Sunday, January 31, 2010

ಕೆರೆ ಒತ್ತುವರಿ ತೆರವು; ನಿಯಂತ್ರಣಕ್ಕೆ ಕಾರ್ಯಪಡೆ

ನಿಮ್ಮಲ್ಲಿ ಮಾಹಿತಿ ಇದ್ದರೆ ನೀಡಿ... ಕೆರೆ ಸಂರಕ್ಷಿಸಿ...
ರಾಜ್ಯದಾದ್ಯಂತ ಕೆರೆಗಳ ಒತ್ತುವರಿಯನ್ನು ತೆರವು ಮಾಡಲು ರಾಜ್ಯ ಸರಕಾರ ದೃಢ ಹೆಜ್ಜೆ ಇರಿಸಿದೆ. ಇದಕ್ಕಾಗಿ ಕೆರೆ ಒತ್ತುವರಿ ತಡೆಗೆ ಕಾರ್ಯಪಡೆಯನ್ನು ರಚಿಸಿದೆ. ಕೆರೆಗಳ ಒತ್ತುವರಿ ಬಗ್ಗೆ ನಿಮಗೆ ಮಾಹಿತಿ ಇದ್ದರೆ ಕಾರ್ಯಪಡೆಗೆ ನೀಡಬಹುದು.
ಸರಕಾರಿ ಭೂಮಿ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಪ್ರಕಾರ, ಬೆಂಗಳೂರಿನಲ್ಲಿರುವ 2500 ಎಕರೆ ಕೆರೆ ಪ್ರದೇಶದಲ್ಲಿ 1800 ಎಕರೆ ಒತ್ತುವರಿಯಾಗಿದೆ. ನಗರ ಜಿಲ್ಲೆಯಲ್ಲಿ 962 ಕೆರೆಗಳಿವೆ. ಸುಮಾರು 2400 ಮಂದಿ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ.ಇವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು,ಒತ್ತುವರಿ ಬಗ್ಗೆ ಕೈಪಿಡಿ ಹೊರತರಲು ಕಾರ್ಯಪಡೆ ನಿರ್ಧರಿಸಿದೆ. ಇದಕ್ಕೆ ಮಾಹಿತಿಯನ್ನು ಸಾರ್ವಜನಿಕರೂ ನೀಡಬಹುದು.
ರಾಜ್ಯದಲ್ಲಿ ಸರಕಾರಿ ಭೂಮಿ ಸಂರಕ್ಷಣೆ ಉದ್ದೇಶದಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಬಾಲಸುಬ್ರಮಣಿಯನ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಐಎಎಸ್ ಅಧಿಕಾರಿ ಮಂಜುಳಾ, ಹಿರಿಯ ವಕೀಲ ಎಂ.ಆರ್. ಹೆಗಡೆ, ನಿವೃತ್ತ ಜಿಲ್ಲಾಧಿಕಾರಿ ನಾಯಕ್ ಕಾರ್ಯಪಡೆಯಲ್ಲಿದ್ದಾರೆ. ಎ.ಟಿ. ರಾಮಸ್ವಾಮಿ ಸಮಿತಿ ವರದಿ ಜತೆಗೆ, ಒತ್ತುವರಿ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದೆ.
ಬೆಂಗಳೂರಿನಲ್ಲಿ 35 ಸಾವಿರ ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದೆ. ಪ್ರಥಮ ಹಂತದಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಂದಾಯ ಇಲಾಖೆ ದಾಖಲೆಗಳಲ್ಲಿರುವಂತೆ ಕೆರೆಗಳ ಸರ್ವೆ ಕಾರ್ಯ ಆರಂಭಿಸಲಾಗಿದೆ. ಕೆರೆಗಳ ಹಿಂದಿನ/ಈಗಿನ ಸ್ಥಿತಿ ಹಾಗೂ ಸಮಗ್ರ ಮಾಹಿತಿಯುಳ್ಳ ಕೈಪಿಡಿ ಹೊರತರಲಾಗುತ್ತದೆ.ಸಾರ್ವಜನಿಕರು ಮಾಹಿತಿ ನೀಡಬಹುದು.
ಕೆರೆಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಡಾ.ಅ.ನ. ಯಲ್ಲಪ್ಪ ರೆಡ್ಡಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಚಿತ್ರ ನಿರ್ದೇಶಕಿ ಶಾರದಾ, ನರೇಂದ್ರ, ಲಿಯೊ ಸಲ್ಡಾನಾ ಅವರೊಂದಿಗೆ ಕಾರ್ಯಪಡೆಯ ಸದಸ್ಯರು ಸಭೆ ನಡೆಸಿದರು.ಶ್ರೀ ಯಲ್ಲಪ್ಪರೆಡ್ಡಿಯವರ ಸಲಹೆ ಮೇರೆಗೆ ಈ ಸಭೆಗೆ ನನ್ನನ್ನೂ ಆಹ್ವಾನಿಸಿದ್ದು, ನನಗೆ ಹೆಮ್ಮೆಯ ವಿಚಾರ. ಕೆರೆಗಳ ಸಂರಕ್ಷಣೆಗಾಗಿ ಮಾಹಿತಿ ನೀಡಿ. ನಮ್ಮೊಂದಿಗೆ ನೀವಿರಬೇಕೆಂದು ಶ್ರೀ ಬಾಲಸುಬ್ರಮಣಿಯನ್ ಹೇಳಿದಾಗ, ಅದನ್ನು ಕರ್ತವ್ಯವೆಂದು ಒಪ್ಪಿಕೊಂಡಿದ್ದೇನೆ. ಸಾರ್ವಜನಿಕರೂ ಹಾಗೂ ಪರಿಸರ ಪ್ರೇಮಿಗಳು ಕೆರೆ ಸಂರಕ್ಷಣೆ ಕಾರ್ಯಪಡೆಗೆ ಮಾಹಿತಿ ನೀಡಿ ಸಹಕರಿಸಬೇಕೆಂಬುದು ನನ್ನ ಕೋರಿಕೆ.
ಕರೆ ಮಾಡಿ: 98459 70092 ಅಥವಾ ಇಮೇಲ್ ಮಾಡಿ: keremanju@gmail.com ಅಥವಾ taskforce09@gmail.com

Thursday, January 21, 2010

ಕಾಲಾಪಾನಿ ಮಾಲಿನ್ಯ ನಿಯಂತ್ರಣಕ್ಕೆ ಜೀವಾಣು

ನಗರ ಕಾಲಾಪಾನಿ ಎಂದೇ ಕುಖ್ಯಾತಿ ಗಳಿಸಿರುವ ಹೊಸೂರು ರಸ್ತೆಯ ಮಂಗಮ್ಮನಪಾಳ್ಯದ ಸಮೀಪವಿರುವ ಸೋಮಸಂದ್ರಪಾಳ್ಯ ಕೆರೆಯ ಮಾಲಿನ್ಯ ನಿಯಂತ್ರಣಕ್ಕೆ ಲಕ್ಷಾಂತರ ಜೀವಾಣುಗಳನ್ನು ಬಿಡಲಾಗಿದೆ.
ಬೆಂಗಳೂರಿನ ಅತ್ಯಂತ ದುಸ್ಥಿತಿ ಹಾಗೂ ಅಸಹ್ಯಕರ ಕೆರೆಯಾಗಿರುವ ಸೋಮಸಂದ್ರ ಪಾಳ್ಯ ಕೆರೆಗೆ, ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಹಾಗೂ ಬಾಳೆ ಕಂಪ್ಯೂಟರ್ ಟೆಕ್ನಾಲಜಿ ಅಂಡ್ ಬಯೊ-ಟೆಕ್ನಾಲಜಿ ವತಿಯಿಂದ 'ಇಎಂ ತಂತ್ರಜ್ಞಾನ'ದ ಜೀವಾಣುಗಳನ್ನು ಸೋಮವಾರ ಸಿಂಪಡಿಸಲಾಯಿತು.
ಈ ಜೀವಾಣುಗಳು 'ರಕ್ತ ಬಿಜಾಸುರ'ನಂತೆ ಎರಡೇ ಗಂಟೆಗಳಲ್ಲಿ ದ್ವಿಗುಣವಾಗಿ ಉತ್ಪಾದನೆಯಾಗಲಿವೆ. ಲಕ್ಷ ಜೀವಾಣುಗಳು ಕೆಲವೇ ಗಂಟೆಗಳಲ್ಲಿ ಎರಡು ಲಕ್ಷವಾಗುತ್ತವೆ. ಕೋಟ್ಯಂತರ ಜೀವಾಣುಗಳಾಗಿ ಮಾಲಿನ್ಯ ಹಾಗೂ ಎಲ್ಲ ರೀತಿಯ ಕೊಳಕನ್ನು ನಾಶಮಾಡುತ್ತವೆ. ಅಲ್ಲದೆ, ಕೆರೆಯಿಂದ ಹೊರಬರುವ ದುರ್ವಾಸನೆ ಕೂಡ ನಿವಾರಣೆಯಾಗಲಿದೆ.
ನಗರದ ಪ್ರಮುಖ ಕೆರೆಯಾದ ಅಲಸೂರು ಕೆರೆಗೆ ಇತ್ತೀಚೆಗೆ ಈ ಜೀವಾಣುಗಳನ್ನು ಸಿಂಪಡಿಸಿ, ಅಲ್ಲಿನ ದುರ್ವಾಸನೆಯನ್ನು ದೂರ ಮಾಡಲಾಗಿತ್ತು. ಅಲ್ಲದೆ, ಹಸಿರು ಕೆಸರು ಗದ್ದೆಯಾಗಿದ್ದ ನೀರು ಕೂಡ ತಿಳಿಯಾಗಿತ್ತು. ಇಂತಹದ್ದೇ ಸಿಂಪಡಣೆಯನ್ನು ನಗರದ ಎಲ್ಲ ಕೆರೆಗಳಿಗೂ ಸಿಂಪಡಿಸಿ, ಕೊಳಕುಮುಕ್ತಗೊಳಿಸಲು ಬಿಬಿಎಂಪಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದು ಇನ್ನೂ ಅನುಮತಿ ನೀಡುವ ಹಂತದಲ್ಲೇ ಇದೆ.
ಮಾಲಿನ್ಯ ನಿಯಂತ್ರಣದಲ್ಲಿ ಹಲವು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕ ಬಳಸಲಾಗಿಲ್ಲ. ಈ ಜೀವಾಣುಗಳನ್ನು ಮಾತ್ರ ಸಿಂಪಡಿಸಲಾಗುತ್ತವೆ. ನಮ್ಮ ದೇಹದಲ್ಲಿರುವ ಜೀವಾಣುಗಳಂತೆ ಇವು ತಮ್ಮ ಕಾರ್ಯನಿರ್ವಹಿಸಿ, ಕೊಳಕನ್ನು ತಿನ್ನುತ್ತವೆ. ಇದು ಪರಿಸರಕ್ಕೆ ಪೂರಕ. ತ್ಯಾಜ್ಯವನ್ನೂ ಕಡಿಮೆಗೊಳಿಸಿ, ಗೊಬ್ಬರವನ್ನಾಗಿಸುತ್ತದೆ. ಈ ಸಿಂಪಡಣೆ ಎಲ್ಲ ಕೆರೆಗಳಲ್ಲೂ ಆಗಬೇಕು. ಬಿಬಿಎಂಪಿ ಎಲ್ಲ ರೀತಿಯ ಮಾಲಿನ್ಯ ನಿರ್ಮೂಲನೆಗೆ ಈ ಜೀವಾಣು ದ್ರಾವಣವನ್ನು ಬಳಸಬೇಕು ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಗ್ರಹಿಸಿದರು.
ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಈ ಜೀವಾಣುಗಳ ಸಿಂಪಡಣೆ ಕಾರ್ಯದಲ್ಲಿ ಕೈಜೋಡಿಸಿದೆ. ಈವರೆಗೆ ಬಿಬಿಎಂಪಿ ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಮಾತ್ರ ಅಳವಡಿಸಿಕೊಂಡಿದೆ. ಆದ್ದರಿಂದ, ಉಚಿತವಾಗಿ ಈ ಸಂಸ್ಥೆಗಳು ಜೀವಾಣುಗಳನ್ನು ಸಿಂಪಡಿಸುತ್ತಿದ್ದೇವೆ ಎನ್ನುತ್ತಾರೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಪ್ರೊ. ಲಿಂಗರಾಜು.
ತ್ಯಾಜ್ಯವನ್ನೂ ನಿರ್ವಹಿಸುವ ಈ ಪ್ರಕ್ರಿಯೆಗೆ ಎಲ್ಲೆಡೆ ಮಾನ್ಯತೆ ನೀಡಿ, ಸರಕಾರದ ಮಟ್ಟದಲ್ಲಿ ಚಾಲನೆಗೊಂಡರೆ ಬೆಂಗಳೂರಿನ ಕೆರೆಗಳತ್ತ ಹೋಗುವಾಗ, ಚರಂಡಿ ದಾಟುವಾಗ ಮೂಗುಮುಚ್ಚಿಕೊಳ್ಳುವ ಪ್ರಸಂಗ ಎದುರಾಗುವುದಿಲ್ಲ.
ಏನಿದು ಜೀವಾಣು?
ಕೋಲ್ಕತಾ ಮೂಲದ ಕಂಪನಿ 'ಎಫೆಕ್ಟೀವ್ ಮೈಕ್ರೊಆರ್ಗಾನಿಸಮ್' ಎಂಬ ಈ ಜೀವಾಣುಗಳನ್ನು ಉತ್ಪಾದಿಸಿ, 'ಪ್ಯಾಸೀವ್' ಸ್ಥಿತಿಯಲ್ಲಿ ಅದನ್ನು ಶೇಖರಿಸುತ್ತದೆ. ಈ ಸ್ಥಿತಿಯ ದ್ರಾವಣಕ್ಕೆ ಒಂದು ಕೆಜಿ ಬೆಲ್ಲ ಹಾಗೂ ೨೦ ಲೀಟರ್ ನೀರು ಸೇರಿಸಿ, ಗಾಳಿನಿಯಂತ್ರಕ ಉಪಕರಣದಲ್ಲಿ ಬೆರೆಸಿಡಬೇಕು. ಈ ಪ್ರಕ್ರಿಯೆ ನಂತರ ಜೀವಾಣುಗಳು 'ಆಕ್ಟೀವ್' ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಮಾಲಿನ್ಯ-ಕೊಳಕಿನ ಮೇಲೆ ಸಿಂಪಡಿಸಿದರೆ, ಒಂದು ಗಂಟೆಯೊಳಗೆ ಅಲ್ಲಿನ ದುರ್ವಾಸನೆ ದೂರಾಗುತ್ತದೆ. ಕೆಲವು ಗಂಟೆಗಳಲ್ಲಿ ಜೀವಾಣುಗಳು ದ್ವಿಗುಣಗೊಳ್ಳುತ್ತಿರುತ್ತವೆ. ಮಾಲಿನ್ಯವನ್ನು ಆಕ್ರಮಿಸಿಕೊಳ್ಳುತ್ತವೆ.
ಒಂದು ಲೀಟರ್ ಪ್ಯಾಸೀವ್ ದ್ರಾವಣಕ್ಕೆ 285 ರೂ. ಇದನ್ನು ಚಟುವಟಿಕೆಯ ದ್ರಾವಣವನ್ನಾಗಿಸಿದಾಗ ೨೨ ಲೀಟರ್ ಆಗುತ್ತದೆ. ಆಗ ಒಂದು ಲೀಟರ್‌ಗೆ 35 ರೂ. ವೆಚ್ಚ. ಕೆರೆಗಳ ಮಾಲಿನ್ಯವನ್ನು ಪರಿಶೀಲಿಸಿದ ನಂತರ ಎಷ್ಟು ಸಾವಿರ ಲೀಟರ್ ದ್ರಾವಣ ಸಿಂಪಡಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಕೆರೆಗೆ ೪ರಿಂದ ೫ ಸಾವಿರ ಲೀಟರ್ ದ್ರಾವಣ ಸಿಂಪಡಿಸಿದರೆ, ಒಂದೆರಡು ತಿಂಗಳಲ್ಲಿ ಕೊಳಕು ನಿರ್ಮೂಲನೆ ಆಗುತ್ತದೆ. ನಂತರ ವರ್ಷಗಳಲ್ಲಿ ಒಂದೆರಡು ಸಾವಿರ ಲೀಟರ್ ದ್ರಾವಣವನ್ನು ಎರಡು-ಮೂರು ವರ್ಷಕ್ಕೊಮ್ಮೆ ಸಿಂಪಡಿಸಿದರೆ ಸಾಕು ಎಂದು ಬಾಳೆ ಬಯೊ-ಟೆಕ್ನಾಲಜಿಯ ಅಧ್ಯಕ್ಷ ಚಂದ್ರಶೇಖರ ಬಾಳೆ ವಿವರಿಸುತ್ತಾರೆ.
ಸೊಳ್ಳೆ, ಜಿರಳೆ, ಇಲಿ-ಹೆಗ್ಗಣಗಳೂ ಇದರಿಂದ ನಿರ್ಮೂಲನೆ ಆಗುತ್ತವೆ. ತ್ಯಾಜ್ಯ ಗೊಬ್ಬರವಾಗಲೂ ಇದು ಸಹಕಾರಿ. ಸೊಳ್ಳೆಗಳ ನಿರ್ಮೂಲನೆ ಹಾಗೂ ಚರಂಡಿಗಳ ಕೊಳಕಿಗೆ ರಾಸಾಯನಿಕ ಸಿಂಪಡಿಸುವ ಬದಲು, ಈ ಜೀವಾಣು ದ್ರಾವಣ ಹಾಕಿದರೆ ಮಾಲಿನ್ಯಕ್ಕೆ ತೆರೆ ಬಿದ್ದಂತಾಗುತ್ತದೆ. ಅಲ್ಲದೆ ಪರಿಸರಕ್ಕೂ ಹಾನಿ ಮಾಡದಂತಾಗುತ್ತದೆ.

Sunday, January 17, 2010

ಅರ್ಕಾವತಿ ನದಿ ಪುನಶ್ಚೇತನಕ್ಕೆ ಉನ್ನತಮಟ್ಟದ ಸಮಿತಿ

ಅರ್ಕಾವತಿ ನದಿಯತ್ತ ರಾಜ್ಯ ಸರಕಾರ ಕೊನೆಗೂ ಕಣ್ಣು ತೆರೆದಿದೆ. ಈ ನದಿ ಪುನಶ್ಚೇತನಕ್ಕೆ ಒಂದು ಉನ್ನತ ಮಟ್ಟದ ಸಮಿತಿ ರಚಿಸಿದೆ. ನದಿ ಪುನಶ್ಚೇತನ ಮಾಡುತ್ತೇವೆ ಎಂದು ಕಳೆದ ಆರು ತಿಂಗಳಿಂದ ಹೇಳುತ್ತಿದ್ದ ಮಾತುಗಳು ಬರೀ ಹೇಳಿಕೆಯಾಗಿ ಉಳಿಯದೆ ಜಾರಿ ಆಗಿರುವುದು ಸಂತಸದ ವಿಷಯ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜೀವನದಿಯಾದ ಅರ್ಕಾವತಿ ಪುನಶ್ಚೇತನಕ್ಕೆ ನಾಲ್ವರು ಸಚಿವರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ಸರಕಾರ ರಚಿಸಿದೆ.
ತಿಪ್ಪಗೊಂಡನಹಳ್ಳಿ ಜಲಾನಯನದಲ್ಲಿ ಒಳಹರಿವು ಹೆಚ್ಚಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಅಧಿಕಾರಯುಕ್ತ ಸಮಿತಿ ಬದಲಿಗೆ, ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಅರ್ಕಾವತಿ ನದಿ ಪುನಶ್ಚೇತನ ಉನ್ನತ ಮಟ್ಟ ಸಮಿತಿ ರಚಿಸಲಾಗಿದೆ. ಈ ಸಂಬಂಧ ಜನವರಿ ೧೩ರಂದು ಸರಕಾರಿ ಆದೇಶ ಹೊರಬಿದ್ದಿದೆ.
ನಾಲ್ವರು ಸಚಿವರು ಹಾಗೂ ನಾಲ್ವರು ಶಾಸಕರನ್ನು ಒಳಗೊಂಡ ಸಮಿತಿಯಲ್ಲಿ ಕಂದಾಯ, ನಗರಾಭಿವೃದ್ಧಿ, ಕೃಷಿ, ಅರಣ್ಯ, ಜಲಮಂಡಳಿ, ಜಲಸಂಪನ್ಮೂಲ, ಲೋಕೋಪಯೋಗಿ, ಬಿಎಂಆರ್‌ಡಿಎ, ಗ್ರಾಮಾಂತರ-ರಾಮನಗರ ಜಿಲ್ಲಾಧಿಕಾರಿ ಸೇರಿದಂತೆ ೨೦ ಸದಸ್ಯರಿದ್ದಾರೆ.
ಅರ್ಕಾವತಿ ನದಿಯ ದುಸ್ಥಿತಿ ವಿವರಿಸುವ ’ಅರ್ಕಾವತಿ ಏಕೀ ದುರ್ಗತಿ?’ ಎಂಬ ಲೇಖನ ಮಾಲಿಕೆಯನ್ನು ವಿಜಯ ಕರ್ನಾಟಕ 2009 ಮೇ 25 ಜೂನ್ 12ರವರೆಗೆ 17ದಿನ ಪ್ರಕಟಿಸಿತ್ತು. ಈ ವಿಶೇಷ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಿದಾಗ, ನದಿ ಪುನಶ್ಚೇತನಕ್ಕೆ ಸಮಿತಿ ಅಥವಾ ಪ್ರಾಧಿಕಾರ ರಚಿಸುವ ಭರವಸೆ ನೀಡಿದ್ದರು.
ಇದಾದ ಮೇಲೆ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ನದಿ ಸಂರಕ್ಷಣೆಗೆ ಜನಜಾಗೃತಿಗಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಸೆಪ್ಟೆಂಬರ್ 3ರಿಂದ 8 ರವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಸಂಸದ ಅನಂತಕುಮಾರ್, ಸಚಿವರಾದ ಆರ್. ಅಶೋಕ್, ಸುರೇಶ್‌ಕುಮಾರ್, ರಾಮಚಂದ್ರಗೌಡ, ಪರಿಸರತಜ್ಞರಾದ ಡಾ.ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್ ಭಾಗವಹಿಸಿದ್ದನ್ನು ಸ್ಮರಿಸಬಹುದು.
ಅರ್ಕಾವತಿ ನದಿ ಹಾಗೂ ಇದರ ಉಪನದಿ ಕುಮುದ್ವತಿ ನದಿಗಳನ್ನು ಅವುಗಳ ಮೂಲದಿಂದ ಪುನಶ್ಚೇತನಗೊಳಿಸಿ, ಅವುಗಳ ಹರಿವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಉನ್ನತ ಸಮಿತಿ ಒಳಗೊಂಡಿದೆ. ನದಿ, ಅದರ ಅರಿವು, ಜಲಾನಯನ ಪ್ರದೇಶದ ರಕ್ಷಣೆ, ಒತ್ತುವರಿ ತೆರವು, ಮಾಲಿನ್ಯ ಮುಕ್ತಗೊಳಿಸಲು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಈ ಸಮಿತಿ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.
ಅರ್ಕಾವತಿ ನದಿ ಪುನಶ್ಚೇತನ ಸಮಿತಿ: ಅಧ್ಯಕ್ಷ- ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ; ಸದಸ್ಯರು- ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ, ಸಾರಿಗೆ ಸಚಿವ ಆರ್. ಅಶೋಕ್, ಜಲಮಂಡಳಿ, ವಸತಿ ಖಾತೆ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಶೋಭಾ ಕರಂದ್ಲಾಜೆ, ಜೆ. ನರಸಿಂಹಸ್ವಾಮಿ, ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ನಗರಾಭಿವೃದ್ಧಿ, ಅರಣ್ಯ, ಕೃಷಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಲಾನಯನ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ, ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆ ನಿರ್ದೇಶಕ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು.