Tuesday, May 5, 2009

ಹೇರೋಹಳ್ಳಿ ಕೆರೆಯಿಂದ ಜನರಿಗೆ ಕಲ್ಮಶ ನೀರು ಪೂರೈಕೆ


ಬೆಂಗಳೂರಿನಲ್ಲಿ ಕೆರೆಗಳನ್ನು ಯಾವ ರೀತಿ ಹಾಳು ಮಾಡುತ್ತಿದ್ದೇವೆ ಎಂದರೆ, ಕೆರೆಗೆ ಕೈ ಹಾಕುವ ಸಾಹಸ ಮಾಡದಂತಹ ಪರಿಸ್ಥಿತಿಯಲ್ಲಿದ್ದೇವೆ. ಆದರೆ, ಇಂತಹ ಕಲ್ಮಶ, ಕೊಳಕು ತುಂಬಿರುವ ಕೆರೆಯ ನೀರನ್ನೇ ಟ್ಯಾಂಕರ್ ಮೂಲಕ ಸಾಗಿಸಿ, ಹಣ ಮಾಡುವ ದಂಧೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಇವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲ.
ಬೆಂಗಳೂರು- ಮಾಗಡಿ ರಸ್ತೆಯಲ್ಲಿರುವ ಹೇರೋಹಳ್ಳಿ ಕೆರೆಯಲ್ಲಿ ಇಂತಹ ಅಕ್ರಮ ದಂಧೆ ನಡೆಯುತ್ತಿದೆ. ಈ ಕೆರೆ ಟ್ಯಾಂಕ್ ಸೀರಿಯಲ್ ನಂ. ೬೭೧ ಆಗಿದ್ದು, ೧೩.೭೭ ಹೆಕ್ಟೇರ್ ಪ್ರದೇಶದಲ್ಲಿದೆ. ಅಂದರೆ, ೩೩.೩೩ ಎಕರೆ. ಆದರೆ ಇಷ್ಟು ಪ್ರದೇಶದಲ್ಲಿ ಕೆರೆ ಈಗಲೂ ಉಳಿದಿದೆಯೇ ಎಂಬುದೇ ಅನುಮಾನ. ಏಕೆಂದರೆ ಸುತ್ತಲೂ ಸಾಕಷ್ಟು ಒತ್ತುವರಿಯಾಗಿದೆ. ಒಂದು ಸಣ್ಣ ಶೆಡ್ ಆಗಿ ಆರಂಭವಾದ ಕಾರ್ಖಾನೆ, ನಂತರ ಇದೇ ಕೆರೆಯನ್ನು ಮುಚ್ಚಿ ವಿಶಾಲವಾಗಿ ಬೆಳೆದುನಿಂತಿದೆ. ಅಷ್ಟೇ ಅಲ್ಲ, ತನ್ನ ರಾಸಾಯನಿಕ ಅಂಶಯುಕ್ತ ನೀರು ಹಾಗೂ ತ್ಯಾಜ್ಯವನ್ನು ಈ ಕೆರೆಗೇ ತುಂಬುತ್ತಿದೆ. ಇಂತಹ ಧೋರಣೆಯನ್ನು ಸ್ಥಳೀಯ ರಾಜಕೀಯ ಮುಖಂಡರು ಪ್ರೋತ್ಸಾಹಿಸುತ್ತಿದ್ದಾರೆ. ಯುವಕರು ಧ್ವನಿ ಎತ್ತದಂತೆ ತಡೆಯಾಗಿದ್ದಾರೆ.
ಹೇರೋಹಳ್ಳಿ ಕೆರೆಗೆ ಯಥೇಚ್ಛವಾಗಿ ಒಳಚರಂಡಿ ನೀರು ಹರಿಯುತ್ತಿದೆ. ಸುತ್ತಮುತ್ತಲಿರುವ ವಸತಿ ಪ್ರದೇಶ ಹಾಗೂ ಹೊಸ ಬಡಾವಣೆಗಳ ತ್ಯಾಜ್ಯ-ಕೊಳಕು ನೀರೆಲ್ಲ ಈ ಕೆರೆಗೆ ಹರಿಯಲು ಸೂಕ್ತ ಮಾರ್ಗವನ್ನು ಕಲ್ಪಿಸಲಾಗಿದೆ. ಕೆರೆಯ ಬದಿಯಲ್ಲಿ ಮೀನು ಮಾರಾಟವೂ ನಡೆಯುತ್ತದೆ. ಇದಕ್ಕೊಂದು ಗುಡಿಸಲೂ ಇದೆ. ಆದರೆ, ಇಂತಹ ಕಲ್ಮಶ ತುಂಬಿದ ನೀರಿನಲ್ಲಿ ಎಂತಹ ಮೀನು ಸಿಗಬಹುದು ನೀವೇ ಊಹಿಸಿ. ಆದ್ದರಿಂದಲೇ ಸ್ಥಳೀಯರು ಇಲ್ಲಿ ಮೀನು ಕೊಳ್ಳುವುದಿಲ್ಲ. ಹೊರಗಿನವರನ್ನು ಆಕರ್ಷಿಸುವುದೇ ಮಾರಾಟದ ಗಿಮ್ಮಿಕ್ಕು.
ಈ ಕೆರೆಯಲ್ಲಿ ತ್ಯಾಜ್ಯ ಸೇರಿದಂತೆ ಜೊಂಡು ಆವೃತವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಜತೆಗೆ ರಸ್ತೆಗಳಿಂದ ಗಾಡಿಗೆ ತುಂಬುವ ಕಸ ಹಾಗೂ ಕಾರ್ಖಾನೆಗಳ ಎಲ್ಲ ತ್ಯಾಜ್ಯಕ್ಕೂ ಹೇರೋಹಳ್ಳಿ ಕೆರೆಯೇ ತಾಣ. ಕೆರೆಯ ದಡದ ಮೇಲಿನ ರಸ್ತೆಯಲ್ಲಿಯೇ ಹೇರೋಹಳ್ಳಿಗೆ ತೆರಳಬೇಕು. ಅದೇ ರಸ್ತೆಯ ಬದಿಯೆಲ್ಲ ಕಸದ ತಾಣ. ಈ ಮೂಲಕ ಕೆರೆಯನ್ನು ತುಂಬುವ ಸಂಚು.
ಹೇರೋಹಳ್ಳಿ ಕೆರೆಯ ಮತ್ತೊಂದು ದುರಂತವೆಂದರೆ, ಕೆರೆಗೇ ಬೋರ್‌ವೆಲ್ ಅಳವಡಿಸಲಾಗಿದೆ. ಮೂರ್‍ನಾಲ್ಕು ಬೋರ್‌ವೆಲ್ ಕೊರೆಯಲಾಗಿದ್ದು, ಅದರಿಂದ ನೀರೆತ್ತಲು ರಸ್ತೆಯಲ್ಲೇ ಪಂಪ್‌ಸೆಟ್ ಅಳವಡಿಸಲಾಗಿದೆ. ಇದು ಎಲ್ಲರಿಗೂ ಬಹಿರಂಗವಾಗಿಯೇ ಕಾಣುವ ಅಕ್ರಮ ವ್ಯವಸ್ಥೆ ಆಗಿದ್ದರೂ, ಈ ಬಗ್ಗೆ ಚಕಾರ ಎತ್ತುವವರು ಯಾರೂ ಇಲ್ಲ. ಈ ದಂಧೆಯಲ್ಲಿ ತೊಡಗಿರುವ ವ್ಯಕ್ತಿ ರಾಜಕೀಯ ಪ್ರಭಾವವನ್ನೂ ಹೊಂದಿರುವುದರಿಂದ, ಸ್ಥಳೀಯ ಯುವಕರ ಬಾಯಿ ಮುಚ್ಚಿಸುತ್ತಿದ್ದಾರೆ. ಈ ವ್ಯಕ್ತಿ ಬರೀ ಅಕ್ರಮ ನೀರು ಸಾಗಣೆ ಅಷ್ಟೇ ಮಾಡುತ್ತಿಲ್ಲ. ಜನರ ಜೀವನದೊಂದಿಗೂ ಆಟವಾಡುತ್ತಿದ್ದಾರೆ.
ಕೆರೆಯಿಂದ ಬೋರ್‌ವೆಲ್ ಮೂಲಕ ನೀರು ಪಂಪ್ ಮಾಡಿ, ಅಲ್ಲಿಂದ ಟ್ಯಾಂಕರ್ ಮೂಲಕ ವಿದ್ಯಮಾನ್ಯನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಮನೆಗಳಿಗೆ ಪೂರೈಸಲಾಗುತ್ತಿದೆ. ಇದು ಖಾಸಗಿ ನೀರು ಸರಬರಾಜು ಜಾಲ. ಇವರಿಗೆ ಜನರ ಸ್ವಾಸ್ಥ್ಯದ ಬಗ್ಗೆ ಪರಿವೇ ಇಲ್ಲ. ಇಂತಹ ನೀರನ್ನು ಜನರಿಗೆ ಪೂರೈಸುತ್ತಿದ್ದೇವೆಂಬ ಪಾಪಪ್ರಜ್ಞೆಯೂ ಇಲ್ಲ.
ಕೆರೆಗಳನ್ನು ಸ್ವಾರ್ಥ ಸಾನೆಗಾಗಿ ಬಳಸಿಕೊಳ್ಳುವ ಇಂತಹ ಪ್ರಭಾವಿ ವ್ಯಕ್ತಿಗಳನ್ನು ತಡೆಯಲು ಸ್ಥಳೀಯ ಜನಪ್ರತಿನಿಧಿಗಳೇ ಮುಂದಾಗಬೇಕು. ಸ್ಥಳೀಯ ಯುವಕರು ರಾಜಕೀಯ ಪ್ರೇರಿತ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಿದೆ.
ಅಲ್ಲದೆ, ಆರೋಗ್ಯ, ಕಾನೂನು, ರಕ್ಷಣೆ ಎಂಬ ಹೆಸರು ಹೊತ್ತಿರುವ ಇಲಾಖೆಗಳೂ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯದೊಂದಿಗೆ ಆಟವಾಡುತ್ತಿರುವ ಇಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳದ ಇಲಾಖೆಗಳ ಅಧಿಕಾರಿಗಳ ಮೇಲೆ ಮಾನವ ಹಕ್ಕು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಚಿತ್ರ: ಹೇರೋಹಳ್ಳಿ ಕೆರೆಯಲ್ಲಿ ತ್ಯಾಜ್ಯ-ರಾಸಾಯನಿಕಯುಕ್ತ ನೀರು. ಇದೇ ನೀರನ್ನು ಬೋರ್‍ವೆಲ್ ಮೂಲಕ ಪಂಪ್‌ಮಾಡಲು ರಸ್ತೆಯಲ್ಲೇ ಪಂಪ್‌ಸೆಟ್ ಅಳವಡಿಸಲಾಗಿದ್ದು, ಇದನ್ನೇ ಜನರಿಗೆ ಪೂರೈಸಲಾಗುತ್ತಿದೆ.


ಶುಚಿ ನೀರು ಮಾನವನ ಹಕ್ಕು...
ಮನುಷ್ಯನಿಗೆ ಶುಚಿಯಾದ ನೀರು ಒದಗಿಸುವುದು ಕರ್ತವ್ಯ ಅಲ್ಲವೇ? ಈ ಉದ್ದೇಶದಿಂದ ಆರಂಭವಾಗುವ ನೀರು ಪೂರೈಕೆಯ ಖಾಸಗಿ ಸಂಸ್ಥೆಗಳು ಕಲ್ಮಶಯುಕ್ತ ನೀರನ್ನು ಜನರಿಗೆ ಪೂರೈಸುವುದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ?
ನೈತಿಕವಾಗಿ ಖಂಡಿತವಾಗಿಯೂ ಇದು ಮಾನವನ ಹಕ್ಕು ಉಲ್ಲಂಘನೆಯೇ.
ಟ್ಯಾಂಕರ್‌ನಲ್ಲಿ ಮನೆಗೆ ಬರುವ ನೀರಿನ ಮೂಲವನ್ನು ಅದನ್ನು ಖರೀದಿಸುವ ವ್ಯಕ್ತಿ ಕೇಳುವುದಿಲ್ಲ. ಕೇಳಿದರೆ, ಅದಕ್ಕೆ ಸಮರ್ಪಕ ಉತ್ತರ ದೊರೆಯುವುದೂ ಇಲ್ಲ. ಆದರೆ, ಇದನ್ನೇ ಬಂಡವಾಳ ವಾಗಿಸಿಕೊಂಡವರು ಕೆರೆಯ ಕೊಳಕು ನೀರನ್ನು ಅಕ್ರಮವಾಗಿಯೇ ತುಂಬಿಕೊಂಡು ಜನರಿಗೆ ಪೂರೈಸುತ್ತಿದ್ದಾರೆ. ಇವರ ಬಗ್ಗೆ ಕ್ರಮ ಸಂಬಂಧಪಟ್ಟ ಆಯೋಗ ಅಥವಾ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಮನುಷ್ಯನ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡುವ ರೀತಿಯಲ್ಲಿಯೇ ಇದು ಸ್ವಾಸ್ಥ್ಯಕ್ಕೆ ಪೆಟ್ಟು ನೀಡುವ ಈ ದಂಧೆ ತಡೆಗಟ್ಟಲು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗ ಕಾರ್ಯಗತ ಆಗಬಹುದಲ್ಲವೇ?
ಹೇರೋಹಳ್ಳಿ ಕೆರೆಯ ಪರಿಸ್ಥಿತಿಯ ವಿಡಿಯೊ ಚಿತ್ರಣವನ್ನು ನಿಮ್ಮ ಮುಂದಿರಿಸಲಿದ್ದೇನೆ.

No comments:

Post a Comment