Sunday, September 26, 2010

ತಿಪ್ಪಗೊಂಡನಹಳ್ಳಿಗೆ 3, ಹೆಸರಘಟ್ಟಕ್ಕೆ 6 ಅಡಿ ನೀರು

ನಗರ ಹಾಗೂ ಸುತ್ತಮುತ್ತ ಮೂರು ದಿನದಿಂದ ಸುರಿಯುತ್ತಿರುವ ಮಳೆಯಿಂದ ಕೆಲವು ಭಾಗಗಳಲ್ಲಿ ಸಮಸ್ಯೆ ಎದುರಾಗಿ ಬೇಸರಕ್ಕೆ ಕಾರಣವಾಗಿದ್ದರೆ, ಮತ್ತೊಂದೆಡೆ ನಗರಕ್ಕೆ ಜಲಮೂಲವಾಗಿರುವ ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟಕ್ಕೆ ಹೆಚ್ಚಿನ ನೀರು ಹರಿದು ಸಂತಸ ಮೂಡಿಸಿದೆ.
ಹೆಸರಘಟ್ಟ ಅಣೆಕಟ್ಟು ಜಲಾನಯನ ಪ್ರದೇಶದಲ್ಲಿ ಶುಕ್ರವಾರ ರಾತ್ರಿ 129.5 ಮಳೆ ಸುರಿದಿದ್ದು, ಶನಿವಾರವೂ ಮಳೆಯಾಗಿತ್ತು. ನೀರಿನ ಹರಿವು ಹೆಚ್ಚಾದ್ದರಿಂದ, ಹೆಸರಘಟ್ಟ ಅಣೆಕಟ್ಟೆಯಲ್ಲಿ 6 ಅಡಿ ನೀರು ತುಂಬಿದೆ. ಅರ್ಕಾವತಿ ನದಿಯ ಹರಿವನ್ನೇ ಅವಲಂಬಿಸಿರುವ ಹೆಸರಘಟ್ಟ ಜಲಾಶಯಕ್ಕೆ ಇದೀಗ ಸುತ್ತಮುತ್ತಲಿನಿಂದ ಮಾತ್ರ ನೀರು ಹರಿದಿರುವುದರಿಂದ 6 ಅಡಿ ತುಂಬಿದೆ. ಇನ್ನೊಂದೆರಡು ದಿನ ಮಳೆ ಹೀಗೆ ಮುಂದುವರಿದರೆ, 10 ಅಡಿ ನೀರು ಸಂಗ್ರಹವಾಗಿ ದಾಖಲೆಯಾಗುವ ಸಾಧ್ಯತೆ ಇದೆ.
ಹೆಸರಘಟ್ಟದಲ್ಲಿ 6 ಅಡಿ ನೀರು ಬಂದಿರುವುದರಿಂದ ಆ ನೀರನ್ನು ಸರಬರಾಜು ಮಾಡಲು ಸಾಧ್ಯವೇನೂ ಇಲ್ಲ. ಆದರೆ, ಈ ಅಣೆಕಟ್ಟೆ ನೀರು ಇಲ್ಲದೆ ಸೊರಗುತ್ತಿದ್ದ ಸಂದರ್ಭದಲ್ಲಿ ಒಂದೇ ದಿನ ಸುಮಾರು ನಾಲ್ಕು ಅಡಿ ನೀರು ಬಂದಿರುವುದು ಸಂತಸಕರ ಎಂದು ಅಣೆಕಟ್ಟೆ ವ್ಯಾಪ್ತಿಯ ನೇತೃತ್ವ ವಹಿಸಿರುವ ಜಲಮಂಡಳಿಯ ಮುಖ್ಯ ಎಂಜಿನಿಯರ್ (ನಿರ್ವಹಣೆ) ಟಿ. ವೆಂಕಟರಾಜು ತಿಳಿಸಿದರು.
ಬೆಂಗಳೂರಿನ ಪಶ್ಚಿಮ ಭಾಗಕ್ಕೆ ಕುಡಿಯುವ ನೀರು ಒದಗಿಸುವ ತಿಪ್ಪಗೊಂಡನಹಳ್ಳಿಗೆ ಜಲಾಶಯಕ್ಕೆ ಶುಕ್ರವಾರ ಒಂದೇ ರಾತ್ರಿ ಸುಮಾರು ಮೂರು ಅಡಿ ನೀರು ಬಂದಿದೆ. ಶುಕ್ರವಾರ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಶಿವಗಂಗೆಯಲ್ಲಿ ಹುಟ್ಟುವ ಅರ್ಕಾವತಿಯ ಉಪನದಿ ಕುಮುದ್ವತಿ ಹರಿವು ಹೆಚ್ಚಾಗಿ ಈ ಸಂಗ್ರಹ ಸಾಧ್ಯವಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನ ಮಟ್ಟ ಸೆ.24 ರಂದು 13.6 ನೀರಿತ್ತು. ಸೆ.26 ಬೆಳಗ್ಗೆ ಈ ಮಟ್ಟ 13.6 ಅಡಿಗೆ ಹೆಚ್ಚಿದೆ. ಶಿವಗಂಗೆ ಸುತ್ತಮುತ್ತ ಮಳೆ ಹೆಚ್ಚಾದ್ದರಿಂದ ನೀರು ಹರಿವು ಹೆಚ್ಚಾಗಿದೆ. ಪ್ರತಿ ದಿನ 18 ದಶಲಕ್ಷ ಲೀಟರ್ ನೀರು ಇಲ್ಲಿಂದ ಪೂರೈಕೆಯಾಗುತ್ತಿದೆ. ವರುಣನ ಕೃಪೆ ಇದ್ದು ಮುಂದಿನ ಒಂದು ವಾರ ಈ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಜಲಾಶಯಕ್ಕೆ ಇನ್ನಷ್ಟು ನೀರು ಬರುತ್ತದೆ. ಇದರಿಂದ ನಗರಕ್ಕೆ ಹೆಚ್ಚಿನ ನೀರು ಪೂರೈಸಬಹುದಾಗಿದೆ ಎಂದು ತಿಪ್ಪಗೊಂಡನಹಳ್ಳಿ ಜಲಾಶಯದ ನೇತೃತ್ವ ವಹಿಸಿರುವ ಜಲಮಂಡಳಿಯ ಅಪರ ಮುಖ್ಯ ಎಂಜಿನಿಯರ್ ರೂಪ್‌ಕುಮಾರ್ ತಿಳಿಸಿದರು.
ತಿಪ್ಪಗೊಂಡನಹಳ್ಳಿ ಹಾಗೂ ಹೆಸರಘಟ್ಟ ಜಲಾಶಯಗಳ ಜಲಮೂಲ ಅರ್ಕಾವತಿ ನದಿ. ಈ ನದಿ ಹರಿಸುವ ಪ್ರಯತ್ನ ಆರಂಭವಾಗಿದ್ದರೂ ಅದಕ್ಕೊಂದು ನಿರ್ದಿಷ್ಟ ರೂಪ ನೀಡುವಲ್ಲಿ ಎಲ್ಲರೂ ವಿಫಲರಾಗಿದ್ದಾರೆ. ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಶಾಸಕ ಮುನಿರಾಜು ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೆ ಪಾದಯಾತ್ರೆ ಮಾಡಿ ನದಿ ಹರಿಸಲು, ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದ್ದರು. ಈ ಪ್ರಯತ್ನಕ್ಕೆ ಸಂಸದ ಅನಂತಕುಮಾರ್ ಸೇರಿದಂತೆ ಸಚಿವರಾದ ಆರ್. ಅಶೋಕ್, ಸುರೇಶ್‌ಕುಮಾರ್ ಶಹಭ್ಬಾಸ್‌ಗಿರಿ ನೀಡಿ, ನದಿ ಪುನಶ್ಚೇತನದ ಭರವಸೆ ನೀಡಿದ್ದರು. ಆದರೆ ಈ ಪ್ರಕ್ರಿಯೆಯಲ್ಲ ಮುಗಿದು ಒಂದು ವರ್ಷವಾದರೂ ಈವರೆಗೆ ಯಾರೂ ನಿರ್ದಿಷ್ಟ ಹೆಜ್ಜೆ ಇರಿಸಿ ಕಾರ್ಯನಿರ್ವಹಿಸದಿರುವುದು ಶೋಚನೀಯ.

Saturday, May 29, 2010

ಅರ್ಕಾವತಿ ನದಿ ಪಾತ್ರ ಶುಚಿಗೆ ಮುಹೂರ್ತ

ಎಲ್ಲ ಒತ್ತುವರಿ ತೆರವುಗೊಳಿಸಲು ಜಲಮಂಡಲಿ ಸಚಿವರ ಕಟ್ಟಪ್ಟಣೆ
ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್‌ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
“ಅರ್ಕಾವತಿ ನದಿ ಪುನಶ್ಚೇತನಕ್ಕೆ ನಾವು ಬದ್ಧರಾಗಿದ್ದೇವೆ. ಒತ್ತುವರಿಯನ್ನು ಸಂಪೂರ್ಣ ರೀತಿಯಲ್ಲಿ ತೆರವುಗೊಳಿಸಲು ಹಾಗೂ ಸಮಗ್ರ ರೀತಿಯಲ್ಲಿ ಕಾಮಗಾರಿ ನಡೆಸಲು ಕೆಲವು ಅಧಿಕಾರಗಳ ಅಗತ್ಯವಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರಿಂದ ಒಪ್ಪಿಗೆ ಪಡೆದು ಸಮಗ್ರವಾಗಿ ಕಾಮಗಾರಿ ಆರಂಭಿಸಲಿದ್ದೇವೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಅರ್ಕಾವತಿ ನದಿ ಪಾತ್ರವನ್ನು ಶುಚಿಗೊಳಿಸುವ ಯೋಜನೆ ನಮ್ಮದಾಗಿದೆ."
-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಲಮಂಡಲಿ, ವಸತಿ ಸಚಿವರು

Thursday, May 6, 2010

ಅರ್ಕಾವತಿ ಹರಿಸಲು ಯಲಹಂಕ ಕೆರೆ ಆಸರೆ

ಬೆಂಗಳೂರಿನ ಜೀವನದಿ ಅರ್ಕಾವತಿ ಹರಿಸುವ ಕಾರ್ಯಕ್ಕೆ ಮೇ 20 ನಂತರ ಚಾಲನೆ ದೊರೆಯಲಿದ್ದು, ಸಾಹಸಕ್ಕೆ ಯಲಹಂಕ ಕೆರೆ ಆಸರೆಯಾಗಲಿದೆ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜೀವನದಿ ಅರ್ಕಾವತಿ ಹೊಳೆ ಹರಿಸಲು ಯಲಹಂಕ ಕೆರೆಯಿಂದ ನೀರು ಪಂಪ್ ಮಾಡುವ ಕಾರ್ಯಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುತ್ತದೆ. ಸುಮಾರು 300 ಎಕರೆ ವಿಸ್ತೀರ್ಣದಲ್ಲಿರುವ ಯಲಹಂಕ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈ ನೀರನ್ನು ನದಿ ಹರಿಸಲು ಬಳಸಿಕೊಳ್ಳುವ ಯೋಜನೆ ರೂಪುಗೊಳ್ಳುತ್ತಿದೆ.
ಅರ್ಕಾವತಿ ನದಿಯನ್ನು ಹರಿಸುವ ಪ್ರಮುಖವಾದ ಯೋಜನೆ ಜಲಮಂಡಳಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಕಷ್ಟು ಆಸಕ್ತಿ ವಹಿಸಿ ರೂಪಿಸುತ್ತಿದ್ದಾರೆ. ಅದಕ್ಕಾಗಿ ಅಗತ್ಯ ಸಂಪನ್ಮೂಲದ ನೆರವೂ ಸರಕಾರದಿಂದ ಒದಗಿಸುವ ಭರವಸೆ ನೀಡಿದ್ದಾರೆ. ಮೊದಲ ಹಂತದಲ್ಲಿ ನೀರು ಪಂಪ್ ಮಾಡುವ ಕಾರ್ಯಕ್ಕೆ ಈ ತಿಂಗಳೇ ಚಾಲನೆ ನೀಡುವ ಗುರಿ ಹೊಂದಿದ್ದಾರೆ.
ಅರ್ಕಾವತಿ ನದಿಗೆ ನಂದಿಬೆಟ್ಟ ಮೂಲದಿಂದಲೂ ತಡೆ ಇದೆ. ಮೂಲದಿಂದಲೇ ಕಾಲುವೆಯನ್ನು ಸರಿಪಡಿಸುವ ಯೋಜನೆ ರೂಪುಗೊಂಡಿದ್ದು, ನದಿ ಪುನಶ್ಚೇತನಕ್ಕೆ ಸಮಿತಿ ರಚನೆಯಾಗಿ ನಾಲ್ಕು ತಿಂಗಳು ಕಳೆದಿದೆ. ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿದ್ದ ಈ ಸಮಿತಿ ಇದೀಗ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿದೆ. ನದಿ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದು, ಇದಕ್ಕಾಗಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆಗಳು ಆರಂಭವಾಗಿವೆ.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದ ನಾಗರಕೆರೆವರೆಗೆ ನದಿ ಹರಿಸುವ ಅಲ್ಪಮಟ್ಟಿಗಿದೆ. ಈ ಕೆರೆ ತುಂಬಿಸಿ ಮುಂದಿನ ಕಾಲುವೆಗಳಲ್ಲಿ ನೀರು ಹರಿಸುವ ಯೋಜನೆ ರೂಪುಗೊಂಡಿದೆ. ಇದಕ್ಕಾಗಿ ಬೆಂಗಳೂರು ಉತ್ತರದಲ್ಲಿರುವ ಯಲಹಂಕ ಕೆರೆಯನ್ನು ಆಯ್ದುಕೊಳ್ಳಲಾಗಿದೆ. ಇಲ್ಲಿಂದ ನೀರನ್ನು ನಾಗರಕೆರೆಗೆ ಪಂಪ್ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ಹೆಸರಘಟ್ಟ ಕೆರೆಗೆ ನೀರು ಹರಿಸುವ ಸಾಹಸ ಮಾಡಲಾಗುತ್ತಿದೆ. ನೀರು ಸಂಸ್ಕರಣೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಸಮಯದಲ್ಲಿ, ಅಂತರ್ಜಲ ಕುಸಿತ ದೊಡ್ಡ ಆತಂಕವಾಗಿದೆ. ಆದ್ದರಿಂದ, ನದಿ ಹರಿಸುವ ಮೂಲಕ ಅಂತರ್ಜಲ ಮಟ್ಟ ಏರಿಸುವ ಉದ್ದೇಶವಿದೆ.
ಯಲಹಂಕದಂತಹ ಬೃಹತ್ ಕೆರೆಯನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂತಹ ದೊಡ್ಡ ಕೆರೆ ಬೆಂಗಳೂರಿನ ಪಕ್ಕದಲ್ಲೇ ಇದ್ದರೂ ನಾವು ನೀರಿಗಾಗಿ ಪರಿತಪಿಸುತ್ತಿದ್ದೇವೆ. ಇಂತಹ ಕೆರೆಗಳನ್ನು ನೀರು ಪೂರೈಕೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಬಳಸಿಕೊಳ್ಳಬಾರದೇಕೆ ಎಂದು ಜಲಮಂಡಳಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕುತೂಹಲದಿಂದ ಕೇಳಿದ್ದಾರೆ. ಈ ಬಗ್ಗೆ ಜಲಮಂಡಳಿ ಸಾಕಷ್ಟು ಯೋಜನೆ ರೂಪಿಸುತ್ತಿದ್ದು, ಈ ನೀರನ್ನು ನಾಗರಕೆರೆಗೆ ಪಂಪ್ ಮಾಡುವ ಯೋಜನೆ ಸಿದ್ಧವಾಗುತ್ತಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಅರ್ಕಾವತಿ ನದಿ ಹರಿಸಬೇಕೆಂದು ಪಟ್ಟು ಹಿಡಿದ್ದಾರೆ. ಆದ್ದರಿಂದ ಮೊದಲ ಹೆಜ್ಜೆಯಾಗಿ ಯಲಹಂಕ ಕೆರೆಯ ನೀರನ್ನೇ ಅರ್ಕಾವತಿ ಹೊಳೆಗೆ ಹರಿಸಲಾಗುತ್ತಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ಅರ್ಕಾವತಿ ನದಿ ಪುನಶ್ಚೇತನ ಸಮಿತಿ ಪ್ರಥಮ ಸಭೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದ ಕೂಡಲೇ ನಡೆಯಲಿದ್ದು, ಈ ಸಭೆಯಲ್ಲೇ ಯಲಹಂಕ ಕೆರೆಯಿಂದ ನೀರು ಹರಿಸುವ ಯೋಜನೆಗೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಅಲ್ಲದೆ, ಪುನಶ್ಚೇತನಕ್ಕೆ ಅಗತ್ಯವಾದ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದಾಗಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಈ ವರ್ಷದ ಮಳೆಗಾಲದಲ್ಲಿ ನಂದಿಬೆಟ್ಟದಿಂದ ನದಿ ಕಾಲುವೆಗಳನ್ನು ಸುಗಮಗೊಳಿಸುವ ಕಾರ್ಯ ನಡೆಯಲಿದೆ. ಮಳೆಗಾಲದಲ್ಲಿ ನೀರು ಹರಿಯಲು ಇರುವ ತಡೆಯನ್ನು ಗುರುತಿಸಿ, ಅದನ್ನು ನಿವಾರಿಸುವ ಯೋಜನೆ ರೂಪಿಸಲಾಗುತ್ತದೆ. ನಂದಿಯಿಂದ ಹೆಸರಘಟ್ಟದವರೆಗೆ ಅರ್ಕಾವತಿ ಹರಿದರೆ, ಅಲ್ಲಿಂದ ತಿಪ್ಪಗೊಂಡನಹಳ್ಳಿವರೆಗೆ ಕಾಲುವೆ ಹಾಗೂ ಸ್ವಚ್ಛತೆ ನಿರ್ವಹಿಸುವ ಜವಾಬ್ದಾರಿ ಹೊರಲು ಜಲಮಂಡಳಿ ಸಿದ್ಧವಿದೆ. ಈ ದಿಸೆಯಲ್ಲೇ ಕಾರ್ಯಪ್ರಗತಿಯಾಗಲಿದೆ.
ಅರ್ಕಾವತಿ ನದಿ ಪುನಶ್ಚೇತನದಿಂದ ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ರೈತರಿಗೆ ನೀರಿನ ಸೆಲೆ ಸಿಗಲಿದೆಯಲ್ಲದೆ, ಅಂತರ್ಜಲ ಹೆಚ್ಚಾಗುವುದರಿಂದ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಏರಲಿದೆ. ಅಲ್ಲದೆ, ಹೆಸರಘಟ್ಟ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿದರೆ ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಅರ್ಕಾವತಿ ನದಿ ಪುನಶ್ಚೇತನ ಕಾರ್ಯ ಶೀಘ್ರ ಆಗಲಿ ಎಂಬುದೇ ಆಶಯ.

Tuesday, April 6, 2010

ಐಟಿಐಆರ್: 12 ಸಾವಿರ ಎಕರೆ ವಶ; 29 ಗ್ರಾಮಗಳು ನೆಲಸಮ

ಅರ್ಕಾವತಿ ಹೊಳೆ ಪ್ರದೇಶ ನಾಶ
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ಜೀವಜಲವಾಗಿರುವ ಅರ್ಕಾವತಿ ನದಿ ಈಗಾಗಲೇ ಅಳಿವಿನ ಅಂಚಿನಲ್ಲಿದ್ದು, ಅದರ ಪುನರುಜ್ಜೀವನಕ್ಕೆ ರಾಜ್ಯ ಬಜೆಟ್‌ನಲ್ಲೇ ಯೋಜನೆಯನ್ನು ರೂಪಿಸಲಾಗಿದೆ. ಇದರ ಬೆನ್ನೆಲ್ಲಿ, ನದಿಯ ಮೂಲ ಪ್ರದೇಶಗಳನ್ನೇ 'ಐಟಿಬಿಆರ್:12000' ಯೋಜನೆಗಾಗಿ ವಶಪಡಿಸಿಕೊಳ್ಳಲಾಗುತ್ತಿದೆ. ಇದರಿಂದ ಅರ್ಕಾವತಿ ನದಿ ಸಂಪೂರ್ಣ ನಾಶವಾಗುವ ಸಂಭವವೇ ಹೆಚ್ಚಾಗಿದೆ.
ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನೀರು ಹರಿದುಬರುವ ಅರ್ಕಾವತಿ ನದಿಪಾತ್ರದ ಸುತ್ತಮುತ್ತಲಿನ 2 ಕಿಮೀ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಕೈಗಾರಿಕೆ ಚಟುವಟಿಕೆ, ಕಾರ್ಖಾನೆಗಳಿರಬಾರದು ಎಂಬ ಅಧಿಸೂಚನೆ 200೩ರಲ್ಲಿ ಹೊರಬಿದ್ದಿದೆ. ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಶಾಸಕರಾದ ಎಸ್.ಆರ್. ವಿಶ್ವನಾಥ್ ಹಾಗೂ ಎಸ್. ಮುನಿರಾಜು ಪಾದಯಾತ್ರೆಯನ್ನೂ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಂಸದರಾದ ಅನಂತಕುಮಾರ್, ಸಚಿವರಾದ ಆರ್. ಅಶೋಕ್, ರಾಮಚಂದ್ರೇಗೌಡ, ಸುರೇಶ್‌ಕುಮಾರ್ ಎಲ್ಲರೂ ಅರ್ಕಾವತಿ ಉಳಿಸುವ ಬಗ್ಗೆ ಭರವಸೆಯನ್ನೂ ನೀಡಿದ್ದಾರೆ. ಆದರೆ ಇದೀಗ ಐಟಿ ಹೂಡಿಕೆ ವಲಯದಿಂದ ನದಿ ನಾಶವಾಗುವ ದಿಕ್ಕಿನತ್ತ ಸಾಗಿದೆ.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲೇ ಸಮಿತಿ ರಚನೆ ಆಗಿದೆ. ಬಿಬಿಎಂಪಿ ಚುನಾವಣೆ ಬಿಜೆಪಿ ಪ್ರಣಾಳಿಕೆಯಲ್ಲಿ ಅರ್ಕಾವತಿ ಹರಿಸುತ್ತೇವೆ ಎಂದಿದ್ದಾರೆ. ಇದೆಲ್ಲ ಕಣ್ಣೊರೆಸುವ ತಂತ್ರವೇ?

ಐಟಿಐಆರ್: 12 ಸಾವಿರ ಎಕರೆ ವಶ; 29 ಗ್ರಾಮಗಳು ನೆಲಸಮ
ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯದ ಸೃಷ್ಟಿಗಾಗಿ ಗ್ರಾಮಾಂತರ ಜಿಲ್ಲೆಯ 29 ಗ್ರಾಮಗಳ ರೈತರು ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ. 12 ಸಾವಿರ ಎಕರೆ ಭೂಮಿಯನ್ನು ಕೆಐಎಡಿಬಿ ಕಸಿದುಕೊಳ್ಳುವ ಎಲ್ಲ ಪ್ರಕ್ರಿಯೆಯನ್ನೂ ಸದ್ಯದಲ್ಲಿಯೇ ಆರಂಭಿಸಲಿದೆ.
ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್) ಕೇಂದ್ರ ಸರಕಾರದ ಸಹಯೋಗದ ಯೋಜನೆಯಾಗಿದ್ದು, ಇದಕ್ಕಾಗಿ 40 ಚದರ ಕಿಲೋಮೀಟರ್ ಭೂಮಿಯ ಅಗತ್ಯವಿದೆ. ಕೃಷಿ ಭೂಮಿ ಹೊರತುಪಡಿಸಿದಂತೆ ಭೂಮಿ ಒದಗಿಸಬೇಕೆಂಬ ಸೂಕ್ತ ನಿರ್ದೇಶನವಿದ್ದರೂ, ನೀರಾವರಿ, ಕೃಷಿ ಹಾಗೂ ನದಿಪಾತ್ರದ ಭೂಮಿಯನ್ನೇ ಸ್ವಾಧೀನಪಡಿಸಿಕೊಳ್ಳಲು ರಾಜ್ಯ ಸರಕಾರ ಸರ್ವಸನ್ನದ್ಧವಾಗಿದೆ.
ಬೆಂಗಳೂರು-ಬಿಐಎಎಲ್ ಕಾರಿಡಾರ್ ವ್ಯಾಪ್ತಿಯಲ್ಲಿ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ನಡುವಿನ ದಾಬಸ್‌ಪೇಟೆಯತ್ತ ಸಾಗುವ 40 ಚದರ ಕಿಲೋ ಮೀಟರ್ ಭೂಮಿ ಐಟಿಐಆರ್ ವಲಯವಾಗಿ ಸೃಷ್ಟಿಯಾಗಲಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ವಾಧೀನಪಡಿಸಿಕೊಂಡ ಭೂಮಿಗಿಂತ ಮೂರು ಪಟ್ಟು ಹೆಚ್ಚು ಭೂಮಿ ಈ ವಲಯಕ್ಕೆ ಸ್ವಾಧೀನವಾಗಲಿದೆ. ರಾಜ್ಯ ಮಂತ್ರಿಮಂಡಲ ಭೂಸ್ವಾಧೀನಕ್ಕೆ ಜನವರಿ ಅಂತ್ಯದಲ್ಲಿ ಅನುಮತಿ ನೀಡಿದೆ. ಚುನಾವಣೆಗಳ ಸಂಬಂಧ ಈ ಪ್ರಕ್ರಿಯೆ ವಿಳಂಬವಾಗಿದ್ದು, ಇದೀಗ ಚುರುಕುಗೊಳ್ಳಲಿದೆ.
ರೈತರ ಭೂಮಿ ಯಾವುದೇ ಕಾರಣಕ್ಕೂ ಸ್ವಾಧೀನ ಪಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಾಗ್ಗೆ ಹೇಳುತ್ತಲೇ ಇರುತ್ತಾರೆ. ಜತೆಗೆ, ರೈತರ ಸಾವಿರಾರು ಎಕರೆ ಭೂಮಿ ವಶಪಡಿಸುವ ಯೋಜನೆಗೆ ಸಹಿಯನ್ನೂ ಮಾಡುತ್ತಿರುತ್ತಾರೆ. ಒಂದು ಕಡೆ ಕಣ್ಣೊರೆಸಿ, ಮತ್ತೊಂದೆಡೆ ಕುತ್ತಿಗೆ ಹಿಸುಕುವ ಪ್ರಕ್ರಿಯೆ ಇದಾಗಿದೆ. ಇದಕ್ಕೆ 'ಐಟಿಐಆರ್:12000' ಯೋಜನೆ ತಾಜಾ ಉದಾಹರಣೆ.
ನಂದಿ ಬೆಟ್ಟದ ತಪ್ಪಲು ಕೂಡ ಈ ಹೂಡಿಕೆ ವಲಯಕ್ಕೆ ವಶವಾಗಲಿರುವುದು ಶೋಚನೀಯ. ಇದಲ್ಲದೆ, ಈಗ ಗುರುತಿಸಿರುವ ಬಹುತೇಕ ಪ್ರದೇಶ ನೀರಾವರಿಯಿಂದ ಕೂಡಿದ್ದ, ಇಲ್ಲಿನ ಜನರು ಕೃಷಿ, ಹೈನುಗಾರಿಕೆಯನ್ನೇ ಅವಲಂಬಿಸಿದ್ದಾರೆ. ನೀರಾವರಿ ಪ್ರದೇಶ ಇದಾಗಿದ್ದು, ತರಕಾರಿ, ದ್ರಾಕ್ಷಿಯನ್ನು ಹೆಚ್ಚಾಗಿ ಬೆಳೆಯಲಾಗುತ್ತದೆ. ಈ ಪ್ರದೇಶಗಳಲ್ಲಿ ಬಹುತೇಕ ಎಲ್ಲ ಮನೆಗಳಲ್ಲೂ ಮೂರ್‍ನಾಲ್ಕು ಹಸುಗಳಿದ್ದು, ಹೈನುಗಾರಿಕೆ ಅಧಿಕವಾಗಿದೆ. ಇದರಿಂದ, ಹಾಲಿನ ಉತ್ಪಾದನೆಯೂ ಹೆಚ್ಚು. ಇವರೆಲ್ಲರನ್ನೂ ಇಲ್ಲಿಂದ ಓಡಿಸುವ ಯೋಜನೆ ಇದಾಗಿದ್ದು, ಗ್ರಾಮಾಂತರ, ನಗರ ಹಾಗೂ ರಾಮನಗರ ಜಿಲ್ಲೆಗಳಿಗೆ ನೀರಿನ ಮೂಲವಾಗಿರುವ ಅರ್ಕಾವತಿ ನದಿಯನ್ನೂ ಸಂಪೂರ್ಣ ನಾಶಪಡಿಸಲಿದೆ.
12 ಸಾವಿರ ಎಕರೆ ಭೂಮಿ ಸ್ವಾಧೀನ ವಿರೋಧಿಸಿ ಅಲ್ಲಲ್ಲಿ ರೈತರು ಸಾಕಷ್ಟು ಹೋರಾಟ ನಡೆಸಿ, ಜಿಲ್ಲಾಧಿಕಾರಿ ಹಾಗೂ ತಹಸೀಲ್ದಾರ್‌ಗೆ ಮನವಿ ಪತ್ರ ಕೊಟ್ಟಿದ್ದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕರಿಗೆ ಈ ಬಗ್ಗೆ ಮನವಿ ಮಾಡಿಕೊಂಡರೂ ಉಪಯೋಗವಾಗಿಲ್ಲ. ಇದೀಗ ರೈತರೆಲ್ಲ ಒಂದುಗೂಡಿದ್ದು, ಸಂಘಟಿತ ಹೋರಾಟ ಮಾಡಲು ಮುಂದಾಗಿದ್ದಾರೆ. ಇದಕ್ಕಾಗಿ ಭೂ ಹೋರಾಟ ಸಮಿತಿ ಜನ್ಮ ತಾಳಿದೆ.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಈ ಭಾಗದ ನೂರಾರು ರೈತರು ತಮ್ಮ ಭೂಮಿ ಕಳೆದುಕೊಂಡಿದ್ದಾರೆ. ಇದೀಗ ಐಟಿಐಆರ್‌ನಿಂದ 29 ಗ್ರಾಮಗಳೇ ನೆಲಸಮವಾಗಲಿವೆ. ಇದು ಈ ಭಾಗದಲ್ಲೇ ಆಗಬೇಕೆ ಎಂಬುದು ಮೂಲ ಪ್ರಶ್ನೆ. ಅಲ್ಲದೆ, ವಸತಿ ಪ್ರದೇಶ ಹಾಗೂ ಟೌನ್‌ಶಿಪ್‌ಗೆ ಹೆಚ್ಚಿನ ಆದ್ಯತೆ ನೀಡುವ ಈ ಯೋಜನೆಯನ್ನು ರಿಯಲ್ ಎಸ್ಟೇಟ್ ದಂಧೆಗಾಗಿಯೇ ಮಾಡಲಾಗುತ್ತಿದೆ. ಅಲ್ಲದೆ, ಹೆಚ್ಚಿನ ಹಣ ತಂದುಕೊಡುವ ಈ ಪ್ರದೇಶವನ್ನೇ ಆಯ್ದುಕೊಳ್ಳಲಾಗಿದೆ ಎಂಬ ಆರೋಪವೂ ಇದೆ. ಇದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.
ಬೆಂಗಳೂರು ಹಾಗೂ ಸುತ್ತಮುತ್ತ ಐಟಿ ಹೆಚ್ಚು ಅಭಿವೃದ್ಧಿಯಾಗಿದೆ. ಇನ್ನು ಮುಂದೆ ಆ ಕ್ಷೇತ್ರದ ಅಭಿವೃದ್ಧಿಗೆ ಇತರೆ ನಗರಗಳೇ ಆದ್ಯತೆ ಎಂದು ಸರಕಾರ ಹೇಳುತ್ತಿದ್ದರೂ, ರಿಯಲ್ ಎಸ್ಟೇಟ್ ದಂಧೆ ಇಲ್ಲೇ ಅಧಿಕ ಹಣ ನೀಡುವುದರಿಂದ ಬೆಂಗಳೂರು ಹೊರವಲಯದಲ್ಲೇ ಮತ್ತೆ ಯೋಜನೆ ಆರಂಭಿಸಲಾಗುತ್ತಿದೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು ಒಕ್ಕಲೆಬ್ಬಿಸಿ, ಅವರ ಅಸ್ತಿತ್ವವನ್ನೇ ಕಸಿದುಕೊಳ್ಳುವ ಇಂತಹ ಯೋಜನೆಗಳ ಅಗತ್ಯವಾದರೂ ಏನು? ಜತೆಗೆ, ಅರಣ್ಯ, ನದಿ ಹಾಗೂ ಜಲಮೂಲಗಳಂತಹ ನೈಸರ್ಗಿಕ ಸಂಪತ್ತನ್ನು ನಾಶಗೊಳಿಸಿ, ಅದರ ಸಮಾಧಿ ಮೇಲೆ ಸೌಧ ಕಟ್ಟಿದರೆ ವಾಯು-ಜಲಕ್ಕೆ ಆಶ್ರಯಿಸುವುದಾದರೂ ಏನನ್ನು? ಈ ಪ್ರಶ್ನೆಗಳಿಗೆ ಯೋಜನೆಗೆ ಕುಮ್ಮಕ್ಕು ನೀಡುತ್ತಿರುವ ಆಡಳಿತ-ಅಧಿಕಾರಿ ವರ್ಗ ಉತ್ತರಿಸಬೇಕು.

ಸ್ವಾಧೀನವಾಗಲಿರುವ ಗ್ರಾಮಗಳು
ದೇವನಹಳ್ಳಿ ತಾಲೂಕು: ವಿಶ್ವನಾಥಪುರ, ಕೊಯಿರಾ, ಮನಗೊಂಡನಹಳ್ಳಿ, ಚಿಕ್ಕ ಓಬನಹಳ್ಳಿ, ಮಾಯಸಂದ್ರ, ರಾಮನಾಥಪುರ, ಅರುವನಹಳ್ಳಿ, ವಾಜರಹಳ್ಳಿ, ಬೈರದೇನಹಳ್ಳಿ, ಗೂಡ್ಲಹಳ್ಳಿ, ಚಿಕ್ಕ ಗೊಲ್ಲಹಳ್ಳಿ, ಚಪ್ಪರದಹಳ್ಳಿ, ದೊಡ್ಡ ಗೊಲ್ಲಹಳ್ಳಿ, ಬೀರಸಂದ್ರ, ರಬ್ಬನಹಳ್ಳಿ, ಮೀಸಗಾನಹಳ್ಳಿ, ತೈಲಗೆರೆ, ಮನಗೊಂಡನಹಳ್ಳಿ, ಸೊಣ್ಣೇನಹಳ್ಳಿ.
ದೊಡ್ಡಬಳ್ಳಾಪುರ ತಾಲೂಕು: ಕೋನಘಟ್ಟ, ನಾಗದೇವನಹಳ್ಳಿ, ಸೊಣ್ಣಪ್ಪನಹಳ್ಳಿ, ಗೋವಿಂದಪುರ, ಶಿವಪುರ ಅಮಾನಿಕೆರೆ, ಶಿವಪುರ, ರಾಜಘಟ್ಟ ಅಮಾನಿಕೆರೆ, ರಾಜಘಟ್ಟ, ದಾಸಗೊಂಡನಹಳ್ಳಿ, ಲಿಂಗನಹಳ್ಳಿ.

ಏನಿದು ಐಟಿಐಆರ್?
ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಸಂಬಂಧಪಟ್ಟ ಸಂಸ್ಥೆಗಳಿಗೆ ಸಮಗ್ರ ಸೌಲಭ್ಯ ಕಲ್ಪಿಸುವ ಯೋಜನೆಯೇ ಮಾಹಿತಿ ತಂತ್ರಜ್ಞಾನ ಹೂಡಿಕೆ ವಲಯ (ಐಟಿಐಆರ್). ಕನಿಷ್ಠ 40 ಚದರ ಕಿಮೀ ಭೂಮಿ ಅಗತ್ಯ. ಕೃಷಿಯೇತರ ಭೂಮಿಗೆ ಪ್ರಾಮುಖ್ಯ ನೀಡಬೇಕು. ಉತ್ಪಾದನಾ ಘಟಕ, ಸಾರ್ವಜನಿಕ ಸೌಲಭ್ಯ, ಸಾಗಣೆ, ವಸತಿ ಪ್ರದೇಶ, ಆಡಳಿತ ಸೇವೆ ಸೇರಿದಂತೆ ಎಲ್ಲ ರೀತಿಯ ಸೌಕರ್ಯಗಳೂ ಇಲ್ಲಿರಬೇಕು. ಸಮಗ್ರ ಟೌನ್‌ಶಿಪ್ ಕೂಡ ಇಲ್ಲಿ ನಿರ್ಮಾಣ ಮಾಡಬಹುದು.
ಕೇಂದ್ರ ಹಾಗೂ ರಾಜ್ಯ ಮಾಹಿತಿ ತಂತ್ರಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಈ ಯೋಜನೆಗೆ ಸಮ್ಮತಿಸಿದ್ದು, ದೊಡ್ಡಬಳ್ಳಾಪುರ, ದೇವನಹಳ್ಳಿಯಿಂದ ದಾಬಸ್‌ಪೇಟೆ ವ್ಯಾಪ್ತಿಯ 12 ಸಾವಿರ ಎಕರೆ ಪ್ರದೇಶವನ್ನು ಗುರುತಿಸಿದ್ದಾರೆ. ಐಟಿಐಆರ್‌ಗೆ ಅಗತ್ಯವಾದ ಭೂಮಿಯನ್ನು ಕರ್ನಾಟಕ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಮೂಲಕ ಸ್ವಾಧೀನಪಡಿಸಿಕೊಳ್ಳಲಿದೆ. ನಂತರ, ಸರಕಾರ, ಖಾಸಗಿ ಸಹಭಾಗಿತ್ವದಡಿ ಕೈಗಾರಿಕೆ ಪ್ರದೇಶವಲ್ಲದೆ ಟೌನ್‌ಶಿಪ್ ನಿರ್ಮಾಣ ಮಾಡಬಹುದು.

Wednesday, February 17, 2010

ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪರಿಸರ

ನಗರಗಳ ಬೆಳವಣಿಗೆ: ಪರಿಸರ ನಾಶ
ಗದಗದಲ್ಲಿ ನಡೆಯುವ ೭೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪರಿಸರ ಕುರಿತ ಗೋಷ್ಠಿಯನ್ನು ಪರಿಸರವಾದಿ ಡಾ. ಅನ ಯಲ್ಲಪ್ಪರೆಡ್ಡಿ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದೆ. ಈ ಗೋಷ್ಠಿಯಲ್ಲಿ "ನಗರಗಳ ಬೆಳವಣಿಗೆ: ಪರಿಸರ ನಾಶ" ಕುರಿತಂತೆ ೨೦ ನಿಮಿಷಗಳ ವಿಚಾರ ಮಂಡಿಸಲು ಸಾಹಿತ್ಯ ಪರಿಷತ್‌ ಅಧ್ಯಕ್ಷ ಶ್ರೀ ನಲ್ಲೂರು ಪ್ರಸಾದ್‌ ಅವರು ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪರಿಸರದ ಬಗ್ಗೆ ವಿಚಾರ ಮಂಡಿಸುವ ಅವಕಾಶ ದೊರೆತಿರುವುದು ನನಗೆ ಹೆಮ್ಮೆಯ ವಿಷಯವೇ ಸರಿ. ನಗರ ಬೆಳವಣಿಗೆ, ಅಭಿವೃದ್ಧಿ ಹಾಗೂ ಅಂತರ್ಜಲ, ಕೆರೆಗಳ ಬಗ್ಗೆ ವಿಷಯವನ್ನು ಮಂಡಿಸಲು ಸಿದ್ಧತೆ ನಡೆಸಿದ್ದೇನೆ. ಈ ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸಿದ್ದೇನೆ.
ಗೋಷ್ಠಿ ಫೆಬ್ರವರಿ ೨೧ರಂದು ಬೆಳಗ್ಗೆ ೯.೩೦ಕ್ಕೆ ನಡೆಯಲಿದೆ. ಸ್ಥಳ: ವಿವೇಕಾನಂದ ಸಭಾಭವನ, ಎಪಿಎಂಸಿ ಆವರಣ.

Sunday, January 31, 2010

ಕೆರೆ ಒತ್ತುವರಿ ತೆರವು; ನಿಯಂತ್ರಣಕ್ಕೆ ಕಾರ್ಯಪಡೆ

ನಿಮ್ಮಲ್ಲಿ ಮಾಹಿತಿ ಇದ್ದರೆ ನೀಡಿ... ಕೆರೆ ಸಂರಕ್ಷಿಸಿ...
ರಾಜ್ಯದಾದ್ಯಂತ ಕೆರೆಗಳ ಒತ್ತುವರಿಯನ್ನು ತೆರವು ಮಾಡಲು ರಾಜ್ಯ ಸರಕಾರ ದೃಢ ಹೆಜ್ಜೆ ಇರಿಸಿದೆ. ಇದಕ್ಕಾಗಿ ಕೆರೆ ಒತ್ತುವರಿ ತಡೆಗೆ ಕಾರ್ಯಪಡೆಯನ್ನು ರಚಿಸಿದೆ. ಕೆರೆಗಳ ಒತ್ತುವರಿ ಬಗ್ಗೆ ನಿಮಗೆ ಮಾಹಿತಿ ಇದ್ದರೆ ಕಾರ್ಯಪಡೆಗೆ ನೀಡಬಹುದು.
ಸರಕಾರಿ ಭೂಮಿ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ವಿ. ಬಾಲಸುಬ್ರಮಣಿಯನ್ ಪ್ರಕಾರ, ಬೆಂಗಳೂರಿನಲ್ಲಿರುವ 2500 ಎಕರೆ ಕೆರೆ ಪ್ರದೇಶದಲ್ಲಿ 1800 ಎಕರೆ ಒತ್ತುವರಿಯಾಗಿದೆ. ನಗರ ಜಿಲ್ಲೆಯಲ್ಲಿ 962 ಕೆರೆಗಳಿವೆ. ಸುಮಾರು 2400 ಮಂದಿ ಕೆರೆ ಒತ್ತುವರಿ ಮಾಡಿಕೊಂಡಿದ್ದಾರೆ.ಇವರ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದ್ದು,ಒತ್ತುವರಿ ಬಗ್ಗೆ ಕೈಪಿಡಿ ಹೊರತರಲು ಕಾರ್ಯಪಡೆ ನಿರ್ಧರಿಸಿದೆ. ಇದಕ್ಕೆ ಮಾಹಿತಿಯನ್ನು ಸಾರ್ವಜನಿಕರೂ ನೀಡಬಹುದು.
ರಾಜ್ಯದಲ್ಲಿ ಸರಕಾರಿ ಭೂಮಿ ಸಂರಕ್ಷಣೆ ಉದ್ದೇಶದಿಂದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ನಿವೃತ್ತರಾಗಿರುವ ಬಾಲಸುಬ್ರಮಣಿಯನ್ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಐಎಎಸ್ ಅಧಿಕಾರಿ ಮಂಜುಳಾ, ಹಿರಿಯ ವಕೀಲ ಎಂ.ಆರ್. ಹೆಗಡೆ, ನಿವೃತ್ತ ಜಿಲ್ಲಾಧಿಕಾರಿ ನಾಯಕ್ ಕಾರ್ಯಪಡೆಯಲ್ಲಿದ್ದಾರೆ. ಎ.ಟಿ. ರಾಮಸ್ವಾಮಿ ಸಮಿತಿ ವರದಿ ಜತೆಗೆ, ಒತ್ತುವರಿ ಬಗ್ಗೆ ಇನ್ನಷ್ಟು ಮಾಹಿತಿ ಕಲೆಹಾಕುತ್ತಿದೆ.
ಬೆಂಗಳೂರಿನಲ್ಲಿ 35 ಸಾವಿರ ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದೆ. ಪ್ರಥಮ ಹಂತದಲ್ಲಿ ಕೆರೆಗಳ ಒತ್ತುವರಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕಂದಾಯ ಇಲಾಖೆ ದಾಖಲೆಗಳಲ್ಲಿರುವಂತೆ ಕೆರೆಗಳ ಸರ್ವೆ ಕಾರ್ಯ ಆರಂಭಿಸಲಾಗಿದೆ. ಕೆರೆಗಳ ಹಿಂದಿನ/ಈಗಿನ ಸ್ಥಿತಿ ಹಾಗೂ ಸಮಗ್ರ ಮಾಹಿತಿಯುಳ್ಳ ಕೈಪಿಡಿ ಹೊರತರಲಾಗುತ್ತದೆ.ಸಾರ್ವಜನಿಕರು ಮಾಹಿತಿ ನೀಡಬಹುದು.
ಕೆರೆಗಳ ಅಭಿವೃದ್ಧಿ ಹಾಗೂ ಒತ್ತುವರಿ ತೆರವು ಬಗ್ಗೆ ಅಭಿಪ್ರಾಯ ಸಂಗ್ರಹಿಸಲು ಡಾ.ಅ.ನ. ಯಲ್ಲಪ್ಪ ರೆಡ್ಡಿ, ಕೆರೆ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಚಿತ್ರ ನಿರ್ದೇಶಕಿ ಶಾರದಾ, ನರೇಂದ್ರ, ಲಿಯೊ ಸಲ್ಡಾನಾ ಅವರೊಂದಿಗೆ ಕಾರ್ಯಪಡೆಯ ಸದಸ್ಯರು ಸಭೆ ನಡೆಸಿದರು.ಶ್ರೀ ಯಲ್ಲಪ್ಪರೆಡ್ಡಿಯವರ ಸಲಹೆ ಮೇರೆಗೆ ಈ ಸಭೆಗೆ ನನ್ನನ್ನೂ ಆಹ್ವಾನಿಸಿದ್ದು, ನನಗೆ ಹೆಮ್ಮೆಯ ವಿಚಾರ. ಕೆರೆಗಳ ಸಂರಕ್ಷಣೆಗಾಗಿ ಮಾಹಿತಿ ನೀಡಿ. ನಮ್ಮೊಂದಿಗೆ ನೀವಿರಬೇಕೆಂದು ಶ್ರೀ ಬಾಲಸುಬ್ರಮಣಿಯನ್ ಹೇಳಿದಾಗ, ಅದನ್ನು ಕರ್ತವ್ಯವೆಂದು ಒಪ್ಪಿಕೊಂಡಿದ್ದೇನೆ. ಸಾರ್ವಜನಿಕರೂ ಹಾಗೂ ಪರಿಸರ ಪ್ರೇಮಿಗಳು ಕೆರೆ ಸಂರಕ್ಷಣೆ ಕಾರ್ಯಪಡೆಗೆ ಮಾಹಿತಿ ನೀಡಿ ಸಹಕರಿಸಬೇಕೆಂಬುದು ನನ್ನ ಕೋರಿಕೆ.
ಕರೆ ಮಾಡಿ: 98459 70092 ಅಥವಾ ಇಮೇಲ್ ಮಾಡಿ: keremanju@gmail.com ಅಥವಾ taskforce09@gmail.com

Thursday, January 21, 2010

ಕಾಲಾಪಾನಿ ಮಾಲಿನ್ಯ ನಿಯಂತ್ರಣಕ್ಕೆ ಜೀವಾಣು

ನಗರ ಕಾಲಾಪಾನಿ ಎಂದೇ ಕುಖ್ಯಾತಿ ಗಳಿಸಿರುವ ಹೊಸೂರು ರಸ್ತೆಯ ಮಂಗಮ್ಮನಪಾಳ್ಯದ ಸಮೀಪವಿರುವ ಸೋಮಸಂದ್ರಪಾಳ್ಯ ಕೆರೆಯ ಮಾಲಿನ್ಯ ನಿಯಂತ್ರಣಕ್ಕೆ ಲಕ್ಷಾಂತರ ಜೀವಾಣುಗಳನ್ನು ಬಿಡಲಾಗಿದೆ.
ಬೆಂಗಳೂರಿನ ಅತ್ಯಂತ ದುಸ್ಥಿತಿ ಹಾಗೂ ಅಸಹ್ಯಕರ ಕೆರೆಯಾಗಿರುವ ಸೋಮಸಂದ್ರ ಪಾಳ್ಯ ಕೆರೆಗೆ, ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಹಾಗೂ ಬಾಳೆ ಕಂಪ್ಯೂಟರ್ ಟೆಕ್ನಾಲಜಿ ಅಂಡ್ ಬಯೊ-ಟೆಕ್ನಾಲಜಿ ವತಿಯಿಂದ 'ಇಎಂ ತಂತ್ರಜ್ಞಾನ'ದ ಜೀವಾಣುಗಳನ್ನು ಸೋಮವಾರ ಸಿಂಪಡಿಸಲಾಯಿತು.
ಈ ಜೀವಾಣುಗಳು 'ರಕ್ತ ಬಿಜಾಸುರ'ನಂತೆ ಎರಡೇ ಗಂಟೆಗಳಲ್ಲಿ ದ್ವಿಗುಣವಾಗಿ ಉತ್ಪಾದನೆಯಾಗಲಿವೆ. ಲಕ್ಷ ಜೀವಾಣುಗಳು ಕೆಲವೇ ಗಂಟೆಗಳಲ್ಲಿ ಎರಡು ಲಕ್ಷವಾಗುತ್ತವೆ. ಕೋಟ್ಯಂತರ ಜೀವಾಣುಗಳಾಗಿ ಮಾಲಿನ್ಯ ಹಾಗೂ ಎಲ್ಲ ರೀತಿಯ ಕೊಳಕನ್ನು ನಾಶಮಾಡುತ್ತವೆ. ಅಲ್ಲದೆ, ಕೆರೆಯಿಂದ ಹೊರಬರುವ ದುರ್ವಾಸನೆ ಕೂಡ ನಿವಾರಣೆಯಾಗಲಿದೆ.
ನಗರದ ಪ್ರಮುಖ ಕೆರೆಯಾದ ಅಲಸೂರು ಕೆರೆಗೆ ಇತ್ತೀಚೆಗೆ ಈ ಜೀವಾಣುಗಳನ್ನು ಸಿಂಪಡಿಸಿ, ಅಲ್ಲಿನ ದುರ್ವಾಸನೆಯನ್ನು ದೂರ ಮಾಡಲಾಗಿತ್ತು. ಅಲ್ಲದೆ, ಹಸಿರು ಕೆಸರು ಗದ್ದೆಯಾಗಿದ್ದ ನೀರು ಕೂಡ ತಿಳಿಯಾಗಿತ್ತು. ಇಂತಹದ್ದೇ ಸಿಂಪಡಣೆಯನ್ನು ನಗರದ ಎಲ್ಲ ಕೆರೆಗಳಿಗೂ ಸಿಂಪಡಿಸಿ, ಕೊಳಕುಮುಕ್ತಗೊಳಿಸಲು ಬಿಬಿಎಂಪಿಗೆ ಮನವಿ ಮಾಡಿಕೊಳ್ಳಲಾಗಿದೆ. ಇದು ಇನ್ನೂ ಅನುಮತಿ ನೀಡುವ ಹಂತದಲ್ಲೇ ಇದೆ.
ಮಾಲಿನ್ಯ ನಿಯಂತ್ರಣದಲ್ಲಿ ಹಲವು ರಾಸಾಯನಿಕಗಳನ್ನು ಬಳಸಲಾಗುತ್ತಿದೆ. ಆದರೆ, ಈ ಪ್ರಕ್ರಿಯೆಯಲ್ಲಿ ಯಾವುದೇ ರಾಸಾಯನಿಕ ಬಳಸಲಾಗಿಲ್ಲ. ಈ ಜೀವಾಣುಗಳನ್ನು ಮಾತ್ರ ಸಿಂಪಡಿಸಲಾಗುತ್ತವೆ. ನಮ್ಮ ದೇಹದಲ್ಲಿರುವ ಜೀವಾಣುಗಳಂತೆ ಇವು ತಮ್ಮ ಕಾರ್ಯನಿರ್ವಹಿಸಿ, ಕೊಳಕನ್ನು ತಿನ್ನುತ್ತವೆ. ಇದು ಪರಿಸರಕ್ಕೆ ಪೂರಕ. ತ್ಯಾಜ್ಯವನ್ನೂ ಕಡಿಮೆಗೊಳಿಸಿ, ಗೊಬ್ಬರವನ್ನಾಗಿಸುತ್ತದೆ. ಈ ಸಿಂಪಡಣೆ ಎಲ್ಲ ಕೆರೆಗಳಲ್ಲೂ ಆಗಬೇಕು. ಬಿಬಿಎಂಪಿ ಎಲ್ಲ ರೀತಿಯ ಮಾಲಿನ್ಯ ನಿರ್ಮೂಲನೆಗೆ ಈ ಜೀವಾಣು ದ್ರಾವಣವನ್ನು ಬಳಸಬೇಕು ಎಂದು ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ಆಗ್ರಹಿಸಿದರು.
ರಾಜರಾಜೇಶ್ವರಿ ನಗರದ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿ ಈ ಜೀವಾಣುಗಳ ಸಿಂಪಡಣೆ ಕಾರ್ಯದಲ್ಲಿ ಕೈಜೋಡಿಸಿದೆ. ಈವರೆಗೆ ಬಿಬಿಎಂಪಿ ಈ ಪ್ರಕ್ರಿಯೆಯನ್ನು ಪ್ರಾಯೋಗಿಕವಾಗಿ ಮಾತ್ರ ಅಳವಡಿಸಿಕೊಂಡಿದೆ. ಆದ್ದರಿಂದ, ಉಚಿತವಾಗಿ ಈ ಸಂಸ್ಥೆಗಳು ಜೀವಾಣುಗಳನ್ನು ಸಿಂಪಡಿಸುತ್ತಿದ್ದೇವೆ ಎನ್ನುತ್ತಾರೆ ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಪ್ರೊ. ಲಿಂಗರಾಜು.
ತ್ಯಾಜ್ಯವನ್ನೂ ನಿರ್ವಹಿಸುವ ಈ ಪ್ರಕ್ರಿಯೆಗೆ ಎಲ್ಲೆಡೆ ಮಾನ್ಯತೆ ನೀಡಿ, ಸರಕಾರದ ಮಟ್ಟದಲ್ಲಿ ಚಾಲನೆಗೊಂಡರೆ ಬೆಂಗಳೂರಿನ ಕೆರೆಗಳತ್ತ ಹೋಗುವಾಗ, ಚರಂಡಿ ದಾಟುವಾಗ ಮೂಗುಮುಚ್ಚಿಕೊಳ್ಳುವ ಪ್ರಸಂಗ ಎದುರಾಗುವುದಿಲ್ಲ.
ಏನಿದು ಜೀವಾಣು?
ಕೋಲ್ಕತಾ ಮೂಲದ ಕಂಪನಿ 'ಎಫೆಕ್ಟೀವ್ ಮೈಕ್ರೊಆರ್ಗಾನಿಸಮ್' ಎಂಬ ಈ ಜೀವಾಣುಗಳನ್ನು ಉತ್ಪಾದಿಸಿ, 'ಪ್ಯಾಸೀವ್' ಸ್ಥಿತಿಯಲ್ಲಿ ಅದನ್ನು ಶೇಖರಿಸುತ್ತದೆ. ಈ ಸ್ಥಿತಿಯ ದ್ರಾವಣಕ್ಕೆ ಒಂದು ಕೆಜಿ ಬೆಲ್ಲ ಹಾಗೂ ೨೦ ಲೀಟರ್ ನೀರು ಸೇರಿಸಿ, ಗಾಳಿನಿಯಂತ್ರಕ ಉಪಕರಣದಲ್ಲಿ ಬೆರೆಸಿಡಬೇಕು. ಈ ಪ್ರಕ್ರಿಯೆ ನಂತರ ಜೀವಾಣುಗಳು 'ಆಕ್ಟೀವ್' ಸ್ಥಿತಿಗೆ ತಲುಪುತ್ತವೆ. ಇವುಗಳನ್ನು ಮಾಲಿನ್ಯ-ಕೊಳಕಿನ ಮೇಲೆ ಸಿಂಪಡಿಸಿದರೆ, ಒಂದು ಗಂಟೆಯೊಳಗೆ ಅಲ್ಲಿನ ದುರ್ವಾಸನೆ ದೂರಾಗುತ್ತದೆ. ಕೆಲವು ಗಂಟೆಗಳಲ್ಲಿ ಜೀವಾಣುಗಳು ದ್ವಿಗುಣಗೊಳ್ಳುತ್ತಿರುತ್ತವೆ. ಮಾಲಿನ್ಯವನ್ನು ಆಕ್ರಮಿಸಿಕೊಳ್ಳುತ್ತವೆ.
ಒಂದು ಲೀಟರ್ ಪ್ಯಾಸೀವ್ ದ್ರಾವಣಕ್ಕೆ 285 ರೂ. ಇದನ್ನು ಚಟುವಟಿಕೆಯ ದ್ರಾವಣವನ್ನಾಗಿಸಿದಾಗ ೨೨ ಲೀಟರ್ ಆಗುತ್ತದೆ. ಆಗ ಒಂದು ಲೀಟರ್‌ಗೆ 35 ರೂ. ವೆಚ್ಚ. ಕೆರೆಗಳ ಮಾಲಿನ್ಯವನ್ನು ಪರಿಶೀಲಿಸಿದ ನಂತರ ಎಷ್ಟು ಸಾವಿರ ಲೀಟರ್ ದ್ರಾವಣ ಸಿಂಪಡಿಸಬೇಕು ಎಂಬುದನ್ನು ನಿರ್ಧರಿಸಲಾಗುತ್ತದೆ. ಸಾಮಾನ್ಯವಾಗಿ ಒಂದು ಕೆರೆಗೆ ೪ರಿಂದ ೫ ಸಾವಿರ ಲೀಟರ್ ದ್ರಾವಣ ಸಿಂಪಡಿಸಿದರೆ, ಒಂದೆರಡು ತಿಂಗಳಲ್ಲಿ ಕೊಳಕು ನಿರ್ಮೂಲನೆ ಆಗುತ್ತದೆ. ನಂತರ ವರ್ಷಗಳಲ್ಲಿ ಒಂದೆರಡು ಸಾವಿರ ಲೀಟರ್ ದ್ರಾವಣವನ್ನು ಎರಡು-ಮೂರು ವರ್ಷಕ್ಕೊಮ್ಮೆ ಸಿಂಪಡಿಸಿದರೆ ಸಾಕು ಎಂದು ಬಾಳೆ ಬಯೊ-ಟೆಕ್ನಾಲಜಿಯ ಅಧ್ಯಕ್ಷ ಚಂದ್ರಶೇಖರ ಬಾಳೆ ವಿವರಿಸುತ್ತಾರೆ.
ಸೊಳ್ಳೆ, ಜಿರಳೆ, ಇಲಿ-ಹೆಗ್ಗಣಗಳೂ ಇದರಿಂದ ನಿರ್ಮೂಲನೆ ಆಗುತ್ತವೆ. ತ್ಯಾಜ್ಯ ಗೊಬ್ಬರವಾಗಲೂ ಇದು ಸಹಕಾರಿ. ಸೊಳ್ಳೆಗಳ ನಿರ್ಮೂಲನೆ ಹಾಗೂ ಚರಂಡಿಗಳ ಕೊಳಕಿಗೆ ರಾಸಾಯನಿಕ ಸಿಂಪಡಿಸುವ ಬದಲು, ಈ ಜೀವಾಣು ದ್ರಾವಣ ಹಾಕಿದರೆ ಮಾಲಿನ್ಯಕ್ಕೆ ತೆರೆ ಬಿದ್ದಂತಾಗುತ್ತದೆ. ಅಲ್ಲದೆ ಪರಿಸರಕ್ಕೂ ಹಾನಿ ಮಾಡದಂತಾಗುತ್ತದೆ.

Sunday, January 17, 2010

ಅರ್ಕಾವತಿ ನದಿ ಪುನಶ್ಚೇತನಕ್ಕೆ ಉನ್ನತಮಟ್ಟದ ಸಮಿತಿ

ಅರ್ಕಾವತಿ ನದಿಯತ್ತ ರಾಜ್ಯ ಸರಕಾರ ಕೊನೆಗೂ ಕಣ್ಣು ತೆರೆದಿದೆ. ಈ ನದಿ ಪುನಶ್ಚೇತನಕ್ಕೆ ಒಂದು ಉನ್ನತ ಮಟ್ಟದ ಸಮಿತಿ ರಚಿಸಿದೆ. ನದಿ ಪುನಶ್ಚೇತನ ಮಾಡುತ್ತೇವೆ ಎಂದು ಕಳೆದ ಆರು ತಿಂಗಳಿಂದ ಹೇಳುತ್ತಿದ್ದ ಮಾತುಗಳು ಬರೀ ಹೇಳಿಕೆಯಾಗಿ ಉಳಿಯದೆ ಜಾರಿ ಆಗಿರುವುದು ಸಂತಸದ ವಿಷಯ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜೀವನದಿಯಾದ ಅರ್ಕಾವತಿ ಪುನಶ್ಚೇತನಕ್ಕೆ ನಾಲ್ವರು ಸಚಿವರನ್ನು ಒಳಗೊಂಡ ಉನ್ನತಮಟ್ಟದ ಸಮಿತಿಯನ್ನು ಸರಕಾರ ರಚಿಸಿದೆ.
ತಿಪ್ಪಗೊಂಡನಹಳ್ಳಿ ಜಲಾನಯನದಲ್ಲಿ ಒಳಹರಿವು ಹೆಚ್ಚಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಅಧಿಕಾರಯುಕ್ತ ಸಮಿತಿ ಬದಲಿಗೆ, ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿ ಅರ್ಕಾವತಿ ನದಿ ಪುನಶ್ಚೇತನ ಉನ್ನತ ಮಟ್ಟ ಸಮಿತಿ ರಚಿಸಲಾಗಿದೆ. ಈ ಸಂಬಂಧ ಜನವರಿ ೧೩ರಂದು ಸರಕಾರಿ ಆದೇಶ ಹೊರಬಿದ್ದಿದೆ.
ನಾಲ್ವರು ಸಚಿವರು ಹಾಗೂ ನಾಲ್ವರು ಶಾಸಕರನ್ನು ಒಳಗೊಂಡ ಸಮಿತಿಯಲ್ಲಿ ಕಂದಾಯ, ನಗರಾಭಿವೃದ್ಧಿ, ಕೃಷಿ, ಅರಣ್ಯ, ಜಲಮಂಡಳಿ, ಜಲಸಂಪನ್ಮೂಲ, ಲೋಕೋಪಯೋಗಿ, ಬಿಎಂಆರ್‌ಡಿಎ, ಗ್ರಾಮಾಂತರ-ರಾಮನಗರ ಜಿಲ್ಲಾಧಿಕಾರಿ ಸೇರಿದಂತೆ ೨೦ ಸದಸ್ಯರಿದ್ದಾರೆ.
ಅರ್ಕಾವತಿ ನದಿಯ ದುಸ್ಥಿತಿ ವಿವರಿಸುವ ’ಅರ್ಕಾವತಿ ಏಕೀ ದುರ್ಗತಿ?’ ಎಂಬ ಲೇಖನ ಮಾಲಿಕೆಯನ್ನು ವಿಜಯ ಕರ್ನಾಟಕ 2009 ಮೇ 25 ಜೂನ್ 12ರವರೆಗೆ 17ದಿನ ಪ್ರಕಟಿಸಿತ್ತು. ಈ ವಿಶೇಷ ವರದಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಸಲ್ಲಿಸಿದಾಗ, ನದಿ ಪುನಶ್ಚೇತನಕ್ಕೆ ಸಮಿತಿ ಅಥವಾ ಪ್ರಾಧಿಕಾರ ರಚಿಸುವ ಭರವಸೆ ನೀಡಿದ್ದರು.
ಇದಾದ ಮೇಲೆ, ಶಾಸಕರಾದ ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು ನದಿ ಸಂರಕ್ಷಣೆಗೆ ಜನಜಾಗೃತಿಗಾಗಿ ನಂದಿಬೆಟ್ಟದಿಂದ ತಿಪ್ಪಗೊಂಡನಹಳ್ಳಿವರೆಗೆ ಸೆಪ್ಟೆಂಬರ್ 3ರಿಂದ 8 ರವರೆಗೆ ಪಾದಯಾತ್ರೆ ಕೈಗೊಂಡಿದ್ದರು. ಸಂಸದ ಅನಂತಕುಮಾರ್, ಸಚಿವರಾದ ಆರ್. ಅಶೋಕ್, ಸುರೇಶ್‌ಕುಮಾರ್, ರಾಮಚಂದ್ರಗೌಡ, ಪರಿಸರತಜ್ಞರಾದ ಡಾ.ಅ.ನ. ಯಲ್ಲಪ್ಪರೆಡ್ಡಿ, ಸುರೇಶ್ ಹೆಬ್ಳೀಕರ್ ಭಾಗವಹಿಸಿದ್ದನ್ನು ಸ್ಮರಿಸಬಹುದು.
ಅರ್ಕಾವತಿ ನದಿ ಹಾಗೂ ಇದರ ಉಪನದಿ ಕುಮುದ್ವತಿ ನದಿಗಳನ್ನು ಅವುಗಳ ಮೂಲದಿಂದ ಪುನಶ್ಚೇತನಗೊಳಿಸಿ, ಅವುಗಳ ಹರಿವನ್ನು ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರವನ್ನು ಈ ಉನ್ನತ ಸಮಿತಿ ಒಳಗೊಂಡಿದೆ. ನದಿ, ಅದರ ಅರಿವು, ಜಲಾನಯನ ಪ್ರದೇಶದ ರಕ್ಷಣೆ, ಒತ್ತುವರಿ ತೆರವು, ಮಾಲಿನ್ಯ ಮುಕ್ತಗೊಳಿಸಲು ಎಲ್ಲ ರೀತಿಯ ಕಾನೂನು ಕ್ರಮಗಳನ್ನು ಈ ಸಮಿತಿ ತೆಗೆದುಕೊಳ್ಳುವ ಅಧಿಕಾರ ಹೊಂದಿದೆ.
ಅರ್ಕಾವತಿ ನದಿ ಪುನಶ್ಚೇತನ ಸಮಿತಿ: ಅಧ್ಯಕ್ಷ- ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ; ಸದಸ್ಯರು- ಕಂದಾಯ ಸಚಿವ ಜಿ. ಕರುಣಾಕರ ರೆಡ್ಡಿ, ಸಾರಿಗೆ ಸಚಿವ ಆರ್. ಅಶೋಕ್, ಜಲಮಂಡಳಿ, ವಸತಿ ಖಾತೆ ಸಚಿವ ಕಟ್ಟಾಸುಬ್ರಹ್ಮಣ್ಯ ನಾಯ್ಡು, ಶಾಸಕರಾದ ಶೋಭಾ ಕರಂದ್ಲಾಜೆ, ಜೆ. ನರಸಿಂಹಸ್ವಾಮಿ, ಎಸ್.ಆರ್. ವಿಶ್ವನಾಥ್, ಎಸ್. ಮುನಿರಾಜು, ನಗರಾಭಿವೃದ್ಧಿ, ಅರಣ್ಯ, ಕೃಷಿ, ಜಲಸಂಪನ್ಮೂಲ, ಸಣ್ಣ ನೀರಾವರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು, ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಆಯುಕ್ತ, ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಲಾನಯನ ಪ್ರದೇಶಾಭಿವೃದ್ಧಿ ಮಂಡಳಿ ನಿರ್ದೇಶಕ, ಗಣಿ ಮತ್ತು ಭೂಗರ್ಭಶಾಸ್ತ್ರ ಇಲಾಖೆ ನಿರ್ದೇಶಕ ಹಾಗೂ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರು.