Friday, July 26, 2013

ಸರ್ಕಾರಿ ಭೂಮಿ ಒತ್ತು'ವರಿ'-8 ವಿ. ಬಾಲಸುಬ್ರಮಣಿಯನ್ ಸಂದರ್ಶನ



ಕನ್ನಡಪ್ರಭದಲ್ಲಿ ಪ್ರಕಟವಾದ ಲೇಖನ: 22-07-2013

ಭೂ ಒತ್ತುವರಿಗೆ ರಾಜಕಾರಣಿಗಳದ್ದೇ ಶ್ರೀರಕ್ಷೆ!

Kere Manjunath ಕೆರೆ ಮಂಜುನಾಥ್

ಬೆಂಗಳೂರು: ರಾಜಕಾರಣಿಗಳು, ಸರ್ಕಾರಿ ನೌಕರರು ಹಾಗೂ ಭೂಮಾಫಿಯಾದವರೇ ರಾಜ್ಯದಲ್ಲಿ ಸರ್ಕಾರಿ ಭೂಮಿ ಒತ್ತುವರಿಗೆ ಪ್ರಮುಖ ಕಾರಣೀಭೂತರು.

ರಾಜಕಾರಣಿಗಳು ಅವರು ಯಾವುದೇ ಪಕ್ಷವಾಗಿರಲಿ ಅವರೇ ಭೂ ಒತ್ತುವರಿಯ ಪ್ರಮುಖ ಪಾತ್ರಧಾರಿಗಳು. ಅವರ ಜತೆಗೆ ಭೂ ಮಾಫಿಯಾ. ಬೆಂಗಳೂರು, ಹುಬ್ಬಳಿ-ಧಾರವಾಡ, ಮೈಸೂರು, ಗುಲ್ಬರ್ಗ, ಮಂಗಳೂರಲ್ಲಿ ಭೂಮಿ ಮೌಲ್ಯ ಬಹಳ ಇದೆ. ಭೂಮಾಫಿಯಾದವರು ರಾಜಕಾರಣಿಗಳಿಂದ ರಕ್ಷಣೆ ಪಡೆಯುತ್ತಾರೆ. ಅಧಿಕಾರಿಗಳಿಂದ ಕೆಲಸ ಮಾಡಿಸುತ್ತಾರೆ. ಅಪಾರ್ಟ್‌ಮೆಂಟ್ ಕಟ್ಟಿಸುತ್ತಾರೆ. ಅದರಲ್ಲಿ ಒಂದೆರಡು ಫ್ಲ್ಯಾಟ್‌ಗಳು ಶಾಸಕರಿಗೇ ಕೊಟ್ಟುಬಿಡುತ್ತಾರೆ...

ಸರ್ಕಾರಿ ಭೂ ಒತ್ತುವರಿ ತೆರವು ಮತ್ತು ಸಂರಕ್ಷಣೆ ಕಾರ್ಯಪಡೆಯ ಮಾಜಿ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಅವರ ನೇರ ನುಡಿಗಳಿವು. ಸರ್ಕಾರಿ ಭೂ ಒತ್ತುವರಿ ಬಗ್ಗೆ ಕನ್ನಡಪ್ರಭದಲ್ಲಿ ಪ್ರಕಟವಾಗುತ್ತಿರುವ ಒತ್ತು'ವರಿ' ಸರಣಿ ಕೆಲವರ ಕಣ್ಣನ್ನು ತೆರೆಸಿದೆ. ಅದರಂತೆ ರಾಜಕಾರಣಿಗಳು ಹಾಗೂ ಅಧಿಕಾರಿಗಳ ಕಣ್ಣೂ ತೆರೆಯಬೇಕು ಎಂದು ವಿಶೇಷ ಸಂದರ್ಶನದಲ್ಲಿ ಆಶಿಸಿದ್ದಾರೆ.

ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಮತ್ತೊಂದು ಸದನ ಸಮಿತಿ ಬೇಡ. ಎ.ಟಿ. ರಾಮಸ್ವಾಮಿ ಜಂಟಿ ಸದನ ಸಮಿತಿ ವರದಿ ಅನುಷ್ಠಾನ ಸೇರಿದಂತೆ ರಾಜ್ಯದ ಎಲ್ಲೆಡೆ ಒತ್ತುವರಿ ತೆರವಿಗೆ ಕಾರ್ಯಪಡೆಯನ್ನೇ ರಚಿಸುತ್ತೇವೆ ಎಂದು 2009ರಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸದನಕ್ಕೆ ತಿಳಿಸಿದ್ದರು. ಆಗ, ಮುಖ್ಯಕಾರ್ಯದರ್ಶಿ ಕಾರ್ಯಪಡೆ ಅಧ್ಯಕ್ಷರಾಗಬೇಕಿತ್ತು. ಅವರು ಕಾರ್ಯಒತ್ತಡದಿಂದ ಬೇಡ ಎಂದರು. ಜಂಟಿ ಸದನ ಸಮಿತಿಗೆ ಸಲಹೆಗಾರನಾಗಿದ್ದ ನನ್ನನ್ನೇ ಅಧ್ಯಕ್ಷನಾಗು ಎಂದರು. ಸೀರಿಯಸ್ ಆಗಿದ್ದರೆ ಮಾತ್ರ ನಾನು ಒಪ್ಪುತ್ತೇನೆ. ಇಲ್ಲ ಅಂದ್ರೆ ಕಾರ್ಯಪಡೆ ಮಾಡಿ ಉಪಯೋಗವಿಲ್ಲ. ಹಿಂದಿನ ಕಾರ್ಯಪಡೆಗಳಂತೆ ಹಳತಾಗುತ್ತದೆ ಅಷ್ಟೇ ಎಂದೆ. ನನಗೇ ಸರ್ಕಾರಿ ಆದೇಶ ತಯಾರು ಮಾಡಲು ಹೇಳಿದರು. ಅದರಂತೆ ಕಾರ್ಯಪಡೆ ತಯಾರಾಯಿತು. ಆದರೆ, ಒಂದು ಕಡೆ ಕಾರ್ಯಪಡೆ ರಚಿಸಿದ ಸಿಎಂ , ಮತ್ತೊಂದು ಕಡೆ ಅದರ ಕೆಲಸ ನಿಲ್ಲಿಸಿದರು.

ಕಾರ್ಯಪಡೆ 19 ತಿಂಗಳು ಕೆಲಸ ಮಾಡಿತು. ಕಾಲಾವಧಿ ಕೊಟ್ಟಿರಲಿಲ್ಲ. ಸರ್ಕಾರಿ ಭೂಮಿ ಒತ್ತುವರಿ ತೆರವಾಗುವವರೆಗೂ ಕೆಲಸವಿತ್ತು. ಕಾರ್ಯಪಡೆ ಕೆಲಸ ಮಾಡುವಾಗ ಸರ್ಕಾರದ ಅನೇಕ ನ್ಯೂನತೆಗಳು ಕಂಡು ಬಂದವು.  

ಕಂದಾಯ ಇಲಾಖೆ ಕಾರ್ಯದರ್ಶಿಯವರೇ ಅಕ್ರಮವಾಗಿ ಭೂ ವಿನಿಮಯ, ಹರಾಜು ಮಾಡಿದ್ದರು. ಇದೆಲ್ಲವನ್ನೂ ನಮೂದಿಸಿ ವರದಿ ನೀಡುವುದಕ್ಕೆ ಮುನ್ನವೇ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಆಗ ಅಂದಿನ ಪ್ರಧಾನ ಕಾರ್ಯದರ್ಶಿ ಮಧು ಕ್ರಮಕ್ಕೆ ಮುಂದಾದರು. ಪ್ರತಿಯೊಂದು ಫೈಲೂ ಕಂದಾಯ ಸಚಿವರಿಗೆ ಹೋಗಬೇಕು. ಆಗ ಕಂದಾಯ ಸಚಿವರಾಗಿದ್ದ ಕರುಣಾಕರ ರೆಡ್ಡಿ 'ಬಹಳ ತೊಂದರೆ ಬರ್ತಾ ಇದೆ' ಅಂತ ಹೇಳಿ ಈ ಕಾರ್ಯಪಡೇನೇ ಬೇಡ ಅಂತ ಹೇಳಿ ಜುಲೈ 4, 2011ರಂದು ತೆಗೆದುಹಾಕಿಬಿಟ್ಟರು. ಇದು ತಪ್ಪು. ರಾಜ್ಯದಲ್ಲಿ ಒಟ್ಟು 17 ಕಾರ್ಯಪಡೆಗಳಿವೆ. ಭೂ ಒತ್ತುವರಿ ತೆರವು ಕಾರ್ಯಪಡೆಯನ್ನು ಮಾತ್ರ ತೆಗೆದುಹಾಕಲಾಯಿತು. ಈ ಬಗ್ಗೆ ಎಲ್ಲರಿಗೂ ಪತ್ರ ಬರೆದಿದ್ದೇವೆ. ಆದರೆ ಏನೂ ಆಗಿಲ್ಲ.

ಕಾರ್ಯಪಡೆ ಕಾಲಾವಧಿಯಲ್ಲಿ ಸರ್ಕಾರಿ ಭೂಮಿ ಒತ್ತುವರಿ ಗುರುತಿಸಿದೆವು. ಎಷ್ಟು ಜಮೀನು, ಯಾವ ಜಿಲ್ಲೆ, ತಾಲೂಕು, ಗ್ರಾಮದಲ್ಲಿ ಒತ್ತುವರಿ ಎಷ್ಟು, ಯಾರು ಮಾಡಿದ್ದಾರೆ, ಸರ್ವೆ ನಂಬರ್ ಸಹಿತ ವಿವರ ತಯಾರು ಮಾಡಿದ್ದೇವೆ. ಪ್ರತಿ ಜಿಲ್ಲೆಗೆ ಒಂದರಂತೆ 10 ಸಂಪುಟಗಳ ವರದಿ ನೀಡಿದ್ದೇವೆ. 11 ಲಕ್ಷಕ್ಕೂ ಅಧಿಕ ಎಕರೆ ಭೂ ಒತ್ತುವರಿಯಾಗಿದೆ.

15 ಲಕ್ಷ ಜನರು ಭೂಕಬಳಿಕೆದಾರರು. ಇದು 2011ರ ಜೂನ್ ಅಂತ್ಯದ ಲೆಕ್ಕಾಚಾರ. ಈ ಒತ್ತುವರಿಯ ಮೌಲ್ಯ ಕಾಮನ್ ವೆಲ್ತ್, 2ಜಿ ಸ್ಪೆಕ್ಟ್ರಮ್, ಬಳ್ಳಾರಿ ಗಣಿ ಹಗರಣದ ಮೊತ್ತ ಒಟ್ಟು ಸೇರಿಸಿದರೂ ಸರಿ ಹೊಂದುವುದಿಲ್ಲ. ಈಗ ಸರ್ವೆ ಮಾಡಿದರೆ ನಮ್ಮ ವರದಿಗಿಂತ ದುಪ್ಪಟ್ಟು, ಮೂರು ಪಟ್ಟು ಹೆಚ್ಚು ಒತ್ತುವರಿ ಬಹಿರಂಗವಾಗಬಹುದು.

ಕಾಫಿ ತೋಟಗಳಲ್ಲೇ ಅತಿ ಹೆಚ್ಚು: ಅರಣ್ಯ ಒತ್ತುವರಿಯಲ್ಲಿ ಪ್ರಮುಖವಾಗಿರುವುದು ಪಶ್ಚಿಮ ಘಟ್ಟ. ಚಿಕ್ಕಮಗಳೂರು, ಕಾರವಾರ, ಶಿವಮೊಗ್ಗ, ಕೊಡಗು, ಹಾಸನ ಐದಾರು ಜಿಲ್ಲೆಗಳಲ್ಲಿನ ಕಾಫಿ ತೋಟಗಳಲ್ಲೇ ಅತಿ ಹೆಚ್ಚು. ಕೊಪ್ಪದಲ್ಲಿ ದೊಡ್ಡ ಕಾಫಿ ತೋಟ ಮಾಡಿರುವವರು 10-20ರಿಂದ 200 ಎಕರೆವರೆಗೂ ಒತ್ತುವರಿ ಮಾಡಿದ್ದಾರೆ.

ಅರಣ್ಯ ಇಲಾಖೆ ಕ್ರಮ ಕೈಗೊಂಡಿಲ್ಲ. 15 ದಿನ ಅವಧಿಯಿರುವ ನೋಟಿಸ್‌ನ ನಂತರವೂ ಉತ್ತರ ಬಂದಿಲ್ಲ, ಅಂತಿಮ ಆದೇಶವೂ ಆಗಿಲ್ಲ. ಜಿಲ್ಲಾಧಿಕಾರಿ ಎಲ್ಲರಿಗೂ ನೋಟೀಸ್ ನೀಡಿದಾಗ 2010ರಲ್ಲಿ ಸಂಸದರಾಗಿದ್ದ ಸದಾನಂದಗೌಡ, ಕಾಫಿ ತೋಟದವರೊಂದಿಗೆ ಬಂದು ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು. ಅರ್ಧ, ಒಂದು ಎಕರೆ ಒತ್ತುವರಿ ಮಾಡಿಕೊಂಡವರಿಗೂ ನೋಟೀಸ್ ನೀಡಿ, ಬಹಳ ತೊಂದರೆ ಕೊಡುತ್ತಿದ್ದಾರೆ ಎಂದಿದ್ದರು. ಅರ್ಧ, ಒಂದು ಎಕರೆಯಲ್ಲಿ ಯಾರೂ ಕಾಫಿ ತೋಟ ಮಾಡುವುದಿಲ್ಲ. ಅಂತಹವರ ಹೆಸರು ಹೇಳಿಕೊಂಡ ಬಂದವರೊಂದಿಗೆ ಬಂದ ಸದಾನಂದಗೌಡ, ಮುಖ್ಯಮಂತ್ರಿ ಮೇಲೆ ಪ್ರಭಾವ ಬೀರಿ ಜಿಲ್ಲಾಧಿಕಾರಿಯವರು ಶಾಶ್ವತ ಕ್ರಮ ತೆಗೆದುಕೊಳ್ಳುವಂತಿಲ್ಲ ಎಂಬ ಸೂಚನೆ ನೀಡಿಸಿದರು.

ಇದೇ ಕಾನೂನುಬಾಹಿರ. ಸರ್ಕಾರಿ ಭೂ ಒತ್ತುವರಿ ಬಗ್ಗೆ ಜಿಲ್ಲಾಧಿಕಾರಿ ಅಥವಾ ಅರಣ್ಯಾಧಿಕಾರಿ ನೋಟಿಸ್ ನೀಡಿದ ಮೇಲೆ ಅದನ್ನು ನ್ಯಾಯಾಲಯ ಮಾತ್ರ ತಡೆಯಬಹುದು. ಇದೇ ಮಾನದಂಡವಾಗಿ ಇಡೀ ರಾಜ್ಯದಲ್ಲಿ ಒತ್ತುವರಿ ತೆರವು ನಿಂತುಹೋಯಿತು.

ಅವರಿಂದ ಅಕ್ರಮ, ಇಲ್ಲೇ ಬಂದು ಮಾತನಾಡಲಿ!

ಸರ್ವೆಗೆ ಹೋಗಿದ್ದಾಗ ರಮೇಶ್‌ಕುಮಾರ್ ಎಲ್ಲಿ ಎಂದೆ. ಅವರು ಒಳಗೆ ಕೂತುಕೊಂಡಿದ್ದರು. ಸುಮಾರು 20 ಜನ ಅಧಿಕಾರಿಗಳು ಹೋಗಿದ್ದೆವು. ಅವರು ನಿಮ್ಮನ್ನೇ ಒಳಗೆ ಕರೀತಿದ್ದಾರೆ ಎಂದರು. ಕಾನೂನು ಮುರಿದವರು ಅವರು. ಅವರೇನಾದರೂ ಹೇಳೋದು ಇದ್ರೆ ಅವರು ನಮ್ಮ ಮುಂದೆ ಬಂದು ಹೇಳಬೇಕು. ನಾವು ಒಳಗೆ ಹೋಗಿ ಅವರ ಹತ್ತಿರ ಮಾತನಾಡುವುದಿಲ್ಲ ಎಂದಿದ್ದೆ. 60 ಎಕರೆ ಅರಣ್ಯ ಭೂಮಿ ಒತ್ತುವರಿ ಬಗ್ಗೆ ಅರಣ್ಯ ಇಲಾಖೆ ಸಾಕಷ್ಟು ನೋಟಿಸ್ ಕೊಟ್ಟಿತ್ತು. ಏನೂ ಆಗಿರಲಿಲ್ಲ. ಕೋಲಾರಕ್ಕೆ ಒಳ್ಳೆ ಡಿಸಿಎಫ್ ಬಂದರು. ರತನ್‌ಕುಮಾರ್ ಎಂಬ ಉತ್ತರ ಭಾರತ ಮೂಲದ ಅಧಿಕಾರಿ. ಒತ್ತುವರಿಯನ್ನು ಗಂಭೀರವಾಗಿ ತೆಗೆದುಕೊಂಡರು. ಇದನ್ನು ತೆರವುಗೊಳಿಸಿ ಎಂದು ನೋಟಿಸ್ ನೀಡಿದರು. ಅಪೀಲ್ ಹೋದರು. ರಾಜಕೀಯದ ಪ್ರಭಾವದಿಂದ ಎರಡು ವರ್ಷ ವಿಚಾರಣೆ ನಡೆಯದಂತೆ ನೋಡಿಕೊಂಡರು. ಪ್ರಾಂತೀಯ ಆಯುಕ್ತರ ಒಂದು ಮೀಟಿಂಗ್‌ನಲ್ಲಿ ಡಿಸಿಎಫ್ ರತನ್‌ಕುಮಾರ್ 'ದೊಡ್ಡದೊಡ್ಡವರು ಇದ್ದಾರೆ. ನಾವು ತೆರವು ಮಾಡಲು ಆಗುತ್ತಿಲ್ಲ. ಜಂಟಿ ಸರ್ವೆ ಮಾಡಬೇಕು. ಅದಕ್ಕೆ ಬಿಡುತ್ತಿಲ್ಲ. ನೀವೇ ಬನ್ನಿ' ಎಂದರು. ಆಗ ಅಲ್ಲಿಗೆ ಹೋಗಿ ಪರಿಶೀಲನೆ ಮಾಡಿದ್ದೆವು. ಪೊಲೀಸರ ಸಹಾಯ ಪಡೆದುಕೊಂಡು ಗೇಟ್ ತೆರೆದು ಒಳಗೆ ಹೋದೆವು. ಕಂದಾಯ-ಅರಣ್ಯ ಇಲಾಖೆ ಪ್ರಕ್ರಿಯೆಯಂತೆ ಜಂಟಿ ಸರ್ವೆ ಆಯಿತು. ಅರಣ್ಯ ಭೂಮಿ ಇದೆ ಎಂಬುದು ಆಗಲೂ ಗೊತ್ತಾಯಿತು. ಆ ಒಳ್ಳೆ ಡಿಸಿಎಫ್ ವರ್ಗಾಯಿಸಿಬಿಟ್ಟರು. ಬೇರೆ ಯಾರೋ ಬಂದಿದ್ದಾರೆ. ಅವರೇನು ಕೆಲಸ ಮಾಡುತ್ತಿಲ್ಲ. ಈಗ ಸಿದ್ದರಾಮಯ್ಯ ಬಂದ ಮೇಲೆ ಏನು ಮಾಡುತ್ತಾರೆ ನೋಡಬೇಕು. ರಮೇಶ್‌ಕುಮಾರ್ ಕಾಂಗ್ರೆಸ್ ಎಂಎಲ್‌ಎ ಬೇರೆ. ರಮೇಶ್‌ಕುಮಾರ್ ಒಂದು ಸಲ ಆಫೀಸ್‌ಗೆ ಬಂದಿದ್ರು. ನಾನು ಸುಮಾರು 20 ಜನ ಅಧಿಕಾರಿಗಳೊಂದಿಗೆ ಮೀಟಿಂಗ್ ಮಾಡುತ್ತಿದ್ದೆ. ಈ ಮೀಟಿಂಗ್ ಮಧ್ಯಾಹ್ನ 3 ಗಂಟೆವರೆಗೂ ಆಗುತ್ತದೆ. ಈಗ ಬಂದರೆ ಹೇಗೆ? ಅಪಾಯಿಂಟ್‌ಮೆಂಟ್ ತೆಗೆದುಕೊಂಡು ಬರಲಿ ಎಂದು ಹೇಳಿದ್ದೆ ಅಷ್ಟೇ. ಆಮೇಲೆ ಹೋದವರು ನಂತರ ಬರಲೇ ಇಲ್ಲ. ನಿಜವಾಗಿ ಆದದ್ದು ಇಷ್ಟೇ.

ಶಾಶ್ವತ ಸಮಿತಿ ಇರಲಿ

ಸರ್ಕಾರಿ ಭೂಮಿ ಉಳಿಸಿಕೊಳ್ಳುವ ಉದ್ದೇಶವಿದ್ದರೆ ವಿಧಾನಮಂಡಲದಲ್ಲಿರುವ ಲೆಕ್ಕಪತ್ರ ಸಮಿತಿಯಂತೆ ಶಾಶ್ವತ ಸಮಿತಿ ರಚಿಸಬೇಕು. ಎಲ್ಲ ಪಕ್ಷದವರೂ ಸಮಿತಿಯಲ್ಲಿ ಇರುವುದರಿಂದ ಒಂದು ರೀತಿ ನ್ಯಾಯ ಸಿಗುತ್ತದೆ. ಆದರೆ, ರಮೇಶ್‌ಕುಮಾರ್ ಅವರಂತಹವರೇ ಸದಸ್ಯರಾದರೆ ಏನೂ ಆಗುವುದಿಲ್ಲ. ಇದೆಲ್ಲಕ್ಕಿಂತ ಮೊದಲು ಮುಖ್ಯಮಂತ್ರಿ ಅವರು ಜಿಲ್ಲಾಧಿಕಾರಿ ಅವರಿಗಿರುವ ತಡೆ ಆದೇಶ ತೆರವುಗೊಳಿಸಬೇಕು. ಎಲ್ಲ ಸರ್ಕಾರಿ ಭೂಮಿ ಒತ್ತುವರಿಯನ್ನು ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕು.

ಮ್ಯಾನೇಜ್ ಮಾಡ್ತಾರೆ?

ಕೋಲಾರದ ಶ್ರೀನಿವಾಸಪುರದಲ್ಲಿ ಅರಣ್ಯ ಭೂಮಿ ಒತ್ತುವರಿ ಪರಿಶೀಲನೆಗೆ ಹೋಗುವ ದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗಿದ್ದ ಹತ್ತಾರು ಅಡ್ವೈಸರ್‌ಗಳಲ್ಲಿ ಒಬ್ಬರಾಗಿ ಕಾನೂನು ಸಲಹೆಗಾರ ದಿವಾಕರ್ ನನಗೆ ಫೋನ್ ಮಾಡಿದ್ದರು. 'ಸಾರ್ ತಾವೆಲ್ಲ ಯಾಕೆ ಹೋಗಬೇಕು. ನೀವೆಲ್ಲ ಅತ್ಯಂತ ಸೀನಿಯರ್ ಆಫೀಸರ್ಸ್ ಹೋಗೋದು ಬೇಡ. ಲೋಕಲ್ ಆಫೀಸರ್‌ಗಳೇ ಮ್ಯಾನೇಜ್ ಮಾಡುತ್ತಾರೆ' ಎಂದರು. ನೋಡ್ರಿ, ಲೋಕಲ್ ಆಫೀಸ್‌ನಲ್ಲಿ ಏನೂ ಆಗುತ್ತಿಲ್ಲ ಅಂತಾನೇ ನಾವು ಹೋಗುತ್ತಿರುವುದು ಎಂದೆ. 'ಅದಲ್ಲ ಸಾರ್, ಲಾ ಆ್ಯಂಡ್ ಆರ್ಡರ್ ಪ್ರಾಬ್ಲಂ ಆಗಬಹುದೇನೋ?' ಎಂದರು. ನನ್ನ ಜತೆ ಜಿಲ್ಲಾಧಿಕಾರಿ ಇದ್ದಾರೆ, ಎಸ್ಪಿ ಇದ್ದಾರೆ. ಏನಾದ್ರೂ ಆದರೆ ನೋಡಿಕೊಳ್ಳುತ್ತಾರೆ ಬಿಡಿ ಎಂದೆ.

ಯಾರ್ಯಾರಿಗೋ ಜಮೀನು

ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡಿರುವವರಿಗೆ ಅಥವಾ ಭೂಮಿ ಇಲ್ಲದವರಿಗೆ ಸಕ್ರಮದಲ್ಲಿ ಭೂಮಿ ನೀಡಲಾಗುತ್ತದೆ. ಅಂದು ಶಾಸಕರಾಗಿದ್ದ ಜೀವರಾಜ್ ಚಿಕ್ಕಮಗಳೂರಿನಲ್ಲಿ ಈ ಸಮಿತಿ ಅಧ್ಯಕ್ಷರಾಗಿದ್ದರು. ಅವರ ಅಧ್ಯಕ್ಷತೆಯ ಸಮಿತಿಯಲ್ಲಿ ಯಾರ್ಯಾರಿಗೋ ಭೂಮಿ ಕೊಟ್ಟಿದ್ದಾರೆ. ಪರಿಶಿಷ್ಟರ ಹೆಸರಿನಲ್ಲಿ ಗೌಡರು, ಲಿಂಗಾಯತರಿಗೆಲ್ಲ ಕೊಟ್ಟಿದ್ದಾರೆ. ಇಂತಹ 122 ಪ್ರಕರಣಗಳಿವೆ. ಲೋಕಾಯುಕ್ತರೂ ಇದರ ಬಗ್ಗೆ ಕಾರ್ಯಪಡೆಯಿಂದ ವರದಿ ಕೇಳಿದ್ದರು. ನಾವು ನೀಡಿದ್ದೆವು. ಹಾಸನದ ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣ ಅವರೂ ಇದೇ ರೀತಿ ಮಾಡಿದ್ದಾರೆ.

No comments:

Post a Comment