ್ನು ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಪಡೆದುಕೊಳ್ಳಲು ಈಗಾಗಲೇ ಸೂಚಿಸಲಾಗಿದೆ. ಬಹುತೇಕ ಎಲ್ಲರೂ ಅಕ್ಕಿಯನ್ನು ಪಡೆದುಕೊಂಡಿದ್ದಾರೆ. ಹೀಗಿದ್ದರೂ ರಾಜ್ಯದಲ್ಲಿರುವ 20459 ನ್ಯಾಯಬೆಲೆ ಅಂಗಡಿಗಳಲ್ಲೂ ಬುಧವಾರದಿಂದಲೇ ಒಂದು ರುಪಾಯಿ ಅಕ್ಕಿ ಸಿಗುತ್ತದೆ ಎಂಬ ಖಾತರಿ ಇಲ್ಲ. ಏಕೆಂದರೆ ಈವರೆಗೂ ಇರುವ ವ್ಯವಸ್ಥೆಯಲ್ಲಿ ಒಂದೊಂದು ನ್ಯಾಯಬೆಲೆ ಅಂಗಡಿಯವರು ಒಂದೊಂದು ದಿನ ಅಕ್ಕಿ ವಿತರಿಸುತ್ತಾರೆ. ಹೀಗಾಗಿ 10ನೇ ತಾರೀಖಿನಿಂದ ಹಿಡಿದು 30ರವರೆಗೂ ತಿಂಗಳ ಪಡಿತರ ವಿತರಣೆಯಾಗುತ್ತದೆ. ಅಗ್ಗದ ಅಕ್ಕಿ ಯೋಜನೆ ಜೂನ್‌ನಿಂದಲೇ ಪ್ರಾರಂಭವಾಗಬೇಕಿತ್ತು. ಆಗ ಯೋಜನೆ ಪ್ರಾರಂಭವಾಗಿದ್ದರೆ ಅಕ್ಕಿ ಕೊರತೆ ಹಾಗೂ ಖರೀದಿ ಸಮಸ್ಯೆಯನ್ನು ರಾಜ್ಯ ಸರ್ಕಾರ ಎದುರಿಸಬೇಕಾಗಿತ್ತು. ಈಗ ಯೋಜನೆ ಜಾರಿ ಮಾಡುವ ಮೂಲಕ ಹೊರಗಡೆಯಿಂದ ಅಕ್ಕಿ ಖರೀದಿ ಮಾಡದೆಯೇ ನಿರ್ವಹಣೆ ಮಾಡುತ್ತಿದೆ. ಸರ್ಕಾರದ ದಾಸ್ತಾನಿನಲ್ಲಿರುವ ಅಕ್ಕಿ, ಕೇಂದ್ರ ಸರ್ಕಾರ ನೀಡಿರುವ 20 ಸಾವಿರ ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಸೇರಿದಂತೆ ಜುಲೈ ತಿಂಗಳಿಗೆ ಅಗತ್ಯ ವಿರುವ 2.78 ಮೆಟ್ರಿಕ್ ಟನ್ ಅಕ್ಕಿ ಸರಿಯಾಗುತ್ತದೆ. ಹೀಗಾಗಿ, ಜುಲೈ ತಿಂಗಳಲ್ಲಿ ಅನ್ನಭಾಗ್ಯ ಯೋಜನೆಗೆ ಖರೀದಿಸುವ ಪ್ರಮೇಯವೇ ಇಲ್ಲ.
ಅಕ್ಕಿ ಖರೀದಿ: ಆಗಸ್ಟ್ ತಿಂಗಳಿನಲ್ಲಿ ಅಕ್ಕಿ ನೀಡುವ ಸಂದರ್ಭಕ್ಕೆ ಖರೀದಿ ಅಗತ್ಯವಾಗುತ್ತದೆ. ಇದಕ್ಕಾಗಿ ಛತ್ತೀಸ್‌ಗಢದಿಂದ ಖರೀದಿಸುವ ಪ್ರಕ್ರಿಯೆಗೆ ಸರ್ಕಾರ ಈಗಾಗಲೇ ಚಾಲನೆ ನೀಡಿದ್ದು, ಒಪ್ಪಂದಕ್ಕೆ ಸಹಿ ಹಾಕುವುದಷ್ಟೇ ಬಾಕಿ ಉಳಿದಿದೆ. ಇದಲ್ಲದೆ, ಟೆಂಡರ್ ಮೂಲಕವೂ ಸ್ಪರ್ಧಾತ್ಮಕ ದರದಲ್ಲಿ ಅಕ್ಕಿ ಖರೀದಿಸಲು ನಿರ್ಧರಿಸಿದೆ. ಇದಲ್ಲದೆ, ಕೇಂದ್ರ ಸರ್ಕಾರದ ಆಹಾರ ಭದ್ರತೆ ಅಧಿಸೂಚನೆಯಿಂದಲೂ ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಅಕ್ಕಿ ಬರುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರ ಸುಮಾರು 4500 ಕೋಟಿ ಹೆಚ್ಚುವರಿ ಹೊರೆ ಹಾಕಿಕೊಂಡು ಅನ್ನಭಾಗ್ಯ ಯೋಜನೆ ಜಾರಿ ಮಾಡಿದೆ. ಅಗತ್ಯವಿರುವ 2.78 ಮೆಟ್ರಿಕ್ ಟನ್ ಅಕ್ಕಿಯಲ್ಲಿ ಕೇಂದ್ರ ಸರ್ಕಾರ 1.77 ಮೆಟ್ರಿಕ್ ಟನ್ ಅಕ್ಕಿ ನೀಡುತ್ತಿದೆ. ಈ ತಿಂಗಳು ಹೆಚ್ಚುವರಿಯಾಗಿ 20 ಸಾವಿರ ಮೆಟ್ರಿಕ್ ಟನ್ ಅಕ್ಕಿ ನೀಡಿದೆ. ಹೀಗಾಗಿ ಈ ಬಾರಿ ಯಾವುದೇ ರೀತಿಯ ಸಮಸ್ಯೆ ಇಲ್ಲದೆ ಅಕ್ಕಿ ವಿತರಣೆಯಾಗುವ ಲಕ್ಷಣಗಳಿವೆ. ಆದರೆ, ಆಗಸ್ಟ್‌ನಿಂದ ಅಕ್ಕಿ ಖರೀದಿಯಾಗದೆ ಅನ್ನಭಾಗ್ಯ ಯೋಜನೆ ಸಂಪೂರ್ಣಗೊಳ್ಳುವುದಿಲ್ಲ.
ಅಂತ್ಯೋದಯ ಹಾಗೂ ಬಿಪಿಎಲ್ ಕಾರ್ಡ್‌ಗಳ ಜಿಲ್ಲಾವಾರು ವಿವರ
ಜಿಲ್ಲೆ ಅಂತ್ಯೋದಯ ಬಿಪಿಎಲ್
ಬಾಗಲಕೋಟೆ 46,673 2,64,180
ಬೆಂಗಳೂರು ನಗರ 30,116 6,91,411
ಬೆಂಗಳೂರು ಗ್ರಾ. 14,659 1,74,793
ಬೆಳಗಾವಿ 83,361 6,48,853
ಬಳ್ಳಾರಿ 63,912 3,03,517
ಬೀದರ್ 40,811 2,45,534
ಬಿಜಾಪುರ 46,880 2,96,453
ಚಾಮರಾಜನಗರ 35,820 2,03,059
ಚಿಕ್ಕಮಗಳೂರು 22,922 1,99,140
ಚಿತ್ರದುರ್ಗ 43,574 2,98,022
ಚಿಕ್ಕಬಳ್ಳಾಪುರ 28,775 2,39,584
ದಕ್ಷಿಣ ಕನ್ನಡ 21,350 1,58,457
ದಾವಣಗೆರೆ 50,885 3,33,830
ಧಾರವಾಡ 30,407 2,78,816
ಗದಗ 29,553 1,72,797
ಗುಲ್ಬರ್ಗಾ 63,717 4,04,599
ಹಾಸನ 23,795 3,63,412
ಹಾವೇರಿ 47,882 2,61,407
ಕೊಡಗು 9,672 68,719
ಕೋಲಾರ 30,305 2,68,061
ಕೊಪ್ಪಳ 38,256 2,04,131
ಮಂಡ್ಯ 35,108 3,74,364
ಮೈಸೂರು 51,097 5,47,736
ರಾಯಚೂರು 54,342 2,45,190
ರಾಮನಗರ 19,056 2,15,318
ಶಿವಮೊಗ್ಗ 38,717 2,69,569
ತುಮಕೂರು 50,286 4,77,783
ಉಡುಪಿ 18,513 95,904
ಉತ್ತರ ಕನ್ನಡ 16,321 2,18,381
ಯಾದಗಿರಿ 30,009 1,66,126
ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊರತೆ ಇಲ್ಲ. ಜುಲೈ 10ರಿಂದ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಈ ಯೋಜನೆ ಆರಂಭಗೊಳ್ಳುತ್ತದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಯೋಜನೆಗೆ ನಾನು ಅಧಿಕೃತ ಚಾಲನೆ ನೀಡಲಿದ್ದೇನೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಬಹುತೇಕ ಎಲ್ಲ ನ್ಯಾಯಬೆಲೆ ಅಂಗಡಿಯಲ್ಲಿ ಅಕ್ಕಿ ಲಭ್ಯ. ಆದರೆ, ಈವರೆಗೂ ಇರುವ ವ್ಯವಸ್ಥೆಯಲ್ಲಿ ಒಂದೊಂದು ನ್ಯಾಯಬೆಲೆ ಅಂಗಡಿಯವರು ಒಂದೊಂದು ದಿನ ಅಕ್ಕಿ ವಿತರಿಸುತ್ತಾರೆ. ಹೀಗಾಗಿ, ಯಾರೂ ಆತಂಕ ಪಡಬೇಕಿಲ್ಲ. ಜುಲೈ ತಿಂಗಳ ಪಡಿತರದಿಂದಲೇ ಒಂದು ಕೆಜಿ ಅಕ್ಕಿ ಒಂದು ರುಪಾಯಿಗೆ ಸಿಗುತ್ತದೆ. ಈ ಯೋಜನೆ ನಿರಂತರ.
- ದಿನೇಶ್ ಗುಂಡೂರಾವ್, ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ರಾಜ್ಯ ಸಚಿವ
ಹೆಚ್ಚಾಯ್ತು ಜನಸಂಖ್ಯೆ
ರಾಜ್ಯದಲ್ಲಿ ಲಕ್ಷಾಂತರ ಬೋಗಸ್ ಬಿಪಿಎಲ್ ಕಾರ್ಡ್‌ಗಳಿರುವುದನ್ನು ಅಂಕಿ- ಅಂಶಗಳೇ ಸ್ಪಷ್ಪಪಡಿಸುತ್ತವೆ. ರಾಜ್ಯದಲ್ಲಿ ಅಂತ್ಯೋದಯ ಹಾಗೂ ಬಿಪಿಎಲ್‌ಕಾರ್ಡ್‌ಗಳ ಸಂಖ್ಯೆ 98,35,701. ಬಡತನ ರೇಖೆಗಿಂತ ಮೇಲಿರುವ (ಎಪಿಎಲ್) ಕಾರ್ಡ್‌ಗಳ ಸಂಖ್ಯೆ 35,26,773. ಅನ್ನಭಾಗ್ಯ ಯೋಜನೆ ಅಂದಾಜಿನ ಪ್ರಕಾರ 5.7 ಕೋಟಿ ಜನರು ಫಲಾನುಭವಿಗಳು. ಇದರಲ್ಲಿ ಎಪಿಎಲ್ ಕಾರ್ಡ್‌ನಲ್ಲಿರುವವರು ಸೇರಿಲ್ಲ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿರುವ 6.11 ಕೋಟಿ ಜನರಿದ್ದಾರೆ. ಬಿಪಿಎಲ್ ಹಾಗೂ ಅಂತ್ಯೋದಯ ವ್ಯಾಪ್ತಿಯಲ್ಲೇ 5.7ಕೋಟಿ ಜನರಿದ್ದರೆ. ಇನ್ನು ಅದಕ್ಕಿಂತ ಮೇಲಿರುವ ಜನರು ಕೇವಲ 41 ಲಕ್ಷ ಮಾತ್ರವೇ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ದೊರೆತಿಲ್ಲ. ನಕಲಿ ಅಥವಾ ಬೋಗಸ್ ಬಿಪಿಎಲ್ ಕಾರ್ಡ್‌ಗಳು ರದ್ದಾದಾಗ ಮಾತ್ರ 'ಅನ್ನಭಾಗ್ಯ'ಕ್ಕೆ ನೈಜ ಫಲಾನುಭವಿಗಳು ಅರ್ಹರಾಗುತ್ತಾರೆ.
- ಒಟ್ಟು ಬಿಪಿಎಲ್ ಕಾರ್ಡ್‌ಗಳು: 87,00,740
- ಒಬ್ಬರೇ ಸದಸ್ಯರಿರುವ ಕಾರ್ಡ್‌ಗಳು: 3,60,200
- ಇಬ್ಬರು ಸದಸ್ಯರಿರುವ ಕಾರ್ಡ್‌ಗಳು: 8,30,742
- ಇಬ್ಬರಿಗಿಂತ ಹೆಚ್ಚು ಸದಸ್ಯರಿರುವ ಕಾರ್ಡ್: 75,09,798
- ಅಂತ್ಯೋದಯ ಕಾರ್ಡ್‌ಗಳು: 11,34,96
- ಒಬ್ಬ ಸದಸ್ಯನ ಕಾರ್ಡ್‌ಗೆ ತಿಂಗಳಿಗೆ: 10 ಕೆಜಿ ಅಕ್ಕಿ
- ಎರಡು ಕಾರ್ಡ್‌ಗೆ ತಿಂಗಳಿಗೆ: 20 ಕೆಜಿ ಅಕ್ಕಿ
- ಎರಡಕ್ಕಿಂತ ಹೆಚ್ಚಿರುವ ಕಾರ್ಡ್‌ಗೆ: 30 ಕೆಜಿ ಅಕ್ಕಿ
- ಅಂತ್ಯೋದಯ ಕಾರ್ಡ್‌ಗೆಳ: 35 ಕೆಜಿ ಅಕ್ಕಿ
ಒಟ್ಟು ಫಲಾನುಭವಿಗಳು 5.7 ಕೋಟಿ
ಅಗತ್ಯವಿರುವ ಅಕ್ಕಿ 2,78,428 ಮೆಟ್ರಿಕ್ ಟನ್
ರಾಜ್ಯ ಸರ್ಕಾರಕ್ಕೆ ಹೆಚ್ಚುವರಿ ಹೊರೆ 4500 ಕೋಟಿ
ಒಟ್ಟು ನ್ಯಾಯಬೆಲೆ ಅಂಗಡಿಗಳು 20,459