Sunday, January 1, 2023

Bengaluru- The city of a thousand lakes – ಬೆಂಗಳೂರು: ಸಾವಿರ ಕೆರೆಗಳ ನಗರಿ


ಬೆಂಗಳೂರು: ಸಾವಿರ ಕೆರೆಗಳ ನಗರಿ 

ಗ್ರೀನ್‌ ಸಿಟಿ, ಉದ್ಯಾನನಗಳ ನಗರ, ಹವಾನಿಯಂತ್ರಿತ ನಗರ, ಸಿಲಿಕಾನ್‌ ಸಿಟಿ, ಐಟಿ ಸಿಟಿ ಎಂದು ಪ್ರಖ್ಯಾತವಾಗಿರುವ ಬೆಂಗಳೂರು, ಕೆರೆಗಳ ನಗರ ಅದರಲ್ಲೂ ಸಾವಿರ ಕೆರೆಗಳ ನಗರ ಎಂಬ ಪ್ರಸಿದ್ಧಿಯನ್ನೂ ಪಡೆದಿತ್ತು. ಆದರೆ, ಅಭಿವೃದ್ಧಿಯ ಭರಾಟೆಯಲ್ಲಿ ಹೊಸ ವ್ಯಾಖ್ಯಾನಗಳು ಅಪ್ಪಿಕೊಂಡ ಬೆಂದಕಾಳೂರು, ತನ್ನ ಮೂಲ ಸ್ವರೂಪಕ್ಕೇ ಕೊಳ್ಳಿ ಇಟ್ಟುಕೊಳ್ಳುತ್ತಾ ಸಾಗಿದೆ. ಅದಕ್ಕೇ ಅಂದು ಕುಡಿಯುವ ನೀರು ಕೊಟ್ಟ ಕೆರೆಗಳು ಇಂದು ಮನುಜನ ಮಾಲಿನ್ಯದ ತಾಣಗಳಾಗಿವೆ...

ಕರ್ನಾಟಕ ರಾಜ್ಯದಲ್ಲಿ ದಶಕದ ಹಿಂದೆ 33 ಸಾವಿರ ಕೆರೆಗಳು ಇವೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತಿದ್ದವು. ಆದರೆ, ಈಗ ರಾಜ್ಯದಲ್ಲಿ ಒಟ್ಟು 40,521 ಕೆರೆಗಳಿವೆ. ಅಂದರೆ ಕೆರೆಗಳು ಕಳೆದುಹೋಗಿದ್ದವು. ಹುಡುಕುತ್ತಾ ಹೋದಂತೆ ಎಲ್ಲವೂ ಸಿಗುತ್ತಿವೆ. ಈಗಿರುವ 40 ಸಾವಿರ ಕೆರೆಗಳ ಒಟ್ಟು ವಿಸ್ತೀರ್ಣ 7 ಲಕ್ಷದ 52 ಸಾವಿರ ಎಕರೆ. ಅಪವಾದವೆಂದರೆ ಇದರಲ್ಲಿ 38 ಸಾವಿರ ಎಕರೆ ಒತ್ತುವರಿಯಾಗಿದೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ 837 ಕೆರೆಗಳಿವೆ ಎಂದು ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ ಹೈಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲೇ ತಿಳಿಸಿದೆ. 837 ಕೆರೆಗಳ ಒಟ್ಟು ವಿಸ್ತೀರ್ಣ, 28,264 ಎಕರೆ. ಇದರಲ್ಲಿ 4551 ಎಕರೆ ಒತ್ತುವರಿಯಾಗಿದೆ. 2145 ಎಕರೆ ತೆರವಾಗಿದೆ. ಇನ್ನು ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ ಪ್ರಕಾರ ಈ 837 ಕೆರೆಗಳನ್ನು ಹೊರತುಪಡಿಸಿ, 171 ಕಲ್ಯಾಣಿ, ಕುಂಟೆ, ಗೋಕಟ್ಟೆ, ಕಟ್ಟೆಗಳಿವೆ. ಅಂದರೆ ಬೆಂಗಳೂರಿನಲ್ಲಿ 1008 ಜೀವಂತ ಜಲಮೂಲಗಳಿವೆ. ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಕಟ್ಟಡಗಳಲ್ಲಿ ಮುಳುಗಿಹೋಗಿರುವ ನೂರಾರು ಕೆರೆಗಳು ಈ ಲೆಕ್ಕದಲ್ಲಿ ಇಲ್ಲ. ಅಂದರೆ, ಸಾವಿರ ಕೆರೆಗಳ ನಗರಿ ಬೆಂಗಳೂರು ಎಂಬುದು ಈಗಲೂ ಪ್ರಸ್ತುತವೇ... ಅದೇ ನಮ್ಮ ಹೆಮ್ಮೆ...

ಕಲುಷಿತ

ರಾಜ್ಯ ದೂರಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ) ನೀಡಿರುವ ವರದಿಯಂತೆ ರಾಜ್ಯದಲ್ಲಿ 8,579 ಕೆರೆಗಳು ಕಲುಷಿತವಾಗಿವೆ. ಬೆಂಗಳೂರು ನಗರದಲ್ಲಿರುವ 837 ಕೆರೆಗಳೂ ಕಲುಷಿತ. ಅಂದರೆ ನಾವು ಕೆರೆಗಳನ್ನು ಎಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದೇವೆ ಎಂಬುದು ಅರಿವಾಗುತ್ತದೆ.

ಏಷ್ಯಾದ ಯಾವುದೇ ನಗರ ಬೆಳೆಯದ ವೇಗದಲ್ಲಿ ಬೆಂಗಳೂರು ಬೆಳೆದಿದೆ, ಬೆಳೆಯುತ್ತಲೂ ಇದೆ. ಇಂತಹ ಅಭಿವೃದ್ಧಿ ವೇಗದಲ್ಲಿ ಪರಿಸರವನ್ನು ಲೆಕ್ಕಕ್ಕೆ ಇರಿಸಿಕೊಳ್ಳದ್ದೇ ಇಂದಿನ ಹವಾಮಾನ ವೈಪರೀತ್ಯದಂತ ಸಮಸ್ಯೆಗಳಿಗೆ ಪ್ರಮುಖ ಕಾರಣ. ಹವಾನಿಯಂತ್ರಿತ ನಗರ ಎಂಬ ಹೆಸರು ಬಂದಿದ್ದು ಸುಮ್ಮನೆ ಅಲ್ಲ. ಇಲ್ಲಿನ ಕೆರೆಗಳ ಪರಿಸರದಿಂದಲೇ ಈ ಪ್ರಖ್ಯಾತಿಯನ್ನು ನಗರ ಗಳಿಸಿದ್ದು. ಆದರೆ, ಇಂದು ಹೈಟೆಕ್‌ ಅಭಿವೃದ್ಧಿ ಕಂಡ ಕೆರೆಗಳೂ ಸೇರಿದಂತೆ ನಗರದ ಕೆರೆಗಳ ಬಳಿ ನಿಂತುಕೊಂಡರೆ ವಾಸನೆ ಸಹಿಸಲು ಸಾಧ್ಯವಿಲ್ಲದಂತಾಗಿದೆ. ಅಭಿವೃದ್ಧಿಯಾದ ಮೇಲೂ ಕೆರೆಗಳಲ್ಲಿ ಮಾಲಿನ್ಯ ದೂರವಾಗಿಲ್ಲ. ಒಳಚರಂಡಿಯ ಹೊಲಸು ಕೆರೆಗಳನ್ನು ಸೇರುವುದು ನಿಂತಿಲ್ಲ. ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿ ವಿಷಯದಲ್ಲಿ ಎದುರಿಸುತ್ತಿರುವ ಪ್ರಮುಖ ಅಂಶಗಳಲ್ಲಿ ಒಳಚರಂಡಿ ಕಲ್ಮಶಕ್ಕೇ ಪ್ರಥಮ ಸ್ಥಾನ.

ಬೆಂಗಳೂರಿನಲ್ಲಿ ಕೆರೆಗಳ ಅಭಿವೃದ್ಧಿಗೆ ಪ್ರಮುಖವಾಗಿ ತೊಡಕಾಗಿರುವುದು ಎರಡು ಅಂಶಗಳು. ಒಂದು ಒತ್ತುವರಿ, ಮತ್ತೊಂದು ಮಾಲಿನ್ಯ.

ಒತ್ತುವರಿ.. 

ಕೆರೆಗಳ ಅಭಿವೃದ್ಧಿಗೆ ಹಣವಿಲ್ಲ ಎಂಬ ಸಮಸ್ಯೆ ಇಲ್ಲ. 2009–10ನೇ ಸಾಲಿನಿಂದ ರಾಜ್ಯ ಸರ್ಕಾರ ಪ್ರತಿ ವರ್ಷವೂ ಕೆರೆಗಳ ಅಭಿವೃದ್ಧಿಗೆ ನೂರಾರು ಕೋಟಿ ನೀಡುತ್ತಲೇ ಇದೆ. ಆದರೆ, ಕೆರೆಗಳ ಒತ್ತುವರಿ ಬೆಂಗಳೂರಿನಲ್ಲಿ ಸಹಜ ಎಂಬ ಮಾತಿದೆ. ಎಲ್ಲಿ ಕೆರೆ ಇದೆಯೋ ಅಲ್ಲೆಲ್ಲ ಒತ್ತುವರಿಯಾಗಿರುವುದು ಕಂಡುಬರುತ್ತದೆ. ಬೆಂಗಳೂರಿಗೆ ಪ್ರಥಮವಾಗಿ ಕುಡಿಯುವ ನೀರು ಕೊಟ್ಟ, ನಗರ ನಿರ್ಮಾತೃ ಕೆಂಪೇಗೌಡರು ಕಟ್ಟಿದ ಧರ್ಮಾಂಬುಧಿ ಕೆರೆಯನ್ನು ಸರ್ಕಾರವೇ ಒತ್ತುವರಿ ಮಾಡಿಕೊಂಡು ಬಸ್‌ ನಿಲ್ದಾಣ ಮಾಡಿದೆ. ಅದೇ ಇಂದಿನ ಮೆಜೆಸ್ಟಿಕ್‌. ಅದಾದ ಮೇಲೆ, ಫುಟ್‌ಬಾಲ್‌, ಹಾಕಿ, ಒಳಾಂಗಣ, ಕ್ಲಬ್‌, ರಸ್ತೆ, ಬಡಾವಣೆ ನಿರ್ಮಾಣಕ್ಕೆ ಹಲವು ಕೆರೆಗಳು ಮಾಯವಾದವು. ಇನ್ನು ಉಳಿದ ಕೆರೆಗಳಲ್ಲಿ ಅಲ್ಲಲ್ಲಿ ಖಾಸಗಿ ಒತ್ತುವರಿಯಾಗಿವೆ. ಇವುಗಳ ತೆರವು ಅಭಿವೃದ್ಧಿಗೆ ಹಿನ್ನಡೆಯಾಗಿದೆ. 

ಒಳಚರಂಡಿ ಕಲ್ಮಶ

ಬೆಂಗಳೂರಿನ 93 ಕೆರೆಗಳು ಸುಮಾರು ₹500 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಕಂಡಿವೆ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಹೈಟೆಕ್‌ ಅಭಿವೃದ್ಧಿ ಕಂಡಿದ್ದರೂ, ಅದಕ್ಕೆ ಹರಿಯುವ ಒಳಚರಂಡಿ ನೀರಿಗೆ ತಡೆಹಾಕಲು ಸಾಧ್ಯವಾಗಿಲ್ಲ. ಬಿಡಬ್ಲ್ಯುಎಸ್‌ಎಸ್‌ಬಿ ಒಳಚರಂಡಿ ನೀರನ್ನು ರಾಜಕಾಲುವೆಯಲ್ಲೇ ಹರಿಸುತ್ತಿದೆ. ಇದು ಕೆರೆಗಳಿಗೆ ಹರಿಯುತ್ತಿದ್ದರೂ, ಅಭಿವೃದ್ಧಿಯಾಗುವ ಸಂದರ್ಭದಲ್ಲಿ ಇದಕ್ಕೆ ತಡೆಹಾಕುವಂತಹ ಅಭಿವೃದ್ಧಿ ಕಾರ್ಯಗಳು ನಡೆದಿಲ್ಲ. ಕೆಲವು ಕೆರೆಗಳ ಮಧ್ಯೆಯೇ ಒಳಚರಂಡಿ ನೀರಿನ ಪೈಪುಮಾರ್ಗ ಹಾದುಹೋಗುತ್ತಿದೆ.

ಕೈಗಾರಿಕೆ ತ್ಯಾಜ್ಯ

ಕೆರೆಗಳು ಕಸ, ದ್ರವ ತ್ಯಾಜ್ಯ ಹಾಗೂ ಕೈಗಾರಿಕೆ ತ್ಯಾಜ್ಯದ ಸಮಸ್ಯೆಯಿಂದ ಹೊರತಾಗಿಲ್ಲ. ನಾಗರಿಕರು ಎಸೆಯುವ ಕಸದ ಜೊತೆಗೆ ರಾಜಕಾಲುವೆಯಿಂದ ಪ್ಲಾಸ್ಟಿಕ್‌ ಸೇರಿದಂತೆ ಹಲವು ರೀತಿಯ ಕಸ ಸೇರಿಕೊಳ್ಳುತ್ತಿದೆ. ಇನ್ನು ಕೆರೆಗಳ ಪಕ್ಕದಲ್ಲೇ ಕಸ ವಿಂಗಡಣೆ ಮಾಡಿ ಕಾಂಪ್ಯಾಕ್ಟರ್‌ಗಳಿಗೆ ತುಂಬುವುದರಿಂದ ದ್ರವ ತ್ಯಾಜ್ಯ ಕೆರೆಗಳಿಗೆ ಹರಿಯುತ್ತಿದೆ. ಕೈಗಾರಿಕೆಗಳಿಂದ ಬರುವ ರಾಸಾಯನಿಕ ತ್ಯಾಜ್ಯ ಕೆರೆಗಳಿಗೇ ಹೋಗುತ್ತಿದೆ.

ಕೆರೆ ಮತ್ತು ಮಾಧ್ಯಮ..

ಕೆರೆಗಳ ಅಭಿವೃದ್ಧಿ ಹಾಗೂ ಸಂರಕ್ಷಣೆಯಲ್ಲಿ ಮಾಧ್ಯಮದ ಪಾತ್ರ ಮಹತ್ತರವಾಗಿಯೇ ಇದೆ ಎಂದು ಹೇಳಬೇಕು. ನಗರದಲ್ಲಿರುವ ಬಹುತೇಕ ಕೆರೆಗಳಿಗೆ ನಾಗರಿಕ ಸಂಘಗಳಿವೆ. ಇವುಗಳು ಕೆರೆ ರಕ್ಷಣೆ ಬಗ್ಗೆ ಹೋರಾಟ ಮಾಡುತ್ತಲೇ ಇರುತ್ತವೆ. ಇವರು ನೀಡುವ ಮಾಹಿತಿ, ಮಾಧ್ಯಮಗಳು ನಡೆಸುವ ತನಿಖೆಗಳಿಂದ ಹಲವು ವರದಿಗಳು ಪ್ರಕಟವಾಗುತ್ತಿವೆ. ಇವುಗಳಿಂದ ಹಲವು ಕೆರೆಗಳು ಉಳಿದಿವೆ ಎಂಬುದು ಸಂತಸದ ವಿಷಯ.

1 comment:

  1. ಹು.ಕಾ.ಗೌಡಯ್ಯSunday, January 01, 2023

    ಕೆರೆ ಕಾಣೆಯಾಗುತ್ತಿರುವುದು, ಕಿರಿದಾಗುತ್ತಿರುವುದು, ಕಲುಷಿತಗೊಳ್ಳುತ್ತಿರುವುದು, ಚುನಾಯಿತ ಪ್ರತಿನಿಧಿಗಳ ಸಂಕುಚಿತ, ಸ್ವಾರ್ಥ, ಸಾಮಾಜಿಕ ದ್ರೋಹ ನಡೆ ಹಾಗೂ ನಾಗರೀಕರ ಸ್ವಾಭಿಮಾನರಹಿತ, ದೂರದೃಷ್ಟಿದೋಷಿತ ಪ್ರಸ್ತುತ ಸ್ಥಿತಿಯ ದ್ಯೋತಕವಾಗಿದೆ.

    ReplyDelete