Wednesday, April 22, 2009

ಕರಗುತ್ತಿರುವ ಬೆಂಗಳೂರಿನ ಕೆರೆಗಳು-ಮರು ಪ್ರಸಾರ

ಆತ್ಮೀಯ್ ಮಿತ್ರರೇ,
‘ನಮ್ಮೂರ್ ಕೆರೆಮತ್ತು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೂರದರ್ಶನದ ಕರಗುತ್ತಿರುವ ಬೆಂಗಳೂರಿನ ಕೆರೆಗಳು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದೇನೆ. ಮಿತ್ರ ಶಿವರಾಂ ನನ್ನನ್ನು ಮಾತಿಗೆಳೆದಿದ್ದಾರೆ. ಈ ಕಾರ್ಯಕ್ರಮ ಈಗಾಗಲೇ ಪ್ರಸಾರವಾಗಿತ್ತು. ಬಹಳಷ್ಟು ಸ್ನೇಹಿತರು ನೋಡಲಾಗಲಿಲ್ಲ ಎಂದಿದ್ದರು. ಅವರಿಗೆಲ್ಲ ಒಂದು ಅವಕಾಶ ಏನೋ ಎಂಬಂತೆ ಚಂದನದಲ್ಲಿ ಮತ್ತೊಮ್ಮೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ದೂರದರ್ಶನ-1 ಮತ್ತು ಚಂದನದಲ್ಲಿ ಏಪ್ರಿಲ್ 26, 2009 ಭಾನುವಾರದಂದು, ಬೆಳಗ್ಗೆ 8-30 ಕ್ಕೆ ಮರು ಪ್ರಸಾರವಾಗಲಿದೆ.
ದಯವಿಟ್ಟು ವೀಕ್ಷಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ ಮತ್ತು ತಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿ. ಇದರಿಂದ ಮತ್ತಷ್ಟು ತಿದ್ದಿಕೊಳ್ಳಲು, ಅರಿತುಕೊಳ್ಳಲು ಸಾಧ್ಯವಾದೀತು.

Monday, April 20, 2009

ಚಂದನದಲ್ಲಿ ಕರಗುತ್ತಿರುವ ಬೆಂಗಳೂರು ಕೆರೆಗಳು


ನಮ್ಮೂರ್ ಕೆರೆ ಲೇಖನ ಮಾಲಿಕೆ ಆರಂಭವಾದ ಪ್ರಥಮ ದಿನವೇ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ಜೋಶಿ ಅವರಿಂದ ಕರೆ ಬಂದಿತ್ತು. ‘ಬದ್ರರ್‌ ತುಂಬಾ ಚೆನ್ನಾಗಿ ಬರೆದಿದ್ದೀರ. ಕೆರೆಗಳ ಪರಿಸ್ಥಿತಿ ಏನಾಯ್ತು ನೋಡಿ’ ಎಂದು ಮರುಗಿದ್ದರು. ನಂತರದ ಕೆಲವು ದಿನಗಳು ಅವರಿಂದ ಯಾವುದೇ ಕರೆ ಬರಲಿಲ್ಲ. ಸರಣಿ ಅಂತ್ಯವಾಯಿತು ನೋಡಿ, ಆಗ ಕರೆ ಬಂದಿತ್ತು. ‘ಎಕ್ಸೆಲೆಂಟ್‌ ಬ್ರದರ್‌, ತುಂಬಾ ಚೆನ್ನಾಗಿ ಬಂತು. ನಿಮ್ಮಿಂದ ಕೆರೆಗಳೊಂದಷ್ಟು ಉದ್ಧಾರ ಆಗಲಿ’ ಎಂದಿದ್ದರು. ಕೊನೆಯಲ್ಲಿ ಫೋನ್ ಕಟ್‌ ಮಾಡುವ ಮುನ್ನ ‘ನಮ್ಮಲ್ಲಿ ನೀವ್ಯಾಕ್ಕೊಂದು ಕಾರ್ಯಕ್ರಮ ನೀಡಬಾರದು?’ ಎಂದು ಸಣ್ಣಗೆ ಹುಳ ಬಿಟ್ಟಿದ್ದರು. ‘ನೋಡೋಣ ಸರ್‌’ ಎಂದಿದ್ದೆ. ನಂತರ ಹಲವು ಬಾರಿ ಮೊಬೈಲ್‌ ಸಂಭಾಷಣೆ ಆಗಿದ್ದರೂ, ಇದರ ಬಗ್ಗೆ ಇಬ್ಬರೂ ಮಾತನಾಡಿರಲಿಲ್ಲ.
‘ಕೆರೆ ಕರಗುವ ಸಮಯ’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ, ಎಂದು ಒಂದು ಎಸ್‌ಎಂಎಸ್‌ ಕಳಿಸಿದೆ. ಕೂಡಲೇ ಜೋಶಿ ಕರೆ ಮಾಡಿದ್ದರು. ‘ನಾನು ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡು ಬಿಟ್ಟಿದ್ದೇನೆ. ಅಲ್ಲಿ ಜಸ್ಟೀಸ್ ಎಲ್ಲ ಬರ್ತಾರೆ, ಮಿಸ್‌ ಮಾಡಲು ಆಗೊಲ್ಲ. ಒಳ್ಳೆದಾಲಿ’ ಎಂದು ಶುಭ ಹಾರೈಸಿದರು. ಆಯ್ತು, ಪುಸ್ತಕ ಬಿಡುಗಡೆಯೂ ಆಯ್ತು. ಎರಡು ದಿನ ಕಳೆದಿತ್ತು ಅಷ್ಟೇ, ಜೋಶಿ ಕರೆ ಮಾಡಿದ್ದರು. ‘ಬ್ರದರ್‌ ನಮ್ಮನ್ನೆಲ್ಲ ಮರೆತು ಹೋದ್ರಾ?’ ಅಂದರು. ಏಕೆ ಎಂದಾಗ, ‘ನೀವು ಪ್ರೋಗ್ರಾಂಗೆ ಬರಲಿಲ್ಲ. ಬನ್ನಿ ನಾಳೆಯೇ ಒಂದು ಕಾರ್ಯಕ್ರಮ ಮಾಡೇ ಬಿಡೋಣ’ ಎಂದರು. ‘ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರ ಒಪ್ಪಿಗೆ ಪಡೆದು ನಿಮಗೆ ತಿಳಿಸುತ್ತೇನೆ’ ಎಂದೆ. ಎರಡು ದಿನ ಬಿಟ್ಟು ಕರೆ ಮಾಡಿ, ಏನಾಯ್ತು ಎಂದರು ಜೋಶಿ. ಸಂಪಾದಕರಿಂದ ಒಪ್ಪಿಗೆ ಪಡೆದಿದ್ದ ನಾನು ಓಕೆ ಎಂದೆ. ಉಳಿದದ್ದು ನನಗೆ ಬಿಡಿ ಎಂದರು ಜೋಶಿ. ಅದಷ್ಟೇ, ಎಲ್ಲವನ್ನೂ ನಿರ್ವಹಿಸಿದ್ದರೂ ಶ್ರೀಯುತ ಮಹೇಶ್‌ ಜೋಶಿ.
ದೂರದರ್ಶನ ಚಂದನಲ್ಲಿ ನಿರೂಪಕರಾಗಿರುವ ಶಿವರಾಂ ಕರೆ ಮಾಡಿದರು. ಸರ್‌, ಕೆರೆಗಳ ಬಗ್ಗೆ ಕಾರ್ಯಕ್ರಮ. ನಾಳೆಯೇ ಬನ್ನಿ, ಚರ್ಚಿಸಿ ಕಾರ್ಯಕ್ರಮ ಮಾಡೋಣ ಎಂದರು. ನಾಳೆ ಆಗೊಲ್ಲ, ಮತ್ತೊಮ್ಮೆ ಬರುತ್ತೇನೆ ಎಂದೆ. ಆಮೇಲೆ ಏಪ್ರಿಲ್‌ 8ರಂದು ದೂರದರ್ಶನ ಕೇಂದ್ರಕ್ಕೆ ಹೋದೆ. ಅಲ್ಲಿ ಸಹಾಯಕ ಕೇಂದ್ರ ನಿರ್ದೇಶಕ ಬಿ.ಎನ್. ಚಂದ್ರಕುಮಾರ್‌‌ ಅವರೊಂದಿಗೆ ಮಾತನಾಡಿದೆ. ಅತ್ಯಂತ ಅನುಭವದ ಚಂದ್ರಶೇಖರ್‌, ದೂರದರ್ಶನದ ನೂರಾರು ಕಾರ್ಯಕ್ರಮಗಳಿಗೆ ಕಾರಣರಾಗಿದ್ದಾರೆ. ಅವರಲ್ಲಿದ್ದ ಕೆರೆಗಳ ಬಗ್ಗೆಗಿನ ಮಾಹಿತಿಗೆ ನಾನು ಮಾರುಹೋದೆ. ಅವರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದಾಗ ಸಮಯ ಹೋಗಿದ ಅರಿವೇ ಆಗಲಿಲ್ಲ. ಅವರು ಅವರೇ ನೋಡಿದ ಕೆರೆ ಹಾಗೂ ಐದೇ ಅಡಿಯಲ್ಲಿ ನೀರು ಸಿಗುವ ಬಾವಿ ಬಗ್ಗೆ ವಿವರ ನೀಡಿದರು. ಅವರು ಮಿತುಭಾಷಿ ಎಂಬುದು ಅರಿವಿಗೆ ಬಂತು. ಅದೇ ಸ್ವಭಾವದ ನಾನೂ ಅವರು ಸಾಕಷ್ಟು ಮಾತನಾಡಿದೆವು. ಆದರೆ, ದಿನ ಅವರೊಂದಿಗೆ ಮಾತನಾಡಬೇಕೆಂಬ ಹಾಗೂ ಅವರಲ್ಲಿರುವ ಮಾಹಿತಿ ಕಣಜದಲ್ಲಿ ಕೊಂಚ ಭಾಗವನ್ನಾದರೂ ಅರಿಯಬೇಕೆಂಬ ಆಸೆ ಇದೆ. ಇದು ಸಾಧ್ಯಾನಾ? ಗೊತ್ತಿಲ್ಲ. ಏಕೆಂದರೆ, ಚಂದ್ರಕುಮಾರ್‌ ಅವರನ್ನು ನಾನು ಈ ಬಗ್ಗೆ ಕೇಳಿಯೇ ಇಲ್ಲ!
ಕಾರ್ಯಕ್ರಮದ ಬಗ್ಗೆ ಚರ್ಚೆ ಆದ ಮೇಲೆ, ಏಪ್ರಿಲ್ 9ರಂದು ರೆಕಾರ್ಡಿಂಗ್‌ ಎಂದು ಚಂದ್ರಕುಮಾರ್‌ ಹೇಳಿದರು. ಅವರೊಂದಿಗೆ ಕಾಫಿ ಕುಡಿದು, ಥ್ಯಾಂಕ್ಸ್ ಹೇಳಿ ಗೆಳೆಯ ಶಿವರಾಂನೊಂದಿಗೆ ಹೊರಬಿದ್ದೆ. ನಾಳೆ ಬೆಳಗ್ಗೆ 9.3೦ ಬಂದುಬಿಡಿ ಎಂದ ಶಿವರಾಂನೊಂದಿಗೆ ಕೆಲ ಸಮಯ ಮಾತನಾಡಿ, ಕೇಂದ್ರದ ಗೇಟ್‌ ಹೊರಗೆ ಕಾರು ಡ್ರೈವ್‌ ಮಾಡಿ ಹೊರಬಿದ್ದೆ. ಆದರೆ, ರೆಕಾರ್ಡಿಂಗ್‌ ಮನಸ್ಸು, ತಲೆ ಎರಡನ್ನೂ ಆವರಿಸಿಕೊಂಡಿತ್ತು. ಅದರ ಬಗ್ಗೆಯೇ ಚಿಂತೆ. ಏಕೆಂದರೆ, ಪ್ರಥಮ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದೆ. ಆತಂಕಕ್ಕಿಂತ ಕಾತುರ ತುಂಬಿಹೋಗಿತ್ತು.
ರೆರ್ಕಾಡಿಂಗ್‌, ಶಾಲಾ ದಿನದ ನಂತರ ಮುಖಕ್ಕೊಂದು ಮೇಕಪ್‌, ಕೇಂದ್ರ ಸಹೃದಯರೊಂದಿಗಿನ ಮಾತುಕತೆ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ಕ್ಯಾಮೆರಾ ಹಿಂದೆ ಕೇಂದ್ರದ ಹಲವು ಚಟುವಟಿಕೆಗಳಿಗೆ ಕಾರಣರಾದ ಹಿರಿಯರಾದ ಚಂದ್ರಶೇಖರ್‌ ಅವರನ್ನು ಚಿತ್ರದ ಮೂಲಕ ನಿಮಗೆ ಪರಿಚಯಿಸುವ ಪ್ರಯತ್ನವನ್ನೂ ಮಾಡುತ್ತೇನೆ.

Saturday, April 11, 2009

ಕೆರೆ ಕರಗುವ ಸಮಯ ಬಿಡುಗಡೆ-2

ಕೆರೆ ಕರಗುವ ಸಮಯ ಪುಸ್ತಕ ಬಿಡುಗಡೆ ಸಮಾರಂಭವನ್ನು ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇನೆ. ಇದಕ್ಕೊಂದು ಕಾಮೆಂಟ್ಬರೆದಿರುವ ಸ್ನೇಹಿತ ಮಹೇಶ್‌ ಯಲಗೋಡಮನೆ, ಸಮಾರಂಭದಲ್ಲಿ ಸವಿದ ಕೇಸರಿಬಾತ್ ಹಾಗೂ ಇಡ್ಲಿ ವಡೆ ಬಗ್ಗೆ ಹೇಳಿದ್ದಾನೆ. ಅವನಿಗೊಂದು ಥ್ಯಾಂಕ್ಸ್ಹೇಳುತ್ತಾ, ನಾನು ಹಿಂದೆ ನಿಮಗೆ ತಿಳಿಸಿದಂತೆ, ಸಮಾರಂಭದಲ್ಲಿ ನನ್ನ ಸ್ನೇಹಿತರು, ಆತ್ಮೀಯರನ್ನು ನಾನು ಕಂಡ ರೀತಿಯನ್ನು ವಿವರಿಸುತ್ತೇನೆ.
ಬೆಳಗ್ಗೆ 9.15ಕ್ಕೆ ಮಿಥಿಕ್‌ ಸೊಸೈಟಿಗೆ ಸತಿಸಹಿತ ಬಂದಿಳಿದೆ. ಬೈರೇಗೌಡ, ಗಣೇಶ ಕಂಡರು. ಮತ್ತಷ್ಟು ತಯಾರಿ ಕೆಲಸ ಆಗುತ್ತಿತ್ತು. ಛಾಯಾಚಿತ್ರ ಪ್ರದರ್ಶನ ತಯಾರಿ ನಡೆಯುತ್ತಿತ್ತು. ಕಾರಿನಲ್ಲಿ ಕುಳಿದ್ದಾಗಲೇ ಮಹೇಶ ಬಂದಿಳಿದ. ಪತ್ನಿ ಎಲ್ಲೋ ಎಂದರೆ, ಬೇಗ ಹೊರಟೆ ಕರೆ ತರಲಿಲ್ಲ ಎಂದ. ಅವನು ಮನಸ್ಸು ಮಾಡಿದ್ದರೆ ಕರೆ ತರಬಹುದಾಗಿತ್ತು, ಆದರೆ, ಬೇಡ ಅಂದುಕೊಂಡನೋ ಏನೋ? ಗೊತ್ತಿಲ್ಲ. ಅವನೊಂದಿಗೆ ಒಂದು ಮಾತನಾಡಿ, ವಿಡಿಯೊ ಕ್ಯಾಮೆರಾದಲ್ಲಿ ಸಮಾರಂಭ ಸೆರೆ ಹಿಡಿಯುವ ಕಾರ್ಯವನ್ನು ಒಪ್ಪಿಸಿದೆ.
ಇಷ್ಟಾದ ಮೇಲೆ, ಉಪಹಾರ ನೀಡುವ ತಂಡ ತನ್ನ ಕಾರ್ಯ ಆರಂಭಿಸಿತ್ತು. ಅಲ್ಲಿಯೇ ಇಡ್ಲಿ-ವಡೆಯ ತಯಾರಿಯೂ ನಡೆದಿತ್ತು. ಪ್ರವೇಶ ದ್ವಾರ ಬಳಿ ತಿಂಡಿ ಏರ್ಪಾಟು ಬೇಡ ಎಂದು, ಪಕ್ಕದಲ್ಲಿ ಅದರ ವ್ಯವಸ್ಥೆ ಮಾಡಿಸಲಾಯಿತು. ಇಷ್ಟೆಲ್ಲ ಆಗುವಷ್ಟರಿಗೆ ಒಬ್ಬೊಬ್ಬರು ಬರಲಾರಂಭಿಸಿದರು. ಪ್ರಥಮವಾಗಿ ಬಂದವ ಸ್ನೇಹಿತ ಕೆ.ಎಸ್‌. ಶ್ರೀಧರ್‌. ಅವನೇ ಅಂದಿನ ದಿನ ಛಾಯಾಗ್ರಾಹಕ. ನಾವು ಹೀಗೆ ಮಾತನಾಡುತ್ತಿರುವಾಗಲೇ ಪರಿಸರ ಚಟುವಟಿಕೆಗಳಲ್ಲಿ ನಿರವಾಗಿರುವ ಶಿವಮಲ್ಲು ಬಂದರು. ಕಚೇರಿಯ ಸ್ನೇಹಿತರಾದ ಪ್ರೇಮ್‌ಕುಮರ್‍‌ ಆಗಮಿಸಿದರು.
ಬೈರಸಂದ್ರ ಕೆರೆಯನ್ನು ಉಳಿಸಲು ಹೋರಾಡುತ್ತಿರುವ ವೆಂಕಟಸುಬ್ಬರಾವ್‌ ಆಗಮಿಸಿದಾಗ ಸಂತಸವಾಯಿತು. ಒಂದು ಕರೆ ಮಾಡಿ ಹೇಳಿದ್ದೆ ಅಷ್ಟೇ. ಇಂತಹ ಕಾರ್ಯಕ್ರಮಕ್ಕೆ ಬರಲಾಗದೆ ಇರುವುದಕ್ಕೆ ಸಾಧ್ಯವೇ? ಎಂದು ಬಂದಿದ್ದರು. ಈ ಸಮಯಕ್ಕೇ ಮುಖ್ಯ ಅತಿಥಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ ಬಂದರು. ಅವರನ್ನು ಎಲ್ಲರೂ ಬರಮಾಡಿಕೊಂಡು, ಸಭಾಂಗಣದಲ್ಲಿ ಕೂರಿಸಿ, ಅವರೊಂದಿಗೆ ಒಂದಷ್ಟು ಮಾತನಾಡಿದೆವು.
ಹೊರಗೆ ತಿಂಡಿ ವ್ಯವಸ್ಥೆ ಆಗಿತ್ತು. ಯಲ್ಲಪ್ಪರೆಡ್ಡಿ ಅವರನ್ನು ಕರೆತಂದು, ತಿಂಡಿ ಕೊಡಿಸಿ ಇತ್ತ ಸರಿದಾಗ, ಅಲ್ಲಿದ್ದರು ಡಾ. ನಾ. ಸೋಮೇಶ್ವರ. ಅವರಿಗೊಂದು ಎಸ್‌ಎಂಎಸ್‌ ಕಳುಹಿಸಿದ್ದೆ. ನನ್ನ ಆಮಂತ್ರಣಕ್ಕೆ ಓಗೊಟ್ಟು ಬಂದಿದ್ದ ಅವರನ್ನು ನೋಡಿ ಅತೀವ ಆನಂದವಾಯಿತು. ಅವರು ತಮ್ಮ ಮೇಷ್ಟ್ರು ಅವರನ್ನು ಪರಿಚಯ ಮಾಡಿಕೊಟ್ಟರು. ಈ ಸಮಾರಂಭದಿಂದ ಇವರನ್ನು ಭೇಟಿ ಮಾಡಿದಂತಾಯಿತು ಎಂದು ಸಂತಸಪಟ್ಟರು.
ಎಫ್‌ಕೆಸಿಸಿಐ ವಿಜಯ್‌ ಸತಿಸಹಿತ ಬಂದರು. ಸುಗಮಗೀತೆ ಗಾಯಕ ಮೃತ್ಯುಂಜಯ ದೊಡ್ಡವಾಡ, ಜಮಾದಾರ್‍, ರಾಮಲಿಂಗ ಶೆಟ್ರು ಬಂದ್ರು. ಮಂಜುನಾಥ ಹಿರೇಮಠ, ಸಾಧು ಶ್ರೀನಾಥ್‌, ಪುಣ್ಯವತಿ, ಪ್ರಕಾಶ್ ಬಾಬು, ಶಶಿಧರ್‌ ನಂದಿಕಲ್‌, ಮುನೇಗೌಡ, ಸುರೇಶ್ ಬಂದರು. ನನ್ನ ಮಾವಂದಿರಾದ ಆರ್‌. ಪಾಲಾಕ್ಷ, ಆರ್‍.ಎಚ್. ರಾಜು, ಸೋದರ ಜಗದೀಶ ಬಂದರು.
ಆನೆ ಆಕ್ಟೀವಾದ ಮೇಲೆ ಬಂದಾಗ...
ತಿಂಡಿ ತಿಂದೇ ಬಿಡೋಣ ಎಂದು ಎರಡು ಇಡ್ಲಿಯನ್ನು ತಟ್ಟೆಗಿರಿಸಿಕೊಂಡು ನಿಂತಾಗ, ಕಾಣಿಸಿಕೊಂಡಿತು ಆಕ್ಟೀವಾದ ಮೇಲೆ ಆನೆ. ಹೌದು, ಅವನು ನನ್ನ ಸ್ನೇಹಿತ ಡುಮ್ಮ-ಎಂ.ಎಸ್‌. ಆನಂದ್. ಆಕ್ಟೀವಾ ಮೇಲೇರಿ ಅದನ್ನು ಓಡಿಸಿಕೊಂಡು ಬಂದಿದ್ದ. ಹಿಂದೆ ವೇಣುಗೋಪಾಲ್‌, ಮತ್ತೊಂದರಲ್ಲಿ ಆಪ್ತಸ್ನೇಹಿತ ಕೆ.ಎಸ್‌. ಜಗನ್ನಾಥ್. ಆನಂದನನ್ನು ನಾವು ಆನೆ ಎಂದೇ ಕರೆಯೋದು. ಆತನ ಗಾತ್ರ ಮತ್ತು ಆ ಮುಗ್ಧತೆಗೆ ಆನೆ ಸೂಕ್ತ ಹೋಲಿಕೆ.
ಇವರ ಹಿಂದೆಯೇ ದಿಂಡಲಕೊಪ್ಪ, ವಿಜಯ್‌ ಲೊಂಡೆ, ಬಾಷಾ ಗೂಳ್ಯಂ ಬಂದರು. ರಾಧಾಕೃಷ್ಣ ಭಡ್ತಿ, ಚಂದ್ರಕಲಾ ಬೈಕ್‌ನಿಂದ ಇಳಿದರು. ನಮ್ಮ ರಿಸೆಪ್ಷನಿಸ್ಟ್‌ ದೀಪಾ ಆಗಮಿಸಿದಾಗ, ಮಹೇಶ ಸಣ್ಣಗೆ ಉಸುರಿದ್ದ: ನಮ್ಮ ಪ್ರವೇಶದ್ವಾರದ ಆಕರ್ಷಣೆ ಎಂದು. ಈ ನಡುವೆ ಜೀವದ ಗೆಳೆಯ ಪ್ರತಾಪ್‌ ಸಿಂಹ, ಕರೆ ಮಾಡಿದ್ದ. ಊರಿನಲ್ಲಿ ತುರ್ತು ಕಾರ್ಯದ ನಿಮಿತ್ತ ಹೋಗಿದ್ದ ಅವನಿಗೆ, ಸಮಾರಂಭದ ಬಗ್ಗೆ ಸಾಕಷ್ಟು ಕಾಳಜಿ ಇತ್ತು. ಅದಕ್ಕೇ ಹೇಗೆ ತಯಾರಿ ಆಗುತ್ತಿದೆಯೋ? ಸರಿಯಾಗಿ ನೋಡಿಕೊ. ಏನಾದರೂ ಆಗಬೇಕಾ? ಎಂದೆಲ್ಲಾ ಕರೆ ಮಾಡಿ ವಿಚಾರಿಸಿಕೊಂಡ.
ಇಷ್ಟೆಲ್ಲ ಆಗುವ ವೇಳೆಗೆ ಪಿ. ತ್ಯಾಗರಾಜ್‌ ಪತ್ನಿ ಸಮೇತ ಆಗಮಿಸಿದರು. ಅವರೊಂದಿಗೆ ಬೆರೆತು, ನನ್ನ ಪತ್ನಿಯನ್ನು ಅವರಿಗೆ ಪರಿಚಯಿಸಿ ತಿಂಡಿಗೆ ಆಹ್ವಾನಿಸಿದೆ. ಅಷ್ಟರಲ್ಲಿ ನನ್ನ ಸ್ನೇಹಿತರಾದ ಎಲ್.ಸಿ. ನಾಗರಾಜ್‌, ಶಿವರಾಂ ಆಗಮಿಸಿದ್ದರು. ಅವರೊಂದಿಗಿಷ್ಟು ಚರ್ಚೆ ಮಾಡುತ್ತಿದ್ದಾಗಲೇ, ಸುರೇಶ್‌ ಹೆಬ್ಳೀಕರ್‌ ಕರೆ ಮಾಡಿದರು. ನಾನು ಧಾರವಾಡದಿಂದ ಬರುತ್ತಿದ್ದೇನೆ. ಕಳೆದ ರಾತ್ರಿ ಹೊರಡಲು ಸಾಧ್ಯವಾಗಲಿಲ್ಲ. ಮುಂಜಾನೆಯೇ ಹೊರಟಿದ್ದೇನೆ. ನಿಮ್ಮ ಕಾರ್ಯಕ್ರಮದ ವೇಳೆಗೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಪರಿತಪಿಸಿದರು. ಏಕೆಂದರೆ, ಈ ಸಮಾರಂಭಕ್ಕೆ ಶೇ.99.9 ರಷ್ಟು ಬರುತ್ತೇನೆ ಎಂದು ಹೇಳಿದ್ದರು. ಆದರೆ ೦.01 ಯಶಸಾಧಿಸಿತ್ತು.
ಇದಾದ ಮೇಲೆ ಸಹೋದ್ಯೋಗಿ ಸಂಗಮೇಶ ಬಂದರು. ಅವರೊಂದಿಗೆ ಸ್ನೇಹಿತರನ್ನು ಕರೆತಂದು ಇವರು ನಿಮ್ಮ ಕೆರೆ ಲೇಖನದ ಅಭಿಮಾನಿ ಎಂದರು. ಖುಷಿ ಆಯಿತು. ಇಂತಹ ಓದುಗರಿಂದಲೇ ಇದು ಸಾಧ್ಯವಾದದ್ದಲ್ಲೇ ಎಂದು ನಾನೇ ಪ್ರಶ್ನಿಸಿಕೊಂಡೆ.
ಇದಾದ ಮೇಲೆ ಸಹೋದ್ಯೋಗಿ-ಸ್ನೇಹಿತರು ತಿಂಡಿ ತಿನ್ನುವಾಗ ಒಂದಿಷ್ಟು ಹರಟೆ ಹೊಡೆದೆವು. ಅಲ್ಲಿಷ್ಟು ಓಡಾಟ, ಇವರೊಂದಿಗೊಷ್ಟು ಮಾತು ಆಗುತ್ತಿರುವಂತೆಯೇ, ಸಮಯ ಬಂತೇಬಿಟ್ಟಿತು. ವಿಧಾನಪರಿಷತ್‌ ಸದಸ್ಯೆ ಎಸ್‌.ಆರ್‌. ಲೀಲಾ ಬಂದರು. ಆತ್ಮೀಯವಾಗಿ ಅವರನ್ನು ಸ್ವಾಗತಿಸಿದೆ. 10.20 ಅಷ್ಟೇ. ಆ ವೇಳೆಗೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದರು. ಇನ್ನೇನು ಸಮಾರಂಭ ಆರಂಭಿಸುವ ತವಕ...ಹೆಚ್ಚಾಯಿತು. ಹಿಂದೆಯೇ ನನ್ನ ಮಾರ್ಗದರ್ಶಕರಾದ ವಿಶ್ವೇಶ್ವರ ಭಟ್‌ ಬಂದರು. ಇನ್ನೇನು ಕಾರ್ಯಕ್ರಮ ಶುರು. ಈ ಓಡಾಟದಲ್ಲಿ ಎಲ್ಲರನ್ನೂ ಗಮನಿಸಲು ಸಾಧ್ಯವಾಗಲೇ ಇಲ್ಲ. ಅವರಿಗೆಲ್ಲ ಒಂದೊಂದು ಕ್ಷಮೆಯಾಚನೆ. ನನ್ನನ್ನು ತಪ್ಪು ತಿಳಿದುಕೊಳ್ಳಬಾರದೆಂದು ಮನವಿ ಮಾಡಿಕೊಡುತ್ತೇನೆ. ಏಕೆಂದರೆ ಬಹುತೇಕರು ಬರುವವಷ್ಟರಲ್ಲಿ ನಾನು ವೇದಿಕೆ ಏರಬೇಕಾಗಿತ್ತು.
ಆದರೆ ಸಮಾರಂಭ ಮುಗಿಯಿತಲ್ಲ, ಇದ್ದವರನ್ನೆಲ್ಲ ಮಾತನಾಡಿಸಿದೆ. ನನ್ನ ಸಂತೋಷಕ್ಕೆ ಅಂದು ಕೊನೆಯೇ ಇರಲಿಲ್ಲ. ಸಮಾರಂಭದ ನಂತರದ ವಿಷಯವನ್ನು ಆನಂತರ ಬರೆಯುತ್ತೇನೆ...

Thursday, April 9, 2009

ಕರಗುತ್ತಿರುವ ಬೆಂಗಳೂರಿನ ಕೆರೆಗಳು

ಆತ್ಮೀಯ ಮಿತ್ರರೇ,
ಬೆಂಗಳೂರು ಕೆರೆಗಳ ಸ್ಥಿತಿಯನ್ನು ನೀವುನಮ್ಮೂರ್ ಕೆರೆಸರಣಿಯಲ್ಲಿ ಓದಿದ್ದೀರಿ. ಬಗೆಗಿನ ಅನುಭವ ಮತ್ತು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೂರದರ್ಶನದ ಕರಗುತ್ತಿರುವ ಬೆಂಗಳೂರಿನ ಕೆರೆಗಳು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದೇನೆ. ಮಿತ್ರ ಶಿವರಾಂ ನನ್ನನ್ನು ಮಾತಿಗೆಳೆದಿದ್ದಾರೆ. ಕಾರ್ಯಕ್ರಮ ದೂರದರ್ಶನ-1 ಮತ್ತು ಚಂದನದಲ್ಲಿ ಏಪ್ರಿಲ್ 13, 2009 ಸೋಮವಾರದಂದು, ಬೆಳಗ್ಗೆ 8-30 ಕ್ಕೆ ಪ್ರಸಾರವಾಗಲಿದೆ.
ದಯವಿಟ್ಟು ವೀಕ್ಷಿಸಿ, ಮತ್ತು ತಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿ.

Thursday, April 2, 2009

ಕೆರೆ ಕರಗುವ ಸಮಯ ಬಿಡುಗಡೆ...

ಅಂದು ವಿಶ್ವ ಜಲ ದಿನ. ಅಂದೇ ಕೆರೆ ಕರಗುವ ಸಮಯ ಪುಸ್ತಕ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ಇದಕ್ಕಾಗಿ ಅಲೆದಾಟ ಸಾಕಷ್ಟಿತ್ತು. ಪುಸ್ತಕ ಮಾರ್ಚ್ 10ಕ್ಕೆ ಸಿದ್ಧವಾಗುತ್ತದೆ ಎಂದು ಪ್ರಕಾಶಕ ಬೈರೇಗೌಡರು ಹೇಳಿದರು. ಆದರೆ, ಯಾವ ಸಭಾಂಗಣದಲ್ಲಿ ಸಮಾರಂಭ ಮಾಡೋದು ಎಂಬುದೇ ಸಮಸ್ಯೆಯಾಗಿತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ಕಲ್ಚರ್‌, ಗಾಯನ ಸಮಾಜ, ನಯನ, ರವೀಂದ್ರ ಕಲಾಕ್ಷೇತ್ರ ಹೀಗೆ ಹಲವು ಹಾಲ್ಗಳನ್ನು ಕೇಳಿದೆವು. ಎಲ್ಲೂ ಅಂದು ಖಾಲಿ ಇರಲಿಲ್ಲ. ಕೊನೆಗೆ ಭಾರತೀಯ ವಿದ್ಯಾಭವನ ವಿಚಾರಿಸಿದೆವು. ದುಬಾರಿ ಆದರೂ ಸರಿ ಅಂದೇ ಪುಸ್ತಕ ಬಿಡುಗಡೆ ಮಾಡಿಬಿಡೋಣ ಎಂದು ತೀರ್ಮಾನಿಸಿದೆವು. ಕೊನೆಯ ಗಳಿಗೆಯಲ್ಲಿ ಜೀವದ ಗೆಳಯ ಪ್ರತಾಪ ಸಿಂಹ ನೆರವಿಗೆ ಬಂದ. ಆತನಿಗೆ ಸಂಪರ್ಕವಿರುವವರನ್ನು ಕೇಳಿ, ಮಿಥಿಕ್ಸೊಸೈಟಿಯನ್ನು ಅಂದು ನೀಡಲು ಮನವಿ ಮಾಡಿಕೊಂಡ. ಪ್ರಯತ್ನ ಫಲ ನೀಡಿತು. ಮಾರ್ಚ್14ರಂದು ಅದನ್ನು ಬುಕ್ಮಾಡಲಾಯಿತು. ಮಾರ್ಚ್‌ 22 ಪುಸ್ತಕ ಬಿಡುಗಡೆ ವೇದಿಕೆ ಸಿದ್ಧವಾಯಿತು.
ಅರ್ಕಾವತಿ ಪಯಣವನ್ನು ಛಾಯಾಗ್ರಾಹಕ, ಆಪ್ತಮಿತ್ರ ಕೆ.ಎಸ್‌. ಶ್ರೀಧರನೊಂದಿಗೇ ಆರಂಭಿಸಿ ಆಗಲೇ ಒಂದು ತಿಂಗಳಾಗಿತ್ತು. ವಾರಾಂತ್ಯವೂ ಹೋಗಿ ಬಂದು ನಂತರ ಆಮಂತ್ರಣ ಪತ್ರಿಕೆ ನೀಡೋಣ ಎಂದು ಶ್ರೀಧರ ನಾನು ತೀರ್ಮಾನಿಸಿದೆವು. ಸೋಮವಾರದಿಂದ ಆಹ್ವಾನದ ವೇಳಾಪಟ್ಟಿ ಶುರುವಾಯಿತು. ಖುದ್ದಾಗಿ ಆಹ್ವಾನ ಪತ್ರಿಕೆ ಕೊಟ್ಟಿದ್ದು ಕಡಿಮೆ ಜನಕ್ಕಾದರೂ, ಎಸ್ಎಂಎಸ್, ಇಮೇಲ್ ಮೂಲಕ ಆತ್ಮೀಯರನ್ನು ಆಹ್ವಾನಿಸಿದ ಸಂಖ್ಯೆ ದೊಡ್ಡದಾಗಿತ್ತು. ಅಲೆದಾಟದಲ್ಲೇ ಶನಿವಾರ ಬಂತು. ಆದರೆ, ಗುರುವಾರದಿಂದ ನಮ್ಮ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರನ್ನು ಕಂಡಿರಲಿಲ್ಲ. ಆಗ ಗೊತ್ತಾಯಿತು, ಅವರು ಊರಲಿಲ್ಲ ಎಂದು. ಮೊಬೈಲ್ಗೆ ಸಂಪರ್ಕಿಸಿದರೆ ರೀಚ್ ಆಗಲಿಲ್ಲ. ತಳಮಳ ಆರಂಭ. ಕುಳಿತಲ್ಲಿ ಕೂರಲಾಗಲಿಲ್ಲ. ನಮ್ಮ ಮುಖ್ಯ ವರದಿಗಾರ ಪಿ. ತ್ಯಾಗರಾಜ್ ನನ್ನ ಪೀಕಲಾಟ ನೋಡಲಾಗದೆ, ಸಂಪಾದಕರು ಕರೆ ಮಾಡಿದ್ದಾಗ ಹೇಳಿಯೇ ಬಿಟ್ಟಿದ್ದರು. ನಾನು ರಾತ್ರಿ 10 ಗಂಟೆಗೆ ಕರೆ ಮಾಡಿದೆ. ಆಗ ‘ಬರುತ್ತಿದ್ದೇನೆ ಮಂಜುಎಂದರು. ಮನಸ್ಸು ಹಗುರವಾಯಿತು. ಬೆಳಗ್ಗೆ 8 ಗಂಟೆಗೆ ಮತ್ತೆ ಫೋನ್ ಮಾಡಿದಾಗ, ರಾತ್ರಿ 2.30ಕ್ಕೆ ಬಂದೆ. 10.30ಕ್ಕೆ ಮಿಥಿಕ್ ಸೊಸೈಟಿಯಲ್ಲಿರುತ್ತೇನೆ ಎಂದರು.
ಮಾರ್ಚ್ 22ರಂದು ಬೆಳಗ್ಗೆ 6ಕ್ಕೇ ಎದ್ದೆ. ರಾತ್ರಿ ಇಡೀ ನಿದ್ದೆ ಕಣ್ಣತ್ತಿರಲಿಲ್ಲ. ಎಲ್ಲವೂ ಸಮಾರಂಭದ ಮೇಲೇ ಕಣ್ಣು. ಬೆಳಗ್ಗೆ 9 ಗಂಟೆಗೇ ಮಿಥಿಕ್ ಸೊಸೈಟಿಗೆ ಪತ್ನಿ ಸೌಭಾಗ್ಯಳೊಂದಿಗೆ ಹಾಜರಾದೆ. ಕೆ.ಎಸ್‌. ಗಣೇಶ, ಬೈರೇಗೌಡರೊಂದಿಗೆ ಚರ್ಚಿಸಿದೆ. 10 ಗಂಟೆ ಆಗುತ್ತಿದ್ದಂತೆಯೇ ಸ್ನೇಹಿತರು ಬರಲಾರಂಭಿಸಿದರು. ಅದಕ್ಕೆ ಮುನ್ನವೇ ಮಹೇಶ್ ಹೆಗಡೆ ಬಂದಿದ್ದ. ಸಮಾರಂಭಕ್ಕೆ ಜನ ಬರುತ್ತಾರೋ ಇಲ್ಲವೋ ಎಂಬ ಆತಂಕ ಮೈತುಂಬಿಕೊಂಡಿತ್ತು. ಪರಿಸರವಾದಿ ಡಾ. .. ಯಲ್ಲಪ್ಪರೆಡ್ಡಿ 10ಗಂಟೆಗೇ ಹಾಜರಾದರು. 10.20ಕ್ಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದರು. ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯರಾದ ಡಾ. ಎಸ್.ಆರ್. ಲೀಲಾ ಹಾಜರಾದರು. 10.40ಕ್ಕೆ ಸಚಿವ ಆರ್. ಅಶೋಕ್ ಸಹ ಬಂದು ಸೇರಿಕೊಂಡರು.ಸಾಮಾನ್ಯವಾಗಿ ಸಚಿವರು ಸಮಾರಂಭದಲ್ಲಿರುತ್ತಾರೆಂದರೆ ಕಾರ್ಯಕ್ರಮ ಅರ್ಧ-ಮುಕ್ಕಾಲು ಗಂಟೆ ತಡವಾಗೋದು ಸಹಜ. ಆದರೆ ಇಲ್ಲಿ ಹಾಗಾಗಲಿಲ್ಲ. ವಿಶ್ವೇಶ್ವರ ಭಟ್ ಅವರೂ 10.30ಕ್ಕೇ ಬಂದಿದ್ದರಿಂದ ಸಮಾರಂಭ ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಆರಂಭವಾಯಿತು. ಆರಂಭದಲ್ಲಿ ಮಿಥಿಕ್ ಸೊಸೈಟಿ ಅರ್ಧ ಮಾತ್ರ ತುಂಬಿತ್ತು. ಆಮೇಲೆ, ಪ್ರಾರ್ಥನೆ ನಂತರ ನೋಡಿದಾಗ ಹಾಲ್ನಲ್ಲಿ ಹಾಕಿದ್ದ ಸುಮಾರು 180 ಕುರ್ಚಿಗಳು ತುಂಬಿಹೋದವು. ಸಂತಸಕ್ಕೋ ಏನೋ ಮಾತೇ ಹೊರಡಲಿಲ್ಲ. ವೇದಿಕೆ ಏರಿದ್ದು ಮೊದಲಲ್ಲವಾದರೂ, ಪ್ರಥಮ ಪುಸ್ತಕ ಬಿಡುಗಡೆ ಹಾಗೂ ನನ್ನದೇ ಕಾರ್ಯಕ್ರಮಕ್ಕಾಗಿ ವೇದಿಕೆಯಲ್ಲಿದ್ದು ಇದೇ ಪ್ರಥಮ .
ಆತ್ಮೀಯ ಸ್ನೇಹಿತರನ್ನು ಕಂಡು ಮನಸ್ಸು ತುಂಬಿ ಬಂದಿತ್ತು. ಮಾತು ಹೊರಡಲಿಲ್ಲ. ಎಲ್ಲರಿಗೂ ಧನ್ಯವಾದ ತಿಳಿಸಿ ಮಾತು ಮುಗಿಸಿದೆ. ಅಂದು ಆತ್ಮೀಯ ಸ್ನೇಹಿತರು ನನ್ನೊಂದಿಗಿದ್ದು ನನಗೆ ಹಿಂದೆಂದೂ ಇಲ್ಲದಷ್ಟು ಸಂತೋಷ ತಂದಿತ್ತು. ಇಷ್ಟು ಹೇಳಿದ್ದೇನೆ. ಕಾರ್ಯಕ್ರಮಕ್ಕೆ ಬಂದಿದ್ದವರೊಂದಿಗಿನ ನನ್ನ ಸ್ನೇಹಿತರು, ಆತ್ಮೀಯರೊಂದಿಗಿನ ಮಾತುಗಳನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

Wednesday, April 1, 2009

ಕೆರೆ ಆಳಕ್ಕೆ ಹೋಗುವ ಮುನ್ನ...

ಸಿಲಿಕಾನ್ ಸಿಟಿ, ಐಟಿ ಸಿಟಿ, ಹೈಟೆಕ್ ಸಿಟಿ ಎಂದೆಲ್ಲ ಪಟ್ಟ ಗಳಿಸುವ ಮುನ್ನ ಉದ್ಯಾನನಗರಿ ‘ಲೇಕ್ ಸಿಟಿ ಎಂಬ ಬಿರುದನ್ನೂ ಹೊಂದಿತ್ತು. ಇದು ಹೆಸರು ಮಾತ್ರವಲ್ಲ, ಬೆಂಗಳೂರು ತನ್ನ ವ್ಯಾಪ್ತಿಯಲ್ಲಿ ಹೊಂದಿದ್ದ ಕೆರೆಗಳ ವೈಭವದ ಪ್ರತಿಬಿಂಬವಾಗಿತ್ತು. ಆದರೆ ಈ ಮಾತು ಹಿಂದಿನ ಶತಮಾನದ್ದು. ಈಗ ಉಳಿದಿರುವ ಕೆಲವೇ ಕೆಲವು ಕೆರೆಗಳನ್ನು ಉಳಿಸಿಕೊಳ್ಳಲೂ ಪರಿತಪಿಸಬೇಕಾದ ಸನ್ನಿವೇಶ ಬಂದೊದಗಿದೆ. ಇದಕ್ಕೆ ಕಾರಣ ಯೋಜನೆ ಇಲ್ಲದೆ ಬೃಹತ್ ಪ್ರಮಾಣದಲ್ಲಿ ಅದರಲ್ಲೂ ಕ್ಷಿಪ್ರವೇಗದಲ್ಲಿ ವಿಸ್ತಾರವಾದ, ಆಗುತ್ತಿರುವ ಬೆಂಗಳೂರು.
ಬೆಂಗಳೂರು ನಗರದ ಶಿಲ್ಪಿ ಕೆಂಪೇಗೌಡರ ಕಾಲದ ಬೆಂದಕಾಳೂರು ತನ್ನ ನಾಲ್ಕು ದಿಕ್ಕಿನ ಗೋಪುರಗಳ ಒಳಗೆ ಇದ್ದಾಗ ಸಮೃದ್ಧವಾಗಿತ್ತು. ಆನಂತರದ ಕೆಲ ದಶಕಗಳು ಕಳೆದ ಮೇಲೂ ನಗರ ಹವಾನಿಯಂತ್ರಿತವಾಗಿಯೇ ಇತ್ತು. ಇದಕ್ಕೆ ಕಾರಣ ಈ ನಗರದ ಒಳಗೆ ಹಾಗೂ ಸುತ್ತಮುತ್ತಲಿದ್ದ ಕೆರೆಗಳು. ಅಂತರ್ಜಲದ ಸಮೃದ್ಧಿಯಿಂದ ಹಿಡಿದು ಆಹ್ಲಾದಕರ ವಾತಾವರಣಕ್ಕೆ ಉದ್ಯಾನನಗರಿಗೆ ಆಸರೆಯಾಗಿದ್ದವು. ಐಟಿ ಸಿಟಿ ಎಂಬ ಪಟ್ಟಕ್ಕೆ ಅಂಬೆಗಾಲಿಡಲು ಆರಂಭಿಸಿದಂದಿನಿಂದ ಹವಾನಿಯಂತ್ರಿತ ನಗರಿಯ ವಾಸ್ತವ ಚಿತ್ರಣ ಬದಲಾಗುತ್ತಾ ಹೋಯಿತು. ಪೂರ್ವ ಯೋಜನೆ ಇಲ್ಲದೇ ೩೬೦ ಡಿಗ್ರಿಯಲ್ಲೂ ನಗರ ಬೆಳೆಯುತ್ತಾ ಸಾಗಿತು. ಎಲ್ಲಿ ನೋಡಿದರೂ ಬಡಾವಣೆಗಳು, ರಸ್ತೆಗಳು, ಕಟ್ಟಡಗಳು. ಕಾಂಕ್ರೀಟ್ ಕಾಡಾಗುವಾಗ ಹಿಂದಿನ ವೈಭವಕ್ಕೆ ಕಾರಣವಾದ ಕೆರೆಗಳನ್ನು ಮರೆಯಲಾಯಿತು. ಅಷ್ಟಾಗಿದ್ದರೆ ಪರವಾಗಿರಲಿಲ್ಲ, ಆ ಕೆರೆಗಳ ಸಮಾಧಿ ಮೇಲೆಯೇ ಬಡಾವಣೆ, ಅಭಿವೃದ್ಧಿ ಯೋಜನೆಗಳು ನಿರ್ಮಾಣವಾದವು. ಅಂದು ಮಾಡಿದ ತಪ್ಪಿಗೆ ಇಂದು ನಗರ ವಾತಾವರಣದ ವಿಕೋಪದಿಂದ ನರಳುತ್ತಿದೆ.
ಬೆಂಗಳೂರಿನಲ್ಲಿ ಕಳೆದ ಶತಮಾನದಲ್ಲಿ 262 ಕೆರೆಗಳಿದ್ದವು. ಈಗ ಎಣಿಕೆಯಲ್ಲಿ ಉಳಿದಿರುವುದು ೧೨೭. ಆದರೆ, ಇದರಲ್ಲಿ ೨೦೦೮ರ ವೇಳೆಗೆ ಜೀವಂತಿಕೆಯಿಂದಿರುವುದು ಕೇವಲ 81 ಕೆರೆಗಳು ಮಾತ್ರ. ಕೆಲವು ದಶಕಗಳ ಹಿಂದೆ ನಗರವಾಸಿಗಳ ಜೀವಜಲದ ಕೇಂದ್ರಬಿಂದುವಾಗಿದ್ದ ಕೆರೆಗಳಲ್ಲಿ ಕೆಲವು ಅಭಿವೃದ್ಧಿಯ ಹೆಸರಿನಲ್ಲಿ ನಿರ್ನಾಮವಾಗಿವೆ. ಇನ್ನು ಕೆಲವು ಕೆರೆಗಳು ಅದೇ ಅಭಿವೃದ್ಧಿಗಾಗಿ ಜೀವ ನೀಡುತ್ತಿವೆ. ಬೆಂಗಳೂರಿನಲ್ಲಿರುವ ಕೆರೆಗಳು ಯಾರ ಲೆಕ್ಕದಲ್ಲಿ ಸರಿ ಇವೆ, ಯಾರದ್ದು ತಪ್ಪು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಒಬ್ಬರು ನೀಡುವ ಲೆಕ್ಕಕ್ಕೂ ಮತ್ತೊಬ್ಬರ ಮಾಹಿತಿಗೂ ಅಜಗಜಾಂತರ. ಬೆಂಗಳೂರಿನಲ್ಲಿ ೮೧ ಕೆರೆಗಳಿವೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಅದರ ಪಟ್ಟಿಯನ್ನು ನೀಡುತ್ತದೆ. ಆದರೆ, ಕೆರೆಯ ಮುಂದೇ ಪ್ರಾಧಿಕಾರದ್ದೇ ಫಲಕವಿದ್ದರೂ, ಈ ಕೆರೆ ಪಟ್ಟಿಯಲ್ಲಿಲ್ಲ. ಇದು ಯಾರ ಲೆಕ್ಕಕ್ಕೆ ಹೋಗಿದೆ?. ಲೆಕ್ಕದಲ್ಲಿ ಇರುವ ಕೆರೆಗಳೇ ಪೂರ್ಣ ಉಳಿದಿಲ್ಲ. ಲೆಕ್ಕಕ್ಕೇ ಇಲ್ಲದ ಕೆರೆಗಳ ಪರಿಸ್ಥಿತಿ ಏನು? ಆಟಕ್ಕೆ ಇದ್ದರೂ ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ.

ಕೆರೆ ಕರಗುವ ಸಮಯ

ಬೆಂಗಳೂರಿನ ಕೆರೆಗಳನ್ನು ಸುತ್ತುವಾಗ ಸಾಕಷ್ಟು ನೋವು-ನಲಿವುಗಳನ್ನು ಉಂಡಿದ್ದೇನೆ. ಆದರೆ, ಕೆರೆಯ ಸ್ಥಿತಿ ನೋಡಿದಾಗ, ಅದನ್ನು ದಾಖಲಿಸಲು, ಅದಕ್ಕಾಗಿ ಪಟ್ಟಶ್ರಮ ಸಾರ್ಥಕ ಎಂದೆನಿಸಿದೆ. ಕೆಲವು ಅನುಭವಗಳನ್ನು ಮುಂದೆ ಹಂಚಿಕೊಳ್ಳುತ್ತೇನೆ. ಒಂದು ಕಾಲದಲ್ಲಿ ಜೀವಜಲವಾಗಿ ನಗರದ ಜನರಿಗೆ ಕುಡಿಯುವ ನೀರಿನ ತಾಣವಾಗಿದ್ದ ಕೆರೆಗಳಲ್ಲಿ, ಇಂದು ಉಗುಳಲೂ ಮನಸ್ಸು ಬರುವುದಿಲ್ಲ. ಅಂದರೆ, ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಊಹಿಸಿಕೊಳ್ಳಿ. ಕೆರೆಗಳ ಸ್ಥಿತಿ ಬಗ್ಗೆ ಬರೆಯುವಾಗ ಮನಸ್ಸಿನಾಳದಲ್ಲಿ ದುಃಖದ ಛಾಯೆ ಆವರಿಸಿತ್ತು. ನಿರ್ಮಾತೃ ಕೆಂಪೇಗೌಡ ಮತ್ತು ನಮ್ಮ ಪೂರ್ವಜರು ಕಟ್ಟಿಬೆಳೆಸಿದ ಕೆರೆಗಳ ಬಗ್ಗೆ ರೀತಿ ಬರೆಯಬೇಕಾಯಿತಲ್ಲ ಎಂಬ ನೋವಿದೆ.
ಇದೇ ಕೆರೆ ಕರಗುವ ಸಮಯ...