Thursday, April 2, 2009

ಕೆರೆ ಕರಗುವ ಸಮಯ ಬಿಡುಗಡೆ...

ಅಂದು ವಿಶ್ವ ಜಲ ದಿನ. ಅಂದೇ ಕೆರೆ ಕರಗುವ ಸಮಯ ಪುಸ್ತಕ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ಇದಕ್ಕಾಗಿ ಅಲೆದಾಟ ಸಾಕಷ್ಟಿತ್ತು. ಪುಸ್ತಕ ಮಾರ್ಚ್ 10ಕ್ಕೆ ಸಿದ್ಧವಾಗುತ್ತದೆ ಎಂದು ಪ್ರಕಾಶಕ ಬೈರೇಗೌಡರು ಹೇಳಿದರು. ಆದರೆ, ಯಾವ ಸಭಾಂಗಣದಲ್ಲಿ ಸಮಾರಂಭ ಮಾಡೋದು ಎಂಬುದೇ ಸಮಸ್ಯೆಯಾಗಿತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ಕಲ್ಚರ್‌, ಗಾಯನ ಸಮಾಜ, ನಯನ, ರವೀಂದ್ರ ಕಲಾಕ್ಷೇತ್ರ ಹೀಗೆ ಹಲವು ಹಾಲ್ಗಳನ್ನು ಕೇಳಿದೆವು. ಎಲ್ಲೂ ಅಂದು ಖಾಲಿ ಇರಲಿಲ್ಲ. ಕೊನೆಗೆ ಭಾರತೀಯ ವಿದ್ಯಾಭವನ ವಿಚಾರಿಸಿದೆವು. ದುಬಾರಿ ಆದರೂ ಸರಿ ಅಂದೇ ಪುಸ್ತಕ ಬಿಡುಗಡೆ ಮಾಡಿಬಿಡೋಣ ಎಂದು ತೀರ್ಮಾನಿಸಿದೆವು. ಕೊನೆಯ ಗಳಿಗೆಯಲ್ಲಿ ಜೀವದ ಗೆಳಯ ಪ್ರತಾಪ ಸಿಂಹ ನೆರವಿಗೆ ಬಂದ. ಆತನಿಗೆ ಸಂಪರ್ಕವಿರುವವರನ್ನು ಕೇಳಿ, ಮಿಥಿಕ್ಸೊಸೈಟಿಯನ್ನು ಅಂದು ನೀಡಲು ಮನವಿ ಮಾಡಿಕೊಂಡ. ಪ್ರಯತ್ನ ಫಲ ನೀಡಿತು. ಮಾರ್ಚ್14ರಂದು ಅದನ್ನು ಬುಕ್ಮಾಡಲಾಯಿತು. ಮಾರ್ಚ್‌ 22 ಪುಸ್ತಕ ಬಿಡುಗಡೆ ವೇದಿಕೆ ಸಿದ್ಧವಾಯಿತು.
ಅರ್ಕಾವತಿ ಪಯಣವನ್ನು ಛಾಯಾಗ್ರಾಹಕ, ಆಪ್ತಮಿತ್ರ ಕೆ.ಎಸ್‌. ಶ್ರೀಧರನೊಂದಿಗೇ ಆರಂಭಿಸಿ ಆಗಲೇ ಒಂದು ತಿಂಗಳಾಗಿತ್ತು. ವಾರಾಂತ್ಯವೂ ಹೋಗಿ ಬಂದು ನಂತರ ಆಮಂತ್ರಣ ಪತ್ರಿಕೆ ನೀಡೋಣ ಎಂದು ಶ್ರೀಧರ ನಾನು ತೀರ್ಮಾನಿಸಿದೆವು. ಸೋಮವಾರದಿಂದ ಆಹ್ವಾನದ ವೇಳಾಪಟ್ಟಿ ಶುರುವಾಯಿತು. ಖುದ್ದಾಗಿ ಆಹ್ವಾನ ಪತ್ರಿಕೆ ಕೊಟ್ಟಿದ್ದು ಕಡಿಮೆ ಜನಕ್ಕಾದರೂ, ಎಸ್ಎಂಎಸ್, ಇಮೇಲ್ ಮೂಲಕ ಆತ್ಮೀಯರನ್ನು ಆಹ್ವಾನಿಸಿದ ಸಂಖ್ಯೆ ದೊಡ್ಡದಾಗಿತ್ತು. ಅಲೆದಾಟದಲ್ಲೇ ಶನಿವಾರ ಬಂತು. ಆದರೆ, ಗುರುವಾರದಿಂದ ನಮ್ಮ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರನ್ನು ಕಂಡಿರಲಿಲ್ಲ. ಆಗ ಗೊತ್ತಾಯಿತು, ಅವರು ಊರಲಿಲ್ಲ ಎಂದು. ಮೊಬೈಲ್ಗೆ ಸಂಪರ್ಕಿಸಿದರೆ ರೀಚ್ ಆಗಲಿಲ್ಲ. ತಳಮಳ ಆರಂಭ. ಕುಳಿತಲ್ಲಿ ಕೂರಲಾಗಲಿಲ್ಲ. ನಮ್ಮ ಮುಖ್ಯ ವರದಿಗಾರ ಪಿ. ತ್ಯಾಗರಾಜ್ ನನ್ನ ಪೀಕಲಾಟ ನೋಡಲಾಗದೆ, ಸಂಪಾದಕರು ಕರೆ ಮಾಡಿದ್ದಾಗ ಹೇಳಿಯೇ ಬಿಟ್ಟಿದ್ದರು. ನಾನು ರಾತ್ರಿ 10 ಗಂಟೆಗೆ ಕರೆ ಮಾಡಿದೆ. ಆಗ ‘ಬರುತ್ತಿದ್ದೇನೆ ಮಂಜುಎಂದರು. ಮನಸ್ಸು ಹಗುರವಾಯಿತು. ಬೆಳಗ್ಗೆ 8 ಗಂಟೆಗೆ ಮತ್ತೆ ಫೋನ್ ಮಾಡಿದಾಗ, ರಾತ್ರಿ 2.30ಕ್ಕೆ ಬಂದೆ. 10.30ಕ್ಕೆ ಮಿಥಿಕ್ ಸೊಸೈಟಿಯಲ್ಲಿರುತ್ತೇನೆ ಎಂದರು.
ಮಾರ್ಚ್ 22ರಂದು ಬೆಳಗ್ಗೆ 6ಕ್ಕೇ ಎದ್ದೆ. ರಾತ್ರಿ ಇಡೀ ನಿದ್ದೆ ಕಣ್ಣತ್ತಿರಲಿಲ್ಲ. ಎಲ್ಲವೂ ಸಮಾರಂಭದ ಮೇಲೇ ಕಣ್ಣು. ಬೆಳಗ್ಗೆ 9 ಗಂಟೆಗೇ ಮಿಥಿಕ್ ಸೊಸೈಟಿಗೆ ಪತ್ನಿ ಸೌಭಾಗ್ಯಳೊಂದಿಗೆ ಹಾಜರಾದೆ. ಕೆ.ಎಸ್‌. ಗಣೇಶ, ಬೈರೇಗೌಡರೊಂದಿಗೆ ಚರ್ಚಿಸಿದೆ. 10 ಗಂಟೆ ಆಗುತ್ತಿದ್ದಂತೆಯೇ ಸ್ನೇಹಿತರು ಬರಲಾರಂಭಿಸಿದರು. ಅದಕ್ಕೆ ಮುನ್ನವೇ ಮಹೇಶ್ ಹೆಗಡೆ ಬಂದಿದ್ದ. ಸಮಾರಂಭಕ್ಕೆ ಜನ ಬರುತ್ತಾರೋ ಇಲ್ಲವೋ ಎಂಬ ಆತಂಕ ಮೈತುಂಬಿಕೊಂಡಿತ್ತು. ಪರಿಸರವಾದಿ ಡಾ. .. ಯಲ್ಲಪ್ಪರೆಡ್ಡಿ 10ಗಂಟೆಗೇ ಹಾಜರಾದರು. 10.20ಕ್ಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದರು. ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯರಾದ ಡಾ. ಎಸ್.ಆರ್. ಲೀಲಾ ಹಾಜರಾದರು. 10.40ಕ್ಕೆ ಸಚಿವ ಆರ್. ಅಶೋಕ್ ಸಹ ಬಂದು ಸೇರಿಕೊಂಡರು.ಸಾಮಾನ್ಯವಾಗಿ ಸಚಿವರು ಸಮಾರಂಭದಲ್ಲಿರುತ್ತಾರೆಂದರೆ ಕಾರ್ಯಕ್ರಮ ಅರ್ಧ-ಮುಕ್ಕಾಲು ಗಂಟೆ ತಡವಾಗೋದು ಸಹಜ. ಆದರೆ ಇಲ್ಲಿ ಹಾಗಾಗಲಿಲ್ಲ. ವಿಶ್ವೇಶ್ವರ ಭಟ್ ಅವರೂ 10.30ಕ್ಕೇ ಬಂದಿದ್ದರಿಂದ ಸಮಾರಂಭ ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಆರಂಭವಾಯಿತು. ಆರಂಭದಲ್ಲಿ ಮಿಥಿಕ್ ಸೊಸೈಟಿ ಅರ್ಧ ಮಾತ್ರ ತುಂಬಿತ್ತು. ಆಮೇಲೆ, ಪ್ರಾರ್ಥನೆ ನಂತರ ನೋಡಿದಾಗ ಹಾಲ್ನಲ್ಲಿ ಹಾಕಿದ್ದ ಸುಮಾರು 180 ಕುರ್ಚಿಗಳು ತುಂಬಿಹೋದವು. ಸಂತಸಕ್ಕೋ ಏನೋ ಮಾತೇ ಹೊರಡಲಿಲ್ಲ. ವೇದಿಕೆ ಏರಿದ್ದು ಮೊದಲಲ್ಲವಾದರೂ, ಪ್ರಥಮ ಪುಸ್ತಕ ಬಿಡುಗಡೆ ಹಾಗೂ ನನ್ನದೇ ಕಾರ್ಯಕ್ರಮಕ್ಕಾಗಿ ವೇದಿಕೆಯಲ್ಲಿದ್ದು ಇದೇ ಪ್ರಥಮ .
ಆತ್ಮೀಯ ಸ್ನೇಹಿತರನ್ನು ಕಂಡು ಮನಸ್ಸು ತುಂಬಿ ಬಂದಿತ್ತು. ಮಾತು ಹೊರಡಲಿಲ್ಲ. ಎಲ್ಲರಿಗೂ ಧನ್ಯವಾದ ತಿಳಿಸಿ ಮಾತು ಮುಗಿಸಿದೆ. ಅಂದು ಆತ್ಮೀಯ ಸ್ನೇಹಿತರು ನನ್ನೊಂದಿಗಿದ್ದು ನನಗೆ ಹಿಂದೆಂದೂ ಇಲ್ಲದಷ್ಟು ಸಂತೋಷ ತಂದಿತ್ತು. ಇಷ್ಟು ಹೇಳಿದ್ದೇನೆ. ಕಾರ್ಯಕ್ರಮಕ್ಕೆ ಬಂದಿದ್ದವರೊಂದಿಗಿನ ನನ್ನ ಸ್ನೇಹಿತರು, ಆತ್ಮೀಯರೊಂದಿಗಿನ ಮಾತುಗಳನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

1 comment:

  1. ನಾನು ಕಂಡ ಅವಿಸ್ಮರಣೀಯ ಕಾರ್ಯಕ್ರಮಗಳಲ್ಲಿ ತಮ್ಮ ಕೃತಿ ಬಿಡುಗಡೆ ಕಾರ್ಯಕ್ರಮವೂ ಒಂದು. ಅಂದು ಅಲ್ಲಿ ವಿಪರೀತ ಜನ ಸೇರಿರಲಿಲ್ಲ. ಅಸಂಬದ್ಧ ಮಾತುಗಳೂ ಇರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಅವ್ಯವಸ್ಥೆಯ ಲವಲೇಶವೂ ಅಲ್ಲಿ ಕಾಣಸಿಗಲಿಲ್ಲ. ಒಂದು ರೀತಿ ಕೆರೆ ಸರಣಿಯಂತೇ ಇದೂ ಸಹ ಯಶಸ್ವಿ ಎನಿಸಿತು.
    ಒಬ್ಬ ವರದಿಗಾರನಾಗಿ ನಾನು ಸಾಕಷ್ಟು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೇನೆ. ಅಲ್ಲಿನ ಅವ್ಯವಸ್ಥೆಯನ್ನು ಸಹ ಕಂಡಿದ್ದೇನೆ. ಆದರೆ ಇಲ್ಲಿ ಮಾತ್ರ ಆ ರೀತಿ ಅನುಭವ ಕಾಣಲೇ ಇಲ್ಲ. ಬೆಳಗ್ಗಿನ ಉಪಹಾರವಾಗಿ ಸಿಕ್ಕ ಇಡ್ಲಿ-ವಡೆ, ಕೇಸರಿಬಾತ್ ಅತ್ಯುತ್ತಮ. ಇಡ್ಲಿಗೆ ಚಟ್ನಿ ಕೊಂಚ ತಡವಾಗಿ ಬಂದರೂ ಅದು ಸಹನೀಯ. ತಿಂಡಿ ಬಗ್ಗೆ ಜಾಸ್ತಿ ಆಸೆ ಹುಟ್ಟಿಸುವುದು ಸರಿ ಅಲ್ಲ. ಆದ್ರೂ...
    ಅಂದು ನಮ್ಮವರು ಎಲ್ಲರೂ ಇದ್ದರು. ಅದು ದೊಡ್ಡ ಸಂತಸದ ಸಂಗತಿ. ಕೆಲವರು 'ಮಿಸ್' ಆಗಿದ್ದು ಸಾಮಾನ್ಯ. ತುಂಬಾ ಮಹತ್ವಾಕಾಂಕ್ಷೆಯ ಕಾರ್ಯಕ್ರಮ ಅಲ್ಲವಾ ಎಲ್ಲರೂ ಬರಲೆಂದು ಭಾವಿಸುವುದು ಸಹಜ. ಬರದಿದ್ದಾಗ ನೋವಾಗುವುದೂ ಸಾಮಾನ್ಯ. ಬಿಡಿ ಅದನ್ನೂ ಅಷ್ಟಕ್ಕೆ. ಮುಂದೊಮ್ಮೆ ಬಂದೇ ಬರುತ್ತಾರೆ. ಏಕೆಂದರೆ ನಾವು ಆಶಾವಾದಿಗಳು. ಅಲ್ಲವೇ?
    ವೇದಿಕೆ ಮುಂಚಿನ ವಿಷಯ ಹೇಳಬೇಕೆಂದರೆ ಪ್ರತಿಯೊಬ್ಬ ಸಹೋದ್ಯೋಗಿ ಮಿತ್ರರು, ಆಹ್ವಾನಿತ ಬಂಧುಗಳು ಮತ್ತು ಆದರಣೀಯ ವ್ಯಕ್ತಿಗಳನ್ನು ಬಾಗಿಲಲ್ಲೇ ಬರಮಾಡಿಕೊಳ್ಳುವ ಸಂತಸ ಇಷ್ಟೊಂದು ಇರುತ್ತೆ ಅಂತ ತಿಳಿದಿರಲಿಲ್ಲ. ಎಲ್ಲವನ್ನೂ ಅನುಭವಿಸಲು ಇದೊಂದು ಅವಕಾಶವಾಗಿ ಸಿಕ್ಕಿತು. ವೇದಿಕೆ ಏರಲಿರುವ ಗಣ್ಯರಷ್ಟೇ ಪ್ರಾಧಾನ್ಯವನ್ನು ಎಲ್ಲರಿಗೂ ನೀಡಿತ್ತು ಆನಂದ ಉಂಟು ಮಾಡಿತು. ಅಲ್ಲಿ ಬಂದವರಲ್ಲಿ ದೊಡ್ಡವರು, ಚಿಕ್ಕವರು ಎಂಬ ಭೇದ ಇರಲಿಲ್ಲ. ಎಲ್ಲರ ಮನಸ್ಸೂ 'ಕೆರೆಮಂಜ'ನ ಕೃತಿ ಬಿಡುಗಡೆ ಎಂಬ ಸಂತಸದಲ್ಲೇ ಗೋಚರಿಸಿದರು.
    ವಿಶ್ವ ಜಲದಿನದ ಮುಂಜಾನೆ 'ಕೆರೆ ಕರಗುವ ಸಮಯ' ಕೃತಿ ಅನಾವರಣಗೊಂಡಿದ್ದು, ನಿಜಕ್ಕೂ ಅರ್ಥಪೂರ್ಣ. ಅಂದು ಎಲ್ಲರೂ ಇದ್ದರು. ಆತ್ಮೀಯ ಸ್ನೇಹಿತ ಹಾಗೂ ಸಹಪಾಠಿ ಕೆ.ಎಸ್. ಗಣೇಶನ ಚಿತ್ರ ಹಾಗೂ ನಿಮ್ಮ ಅಕ್ಷರ ರೂಪ ನಿಜಕ್ಕೂ ಮತ್ತೊಮ್ಮೆ ಮನ್ನಣೆಯ ವೇದಿಕೆ ಏರಿತ್ತು. ಮೊದಲ ಬಾರಿಗೆ ಇದು ಲೇಖನ ಸರಣಿಯಾಗಿ 'ಬೆಂಗಳೂರು ವಿಜಯ'ದಲ್ಲಿ ಪ್ರಕಟವಾದಾಗಲೇ ಇದು 'ಅಬ್ಬಾ' ಅನ್ನಿಸಿಕೊಂಡಿತ್ತು. ಈಗಂತೂ ಅದಕ್ಕೆ ಸಾರ್ಥ್ಯಕ್ಯ ಲಭಿಸಿತ್ತು.
    ವೇದಿಕೆ ಮೇಲೆ ಆಸೀನರಾಗಿದ್ದ ಸಚಿವದ್ವಯರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್. ಅಶೋಕ್ ಮಾತಿನಲ್ಲೇ ಸಾಕಷ್ಟು ಮೋಡಿ ಮಾಡಿದರು. ಕಾರ್ಯಕ್ರಮ ಉದ್ಘಾಟಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕೆರೆಗಳನ್ನು ಉಳಿಸುವ ಭರವಸೆ ನೀಡಿದರೆ, ಅಶೋಕ್ ಇದಕ್ಕೆ ಪುಷ್ಟಿ ನೀಡುವ ಮಾತುಗಳನ್ನು ಆಡಿದರು.
    ಆದರೆ ಇವರ ಮಾತಿಗೆ ಒಂದು ಒಗ್ಗರಣೆ ಬಿಟ್ಟು ಹದಗೊಳಿಸಿವರು ನೆಚ್ಚಿನ ಸಂಪಾದಕರಾದ ವಿಶ್ವೇಶ್ವರ ಭಟ್ಟರು. ಅವರ ಪ್ರತಿ ಮಾತಿಗೂ ಒಂದು ಮೊನಚಿತ್ತು. ವ್ಯವಸ್ಥೆಯನ್ನು ಸರಿಪಡಿಸುವ ಆಶಯ ಇತ್ತು. ವೇದಿಕೆ ಮೇಲೆ ಇವರು ಆಡಿದ ಪ್ರತಿ ಮಾತು ತೂಕಬದ್ಧವಾಗಿತ್ತು. ಅಲ್ಲದೇ ಇಷ್ಟೆಲ್ಲಾ ಮಾತು ಅವರು ಆಡಿದರೆ ಮಾತ್ರ ಸಮಂಜಸ. ಅಲ್ಲದೇ ಅವರ ಮಾತಿನಿಂದ ಒಂದಿಷ್ಟು ಕೆಲಸ ಆಗುವುದಂತೂ ಸುಳ್ಳಲ್ಲ.
    ಸಮಾರಂಭ ನಿಜಕ್ಕೂ ಫಲಪ್ರದವಾಗಿದ್ದು ಸಂಘಟಿತ ಕಾರ್ಯದಿಂದ ಮಾತ್ರ ಸಾಧ್ಯ ಎಂಬುದು ಈ ಮೂಲಕ ಅರಿವಾಯಿತು. ಒಟ್ಟಾರೆ ಕಾರ್ಯಕ್ರಮದಲ್ಲಿ ಕಂಡು ಬಂದಿದ್ದು ಸಾಂಘಿಕ ಶಕ್ತಿ.
    -ಮಹೇಶ್ ಹೆಗಡೆ

    ReplyDelete