Saturday, April 11, 2009

ಕೆರೆ ಕರಗುವ ಸಮಯ ಬಿಡುಗಡೆ-2

ಕೆರೆ ಕರಗುವ ಸಮಯ ಪುಸ್ತಕ ಬಿಡುಗಡೆ ಸಮಾರಂಭವನ್ನು ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇನೆ. ಇದಕ್ಕೊಂದು ಕಾಮೆಂಟ್ಬರೆದಿರುವ ಸ್ನೇಹಿತ ಮಹೇಶ್‌ ಯಲಗೋಡಮನೆ, ಸಮಾರಂಭದಲ್ಲಿ ಸವಿದ ಕೇಸರಿಬಾತ್ ಹಾಗೂ ಇಡ್ಲಿ ವಡೆ ಬಗ್ಗೆ ಹೇಳಿದ್ದಾನೆ. ಅವನಿಗೊಂದು ಥ್ಯಾಂಕ್ಸ್ಹೇಳುತ್ತಾ, ನಾನು ಹಿಂದೆ ನಿಮಗೆ ತಿಳಿಸಿದಂತೆ, ಸಮಾರಂಭದಲ್ಲಿ ನನ್ನ ಸ್ನೇಹಿತರು, ಆತ್ಮೀಯರನ್ನು ನಾನು ಕಂಡ ರೀತಿಯನ್ನು ವಿವರಿಸುತ್ತೇನೆ.
ಬೆಳಗ್ಗೆ 9.15ಕ್ಕೆ ಮಿಥಿಕ್‌ ಸೊಸೈಟಿಗೆ ಸತಿಸಹಿತ ಬಂದಿಳಿದೆ. ಬೈರೇಗೌಡ, ಗಣೇಶ ಕಂಡರು. ಮತ್ತಷ್ಟು ತಯಾರಿ ಕೆಲಸ ಆಗುತ್ತಿತ್ತು. ಛಾಯಾಚಿತ್ರ ಪ್ರದರ್ಶನ ತಯಾರಿ ನಡೆಯುತ್ತಿತ್ತು. ಕಾರಿನಲ್ಲಿ ಕುಳಿದ್ದಾಗಲೇ ಮಹೇಶ ಬಂದಿಳಿದ. ಪತ್ನಿ ಎಲ್ಲೋ ಎಂದರೆ, ಬೇಗ ಹೊರಟೆ ಕರೆ ತರಲಿಲ್ಲ ಎಂದ. ಅವನು ಮನಸ್ಸು ಮಾಡಿದ್ದರೆ ಕರೆ ತರಬಹುದಾಗಿತ್ತು, ಆದರೆ, ಬೇಡ ಅಂದುಕೊಂಡನೋ ಏನೋ? ಗೊತ್ತಿಲ್ಲ. ಅವನೊಂದಿಗೆ ಒಂದು ಮಾತನಾಡಿ, ವಿಡಿಯೊ ಕ್ಯಾಮೆರಾದಲ್ಲಿ ಸಮಾರಂಭ ಸೆರೆ ಹಿಡಿಯುವ ಕಾರ್ಯವನ್ನು ಒಪ್ಪಿಸಿದೆ.
ಇಷ್ಟಾದ ಮೇಲೆ, ಉಪಹಾರ ನೀಡುವ ತಂಡ ತನ್ನ ಕಾರ್ಯ ಆರಂಭಿಸಿತ್ತು. ಅಲ್ಲಿಯೇ ಇಡ್ಲಿ-ವಡೆಯ ತಯಾರಿಯೂ ನಡೆದಿತ್ತು. ಪ್ರವೇಶ ದ್ವಾರ ಬಳಿ ತಿಂಡಿ ಏರ್ಪಾಟು ಬೇಡ ಎಂದು, ಪಕ್ಕದಲ್ಲಿ ಅದರ ವ್ಯವಸ್ಥೆ ಮಾಡಿಸಲಾಯಿತು. ಇಷ್ಟೆಲ್ಲ ಆಗುವಷ್ಟರಿಗೆ ಒಬ್ಬೊಬ್ಬರು ಬರಲಾರಂಭಿಸಿದರು. ಪ್ರಥಮವಾಗಿ ಬಂದವ ಸ್ನೇಹಿತ ಕೆ.ಎಸ್‌. ಶ್ರೀಧರ್‌. ಅವನೇ ಅಂದಿನ ದಿನ ಛಾಯಾಗ್ರಾಹಕ. ನಾವು ಹೀಗೆ ಮಾತನಾಡುತ್ತಿರುವಾಗಲೇ ಪರಿಸರ ಚಟುವಟಿಕೆಗಳಲ್ಲಿ ನಿರವಾಗಿರುವ ಶಿವಮಲ್ಲು ಬಂದರು. ಕಚೇರಿಯ ಸ್ನೇಹಿತರಾದ ಪ್ರೇಮ್‌ಕುಮರ್‍‌ ಆಗಮಿಸಿದರು.
ಬೈರಸಂದ್ರ ಕೆರೆಯನ್ನು ಉಳಿಸಲು ಹೋರಾಡುತ್ತಿರುವ ವೆಂಕಟಸುಬ್ಬರಾವ್‌ ಆಗಮಿಸಿದಾಗ ಸಂತಸವಾಯಿತು. ಒಂದು ಕರೆ ಮಾಡಿ ಹೇಳಿದ್ದೆ ಅಷ್ಟೇ. ಇಂತಹ ಕಾರ್ಯಕ್ರಮಕ್ಕೆ ಬರಲಾಗದೆ ಇರುವುದಕ್ಕೆ ಸಾಧ್ಯವೇ? ಎಂದು ಬಂದಿದ್ದರು. ಈ ಸಮಯಕ್ಕೇ ಮುಖ್ಯ ಅತಿಥಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ ಬಂದರು. ಅವರನ್ನು ಎಲ್ಲರೂ ಬರಮಾಡಿಕೊಂಡು, ಸಭಾಂಗಣದಲ್ಲಿ ಕೂರಿಸಿ, ಅವರೊಂದಿಗೆ ಒಂದಷ್ಟು ಮಾತನಾಡಿದೆವು.
ಹೊರಗೆ ತಿಂಡಿ ವ್ಯವಸ್ಥೆ ಆಗಿತ್ತು. ಯಲ್ಲಪ್ಪರೆಡ್ಡಿ ಅವರನ್ನು ಕರೆತಂದು, ತಿಂಡಿ ಕೊಡಿಸಿ ಇತ್ತ ಸರಿದಾಗ, ಅಲ್ಲಿದ್ದರು ಡಾ. ನಾ. ಸೋಮೇಶ್ವರ. ಅವರಿಗೊಂದು ಎಸ್‌ಎಂಎಸ್‌ ಕಳುಹಿಸಿದ್ದೆ. ನನ್ನ ಆಮಂತ್ರಣಕ್ಕೆ ಓಗೊಟ್ಟು ಬಂದಿದ್ದ ಅವರನ್ನು ನೋಡಿ ಅತೀವ ಆನಂದವಾಯಿತು. ಅವರು ತಮ್ಮ ಮೇಷ್ಟ್ರು ಅವರನ್ನು ಪರಿಚಯ ಮಾಡಿಕೊಟ್ಟರು. ಈ ಸಮಾರಂಭದಿಂದ ಇವರನ್ನು ಭೇಟಿ ಮಾಡಿದಂತಾಯಿತು ಎಂದು ಸಂತಸಪಟ್ಟರು.
ಎಫ್‌ಕೆಸಿಸಿಐ ವಿಜಯ್‌ ಸತಿಸಹಿತ ಬಂದರು. ಸುಗಮಗೀತೆ ಗಾಯಕ ಮೃತ್ಯುಂಜಯ ದೊಡ್ಡವಾಡ, ಜಮಾದಾರ್‍, ರಾಮಲಿಂಗ ಶೆಟ್ರು ಬಂದ್ರು. ಮಂಜುನಾಥ ಹಿರೇಮಠ, ಸಾಧು ಶ್ರೀನಾಥ್‌, ಪುಣ್ಯವತಿ, ಪ್ರಕಾಶ್ ಬಾಬು, ಶಶಿಧರ್‌ ನಂದಿಕಲ್‌, ಮುನೇಗೌಡ, ಸುರೇಶ್ ಬಂದರು. ನನ್ನ ಮಾವಂದಿರಾದ ಆರ್‌. ಪಾಲಾಕ್ಷ, ಆರ್‍.ಎಚ್. ರಾಜು, ಸೋದರ ಜಗದೀಶ ಬಂದರು.
ಆನೆ ಆಕ್ಟೀವಾದ ಮೇಲೆ ಬಂದಾಗ...
ತಿಂಡಿ ತಿಂದೇ ಬಿಡೋಣ ಎಂದು ಎರಡು ಇಡ್ಲಿಯನ್ನು ತಟ್ಟೆಗಿರಿಸಿಕೊಂಡು ನಿಂತಾಗ, ಕಾಣಿಸಿಕೊಂಡಿತು ಆಕ್ಟೀವಾದ ಮೇಲೆ ಆನೆ. ಹೌದು, ಅವನು ನನ್ನ ಸ್ನೇಹಿತ ಡುಮ್ಮ-ಎಂ.ಎಸ್‌. ಆನಂದ್. ಆಕ್ಟೀವಾ ಮೇಲೇರಿ ಅದನ್ನು ಓಡಿಸಿಕೊಂಡು ಬಂದಿದ್ದ. ಹಿಂದೆ ವೇಣುಗೋಪಾಲ್‌, ಮತ್ತೊಂದರಲ್ಲಿ ಆಪ್ತಸ್ನೇಹಿತ ಕೆ.ಎಸ್‌. ಜಗನ್ನಾಥ್. ಆನಂದನನ್ನು ನಾವು ಆನೆ ಎಂದೇ ಕರೆಯೋದು. ಆತನ ಗಾತ್ರ ಮತ್ತು ಆ ಮುಗ್ಧತೆಗೆ ಆನೆ ಸೂಕ್ತ ಹೋಲಿಕೆ.
ಇವರ ಹಿಂದೆಯೇ ದಿಂಡಲಕೊಪ್ಪ, ವಿಜಯ್‌ ಲೊಂಡೆ, ಬಾಷಾ ಗೂಳ್ಯಂ ಬಂದರು. ರಾಧಾಕೃಷ್ಣ ಭಡ್ತಿ, ಚಂದ್ರಕಲಾ ಬೈಕ್‌ನಿಂದ ಇಳಿದರು. ನಮ್ಮ ರಿಸೆಪ್ಷನಿಸ್ಟ್‌ ದೀಪಾ ಆಗಮಿಸಿದಾಗ, ಮಹೇಶ ಸಣ್ಣಗೆ ಉಸುರಿದ್ದ: ನಮ್ಮ ಪ್ರವೇಶದ್ವಾರದ ಆಕರ್ಷಣೆ ಎಂದು. ಈ ನಡುವೆ ಜೀವದ ಗೆಳೆಯ ಪ್ರತಾಪ್‌ ಸಿಂಹ, ಕರೆ ಮಾಡಿದ್ದ. ಊರಿನಲ್ಲಿ ತುರ್ತು ಕಾರ್ಯದ ನಿಮಿತ್ತ ಹೋಗಿದ್ದ ಅವನಿಗೆ, ಸಮಾರಂಭದ ಬಗ್ಗೆ ಸಾಕಷ್ಟು ಕಾಳಜಿ ಇತ್ತು. ಅದಕ್ಕೇ ಹೇಗೆ ತಯಾರಿ ಆಗುತ್ತಿದೆಯೋ? ಸರಿಯಾಗಿ ನೋಡಿಕೊ. ಏನಾದರೂ ಆಗಬೇಕಾ? ಎಂದೆಲ್ಲಾ ಕರೆ ಮಾಡಿ ವಿಚಾರಿಸಿಕೊಂಡ.
ಇಷ್ಟೆಲ್ಲ ಆಗುವ ವೇಳೆಗೆ ಪಿ. ತ್ಯಾಗರಾಜ್‌ ಪತ್ನಿ ಸಮೇತ ಆಗಮಿಸಿದರು. ಅವರೊಂದಿಗೆ ಬೆರೆತು, ನನ್ನ ಪತ್ನಿಯನ್ನು ಅವರಿಗೆ ಪರಿಚಯಿಸಿ ತಿಂಡಿಗೆ ಆಹ್ವಾನಿಸಿದೆ. ಅಷ್ಟರಲ್ಲಿ ನನ್ನ ಸ್ನೇಹಿತರಾದ ಎಲ್.ಸಿ. ನಾಗರಾಜ್‌, ಶಿವರಾಂ ಆಗಮಿಸಿದ್ದರು. ಅವರೊಂದಿಗಿಷ್ಟು ಚರ್ಚೆ ಮಾಡುತ್ತಿದ್ದಾಗಲೇ, ಸುರೇಶ್‌ ಹೆಬ್ಳೀಕರ್‌ ಕರೆ ಮಾಡಿದರು. ನಾನು ಧಾರವಾಡದಿಂದ ಬರುತ್ತಿದ್ದೇನೆ. ಕಳೆದ ರಾತ್ರಿ ಹೊರಡಲು ಸಾಧ್ಯವಾಗಲಿಲ್ಲ. ಮುಂಜಾನೆಯೇ ಹೊರಟಿದ್ದೇನೆ. ನಿಮ್ಮ ಕಾರ್ಯಕ್ರಮದ ವೇಳೆಗೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಪರಿತಪಿಸಿದರು. ಏಕೆಂದರೆ, ಈ ಸಮಾರಂಭಕ್ಕೆ ಶೇ.99.9 ರಷ್ಟು ಬರುತ್ತೇನೆ ಎಂದು ಹೇಳಿದ್ದರು. ಆದರೆ ೦.01 ಯಶಸಾಧಿಸಿತ್ತು.
ಇದಾದ ಮೇಲೆ ಸಹೋದ್ಯೋಗಿ ಸಂಗಮೇಶ ಬಂದರು. ಅವರೊಂದಿಗೆ ಸ್ನೇಹಿತರನ್ನು ಕರೆತಂದು ಇವರು ನಿಮ್ಮ ಕೆರೆ ಲೇಖನದ ಅಭಿಮಾನಿ ಎಂದರು. ಖುಷಿ ಆಯಿತು. ಇಂತಹ ಓದುಗರಿಂದಲೇ ಇದು ಸಾಧ್ಯವಾದದ್ದಲ್ಲೇ ಎಂದು ನಾನೇ ಪ್ರಶ್ನಿಸಿಕೊಂಡೆ.
ಇದಾದ ಮೇಲೆ ಸಹೋದ್ಯೋಗಿ-ಸ್ನೇಹಿತರು ತಿಂಡಿ ತಿನ್ನುವಾಗ ಒಂದಿಷ್ಟು ಹರಟೆ ಹೊಡೆದೆವು. ಅಲ್ಲಿಷ್ಟು ಓಡಾಟ, ಇವರೊಂದಿಗೊಷ್ಟು ಮಾತು ಆಗುತ್ತಿರುವಂತೆಯೇ, ಸಮಯ ಬಂತೇಬಿಟ್ಟಿತು. ವಿಧಾನಪರಿಷತ್‌ ಸದಸ್ಯೆ ಎಸ್‌.ಆರ್‌. ಲೀಲಾ ಬಂದರು. ಆತ್ಮೀಯವಾಗಿ ಅವರನ್ನು ಸ್ವಾಗತಿಸಿದೆ. 10.20 ಅಷ್ಟೇ. ಆ ವೇಳೆಗೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದರು. ಇನ್ನೇನು ಸಮಾರಂಭ ಆರಂಭಿಸುವ ತವಕ...ಹೆಚ್ಚಾಯಿತು. ಹಿಂದೆಯೇ ನನ್ನ ಮಾರ್ಗದರ್ಶಕರಾದ ವಿಶ್ವೇಶ್ವರ ಭಟ್‌ ಬಂದರು. ಇನ್ನೇನು ಕಾರ್ಯಕ್ರಮ ಶುರು. ಈ ಓಡಾಟದಲ್ಲಿ ಎಲ್ಲರನ್ನೂ ಗಮನಿಸಲು ಸಾಧ್ಯವಾಗಲೇ ಇಲ್ಲ. ಅವರಿಗೆಲ್ಲ ಒಂದೊಂದು ಕ್ಷಮೆಯಾಚನೆ. ನನ್ನನ್ನು ತಪ್ಪು ತಿಳಿದುಕೊಳ್ಳಬಾರದೆಂದು ಮನವಿ ಮಾಡಿಕೊಡುತ್ತೇನೆ. ಏಕೆಂದರೆ ಬಹುತೇಕರು ಬರುವವಷ್ಟರಲ್ಲಿ ನಾನು ವೇದಿಕೆ ಏರಬೇಕಾಗಿತ್ತು.
ಆದರೆ ಸಮಾರಂಭ ಮುಗಿಯಿತಲ್ಲ, ಇದ್ದವರನ್ನೆಲ್ಲ ಮಾತನಾಡಿಸಿದೆ. ನನ್ನ ಸಂತೋಷಕ್ಕೆ ಅಂದು ಕೊನೆಯೇ ಇರಲಿಲ್ಲ. ಸಮಾರಂಭದ ನಂತರದ ವಿಷಯವನ್ನು ಆನಂತರ ಬರೆಯುತ್ತೇನೆ...

3 comments:

  1. Hi, it's a very great blog.
    I could tell how much efforts you've taken on it.
    Keep doing!

    ReplyDelete
  2. hi
    thank you for your compliment. Could i know, who is this?
    rgds
    Manju

    ReplyDelete
  3. hai Manju, good effort continue all the very best

    ReplyDelete