Friday, July 31, 2009

ಕೆಂಪಾಂಬುಧಿ ಕೆರೆಯಲ್ಲಿ ಕೆಂಪೇಗೌಡರ ಸ್ಮಾರಕ

ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಅಭಿವೃದ್ಧಿಯ ರುಚಿ ಕಂಡಿವೆ ನಿಜ. ಆದರೆ, ಅದರ ನಿರ್ವಹಣೆ ಇಲ್ಲದೆ ಆಸ್ವಾದ ಹಳಸಿಹೋಗಿದೆ. ಇದನ್ನು ಆ ಕೆಟ್ಟದ್ದನ್ನು ಹೊರಹಾಕಿ, ಶುಚಿಗೊಳಿಸುವ ಕಾರ್ಯ ಆಗಬೇಕಿದೆ. ಇಂತಹ ಕಾರ್ಯ ಹೈಟೆಕ್ ಅಭಿವೃದ್ಧಿ ಕಂಡು ನಿರ್ವಹಣೆಯ ಕೊರತೆಯಿಂದ ನಲುಗಿಹೋಗಿದ್ದ ಕೆಂಪಾಂಬುಧಿ ಕೆರೆಯೇ ಮಾದರಿ ಆಗುವತ್ತ ಚೊಚ್ಚಲ ಹೆಜ್ಜೆ ಇರಿಸಿದೆ. ಈ ಪ್ರಯತ್ನಕ್ಕೆ ಕ್ಷಿಪ್ರ ವೇಗ ದೊರೆತಿದ್ದು, ಜನವರಿ ವೇಳೆಗೆ ಕೆಂಪಾಂಬುಧಿ ಕೆರೆ ಒಳಚರಂಡಿ ನೀರಿನಿಂದ ಮುಕ್ತವಾಗಲಿದೆ. ಜತೆಗೆ, ಹೊಸ ಅಭಿವೃದ್ಧಿ ಕಾರ್ಯಗಳಿಂದ ನಳನಳಿಸಲಿದೆ.
ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೆಂಪಾಂಬುಧಿ ಕೆರೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲಿದೆ. ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಕ್ರಿಯೆಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುತ್ತದೆ. ಮುಂದಿನ ವಾರವೇ ಗಿಡ-ಗಂಟಿಗಳನ್ನು ತೆಗೆಯುವ ಕಾಮಗಾರಿ ಆರಂಭವಾಗಲಿದೆ. ಮೊದಲ ಹಂತದಲ್ಲಿ 5 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಒಂದುವಾರದೊಳಗೆ ಟೆಂಡರ್ ಕರೆಯಲಾಗುತ್ತದೆ.
ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಒತ್ತಾಸೆಯ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರೈಸುವಂತೆ ಆದೇಶ ನೀಡಿದ್ದಾರೆ. ಕಡಿಮೆ ಅವಧಿ ಕಾಮಗಾರಿ ಮಾದರಿಯಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ.
ಕೆಂಪಾಂಬುಧಿ ಕೆರೆಗೆ ೫ ಮಾರ್ಗದಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ಇದನ್ನು ನಿಲ್ಲಿಸಿ, ಮಳೆ ನೀರು ಮಾತ್ರ ಕೆರೆಗೆ ಹರಿಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹರಿಯದಂತೆ ತಡೆಯಲು ಪ್ರತ್ಯೇಕ ಕಾಲುವೆ ರಚಿಸಲಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರಿನ ಹೊರತು ಬೇರ್‍ಯಾವ ನೀರು ಕೆರೆಗೆ ಹರಿಯದಂತೆ ತಡೆ ಹಾಕಲಾಗುತ್ತದೆ. ಸ್ಥಳದಲ್ಲಿಯೇ ಇರುವ ಒಳಚರಂಡಿ ನೀರು ಸಂಸ್ಕರಣ ಘಟಕದಿಂದ ಸಾಧ್ಯವಾದಷ್ಟು ನೀರು ಸಂಸ್ಕರಿಸಿ ಅದನ್ನು ಮಾತ್ರ ಕೆರೆಗೆ ಬಿಡಲಾಗುತ್ತದೆ. ಈ ಘಟಕದಿಂದ ನಿತ್ಯ ಒಂದು ದಶಲಕ್ಷ ಲೀಟರ್ ನೀರು ಸಂಸ್ಕರಿಸಬಹುದಾಗಿದೆ.
ಗವೀಪುರಂ ಗುಟ್ಟಹಳ್ಳಿಯ ಪಶ್ಚಿಮಭಾಗದಲ್ಲಿರುವ ಕೆಂಪಾಂಬುಧಿ ಕೆರೆ ಸರ್ವೆ ನಂ. 2ರಲ್ಲಿ 36 ಎಕರೆ ಪ್ರದೇಶದಲ್ಲಿದೆ. ಕೆಂಪಾಂಬುಧಿ ಕೆರೆಗೆ ಒಳಚರಂಡಿ ನೀರು ನೇರವಾಗಿ ಹರಿದುಬರುತ್ತಿದೆ. ಸುಂದರ, ಸ್ವಚ್ಛವಾಗಿರುವ ಕೆರೆಯ ಅಂಗಳ, ವಾಕಿಂಗ್ ಟ್ರ್ಯಾಕ್‌ನಲ್ಲಿ ನಡೆದಾಡಲೂ ಸಾಧ್ಯವಿಲ್ಲದಂತಹ ದುರ್ನಾತ ಈ ಒಳಚರಂಡಿ ಕೊಳಕಿನಿಂದ ನಿರ್ಮಾಣವಾಗಿದೆ. ಕೆರೆಯ ಮಧ್ಯಭಾಗ ಮತ್ತೆ ಕಲ್ಮಶಯುಕ್ತ ಹೂಳಿನಿಂದ ತುಂಬಿಹೋಗುತ್ತಿದೆ. ಇದೆಲ್ಲದ ನಿವಾರಣೆಗಾಗಿ ಇದೀಗ ಅಭಿವೃದ್ಧಿ ಯೋಜನೆ ರೂಪುಗೊಂಡಿದೆ. ಈ ಕೆರೆಯನ್ನು ಶೀಘ್ರ ಶುಚಿಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ.
ಬಿಬಿಎಂಪಿ ವತಿಯಿಂದ ಈ ಕೆರೆಗೆ ಕರೆಯಲಾಗುವ ಟೆಂಡರ್‌ನಲ್ಲಿ ಸಮಯ ನಿಗದಿಪಡಿಸುವ ಜತೆಗೆ ವಿಭಾಗಗಳಲ್ಲಿರುತ್ತದೆ. ಕೆರೆ ಹೂಳೆತ್ತುವುದು, ಏರಿ ನಿರ್ಮಾಣ, ಒಳಚರಂಡಿ ನೀರು ಮಾರ್ಗ ಬದಲಾವಣೆ ಸೇರಿದಂತೆ ಕಾಮಗಾರಿಗಳನ್ನು ವಿಭಾಗಿಸಿ, ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ವೇಗ ಸಿಗುತ್ತದೆ. ಈ ಮೂಲಕ ಜನವರಿ ವೇಳೆಗೆ ಕೆಂಪಾಂಬುಧಿ ಕೆರೆ ಶುಚಿ ಹಾಗೂ ಅಭಿವೃದ್ದಿಯಾಗುತ್ತದೆ ಎಂದು ಶಾಸಕ ರವಿಸುಬ್ರಹ್ಮಣ್ಯ ಹೇಳಿದ್ದಾರೆ.
ಕೆಂಪಾಂಬುಧಿ ಕೆರೆ ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿಲ್ಲ. ಆದರೆ, ಇದು ಬಸವನಗುಡಿಗೆ ಕಳಸವಿದ್ದಂತೆ. ಆದ್ದರಿಂದ, ಈ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದೇನೆ. ಈ ಕೆರೆಯನ್ನು ಶುಚಿಗೊಳಿಸುವುದರಿಂದ, ಸುತ್ತಮುತ್ತಲಿನ ವಾತಾವರಣವೂ ಸುಧಾರಣೆಯಾಗುತ್ತದೆ. ಕೆಂಪಾಂಬುಧಿ ಕೆರೆಯಲ್ಲಿ ಒಳಚರಂಡಿ ನೀರು ಹೋಗದಂತೆ ತಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಕೆಂಪೇಗೌಡರು ಕಟ್ಟಿದ ಈ ಕೆರೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿಕೊಳ್ಳಲು ಬದ್ಧನಾಗಿದ್ದೇನೆ ಎಂದಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗೆಗಿನ ಸ್ಮಾರಕ ಕೆಂಪಾಂಬುಧಿ ಕೆರೆಯ ಬಳಿ ಸ್ಥಾಪನೆ ಆಗಲಿದೆ. ಕೆಂಪೇಗೌಡರು ಬೆಂಗಳೂರಿನ ನಿರ್ಮಾಣಕ್ಕೆ ನೀಡಿದ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರ ನೀಡುವ ಸ್ಮಾರಕ ಭವನ ಇದಾಗಲಿದೆ. ಈ ಮೂಲಕ ಕೆಂಪೇಗೌಡರ ಬಗ್ಗೆ ಸಮಗ್ರ ಮಾಹಿತಿ ನೀಡುವ ಬೆಂಗಳೂರು ಪ್ರಥಮ ತಾಣ ಇದಾಗಲಿದೆ.
ಕೆಂಪಾಂಬುಧಿ ಕೆರೆಯ ಬಳಿ ಕೆಂಪೇಗೌಡರು ಸ್ಥಾಪಿಸಿದ್ದ ಗೋಪುರಗಳಿವೆ. ಇದಲ್ಲದೆ ಹಲವು ರೀತಿಯ ಸ್ಮಾರಕಗಳೂ ಇವೆ. ಇವುಗಳೆಲ್ಲವನ್ನೂ ಸಂರಕ್ಷಿಸಲಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ, ಕೆಂಪೇಗೌಡರ ಬಗ್ಗೆ ಸಮಗ್ರ ಚಿತ್ರಣ ನೀಡುವ ಪ್ರಾತ್ಯಕ್ಷಿಕೆಯ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಮ್ಮ ನಗರ ನಿರ್ಮಾತೃ ಕೆಂಪೇಗೌಡರ ಸಾಧನೆ, ಅವರು ನಿರ್ಮಿಸಿರುವ ತಾಣಗಳು ಸೇರಿದಂತೆ ಅವರ ಬಗ್ಗೆ ಸವಿವರವನ್ನು ಈ ಸ್ಮಾರಕ ನೀಡಲಿದೆ.
ಕೆಂಪೇಗೌಡರ ಬಗ್ಗೆ ಎಲ್ಲ ರೀತಿಯ ಮಾಹಿತಿ ನೀಡುವ ತಾಣ ಬೆಂಗಳೂರಿನಲ್ಲಿ ಎಲ್ಲೂ ಇಲ್ಲ. ಈ ಶಿಲ್ಪಿಯ ಸಾಹಸ ಹಾಗೂ ಸಾಧನೆಯ ವಿವರವನ್ನು ಈ ಸ್ಮಾರಕ ಭವನ ಒಳಗೊಳ್ಳಲಿದೆ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ ಹಾಗೂ ಕೆಂಪಾಂಬುಧಿ ಕೆರೆಯ ನಡುವಿನ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದೆ. ಜನವರಿ ವೇಳೆಗೆ ಇದು ಕೂಡ ಪೂರ್ಣಗೊಳ್ಳಲಿದೆ ಎಂದು ಶಾಸಕ ರವಿಸುಬ್ರಹ್ಮಣ್ಯ ತಿಳಿಸಿದ್ದಾರೆ.

Monday, July 27, 2009

ಅರ್ಕಾವತಿ ಪುನಶ್ಚೇತನಕ್ಕೆ ಕ್ರಿಯಾಯೋಜನೆ: ಶಾಸಕರ ನಿರ್ಲಕ್ಷ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ವ ಅಧಿಕಾರವನ್ನು ಒಳಗೊಂಡ ಪ್ರಾಧಿಕಾರದ ರಚನೆ ಅತ್ಯಗತ್ಯ ಎಂದು ತಾಂತ್ರಿಕ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘದ ಸಹಯೋಗದಲ್ಲಿ ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆಗಾಗಿ ಕ್ರಿಯಾಯೋಜನೆ ರಚಿಸಲು ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಈ ಅಭಿಪ್ರಾಯ ವ್ಯಕ್ತವಾಗಿದೆ. ಇಂತಹ ಉಪಯೋಗಕಾರಿ ಕಾರ್ಯಾಗಾರಕ್ಕೆ ಶಾಸಕರೊಬ್ಬರೂ ಹಾಜರಾಗದೆ ನಿರ್ಲಕ್ಷ ಧೋರಣೆ ತೋರಿದ್ದು, ವಿಷಾದನೀಯ.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ, ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ. ಇನ್ನೆಡರು ವಾರಗಳಲ್ಲಿ ಸಮಗ್ರ ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿ, ಕ್ರಮ ಕೈಗೊಳ್ಳಲು ಒತ್ತಾಯಪೂರ್ವಕ ಮನವಿ ಮಾಡಬೇಕೆಂದು ಕಾರ್ಯಾಗಾರದಲ್ಲಿ ತೀರ್ಮಾನಿಸಲಾಯಿತು.
ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು ಸಮ್ಮುಖದಲ್ಲಿ ನಡೆದ ಕಾರ್ಯಾಗಾರದಲ್ಲಿ, ಪರಿಸರವಾದಿ ಡಾ.ಅನ. ಯಲ್ಲಪ್ಪರೆಡ್ಡಿ, ಡಬ್ಲ್ಯುಆರ್‌ಡಿಒದ ಸಿ.ವಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾ. ಎಸ್.ರಾಜಾರಾವ್, ಸಣ್ಣ ನೀರಾವರಿ ಇಲಾಖೆಯ ಸುರೇಶ್ ಹಾಗೂ ಬೆಂಗಳೂರು ಜಲಮಂಡಳಿಯ ರೂಪ್‌ಕುಮಾರ್ ಭಾಗವಹಿಸಿದ್ದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಎಲ್ಲ ಇಲಾಖೆಗಳ ಮೇಲೂ ಅಧಿಕಾರ ಹೊಂದಿರುವ, ಆ ಇಲಾಖೆಗಳಿಂದ ಕೆಲಸ ಮಾಡುವ ಅವಕಾಶ ಹೊಂದಿರುವ ಪ್ರಾಧಿಕಾರವನ್ನು ರಚಿಸಬೇಕೆಂಬ ಒಮ್ಮತ ನಿರ್ಣಯ ಕೈಗೊಳ್ಳಲಾಯಿತು. ಇದರ ಜತೆಗೆ, ಹೊಳೆ ಹರಿಸಲು ನಮ್ಮತನದ ಅರಣ್ಯ ಬೆಳೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅರ್ಕಾವತಿ ನದಿ ಪಾತ್ರದ ಸಂರಕ್ಷಣೆಗಾಗಿ ೨೦೦೩ರಲ್ಲಿ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಲಾಯಿತು.
ಅರ್ಕಾವತಿ ನದಿ ಬಗ್ಗೆ ಹಿಂದಿನ ಸ್ಥಿತಿ ಹಾಗೂ ಪ್ರಸ್ತುತ ಸ್ಥಿತಿ ಬಗ್ಗೆ ಒಂದು ಸಾಕ್ಷ್ಯಚಿತ್ರ ತಯಾರಿಸುವಂತೆ ಆರ್ಘ್ಯಂ ಪ್ರತಿಷ್ಠಾನಕ್ಕೆ ಮನವಿ ಮಾಡಿಕೊಳ್ಳಲಾಯಿತು. ಜತೆಗೆ, ಮಾಧ್ಯಮಗಳು ನದಿ ಬಗ್ಗೆ ಕಾಳಜಿಯುತ ವರದಿಗಳನ್ನು ಪ್ರಕಟಿಸಲು ಕೋರಿಕೊಳ್ಳಲಾಯಿತು. ಮೆಟ್ರೊ ರೈಲು ಸುರಂಗ ಮಾರ್ಗದಿಂದ ಲಕ್ಷಾಂತರ ಕೊಳವೆ ಬಾವಿಗಳು ಮುಚ್ಚಿಹೋಗುತ್ತವೆ. ಅಂತರ್ಜಲಕ್ಕೆ ಧಕ್ಕೆ ಉಂಟಾಗುತ್ತದೆ. ಈ ಬಗ್ಗೆ ವಿವರ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (ಗ್ಯಾಟ್) ಪ್ರೊಫೆಸರ್ ಡಾ. ವೈ. ಲಿಂಗರಾಜು, ಗ್ಯಾಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಸಿ.ವಿ. ಶ್ರೀನಿವಾಸ್, ಕ್ಯಾಪ್ಟನ್ ಎಸ್. ರಾಜಾರಾವ್, ಬೆಂಗಳೂರು ವಿವಿ ಪ್ರೊಫೆಸರ್ ಡಾ. ಕೆ. ನಂದಿನಿ, ಡಿಎಂಜಿಯ ಮಾಜಿ ಹೆಚ್ಚುವರಿ ಹೆಚ್ಚುವರಿ ನಿರ್ದೇಶಕ ಡಾ. ಟಿ.ಎನ್. ವೇಣುಗೋಪಾಲ್ ಮತ್ತು ಸಿಜಿಡಬ್ಲ್ಯುಬಿಯ ಮಾಜಿ ಸದಸ್ಯ ಸಿ.ಎಸ್. ರಮೇಶ್, ವಿಜಯ ಕರ್ನಾಟಕದ ಆರ್. ಮಂಜುನಾಥ್, ಜಿಯೊ ಇನ್‌ಫರ್ಮೆಟಿಕ್ಸ್ ತಜ್ಞ ಡಾ. ವಿ.ಆರ್. ಹೆಗಡೆ, ಹಾಗೂ ಎನ್ವಿರಾನಮೆಂಟಲ್ ಪ್ರೊಟೆಕ್ಷನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಕೆ. ಶಿವಶಂಕರ್, ಮಾಜಿ ಶಾಸಕ ಪಿ.ಜಿ.ಆರ್. ಸಿಂಧ್ಯಾ ಅವರು ಅರ್ಕಾವತಿ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಸಭೆ-ಸಮಾರಂಭಗಳಲ್ಲಿ ಮಾರುದ್ದ ಭಾಷಣ ಮಾಡುವ ಶಾಸಕರು, ನದಿ ಪುನಶ್ಚೇತನಕ್ಕೆ ತಾಂತ್ರಿಕ ಸಲಹೆ ಹಾಗೂ ಕ್ರಿಯಾಯೋಜನೆ ರೂಪಿಸುವ ಕಾರ್ಯಾಗಾರದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದರು.
ನದಿ ಪಾತ್ರದಲ್ಲಿ ೨೮ ಶಾಸಕರಿದ್ದಾರೆ. ಅವರೆಲ್ಲರಿಗೂ ಸಂಸ್ಥೆ ವತಿಯಿಂದ ಆಹ್ವಾನಿಸಲಾಗಿತ್ತು. ಆದರೆ, ಯಾರೂ ಇತ್ತ ಸುಳಿಯದಿರುವುದು ತೀವ್ರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತು. ಜನಪ್ರತಿನಿಧಿಗಳು ವಿಧಾನಸಭೆ ಹಾಗೂ ಸಮಾರಂಭದಲ್ಲಿ ಪ್ರಚಾರಕ್ಕಾಗಿ ಮಾತ್ರ ನದಿ ಬಗ್ಗೆ ಮಾತನಾಡುತ್ತಾರೆ. ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದಾಗ ಬೆನ್ನು ತೋರುತ್ತಾರೆ. ಇಂತಹವನ್ನು ನಂಬುವುದು ಹೇಗೆ? ಎಂಬ ಪ್ರಶ್ನೆಗೂ ಅಲೆದಾಡುತ್ತಿತ್ತು.
ರಸ್ತೆ ಅಥವಾ ಕಟ್ಟಡಕ್ಕೆ ಪೂಜೆ ಮಾಡಲು ಯಾವ ಕಾರ್ಯಒತ್ತಡವೂ ಇಲ್ಲದೆ ಶಾಸಕರು ಪೋಸು ನೀಡುತ್ತಾರೆ. ಆದರೆ, ಜಲಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಒಂದು ನದಿಗೇ ಮರುಜನ್ಮ ನೀಡುವ ಇಂತಹ ಕಾರ್ಯಯೋಜನೆಗಳಲ್ಲಿ ತಮ್ಮ ಪಾತ್ರ ಏನು ಎಂಬುದನ್ನು ಅರಿತುಕೊಳ್ಳಲು ಇಲ್ಲಿಗೆ ಆಗಮಿಸಲಿಲ್ಲ. ಇನ್ನು ಇವರು ಒತ್ತುವರಿಯಂತಹ ಜಟಿಲ ಸಮಸ್ಯೆಯನ್ನು ನಿವಾರಿಸಲು ಸಹಕಾರಿಸುತ್ತಾರೆಯೇ ಎಂಬ ಅನುಮಾನ ಮೂಡಿತ್ತು.
ಶಾಸಕರು ಬರದಿದ್ದರೂ, ಎಲ್ಲ ಇಲಾಖೆಗಳ ಅಧಿಕಾರಿಗಳು ಇಲ್ಲಿದ್ದುದು ಸಂತಸದ ವಿಷಯ. ಅವರೆಲ್ಲರೂ ಸಮಸ್ಯೆಗೆ ಸ್ಪಂದಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಚಿತ್ರ ಶೀರ್ಷಿಕೆ:
ಅರ್ಕಾವತಿ ನದಿ ಪುನಶ್ಚೇತನ ಕ್ರಿಯಾಯೋಜನೆ ರಚಿಸಲು ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಬ್ಲ್ಯುಆರ್‌ಡಿಒದ ಸಿ.ವಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾ. ಎಸ್.ರಾಜಾರಾವ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು , ಪರಿಸರವಾದಿ ಡಾ.ಅನ. ಯಲ್ಲಪ್ಪರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಸುರೇಶ್ ಹಾಗೂ ಬೆಂಗಳೂರು ಜಲಮಂಡಳಿಯ ರೂಪ್‌ಕುಮಾರ್.

Thursday, July 23, 2009

ಅರ್ಕಾವತಿ ನದಿ: ಪುನಶ್ಚೇತನಕ್ಕೆ ಕ್ರಿಯಾಯೋಜನೆ ಕಾರ್ಯಾಗಾರ

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘದ ಸಹಯೋಗದಲ್ಲಿ 'ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆ'ಗಾಗಿ ಕ್ರಿಯಾಯೋಜನೆ ರಚಿಸಲು ಜುಲೈ 25ರಂದು ನಗರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಅರ್ಕಾವತಿ ನದಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲ ಶಾಸಕರು, ನೀರಿನ ಬಳಕೆದಾರರು, ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರ್ಘ್ಯಂ ಪ್ರತಿಷ್ಠಾನ, ಕೆಎಸ್‌ಪಿಸಿಬಿ, ಕೆಎಸ್‌ಐಐಡಿಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ಮತ್ತು ಬೆಂಗಳೂರು ಜಲಮಂಡಳಿ ಈ ಕಾರ್ಯಾಗಾರವನ್ನು ಪ್ರಾಯೋಜಿಸಿವೆ.
ಕಾರ್ಯಾಗಾರದಲ್ಲಿ ನದಿಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ತಜ್ಞರು ತಮ್ಮ ಅಭಿಪ್ರಾಯ ಹಾಗೂ ಸಲಹೆಯ ವರದಿ ಮಂಡಿಸಲಿದ್ದಾರೆ. ಚರ್ಚಾಗೋಷ್ಠಿಯಲ್ಲಿ ಈ ಬಗ್ಗೆ ಸಂವಾದ ನಡೆಸಿ, ಜನಪ್ರತಿನಿಧಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಲಿದ್ದಾರೆ.
ವಿಷಯಗಳ ಬಗ್ಗೆ ಮಾತನಾಡುವರು:
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (ಗ್ಯಾಟ್) ಪ್ರೊಫೆಸರ್ ಡಾ. ವೈ. ಲಿಂಗರಾಜು- 'ಅರ್ಕಾವತಿ ದರ್ಶನ';
ಗ್ಯಾಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಸಿ.ವಿ. ಶ್ರೀನಿವಾಸ- 'ಚೇಂಜಿಂಗ್ ಸೆನಾರಿಯೊ ಆಫ್ ಅರ್ಬನ್ ಹೈಡ್ರಾಲಜಿ';
ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ಎಸ್. ರಾಜಾರಾವ್- 'ಸ್ಕೇರ್‌ಸಿಟಿ ಆಫ್ ವಾಟರ್- ಬೆಂಗಳೂರು ತನ್ನ ನೈಸರ್ಗಿಕ ಸಾವು ಎದುರಿಸಲಿದೆ';
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಸುಬ್ರಮಣಿಯನ್- 'ಬೆಂಗಳೂರು ಕೆರೆಗಳ ರಕ್ಷಣೆ ಹೇಗೆ?- ಕಾರ್ಯಯೋಜನೆ';
ಬೆಂಗಳೂರು ವಿವಿ ಪ್ರೊಫೆಸರ್ ಡಾ. ಕೆ. ನಂದಿನಿ, ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪರೆಡ್ಡಿ- 'ಅರ್ಕಾವತಿ ಜಲಾನಯನ ಸಂರಕ್ಷಣೆಯಲ್ಲಿ ಪರಿಸರ ದೃಷ್ಟಿಕೋನದ ಅಳವಡಿಕೆ';
ಡಿಎಂಜಿಯ ಮಾಜಿ ಹೆಚ್ಚುವರಿ ಹೆಚ್ಚುವರಿ ನಿರ್ದೇಶಕ ಡಾ. ಟಿ.ಎನ್. ವೇಣುಗೋಪಾಲ್ ಮತ್ತು ಸಿಜಿಡಬ್ಲ್ಯುಬಿಯ ಮಾಜಿ ಸದಸ್ಯ ಸಿ.ಎಸ್. ರಮೇಶ- 'ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಸಂಪನ್ಮೂಲ';
ವಿಜಯ ಕರ್ನಾಟಕದ ಆರ್. ಮಂಜುನಾಥ್- 'ಪತ್ರಕರ್ತರ ದೃಷ್ಟಿಯಲ್ಲಿ ಅರ್ಕಾವತಿ ಸ್ಥಿತಿ';
ಜಿಯೊ ಇನ್‌ಫರ್ಮೆಟಿಕ್ಸ್ ತಜ್ಞ ಡಾ. ವಿ.ಆರ್. ಹೆಗಡೆ- 'ಅರ್ಕಾವತಿ ಮಾಹಿತಿಯ ಭಂಡಾರ- ಜಲ ಸಂಪನ್ಮೂಲ ನಿರ್ವಹಣೆಯತ್ತ';
ಪ್ರೊಟೆಕ್ಷನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಕೆ. ಶಿವಶಂಕರ್- 'ಅರ್ಕಾವತಿ ಪುನಶ್ಚೇತನಕ್ಕೆ ಸಮಗ್ರ ಕಾರ್ಯ ಮತ್ತು ಶೀಘ್ರ ಕಾನೂನುಗಳ ಅಗತ್ಯ'
ಕಾರ್ಯಾಗಾರದ ಹಿನ್ನೆಲೆ
ಭಾರತೀಯ ಭೂವೈಜ್ಞಾನಿಕ ಸಂಘ ಮತ್ತು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಂಶೋಧನಾ ಕೇಂದ್ರಗಳು 'ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆ' ವಿಷಯದ ಪ್ರಾಮುಖ್ಯತೆ ಮತ್ತು ಸಾಮಾಜಿಕ ಕಳಕಳಿಯನ್ನರಿತು, ಸಮಸ್ಯೆ ಬಗೆಹರಿಯಲು ಬೇಕಾದ ಕ್ರಿಯಾಯೋಜನೆಯನ್ನು ರಚಿಸುವ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅರ್ಕಾವತಿ ಜಲಾನಯನ ದಕ್ಷಿಣ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಒಂದು ಕಿರು ಜಲಾನಯನದ ಅಧ್ಯಯನ ಕೈಗೊಂಡಿದ್ದಾರೆ. ಅಲ್ಲಿಯ ಸಮಸ್ಯೆಗಳ ಬಗ್ಗೆ ಅರಿವು ಉಂಟು ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳೊಂದಿಗೆ ದೊಡ್ಡ ಮುದವಾಡಿಯಲ್ಲಿಯೇ ಇರುವ 'ಸೇಕ್ರೆಡ್' ಎಂಬ ಸ್ವಯಂ ಸೇವಾ ಟ್ರಸ್ಟ್ ಕೈಜೋಡಿಸಿದೆ. ಅಲ್ಲಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಕಂಪ್ಯೂಟರ್ ಕಲಿಕೆ, ಇಂಗ್ಲಿಷ್ ಭಾಷಾ ಬೋಧನೆ ಮತ್ತು ಪರಿಸರ ಸಮಸ್ಯೆಗಳ ಅರಿವು ಮೂಡಿಸಲು ಪ್ರತಿ ವರ್ಷ ವಿಭಿನ್ನ ಪ್ರದರ್ಶನ ಏರ್ಪಡಿಸುತ್ತಿದೆ. ಈಗ ಅರ್ಕಾವತಿ ಜಲಾನಯನದ ಗ್ರಾಮೀಣ ಭಾಗದಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಉಂಟು ಮಾಡಲು ಮುಂದಾಗಿದೆ.
ಅರ್ಕಾವತಿ ನದಿ ಜಲಾನಯನ ಪ್ರದೇಶವನ್ನು ಪ್ರತಿನಿಧಿಸುವ ಎಲ್ಲಾ ಶಾಸಕರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ ಕಾರ್ಯನಿರತವಾಗಿರುವ ನೀರಿನ ಬಳಕೆದಾರ ಸರಕಾರಿ ಇಲಾಖೆಗಳ ಕಾರ್ಯ ಚಟುವಟಿಕೆಗಳಲ್ಲಿ ನದಿ ಪುನಶ್ಚೇತನಕ್ಕೆ ಅವಶ್ಯವಾದ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಗಮನ ಹರಿಸಿ ಅರ್ಕಾವತಿ ನದಿ ಜಲಾನಯನ ಪುನಶ್ಚೇತನ ಮತ್ತು ಸುಸ್ಥಿರತೆಗಾಗಿ ಕ್ರಿಯಾಸೂಚಿ ತಯಾರಿಕೆ ಬಗ್ಗೆ ಅರಿವು ಮೂಡಿಸಲು ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪರೆಡ್ಡಿಯವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ.
ಪರಿಸರ ತಜ್ಞ ಡಾ. ಎ.ಎನ್. ಎಲ್ಲಪ್ಪರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಾನಾ ವಿಷಯ ತಜ್ಞರ ಸಮಿತಿ ರಚಿಸಿ, ಕಾರ್ಯಾಗಾರದ ರೂಪುರೇಷೆ ಮತ್ತು ಚರ್ಚಿಸಬೇಕಾದ ವಿಷಯಗಳ ಲೇಖನಗಳ ಹೊತ್ತಿಗೆಯನ್ನು ಹೊರತಂದು ಕಾರ್ಯಾಗಾರದಲ್ಲಿ ಚರ್ಚೆಗೆ ಇಡಲಾಗಿದೆ.
ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಕ್ಯಾಂಪಸ್, ಬೆಂಗಳೂರು ವಿವಿ, ಅರಮನೆ ರಸ್ತೆ. ಸಮಯ: ಬೆಳಗ್ಗೆ 9.30.

Friday, July 10, 2009

ಡಿಡಿಯಲ್ಲಿ ಎಲ್‌ಡಿಎಯೊಂದಿಗೆ ಸಂವಾದ

ಆತ್ಮೀಯ ಸ್ನೇಹಿತರೇ,
ಕೆರೆಗಳ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಶ್ರೀ ವೇದಾಂತ್‌ ಅವರೊಂದಿಗೆ ಕೆರೆಗಳ ಕುರಿತ ಒಂದು ಸಂವಾದದಲ್ಲಿ ನಾನು ಭಾಗವಹಿಸಿದ್ದೇನೆ. ಈ ಕಾರ್ಯಕ್ರಮ ಬೆಂಗಳೂರು ದೂರದರ್ಶನ ಚಂದನದಲ್ಲಿ ಜುಲೈ 12ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ವೀಕ್ಷಿಸಿ, ತಮ್ಮ ಅಭಿಪ್ರಾಯ ತಿಳಿಸಿ.
ತಮ್ಮ ವಿಶ್ವಾಸಿ
ಕೆರೆ ಮಂಜು