Sunday, January 17, 2010

ಅರ್ಕಾವತಿ ನದಿ ಪುನಶ್ಚೇತನಕ್ಕೆ ಉನ್ನತಮಟ್ಟದ ಸಮಿತಿ

ಅರ್ಕಾವತಿ ನದಿಯತ್ತ ರಾಜ್ಯ ಸರಕಾರ ಕೊನೆಗೂ ಕಣ್ಣು ತೆರೆದಿದೆ. ಈ ನದಿ ಪುನಶ್ಚೇತನಕ್ಕೆ ಒಂದು ಉನ್ನತ ಮಟ್ಟದ ಸಮಿತಿ ರಚಿಸಿದೆ. ನದಿ ಪುನಶ್ಚೇತನ ಮಾಡುತ್ತೇವೆ ಎಂದು ಕಳೆದ ಆರು ತಿಂಗಳಿಂದ ಹೇಳುತ್ತಿದ್ದ ಮಾತುಗಳು ಬರೀ ಹೇಳಿಕೆಯಾಗಿ ಉಳಿಯದೆ ಜಾರಿ ಆಗಿರುವುದು ಸಂತಸದ ವಿಷಯ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜೀವನದಿಯಾದ ಅರ್ಕಾವತಿ ಪುನಶ್ಚೇತನಕ್ಕೆ ನಾಲ್ವರು ಸಚಿವರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ಸರಕಾರ ರಚಿಸಿದೆ.
ತಿಪ್ಪಗೊಂಡನಹಳ್ಳಿ ಜಲಾನಯನದಲ್ಲಿ ಒಳಹರಿವು ಹೆಚ್ಚಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಅಧಿಕಾರಯುಕ್ತ ಸಮಿತಿ ಬದಲಿಗೆ, ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಅರ್ಕಾವತಿ ನದಿ ಪುನಶ್ಚೇತನ ಉನ್ನತ ಮಟ್ಟ ಸಮಿತಿ ರಚಿಸಲಾಗಿದೆ. ಈ ಸಂಬಂಧ ಜನವರಿ ೧೩ರಂದು ಸರಕಾರಿ ಆದೇಶ ಹೊರಬಿದ್ದಿದೆ.
ನಾಲ್ವರು ಸಚಿವರು ಹಾಗೂ ನಾಲ್ವರು ಶಾಸಕರನ್ನು ಒಳಗೊಂಡ ಸಮಿತಿಯಲ್ಲಿ ಕಂದಾಯ, ನಗರಾಭಿವೃದ್ಧಿ, ಕೃಷಿ, ಅರಣ್ಯ, ಜಲಮಂಡಳಿ, ಜಲಸಂಪನ್ಮೂಲ, ಲೋಕೋಪಯೋಗಿ, ಬಿಎಂಆರ್‌ಡಿಎ, ಗ್ರಾಮಾಂತರ-ರಾಮನಗರ ಜಿಲ್ಲಾಧಿಕಾರಿ ಸೇರಿದಂತೆ ೨೦ ಸದಸ್ಯರಿದ್ದಾರೆ.
ಅರ್ಕಾವತಿ ನದಿಯ ದುಸ್ಥಿತಿ ವಿವರಿಸುವ ’ಅರ್ಕಾವತಿ ಏಕೀ ದುರ್ಗತಿ?’ ಎಂಬ ಲೇಖನ ಮಾಲಿಕೆಯನ್ನು ವಿಜಯ ಕರ್ನಾಟಕ 2009 ಮೇ 25 ಜೂನ್ 12ರವರೆಗೆ 17ದಿನ ಪ್ರಕಟಿಸಿತ್ತು. ಈ ವಿಶೇಷ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಿದಾಗ, ನದಿ ಪುನಶ್ಚೇತನಕ್ಕೆ ಸಮಿತಿ ಅಥವಾ ಪ್ರಾಧಿಕಾರ ರಚಿಸುವ ಭರವಸೆ ನೀಡಿದ್ದರು.
ಇದಾದ ಮೇಲೆ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ನದಿ ಸಂರಕ್ಷಣೆಗೆ ಜನಜಾಗೃತಿಗಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಸೆಪ್ಟೆಂಬರ್ 3ರಿಂದ 8 ರವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಸಂಸದ ಅನಂತಕುಮಾರ್, ಸಚಿವರಾದ ಆರ್. ಅಶೋಕ್, ಸುರೇಶ್‌ಕುಮಾರ್, ರಾಮಚಂದ್ರಗೌಡ, ಪರಿಸರತಜ್ಞರಾದ ಡಾ.ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್ ಭಾಗವಹಿಸಿದ್ದನ್ನು ಸ್ಮರಿಸಬಹುದು.
ಅರ್ಕಾವತಿ ನದಿ ಹಾಗೂ ಇದರ ಉಪನದಿ ಕುಮುದ್ವತಿ ನದಿಗಳನ್ನು ಅವುಗಳ ಮೂಲದಿಂದ ಪುನಶ್ಚೇತನಗೊಳಿಸಿ, ಅವುಗಳ ಹರಿವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಉನ್ನತ ಸಮಿತಿ ಒಳಗೊಂಡಿದೆ. ನದಿ, ಅದರ ಅರಿವು, ಜಲಾನಯನ ಪ್ರದೇಶದ ರಕ್ಷಣೆ, ಒತ್ತುವರಿ ತೆರವು, ಮಾಲಿನ್ಯ ಮುಕ್ತಗೊಳಿಸಲು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಈ ಸಮಿತಿ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.
ಅರ್ಕಾವತಿ ನದಿ ಪುನಶ್ಚೇತನ ಸಮಿತಿ: ಅಧ್ಯಕ್ಷ- ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ; ಸದಸ್ಯರು- ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ, ಸಾರಿಗೆ ಸಚಿವ ಆರ್. ಅಶೋಕ್, ಜಲಮಂಡಳಿ, ವಸತಿ ಖಾತೆ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಶೋಭಾ ಕರಂದ್ಲಾಜೆ, ಜೆ. ನರಸಿಂಹಸ್ವಾಮಿ, ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ನಗರಾಭಿವೃದ್ಧಿ, ಅರಣ್ಯ, ಕೃಷಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಲಾನಯನ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ, ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆ ನಿರ್ದೇಶಕ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು.

No comments:

Post a Comment