Thursday, December 24, 2009

ಹೊರವಲಯದ ಕೆರೆಗಳೇ ಫಿಲ್ಟರ್ ತಾಣ

ಬೆಂಗಳೂರು ನಗರದಲ್ಲಿ ಕೆರೆಗಳ ಅಭಿವೃದ್ಧಿಗೆ ಕೋಟ್ಯಂತರ ರೂ. ವೆಚ್ಚ ಮಾಡಲಾಗುತ್ತಿದೆ. ಆದರೆ, ಹೊರವಲಯದ ಕೆರೆಗಳತ್ತ ಯಾರ ಚಿತ್ತವೂ ಹರಿದಿಲ್ಲ. ಇದನ್ನೇ ಬಂಡವಾಳವನ್ನಾಗಿಸಿಕೊಂಡಿರುವ ಮರಳು ಮಾಫಿಯಾ ಕೆರೆಗಳನ್ನೇ 'ಫಿಲ್ಟರ್' ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದೆ.
ಬಿಬಿಎಂಪಿ, ನಗರ-ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಗಮನಹರಿಸದಿದ್ದಲ್ಲಿ ಇನ್ನು ಕೆಲವೇ ತಿಂಗಳಲ್ಲಿ ಹೊರವಲಯದ ಕೆರೆಗಳು ವಿನಾಶದ ಅಂಚಿಗೆ ತಲುಪುತ್ತವೆ. ಇಲ್ಲೊಂದು ಕೆರೆ ಇತ್ತು ಎಂಬ ಸುಳಿವನ್ನೂ ಕೆರೆಯ ಅಂಗಳದಲ್ಲೇ ಫಿಲ್ಟರ್ ಮರಳು ದಂಧೆ ನಡೆಯುತ್ತಿದ್ದು, ನೂರಾರು ಲಾರಿಗಳು, ಹತ್ತಾರು ಜೆಸಿಬಿಗಳು ಪ್ರತಿನಿತ್ಯವೂ ಕಾರ್ಯನಿರ್ವಹಿಸುತ್ತಿವೆ.
ಕನಕಪುರ ರಸ್ತೆಯಲ್ಲಿ ಆರ್ಟ್ ಆಫ್ ಲಿವಿಂಗ್‌ಗಿಂತ ಮುನ್ನ ಕುಪ್ಪಿರೆಡ್ಡಿ ಕೆರೆಯಾದ ಕೂಡಲೇ ಎಡಬದಿಗೆ ತಿರುಗಿದರೆ, ಘಾಟ್‌ನಲ್ಲಿ ಸಂಚರಿಸಿದ ಅನುಭವ ಉಂಟಾಗುತ್ತದೆ. ಅದರ ಉಲ್ಲಾಸವನ್ನು ಕೆಲವೇ ಕಿಮೀ ದಾಟಿದಾಗ, ವಡೇರಹಳ್ಳಿ ಕೆರೆಯ ನೀರ ಸಾಮ್ರಾಜ್ಯ ದುಪ್ಪಟ್ಟುಗೊಳಿಸುತ್ತದೆ. ಕೆರೆಯ ಏರಿ ಮೇಲೆ ನಿಂತರೆ, ದಟ್ಟ ಅರಣ್ಯದ ನಡುವೆ ನೀರು ಕಣ್ಸೆಳೆಯುತ್ತದೆ. ಆದರೆ, ಅದಕ್ಕೇ ಬರಸಿಡಿಲಿನಂತೆ ಬಂದೆರಗುವುದು ಪಂಪ್‌ಸೆಟ್‌ಗಳ ಆರ್ಭಟ, ಜೆಸಿಬಿಗಳ ನರ್ತನ ಹಾಗೂ ಹತ್ತಾರು ಲಾರಿಗಳ ಸಂಚಾರ.
ವಡೇರಹಳ್ಳಿ, ಚಿಕ್ಕಲಿಂಗಶಾಸ್ತ್ರಿ, ಗೋಪಾಲಪುರ ಕೆರೆಗಳ ನೀರ ಸಾಮ್ರಾಜ್ಯ ಹಾಗೂ ಅಲ್ಲಿ ಪರಿಸರಸ್ನೇಹಿ ವಾತಾವರನದ ಬಗ್ಗೆ ವಿಜಯ ಕರ್ನಾಟಕ 'ನಮ್ಮುರ್ ಕೆರೆ' ಲೇಖನ ಮಾಲಿಕೆಯಲ್ಲಿ ವಿವರಿಸಿತ್ತು. ಈ ಬಗ್ಗೆ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಹೆಮ್ಮೆಪಟ್ಟುಕೊಂಡವು. ಚೆನ್ನಾಗಿವೆಯಲ್ಲ ಎಂದು ಬಿಬಿಎಂಪಿ ಇತ್ತ ನೋಡುವುದು ಬೇಡ ಎಂದು ನಿರ್ಧರಿಸಿತು. ಇದನ್ನೇ 'ಮರಳು ಮಾಫಿಯಾ' ಬಂಡವಾಳವಾಗಿಸಿಕೊಂಡಿದೆ. ಕಳೆದ ವರ್ಷ ಈ ಕೆರೆಗಳ ಸುತ್ತಮುತ್ತ ಫಿಲ್ಟರ್ ಮರಳಿನ ಗಾಳಿಯೂ ಸುಳಿದಿರಲಿಲ್ಲ. ಆದರೆ, ಇದೀಗ ಮೂರ್‍ನಾಲ್ಕು ತಿಂಗಳಿಂದ ಫಿಲ್ಟರ್ ದಂಧೆ ಹೆಮ್ಮರವಾಗಿ ಬೆಳೆದುನಿಂತಿದೆ.
ಕನಕಪುರ ಮುಖ್ಯರಸ್ತೆಯಲ್ಲಿ ಸಾಗುವಾಗ ಇಂತಹ ಕೃತ್ಯ ನಡೆಯುತ್ತಿದೆ ಎಂಬುದು ಅರಿವಿಗೇ ಬರುವುದಿಲ್ಲ. ಟ್ರ್ಯಾಕ್ಟರ್ ಅಷ್ಟೇ ಸಾಗುವ ರಸ್ತೆಗಳನ್ನು ಗ್ರಾಮಸ್ಥರು ನಿರ್ಮಿಸಿಕೊಂಡಿರಬಹುದೆಂದು ಭಾವಿಸಲಾಗುತ್ತದೆ. ಆದರೆ, ಈ ರಸ್ತೆಗಳನ್ನು ಒಂದೆರಡು ಗಂಟೆ ವೀಕ್ಷಿಸಿದರೆ, ಆಗಾಗ ಫಿಲ್ಟರ್ ಮರಳು ತುಂಬಿದ ಟ್ರ್ಯಾಕ್ಟರ್‌ಗಳು ಹೊರಬರುತ್ತಿರುತ್ತವೆ. ಅಲ್ಲಿಂದ ಬಂದ ಟ್ರ್ಯಾಕ್ಟರ್‌ಗಳು ವಿಶಾಲ ಪ್ರದೇಶದಲ್ಲಿ ಫಿಲ್ಟರ್ ಮರಳು ಸುರಿಯುತ್ತವೆ. ಅಲ್ಲಿಂದ ಲಾರಿಗಳು ಅದನ್ನು ನಗರಕ್ಕೆ ಕೊಂಡೊಯ್ಯುತ್ತವೆ. ಇದು ಕೆಲವೇ ಪ್ರದೇಶಗಳ ಮಾತು. ಬಹುತೇಕ ಫಿಲ್ಟರ್ ಮರಳಿನ ಘಟಕಗಳಿಗೆ ಲಾರಿ, ಟಿಪ್ಪರ್‌ಗಳು ಸುಲಭವಾಗಿ ಸಾಗಲು ಆ ಮಾಫಿಯಾವೇ ರಸ್ತೆ ನಿರ್ಮಿಸಿಕೊಂಡಿದೆ.
ಬೆಂಗಳೂರಿಗೆ ದೇವನಹಳ್ಳಿ, ರಾಮನಗರದ ಸುತ್ತಮುತ್ತಲಿಂದ ಮರಳು ಸರಬರಾಜಾಗುತ್ತದೆ. ಈ ಎಲ್ಲ ಪ್ರದೇಶಗಳಲ್ಲೂ ಫಿಲ್ಟರ್ ಮರಳಿನ ದಂಧೆಯೇ. ಈ ಬಗ್ಗೆ ಅಲ್ಲಿನ ಎಲ್ಲ ಪೊಲೀಸ್ ಠಾಣೆಗಳು ಸೇರಿದಂತೆ ಎಲ್ಲ ಇಲಾಖೆಯ ಹಿರಿಯ-ಕಿರಿಯ ಅಧಿಕಾರಿಗಳಿಗೂ ಮಾಹಿತಿ ಇದೆ. ಆದರೆ, ಮಾಮೂಲಿಗೆ ಕೈಚಾಚಿ ಮರಳು ಮಾಫಿಯಾ ಪರಿಸರವನ್ನು ಹಾಳುಮಾಡಲು ಸಹಕರಿಸುತ್ತಿದ್ದಾರೆ. ಕಟ್ಟಡಗಳಿಗೆ ಮಾರಕವಾಗಿರುವ ಈ ದಂಧೆಗೆ ಕುಮ್ಮಕ್ಕು ನೀಡಿ ಜನರ ಭವಿಷ್ಯದ ಮೇಲೂ ಕಲ್ಲುಹಾಕುತ್ತಿದ್ದಾರೆ. ಸಚಿವರು ಇವರಿಗೇ ಮಣೆ ಹಾಕುತ್ತಿದ್ದಾರೆ. ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವವರ್‍ಯಾರು?
ಎಲ್ಲಿ, ಯಾವ ಕೆರೆಗಳಲ್ಲಿ ಫಿಲ್ಟರ್?
ಕನಕಪುರ ರಸ್ತೆ ಆಸುಪಾಸಿನಲ್ಲಿರುವ ವಡೇರಹಳ್ಳಿ, ಚಿಕ್ಕಲಿಂಗಶಾಸ್ತ್ರಿ, ಸೋಮನಹಳ್ಳಿ, ರಾಜಾಪುರ, ಚಂದಾಪುರ; ಆನೇಕಲ್ ತಾಲೂಕಿನ ಜಿಗಣಿ, ಹಾರಗದ್ದೆ, ರಾಜಾಪುರ, ಸರ್ಜಾಪುರ, ರಾಮನಗರ ತಾಲೂಕಿನ ಬಹುತೇಕ ಪ್ರದೇಶ ಹಾಗೂ ದೇವನಹಳ್ಳಿ ವ್ಯಾಪ್ತಿಯ ವಿಜಯಪುರ ಕೆರೆ ಸೇರಿದಂತೆ ನಗರದ ಹೊರವಲಯದ ಸುಮಾರು ೫೦ಕ್ಕೂ ಹೆಚ್ಚು ಕೆರೆಗಳ ಅಂಗಳದಲ್ಲಿ ಫಿಲ್ಟರ್ ದಂಧೆ ನಡೆಯುತ್ತಿದೆ. ಇಷ್ಟೇ ಅಲ್ಲ, ಈ ಪ್ರದೇಶಗಳಲ್ಲಿರುವ ರೈತರು ತಮ್ಮ ಕೃಷಿಯನ್ನು ಮರೆತು ಫಿಲ್ಟರ್ ದಂಧೆಗೇ ತಮ್ಮನ್ನು ತೆರೆದುಕೊಂಡಿದ್ದಾರೆ.
ತೋಟ ಹಾಗೂ ಮನೆ ಮುಂದಿರುವ ಬಾವಿ ಹಾಗೂ ಬೋರ್‌ವೆಲ್‌ಗಳಿಗೆ ಪಂಪ್‌ಸೆಟ್ ಅಳವಡಿಸಿಕೊಂಡಿರುವ ರೈತರ ಮನೆಗಳ ಮುಂದೆ, ರಾಶಿ ರಾಶಿ ಮಣ್ಣು ಬಿದ್ದಿದೆ. ಕೃಷಿಯನ್ನು ಮರೆತು 'ಫುಲ್‌ಟೈಮ್' ಕೆಲಸವನ್ನಾಗಿ ಫಿಲ್ಟರ್ ಕಾರ್ಯವನ್ನೇ ವಹಿಸಿಕೊಂಡಿದ್ದಾರೆ. ತಿಂಗಳಿಗೆ ಕನಿಷ್ಠ ಐದಾರು ಲೋಡ್ ಮರಳು ಫಿಲ್ಟರ್ ಮಾಡಿದರೆ, ಸುಮಾರು 20 ಸಾವಿರ ರೂ. ಸಂಪಾದನೆ ಆಗುತ್ತದೆ. ಆದ್ದರಿಂದಲೇ, ಬಹುತೇಕ ಮನೆಗಳ ಮುಂದೆ ಮಣ್ಣಿನ ರಾಶಿ, ಕೆಸರು, ಪಂಪ್‌ಸೆಟ್ ಆರ್ಭಟ, ನೀರೆರೆಚಾಟ, ಫಿಲ್ಟರ್ ಮರಳಿನ ಗುಡ್ಡೆಯೇ ಕಾಣುತ್ತದೆ.

ಬಿಡಿಎ: ಕೆರೆಗಳಲ್ಲಿ 240 ಕೋಟಿ ಲೀಟರ್ ಸಂಗ್ರಹ

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಬಡಾವಣೆಗಳಲ್ಲಿರುವ 12 ಕೆರೆಗಳು ಮುಂದಿನ ಮಳೆಗಾಲದಲ್ಲಿ ಸುಮಾರು 240 ಕೋಟಿ ಲೀಟರ್ ಮಳೆ ನೀರು ಸಂಗ್ರಹಿಸಲು ಸಿದ್ಧವಾಗಲಿವೆ. ಅಷ್ಟೇಅಲ್ಲ, ಅಂತರ್ಜಲ ಮಟ್ಟದ ವೃದ್ಧಿಗೆ ಪ್ರಮುಖ ಜಲಮೂಲಗಳೂ ಆಗಲಿವೆ.
ಏಪ್ರಿಲ್ ವೇಳೆಗೆ 12 ಕೆರೆಗಳ ಅಭಿವೃದ್ಧಿಯನ್ನು ಸುಮಾರು 105 ಕೋಟಿ ರೂ.ಗಳ ವೆಚ್ಚದಲ್ಲಿ ಬಿಡಿಎ ಪೂರ್ಣಗೊಳಿಸಲಿದೆ. ಕೆರೆಗಳಲ್ಲಿ ಹೂಳು ತೆಗೆದಿರುವುದರಿಂದ ಹೆಚ್ಚಿನ ನೀರು ಸಂಗ್ರಹವಾಗುತ್ತದೆ. ಜತೆಗೆ, ಅಲ್ಲಲ್ಲಿ ಅಂತರ್ಜಲ ಪುನಶ್ಚೇತನಕ್ಕೆ ಹೊಂಡಗಳನ್ನೂ ನಿರ್ಮಿಸಲಾಗುತ್ತದೆ. ಇದು ಸುತ್ತಮುತ್ತಲಿನ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಹೆಚ್ಚಾಗಲು ನೆರವಾಗುತ್ತದೆ.
ಬಿಡಿಎ ವ್ಯಾಪ್ತಿಯ ಕೆರೆಗಳೆಲ್ಲ ತುಂಬಿ ಹೋದರೆ, ಬೆಂಗಳೂರಿಗೆ ದಿನವೊಂದಕ್ಕೆ ಪೂರೈಕೆಯಾಗುತ್ತಿರುವ ನೀರಿಗಿಂತ ಮೂರು ಪಟ್ಟು ಹೆಚ್ಚು ನೀರು ಈ 12 ಕೆರೆಗಳಲ್ಲೇ ಸಂಗ್ರಹವಾಗಲಿದೆ. ಇದೇ ರೀತಿ ಎಲ್ಲ ಕೆರೆಗಳು ಅಭಿವೃದ್ಧಿ ಆಗಿದ್ದೇ ಆದರೆ, ವಾತಾವರಣ ತಂಪು, ಅಂತರ್ಜಲ ಸಂಪು.
ಅರ್ಕಾವತಿ ಬಡಾವಣೆ ವ್ಯಾಪ್ತಿಯಲ್ಲಿರುವ ಜಕ್ಕೂರು-ಸಂಪಿಗೆ ಹಳ್ಳಿ, ರಾಚೇನಹಳ್ಳಿ, ವೆಂಕಟೇಶಪುರ; ವಿಶ್ವೇಶ್ವರಯ್ಯ ಬಡಾವಣೆ ವ್ಯಾಪ್ತಿಯ ಉಲ್ಲಾಳು, ಮಲ್ಲತ್ತಹಳ್ಳಿ, ಕೊಮ್ಮಘಟ್ಟ; ಅಂಜನಾಪುರದ ಕೊತ್ತನೂರು ಕೆರೆ; ಬನಶಂಕರಿ 6ನೇ ಘಟ್ಟದ ತಲಘಟ್ಟಪುರ, ಸೋಮಪುರ ಮತ್ತು ಕೋನಸಂದ್ರ ಕೆರೆ ಅಭಿವೃದ್ಧಿ ಕಾರ್ಯಗಳು ನಾನಾ ಹಂತದಲ್ಲಿವೆ. ಈ ಎಲ್ಲ ಕೆರೆಗಳ ಕಾಮಗಾರಿ ಏಪ್ರಿಲ್ ವೇಳಗೆ ಪೂರ್ಣಗೊಳ್ಳಲಿದೆ.
ಬಡಾವಣೆ ನಿರ್ಮಾಣ ಸಮಯದಲ್ಲಿ ಕೋನಸಂದ್ರ ಹಾಗೂ ತಲಘಟ್ಟಪುರ ಕೆರೆಯನ್ನು ಬಿಡಿಎ ಒತ್ತುವರಿ ಮಾಡಿಕೊಂಡಿತ್ತು. ಯಾವುದೇ ಕಾರಣಕ್ಕೂ ಕೆರೆ ಒತ್ತುವರಿ ಆಗುವುದು ಬೇಡ ಎಂಬ ಆಯುಕ್ತ ಸಿದ್ಧಯ್ಯನವರ ಆದೇಶದ ಮೇರೆಗೆ, ಒತ್ತುವರಿ ತೆರವುಗೊಳಿಸಲಾಗಿದೆ. ಅಲ್ಲದೆ, ಮತ್ತಷ್ಟು ಭಾಗವನ್ನೂ ಕೆರೆಗೆ ಹೆಚ್ಚುವರಿಯಾಗಿ ಸೇರಿಸಿಕೊಂಡು, ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಅರಣ್ಯ ಉಪಸಂರಕ್ಷಣಾಧಿಕಾರಿ ಅಮರನಾಥ್ ತಿಳಿಸಿದರು.
ಕೆರೆಗಳ ಅಭಿವೃದ್ಧಿಯಲ್ಲಿ ಬಿಡಿಎ ಕಾರ್ಯಚೂಚಿ
ಕೆರೆ ಗಡಿಯನ್ನು ಗುರುತಿಸಿ, ಅದರ ಸಂರಕ್ಷಣೆ; ಒಳ ಮತ್ತು ಹೊರ ಹರಿವಿನ ಕಾಲುವೆಗಳ ಮರುಸ್ಥಾಪನೆ; ಒಳಚರಂಡಿ ನೀರು ಹರಿವು ಮಾರ್ಗ ಬದಲು ಮತ್ತು ಸಂಸ್ಕರಣೆ; ಹೂಳು ಮತ್ತು ಕಳೆ ನಿರ್ಮೂಲನೆ; ಒಳಚರಂಡಿ ಹಾಗೂ ಮಳೆ ನೀರಿನ ಮೂಲಕ ಘನತ್ಯಾಜ್ಯ ಕೆರೆಗೆ ಹರಿಯದಂತೆ ನಿಗ್ರಹಿಸಲು ಹೂಳು ಕವಾಟಕ, ಬೇಲಿ ನಿರ್ಮಾಣ; ಏರಿಯನ್ನು ಸದೃಢಗೊಳಿಸುವುದು; ಕುಷ್ಕಿ ಭೂಮಿ ನಿರ್ಮಾಣ; ಕೆರೆ ತೀರದಲ್ಲಿ ಸಸಿ ನೆಡುವುದು. ಈ ಎಲ್ಲ ಕಾರ್ಯಗಳು ಕೆರೆಗಳಲ್ಲಿ ನಾನಾ ಹಂತಗಳಲ್ಲಿ ನಡೆಯುತ್ತಿವೆ.
ಎಲ್ಲ ಕೆರೆಗಳಲ್ಲಿ ವಾಕಿಂಗ್ ಪಾಥ್ ಹಾಗೂ ದ್ವೀಪಗಳು ಬರಲಿದ್ದು, ಕೆರೆಯ ಸುತ್ತಲೂ ಸ್ವದೇಶಿ ಮರ-ಗಿಡಗಳು ಕಂಗೊಳಿಸಲಿವೆ. ವೆಂಕಟೇಶಪುರ ಕೆರೆಯಲ್ಲಿ ಯಕ್ಷಕೊಳ, ಶಿಲ್ಪೋದ್ಯಾನ, ಬ್ರಹ್ಮಕಮಲ ವನಗಳು ನಿರ್ಮಾಣವಾಗಲಿವೆ. ಒಳಚರಂಡಿ ನೀರಿನಿಂದ ಮುಕ್ತವಾಗುವ ಎಲ್ಲ ಕೆರೆಗಳೂ ಪಿಕ್‌ನಿಕ್ ಸ್ಟಾಟ್ ಆಗಲಿವೆ. ಮುಂದಿನ ಮಳೆಗಾಲದಲ್ಲಿ ಮಳೆನೀರು ವ್ಯರ್ಥವಾಗದೆ, ಕೆರೆಗಳಲ್ಲಿ ಸಂಗ್ರಹವಾಗಲಿದ್ದು ಅಂತರ್ಜಲ ಹೆಚ್ಚಿಸಲಿದೆ. ಬೆಂಗಳೂರಿನ ವಾತಾವರಣವೂ ತಂಪಾಗಲಿದೆ.
ಯಾವ ಕೆರೆಗೆ ಎಷ್ಟು ವೆಚ್ಚ?
ಜಕ್ಕೂರು- ಸಂಪಿಗೆಹಳ್ಳಿ 2191 ಲಕ್ಷ
ರಾಚೇನಹಳ್ಳಿ 1900 ಲಕ್ಷ
ವೆಂಕಟೇಶಪುರ 47 ಲಕ್ಷ
ಉಲ್ಲಾಳು 449 ಲಕ್ಷ
ಮಲ್ಲತ್ತಹಳ್ಳಿ 2295 ಲಕ್ಷ
ಕೊಮ್ಮಘಟ್ಟ 644 ಲಕ್ಷ
ರಾಮಸಂದ್ರ 1340 ಲಕ್ಷ
ಕೊತ್ತನೂರು 360 ಲಕ್ಷ
ತಲಘಟ್ಟಪುರ 240 ಲಕ್ಷ
ಸೋಮಪುರ 385 ಲಕ್ಷ
ಕೋನಸಂದ್ರ 610 ಲಕ್ಷ

ಪಾರಂಪರಿಕ ತಾಣಗಳ ಪಟ್ಟಿಗೆ ಕೆರೆಗಳು
ಕರ್ನಾಟಕ 2020 ವಿಷನ್‌ನಲ್ಲಿ ಬೆಂಗಳೂರಿನ ಕೆರೆಗಳನ್ನು ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿಸಲು ರಾಜ್ಯ ಸರಕಾರಕ್ಕೆ ಸಲಹೆ ನೀಡಲಾಗುತ್ತದೆ ಎಂದು ವಿಷನ್‌ನ ಸಮಿತಿಯಲ್ಲಿರುವ ಬಿಡಿಎ ಕೆರೆಗಳ ಅಭಿವೃದ್ಧಿ ಸಲಹಾ ಸಮಿತಿ ಅಧ್ಯಕ್ಷರೂ ಆಗಿರುವ ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ ತಿಳಿಸಿದ್ದಾರೆ.
ಬಿಡಿಎ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಶುಕ್ರವಾರ ಪರಿವೀಕ್ಷಿಸಿದ ಅವರು, ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯ 2008ರಲ್ಲಿ ರೂಪಿಸಿರುವ ನಿಯಮಗಳನ್ನು ಕೆರೆಗಳನ್ನು ಉಳಿಸಲು ರಾಜ್ಯ ಸರಕಾರ ಅಳವಡಿಸಿಕೊಳ್ಳಲು ಸಲಹೆ ನೀಡಲಾಗುತ್ತದೆ. ಇದಕ್ಕಾಗಿ, ಸೂಕ್ತ ಕಾನೂನು ರಚಿಸಲು, ರೂಪುರೇಷೆಯ ಕರಡು ಸಿದ್ಧಪಡಿಸುವ ಯೋಜನೆಯನ್ನು ವಿಷನ್ ಸಮಿತಿ ಹೊಂದಿದೆ. ಕೆರೆಗಳಿಗೆ ಹಾನಿ ಉಂಟುಮಾಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಸರಕಾರಕ್ಕೆ ಸಲಹೆ ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.
ಸುಮಾರು 70 ಜಾತಿಯ ಪಕ್ಷಿಗಳು ಬೆಂಗಳೂರಿಗೆ ವಲಸೆ ಬರುತ್ತಿದ್ದವು. 1985ರಲ್ಲಿ ನಡೆದ ಗಣತಿಯ ಪ್ರಕಾರ, ಕೆರೆಗಳಲ್ಲಿ ಪಕ್ಷಿಗಳಿಗೆ ಸೂಕ್ತ ತಾಣ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.