Thursday, January 21, 2010

ಕಾಲಾಪಾನಿ ಮಾಲಿನ್ಯ ನಿಯಂತ್ರಣಕ್ಕೆ ಜೀವಾಣು

ನಗರ ಕಾಲಾಪಾನಿ ಎಂದೇ ಕುಖ್ಯಾತಿ ಗಳಿಸಿರುವ ಹೊಸೂರು ರಸ್ತೆಯ ಮಂಗಮ್ಮನಪಾಳ್ಯದ ಸಮೀಪವಿರುವ ಸೋಮಸಂದ್ರಪಾಳ್ಯ ಕೆರೆಯ ಮಾಲಿನ್ಯ ನಿಯಂತ್ರಣಕ್ಕೆ ಲಕ್ಷಾಂತರ ಜೀವಾಣುಗಳನ್ನು ಬಿಡಲಾಗಿದೆ.
ಬೆಂಗಳೂರಿನ ಅತ್ಯಂತ ದುಸ್ಥಿತಿ ಹಾಗೂ ಅಸಹ್ಯಕರ ಕೆರೆಯಾಗಿರುವ ಸೋಮಸಂದ್ರ ಪಾಳ್ಯ ಕೆರೆಗೆ, ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಹಾಗೂ ಬಾಳೆ ಕಂಪ್ಯೂಟರ್ ಟೆಕ್ನಾಲಜಿ ಅಂಡ್ ಬಯೊ-ಟೆಕ್ನಾಲಜಿ ವತಿಯಿಂದ 'ಇಎಂ ತಂತ್ರಜ್ಞಾನ'ದ ಜೀವಾಣುಗಳನ್ನು ಸೋಮವಾರ ಸಿಂಪಡಿಸಲಾಯಿತು.
ಈ ಜೀವಾಣುಗಳು 'ರಕ್ತ ಬಿಜಾಸುರ'ನಂತೆ ಎರಡೇ ಗಂಟೆಗಳಲ್ಲಿ ದ್ವಿಗುಣವಾಗಿ ಉತ್ಪಾದನೆಯಾಗಲಿವೆ. ಲಕ್ಷ ಜೀವಾಣುಗಳು ಕೆಲವೇ ಗಂಟೆಗಳಲ್ಲಿ ಎರಡು ಲಕ್ಷವಾಗುತ್ತವೆ. ಕೋಟ್ಯಂತರ ಜೀವಾಣುಗಳಾಗಿ ಮಾಲಿನ್ಯ ಹಾಗೂ ಎಲ್ಲ ರೀತಿಯ ಕೊಳಕನ್ನು ನಾಶಮಾಡುತ್ತವೆ. ಅಲ್ಲದೆ, ಕೆರೆಯಿಂದ ಹೊರಬರುವ ದುರ್ವಾಸನೆ ಕೂಡ ನಿವಾರಣೆಯಾಗಲಿದೆ.
ನಗರದ ಪ್ರಮುಖ ಕೆರೆಯಾದ ಅಲಸೂರು ಕೆರೆಗೆ ಇತ್ತೀಚೆಗೆ ಈ ಜೀವಾಣುಗಳನ್ನು ಸಿಂಪಡಿಸಿ, ಅಲ್ಲಿನ ದುರ್ವಾಸನೆಯನ್ನು ದೂರ ಮಾಡಲಾಗಿತ್ತು. ಅಲ್ಲದೆ, ಹಸಿರು ಕೆಸರು ಗದ್ದೆಯಾಗಿದ್ದ ನೀರು ಕೂಡ ತಿಳಿಯಾಗಿತ್ತು. ಇಂತಹದ್ದೇ ಸಿಂಪಡಣೆಯನ್ನು ನಗರದ ಎಲ್ಲ ಕೆರೆಗಳಿಗೂ ಸಿಂಪಡಿಸಿ, ಕೊಳಕುಮುಕ್ತಗೊಳಿಸಲು ಬಿಬಿಎಂಪಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದು ಇನ್ನೂ ಅನುಮತಿ ನೀಡುವ ಹಂತದಲ್ಲೇ ಇದೆ.
ಮಾಲಿನ್ಯ ನಿಯಂತ್ರಣದಲ್ಲಿ ಹಲವು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕ ಬಳಸಲಾಗಿಲ್ಲ. ಈ ಜೀವಾಣುಗಳನ್ನು ಮಾತ್ರ ಸಿಂಪಡಿಸಲಾಗುತ್ತವೆ. ನಮ್ಮ ದೇಹದಲ್ಲಿರುವ ಜೀವಾಣುಗಳಂತೆ ಇವು ತಮ್ಮ ಕಾರ್ಯನಿರ್ವಹಿಸಿ, ಕೊಳಕನ್ನು ತಿನ್ನುತ್ತವೆ. ಇದು ಪರಿಸರಕ್ಕೆ ಪೂರಕ. ತ್ಯಾಜ್ಯವನ್ನೂ ಕಡಿಮೆಗೊಳಿಸಿ, ಗೊಬ್ಬರವನ್ನಾಗಿಸುತ್ತದೆ. ಈ ಸಿಂಪಡಣೆ ಎಲ್ಲ ಕೆರೆಗಳಲ್ಲೂ ಆಗಬೇಕು. ಬಿಬಿಎಂಪಿ ಎಲ್ಲ ರೀತಿಯ ಮಾಲಿನ್ಯ ನಿರ್ಮೂಲನೆಗೆ ಈ ಜೀವಾಣು ದ್ರಾವಣವನ್ನು ಬಳಸಬೇಕು ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಗ್ರಹಿಸಿದರು.
ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಈ ಜೀವಾಣುಗಳ ಸಿಂಪಡಣೆ ಕಾರ್ಯದಲ್ಲಿ ಕೈಜೋಡಿಸಿದೆ. ಈವರೆಗೆ ಬಿಬಿಎಂಪಿ ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಮಾತ್ರ ಅಳವಡಿಸಿಕೊಂಡಿದೆ. ಆದ್ದರಿಂದ, ಉಚಿತವಾಗಿ ಈ ಸಂಸ್ಥೆಗಳು ಜೀವಾಣುಗಳನ್ನು ಸಿಂಪಡಿಸುತ್ತಿದ್ದೇವೆ ಎನ್ನುತ್ತಾರೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಪ್ರೊ. ಲಿಂಗರಾಜು.
ತ್ಯಾಜ್ಯವನ್ನೂ ನಿರ್ವಹಿಸುವ ಈ ಪ್ರಕ್ರಿಯೆಗೆ ಎಲ್ಲೆಡೆ ಮಾನ್ಯತೆ ನೀಡಿ, ಸರಕಾರದ ಮಟ್ಟದಲ್ಲಿ ಚಾಲನೆಗೊಂಡರೆ ಬೆಂಗಳೂರಿನ ಕೆರೆಗಳತ್ತ ಹೋಗುವಾಗ, ಚರಂಡಿ ದಾಟುವಾಗ ಮೂಗುಮುಚ್ಚಿಕೊಳ್ಳುವ ಪ್ರಸಂಗ ಎದುರಾಗುವುದಿಲ್ಲ.
ಏನಿದು ಜೀವಾಣು?
ಕೋಲ್ಕತಾ ಮೂಲದ ಕಂಪನಿ 'ಎಫೆಕ್ಟೀವ್ ಮೈಕ್ರೊಆರ್ಗಾನಿಸಮ್' ಎಂಬ ಈ ಜೀವಾಣುಗಳನ್ನು ಉತ್ಪಾದಿಸಿ, 'ಪ್ಯಾಸೀವ್' ಸ್ಥಿತಿಯಲ್ಲಿ ಅದನ್ನು ಶೇಖರಿಸುತ್ತದೆ. ಈ ಸ್ಥಿತಿಯ ದ್ರಾವಣಕ್ಕೆ ಒಂದು ಕೆಜಿ ಬೆಲ್ಲ ಹಾಗೂ ೨೦ ಲೀಟರ್ ನೀರು ಸೇರಿಸಿ, ಗಾಳಿನಿಯಂತ್ರಕ ಉಪಕರಣದಲ್ಲಿ ಬೆರೆಸಿಡಬೇಕು. ಈ ಪ್ರಕ್ರಿಯೆ ನಂತರ ಜೀವಾಣುಗಳು 'ಆಕ್ಟೀವ್' ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಮಾಲಿನ್ಯ-ಕೊಳಕಿನ ಮೇಲೆ ಸಿಂಪಡಿಸಿದರೆ, ಒಂದು ಗಂಟೆಯೊಳಗೆ ಅಲ್ಲಿನ ದುರ್ವಾಸನೆ ದೂರಾಗುತ್ತದೆ. ಕೆಲವು ಗಂಟೆಗಳಲ್ಲಿ ಜೀವಾಣುಗಳು ದ್ವಿಗುಣಗೊಳ್ಳುತ್ತಿರುತ್ತವೆ. ಮಾಲಿನ್ಯವನ್ನು ಆಕ್ರಮಿಸಿಕೊಳ್ಳುತ್ತವೆ.
ಒಂದು ಲೀಟರ್ ಪ್ಯಾಸೀವ್ ದ್ರಾವಣಕ್ಕೆ 285 ರೂ. ಇದನ್ನು ಚಟುವಟಿಕೆಯ ದ್ರಾವಣವನ್ನಾಗಿಸಿದಾಗ ೨೨ ಲೀಟರ್ ಆಗುತ್ತದೆ. ಆಗ ಒಂದು ಲೀಟರ್‌ಗೆ 35 ರೂ. ವೆಚ್ಚ. ಕೆರೆಗಳ ಮಾಲಿನ್ಯವನ್ನು ಪರಿಶೀಲಿಸಿದ ನಂತರ ಎಷ್ಟು ಸಾವಿರ ಲೀಟರ್ ದ್ರಾವಣ ಸಿಂಪಡಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಕೆರೆಗೆ ೪ರಿಂದ ೫ ಸಾವಿರ ಲೀಟರ್ ದ್ರಾವಣ ಸಿಂಪಡಿಸಿದರೆ, ಒಂದೆರಡು ತಿಂಗಳಲ್ಲಿ ಕೊಳಕು ನಿರ್ಮೂಲನೆ ಆಗುತ್ತದೆ. ನಂತರ ವರ್ಷಗಳಲ್ಲಿ ಒಂದೆರಡು ಸಾವಿರ ಲೀಟರ್ ದ್ರಾವಣವನ್ನು ಎರಡು-ಮೂರು ವರ್ಷಕ್ಕೊಮ್ಮೆ ಸಿಂಪಡಿಸಿದರೆ ಸಾಕು ಎಂದು ಬಾಳೆ ಬಯೊ-ಟೆಕ್ನಾಲಜಿಯ ಅಧ್ಯಕ್ಷ ಚಂದ್ರಶೇಖರ ಬಾಳೆ ವಿವರಿಸುತ್ತಾರೆ.
ಸೊಳ್ಳೆ, ಜಿರಳೆ, ಇಲಿ-ಹೆಗ್ಗಣಗಳೂ ಇದರಿಂದ ನಿರ್ಮೂಲನೆ ಆಗುತ್ತವೆ. ತ್ಯಾಜ್ಯ ಗೊಬ್ಬರವಾಗಲೂ ಇದು ಸಹಕಾರಿ. ಸೊಳ್ಳೆಗಳ ನಿರ್ಮೂಲನೆ ಹಾಗೂ ಚರಂಡಿಗಳ ಕೊಳಕಿಗೆ ರಾಸಾಯನಿಕ ಸಿಂಪಡಿಸುವ ಬದಲು, ಈ ಜೀವಾಣು ದ್ರಾವಣ ಹಾಕಿದರೆ ಮಾಲಿನ್ಯಕ್ಕೆ ತೆರೆ ಬಿದ್ದಂತಾಗುತ್ತದೆ. ಅಲ್ಲದೆ ಪರಿಸರಕ್ಕೂ ಹಾನಿ ಮಾಡದಂತಾಗುತ್ತದೆ.

No comments:

Post a Comment