Saturday, May 29, 2010

ಅರ್ಕಾವತಿ ನದಿ ಪಾತ್ರ ಶುಚಿಗೆ ಮುಹೂರ್ತ

ಎಲ್ಲ ಒತ್ತುವರಿ ತೆರವುಗೊಳಿಸಲು ಜಲಮಂಡಲಿ ಸಚಿವರ ಕಟ್ಟಪ್ಟಣೆ
ಅರ್ಕಾವತಿ ನದಿ ಪಾತ್ರದ ಶುಚಿ ಕಾರ್ಯ ಕೂಡಲೇ ಪ್ರಾರಂಭ ಮಾಡಿ ನೀರು ಹರಿವಿಗೆ ತಡೆಯಾಗಿರುವ ಎಲ್ಲ ರೀತಿಯ ಒತ್ತುವರಿಯನ್ನೂ ತೆರವು ಮಾಡಬೇಕೆಂದು ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಕಟ್ಟಪ್ಪಣೆ ಮಾಡಿದ್ದಾರೆ. ಸೋಮವಾರದಿಂದ ಕಾಲುವೆ ಶುಚಿ ಆರಂಭವಾಗಲಿದೆ.
ನಂದಿಬೆಟ್ಟದ ತಪ್ಪಲಿನಿಂದ ಹೆಸರಘಟ್ಟ-ತಿಪ್ಪಗೊಂಡನಹಳ್ಳಿ ಜಲಾಶಯದವರೆಗಿನ ನದಿ ಪಾತ್ರದಲ್ಲಿರುವ ಹೂಳು, ಗಿಡ-ಮರಗಳನ್ನು ಗುರುವಾರದಿಂದಲೇ ತೆರವುಗೊಳಿಸಬೇಕು. ಕಾಲುವೆ ಒತ್ತುವರಿಯ ಕಟ್ಟಡ ಅಥವಾ ಇನ್ಯಾವುದೇ ರೀತಿಯ ತಡೆ ಬಂದರೂ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು ನಗರ-ಗ್ರಾಮಾಂತರ ಹಾಗೂ ರಾಮನಗರ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಅರ್ಕಾವತಿ ನದಿ ಪಾತ್ರ ಈ ಮಳೆಗಾಲದಲ್ಲಿ ಕಾಣಬೇಕು. ಎಲ್ಲಿಯೂ ಒತ್ತುವರಿ ಉಳಿಸಬಾರದು. ಇದಕ್ಕೆ ಸಕ್ರಿಯ ಕಾಮಗಾರಿ ಕೂಡಲೇ ಆರಂಭವಾಗಬೇಕಾದ ಹಿನ್ನೆಲೆಯಲ್ಲಿ ಎಲ್ಲ ಇಲಾಖೆಗಳ ಅಧಿಕಾರಿಗಳ ಸಮಿತಿಯನ್ನೂ ರಚಿಸಲಾಗಿದೆ. ಕಾವೇರಿ ಜಲನಿಗಮ, ಸಣ್ಣ ನೀರಾವರಿ, ಮಾಲಿನ್ಯ ನಿಯಂತ್ರಣ ಮಂಡಳಿ, ಭೂಗರ್ಭ ಇಲಾಖೆ, ನಗರ-ಗ್ರಾಮಾಂತರ, ರಾಮನಗರ ಜಿಲ್ಲಾಧಿಕಾರಿಗಳು ಈ ಸಮಿತಿಯಲ್ಲಿದ್ದು, ಜಲಮಂಡಳಿಯ ಮುಖ್ಯ ಎಂಜಿನಿಯರ್ ಬಸವರಾಜ್ ಸಮಿತಿಯ ಸಂಚಾಲಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಸಮಿತಿ ತತ್‌ಕ್ಷಣದಿಂದ ಕಾರ್ಯ ಆರಂಭಿಸಿದ್ದು, ನದಿಪಾತ್ರ ಸಮೀಕ್ಷೆ ನಡೆದಿದೆ. ಸೋಮವಾರದಿಂದ ಶುಚಿ ಕಾರ್ಯ ಆರಂಭವಾಗಲಿದೆ.
ಜಲಮಂಡಲಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹಾಗೂ ಅರ್ಕಾವತಿ ನದಿ ಪುನಶ್ಚೇತನ ಪಾದಯಾತ್ರೆ ಉದ್ಘಾಟಿಸಿದ್ದ ನಗರಾಭಿವೃದ್ಧಿ ಸಚಿವ ಸುರೇಶ್ ಕುಮಾರ್ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಮಂಗಳವಾರ ಭೇಟಿ ನೀಡಿದ್ದರು. ಜಲಾಶಯದಲ್ಲಿ ನೀರಿನ ಕೊರತೆ ಹಾಗೂ ಬೆಂಗಳೂರಿಗೆ ಭವಿಷ್ಯದಲ್ಲಿ ನೀರುಣಿಸುವ ದೂರದೃಷ್ಟಿಯ ಯೋಜನೆಯಡಿ ಅರ್ಕಾವತಿ ನದಿ ಪುನಶ್ಚೇತನಕ್ಕೆ ಒತ್ತು ನೀಡಲು ಅಧಿಕಾರಿಗಳೊಂದಿಗೆ ಸಮಾಲೋಚಿಸಿದರು.
ಅರ್ಕಾವತಿ ನದಿ ಮೂಲದಲ್ಲಿ ಪಾದಯಾತ್ರೆಗೆ ಚಾಲನೆ ನೀಡಿ ಒಂದಷ್ಟು ದೂರ ನಡೆದಿದ್ದ ಸುರೇಶ್ ಕುಮಾರ್, ನದಿ ಪಾತ್ರದಲ್ಲಿ ಮಳೆ ಪ್ರಮಾಣ ಕಡಿಮೆ ಆಗಿಲ್ಲ. ಅದರ ಹರಿವು ವಿಮುಖವಾಗಿದೆ. ಅದನ್ನು ಸುಸ್ಥಿತಿಗೆ ತಂದು ನದಿ ಹರಿಯುವಂತೆ ಮಾಡಬೇಕು. ಈ ಮಳೆಗಾಲದಲ್ಲಿ ನದಿ ಪಾತ್ರ ಕಾಣುವಂತಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ನದಿ ಪಾತ್ರ ಮಾಲಿನ್ಯಗೊಳಿಸುತ್ತಿರುವ ಕಾರ್ಖಾನೆಗಳನ್ನೂ ತೆರವುಗೊಳಿಸಲು ಮಾಲಿನ್ಯ ನಿಯಂತ್ರಣ ಮಂಡಳಿಯ ಗಮನಕ್ಕೆ ತಂದಾಗ, ೭೯ ಕಾರ್ಖಾನೆಗಳಿಗೆ ನೋಟಿಸ್ ನೀಡಲಾಗಿದೆ. ಅವುಗಳ ತೆರವು ಕಾರ್ಯ ಶೀಘ್ರವೇ ಪೂರ್ಣಗೊಳ್ಳಲಿದೆ ಎಂದು ಮಂಡಲಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
“ಅರ್ಕಾವತಿ ನದಿ ಪುನಶ್ಚೇತನಕ್ಕೆ ನಾವು ಬದ್ಧರಾಗಿದ್ದೇವೆ. ಒತ್ತುವರಿಯನ್ನು ಸಂಪೂರ್ಣ ರೀತಿಯಲ್ಲಿ ತೆರವುಗೊಳಿಸಲು ಹಾಗೂ ಸಮಗ್ರ ರೀತಿಯಲ್ಲಿ ಕಾಮಗಾರಿ ನಡೆಸಲು ಕೆಲವು ಅಧಿಕಾರಗಳ ಅಗತ್ಯವಿದೆ. ಇದಕ್ಕಾಗಿ ಮುಖ್ಯಮಂತ್ರಿಯವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ. ಒಂದೆರಡು ದಿನಗಳಲ್ಲಿ ಮುಖ್ಯಮಂತ್ರಿಯವರಿಂದ ಒಪ್ಪಿಗೆ ಪಡೆದು ಸಮಗ್ರವಾಗಿ ಕಾಮಗಾರಿ ಆರಂಭಿಸಲಿದ್ದೇವೆ. ಒಟ್ಟಿನಲ್ಲಿ ಮಳೆಗಾಲದಲ್ಲಿ ಅರ್ಕಾವತಿ ನದಿ ಪಾತ್ರವನ್ನು ಶುಚಿಗೊಳಿಸುವ ಯೋಜನೆ ನಮ್ಮದಾಗಿದೆ."
-ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಲಮಂಡಲಿ, ವಸತಿ ಸಚಿವರು

Thursday, May 6, 2010

ಅರ್ಕಾವತಿ ಹರಿಸಲು ಯಲಹಂಕ ಕೆರೆ ಆಸರೆ

ಬೆಂಗಳೂರಿನ ಜೀವನದಿ ಅರ್ಕಾವತಿ ಹರಿಸುವ ಕಾರ್ಯಕ್ಕೆ ಮೇ 20 ನಂತರ ಚಾಲನೆ ದೊರೆಯಲಿದ್ದು, ಸಾಹಸಕ್ಕೆ ಯಲಹಂಕ ಕೆರೆ ಆಸರೆಯಾಗಲಿದೆ.
ಬೆಂಗಳೂರು ನಗರ, ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳ ಜೀವನದಿ ಅರ್ಕಾವತಿ ಹೊಳೆ ಹರಿಸಲು ಯಲಹಂಕ ಕೆರೆಯಿಂದ ನೀರು ಪಂಪ್ ಮಾಡುವ ಕಾರ್ಯಕ್ಕೆ ಸದ್ಯದಲ್ಲಿಯೇ ಚಾಲನೆ ನೀಡಲಾಗುತ್ತದೆ. ಸುಮಾರು 300 ಎಕರೆ ವಿಸ್ತೀರ್ಣದಲ್ಲಿರುವ ಯಲಹಂಕ ಕೆರೆಯಲ್ಲಿ ನೀರಿನ ಸಂಗ್ರಹ ಸಾಕಷ್ಟಿದೆ. ಈ ನೀರನ್ನು ನದಿ ಹರಿಸಲು ಬಳಸಿಕೊಳ್ಳುವ ಯೋಜನೆ ರೂಪುಗೊಳ್ಳುತ್ತಿದೆ.
ಅರ್ಕಾವತಿ ನದಿಯನ್ನು ಹರಿಸುವ ಪ್ರಮುಖವಾದ ಯೋಜನೆ ಜಲಮಂಡಳಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಾಕಷ್ಟು ಆಸಕ್ತಿ ವಹಿಸಿ ರೂಪಿಸುತ್ತಿದ್ದಾರೆ. ಅದಕ್ಕಾಗಿ ಅಗತ್ಯ ಸಂಪನ್ಮೂಲದ ನೆರವೂ ಸರಕಾರದಿಂದ ಒದಗಿಸುವ ಭರವಸೆ ನೀಡಿದ್ದಾರೆ. ಮೊದಲ ಹಂತದಲ್ಲಿ ನೀರು ಪಂಪ್ ಮಾಡುವ ಕಾರ್ಯಕ್ಕೆ ಈ ತಿಂಗಳೇ ಚಾಲನೆ ನೀಡುವ ಗುರಿ ಹೊಂದಿದ್ದಾರೆ.
ಅರ್ಕಾವತಿ ನದಿಗೆ ನಂದಿಬೆಟ್ಟ ಮೂಲದಿಂದಲೂ ತಡೆ ಇದೆ. ಮೂಲದಿಂದಲೇ ಕಾಲುವೆಯನ್ನು ಸರಿಪಡಿಸುವ ಯೋಜನೆ ರೂಪುಗೊಂಡಿದ್ದು, ನದಿ ಪುನಶ್ಚೇತನಕ್ಕೆ ಸಮಿತಿ ರಚನೆಯಾಗಿ ನಾಲ್ಕು ತಿಂಗಳು ಕಳೆದಿದೆ. ಜಲಸಂಪನ್ಮೂಲ ಸಚಿವರ ಅಧ್ಯಕ್ಷತೆಯಲ್ಲಿದ್ದ ಈ ಸಮಿತಿ ಇದೀಗ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿದೆ. ನದಿ ಪುನಶ್ಚೇತನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆದೇಶಿಸಿದ್ದು, ಇದಕ್ಕಾಗಿ ಕ್ಷಿಪ್ರ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯಯೋಜನೆಗಳು ಆರಂಭವಾಗಿವೆ.
ನಂದಿಬೆಟ್ಟದಿಂದ ದೊಡ್ಡಬಳ್ಳಾಪುರದ ನಾಗರಕೆರೆವರೆಗೆ ನದಿ ಹರಿಸುವ ಅಲ್ಪಮಟ್ಟಿಗಿದೆ. ಈ ಕೆರೆ ತುಂಬಿಸಿ ಮುಂದಿನ ಕಾಲುವೆಗಳಲ್ಲಿ ನೀರು ಹರಿಸುವ ಯೋಜನೆ ರೂಪುಗೊಂಡಿದೆ. ಇದಕ್ಕಾಗಿ ಬೆಂಗಳೂರು ಉತ್ತರದಲ್ಲಿರುವ ಯಲಹಂಕ ಕೆರೆಯನ್ನು ಆಯ್ದುಕೊಳ್ಳಲಾಗಿದೆ. ಇಲ್ಲಿಂದ ನೀರನ್ನು ನಾಗರಕೆರೆಗೆ ಪಂಪ್ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ಹೆಸರಘಟ್ಟ ಕೆರೆಗೆ ನೀರು ಹರಿಸುವ ಸಾಹಸ ಮಾಡಲಾಗುತ್ತಿದೆ. ನೀರು ಸಂಸ್ಕರಣೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿರುವ ಸಮಯದಲ್ಲಿ, ಅಂತರ್ಜಲ ಕುಸಿತ ದೊಡ್ಡ ಆತಂಕವಾಗಿದೆ. ಆದ್ದರಿಂದ, ನದಿ ಹರಿಸುವ ಮೂಲಕ ಅಂತರ್ಜಲ ಮಟ್ಟ ಏರಿಸುವ ಉದ್ದೇಶವಿದೆ.
ಯಲಹಂಕದಂತಹ ಬೃಹತ್ ಕೆರೆಯನ್ನು ವೀಕ್ಷಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂತಹ ದೊಡ್ಡ ಕೆರೆ ಬೆಂಗಳೂರಿನ ಪಕ್ಕದಲ್ಲೇ ಇದ್ದರೂ ನಾವು ನೀರಿಗಾಗಿ ಪರಿತಪಿಸುತ್ತಿದ್ದೇವೆ. ಇಂತಹ ಕೆರೆಗಳನ್ನು ನೀರು ಪೂರೈಕೆ ಹಾಗೂ ಅಂತರ್ಜಲ ಮಟ್ಟ ಹೆಚ್ಚಳಕ್ಕೆ ಬಳಸಿಕೊಳ್ಳಬಾರದೇಕೆ ಎಂದು ಜಲಮಂಡಳಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರನ್ನು ಕುತೂಹಲದಿಂದ ಕೇಳಿದ್ದಾರೆ. ಈ ಬಗ್ಗೆ ಜಲಮಂಡಳಿ ಸಾಕಷ್ಟು ಯೋಜನೆ ರೂಪಿಸುತ್ತಿದ್ದು, ಈ ನೀರನ್ನು ನಾಗರಕೆರೆಗೆ ಪಂಪ್ ಮಾಡುವ ಯೋಜನೆ ಸಿದ್ಧವಾಗುತ್ತಿದೆ. ಶಾಸಕ ಎಸ್.ಆರ್. ವಿಶ್ವನಾಥ್ ಅರ್ಕಾವತಿ ನದಿ ಹರಿಸಬೇಕೆಂದು ಪಟ್ಟು ಹಿಡಿದ್ದಾರೆ. ಆದ್ದರಿಂದ ಮೊದಲ ಹೆಜ್ಜೆಯಾಗಿ ಯಲಹಂಕ ಕೆರೆಯ ನೀರನ್ನೇ ಅರ್ಕಾವತಿ ಹೊಳೆಗೆ ಹರಿಸಲಾಗುತ್ತಿದೆ ಎಂದು ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಹೇಳಿದ್ದಾರೆ.
ಅರ್ಕಾವತಿ ನದಿ ಪುನಶ್ಚೇತನ ಸಮಿತಿ ಪ್ರಥಮ ಸಭೆ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ನಡೆದ ಕೂಡಲೇ ನಡೆಯಲಿದ್ದು, ಈ ಸಭೆಯಲ್ಲೇ ಯಲಹಂಕ ಕೆರೆಯಿಂದ ನೀರು ಹರಿಸುವ ಯೋಜನೆಗೆ ಒಪ್ಪಿಗೆ ಪಡೆದುಕೊಳ್ಳಲಾಗುತ್ತದೆ. ಅಲ್ಲದೆ, ಪುನಶ್ಚೇತನಕ್ಕೆ ಅಗತ್ಯವಾದ ಎಲ್ಲ ರೀತಿಯ ಕಾರ್ಯಗಳನ್ನು ಕೈಗೊಳ್ಳುವುದಾಗಿ ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಈ ವರ್ಷದ ಮಳೆಗಾಲದಲ್ಲಿ ನಂದಿಬೆಟ್ಟದಿಂದ ನದಿ ಕಾಲುವೆಗಳನ್ನು ಸುಗಮಗೊಳಿಸುವ ಕಾರ್ಯ ನಡೆಯಲಿದೆ. ಮಳೆಗಾಲದಲ್ಲಿ ನೀರು ಹರಿಯಲು ಇರುವ ತಡೆಯನ್ನು ಗುರುತಿಸಿ, ಅದನ್ನು ನಿವಾರಿಸುವ ಯೋಜನೆ ರೂಪಿಸಲಾಗುತ್ತದೆ. ನಂದಿಯಿಂದ ಹೆಸರಘಟ್ಟದವರೆಗೆ ಅರ್ಕಾವತಿ ಹರಿದರೆ, ಅಲ್ಲಿಂದ ತಿಪ್ಪಗೊಂಡನಹಳ್ಳಿವರೆಗೆ ಕಾಲುವೆ ಹಾಗೂ ಸ್ವಚ್ಛತೆ ನಿರ್ವಹಿಸುವ ಜವಾಬ್ದಾರಿ ಹೊರಲು ಜಲಮಂಡಳಿ ಸಿದ್ಧವಿದೆ. ಈ ದಿಸೆಯಲ್ಲೇ ಕಾರ್ಯಪ್ರಗತಿಯಾಗಲಿದೆ.
ಅರ್ಕಾವತಿ ನದಿ ಪುನಶ್ಚೇತನದಿಂದ ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಯ ರೈತರಿಗೆ ನೀರಿನ ಸೆಲೆ ಸಿಗಲಿದೆಯಲ್ಲದೆ, ಅಂತರ್ಜಲ ಹೆಚ್ಚಾಗುವುದರಿಂದ ಬೋರ್‌ವೆಲ್‌ಗಳಲ್ಲಿ ನೀರಿನ ಮಟ್ಟ ಏರಲಿದೆ. ಅಲ್ಲದೆ, ಹೆಸರಘಟ್ಟ ಹಾಗೂ ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಿದರೆ ಬೆಂಗಳೂರು ನಿವಾಸಿಗಳಿಗೆ ಕುಡಿಯುವ ನೀರು ಸಿಗುತ್ತದೆ. ಅರ್ಕಾವತಿ ನದಿ ಪುನಶ್ಚೇತನ ಕಾರ್ಯ ಶೀಘ್ರ ಆಗಲಿ ಎಂಬುದೇ ಆಶಯ.