Wednesday, September 2, 2009

ಅರ್ಕಾವತಿ ನದಿ ಜಾಗೃತಿಗೆ ಪಾದಯಾತ್ರೆ

ಅರ್ಕಾವತಿ ನದಿ ಸಂರಕ್ಷಣೆ ಹಾಗೂ ಪುನಶ್ಚೇತನದ ಅಗತ್ಯ ಕುರಿತಂತೆ ನದಿ ಪಾತ್ರದಲ್ಲಿರುವ ಹಳ್ಳಿ ಹಾಗೂ ಪಟ್ಟಣಗಳ ಜನತೆಯಲ್ಲಿ ಅರಿವು ಮೂಡಿಸುವ ಸಲುವಾಗಿ ರಾಜಕೀಯ ಮುಖಂಡರು, ಪರಿಸರವಾದಿಗಳು, ಸ್ವಾಮೀಜಿಗಳು, ಸ್ಥಳೀಯ ಸಂಘ-ಸಂಸ್ಥೆಗಳು, ಅರ್ಕಾವತಿ ನದಿ ಪುನಶ್ಚೇತನಕ್ಕೆ ಈಗಾಗಲೇ ಸಾಕಷ್ಟು ಪ್ರಯತ್ನಪಡುತ್ತಿರುವ ಸಂಘಟನೆಗಳ ಕಾರ್ಯಕರ್ತರು ಸೆಪ್ಟೆಂಬರ 3ರಿಂದ 6ರವರೆಗೆ ನಂದಿಬೆಟ್ಟದ ಅರ್ಕಾವತಿ ಉಗಮಸ್ಥಾನದಿಂದ ತಿಪ್ಪಗೊಂಡನಹಳ್ಳಿ ಜಲಾಶಯದವರೆಗೆ ಪಾದಯಾತ್ರೆ ಮಾಡಲಿದ್ದಾರೆ.

ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರಕಾರದಿಂದ ಒಂದು ಸಮಿತಿ ಅಥವಾ ಪ್ರಾಧಿಕಾರದ ರಚನೆ ಕುರಿತಂತೆ ಈಗಾಗಲೇ ಸಾಕಷ್ಟು ಬಾರಿ ಪ್ರಸ್ತಾಪಿಸಲಾಗಿದೆ. ಜತೆಗೆ, ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿಯನ್ನೂ ನೀಡಲಾಗಿದೆ. ಇದು ನನಸಾಗುವ ಕಾಲ ಹತ್ತಿರದಲ್ಲೇ ಇದೆ. ಈ ಸಂದರ್ಭದಲ್ಲಿ ಪಕ್ಷಭೇಧ ಮರೆತು ಜನಪ್ರತಿನಿಧಿಗಳು ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಶ್ಲಾಘನೀಯ. ಅದರಲ್ಲೂ ಆಡಳಿತ ಪಕ್ಷದ ಶಾಸಕರು ಸಕ್ರಿಯವಾಗಿರುವುದು ನದಿ ಪುನಶ್ಚೇತನದ ದಿಕ್ಕಿನತ್ತ ಮಹತ್ವದ ಹೆಜ್ಜೆಯಾಗಿದೆ.
ಶಾಸಕ ಎಸ್‌.ಆರ್‌. ವಿಶ್ವನಾಥ್‌ ಪಾದಯಾತ್ರೆ ಮಾಡುವುದಾಗಿ ಈ ಹಿಂದೆಯೇ ಹೇಳಿದ್ದರು. ಅರ್ಕಾವತಿ ನದಿ ಪುನಶ್ಚೇತನದ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಉಗಮಕ್ಷೇತ್ರದಿಂದ ಪಾದಯಾತ್ರೆ ಮಾಡುವುದಾಗಿ ‘ಅರ್ಕಾವತಿ ಏಕೀ ದುರ್ಗತಿ’ ಲೇಖನ ಮಾಲಿಕೆಗೆ ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಶಾಸಕ ಎಸ್‌. ಮುನಿರಾಜು ಕೂಡ ಬೆಂಬಲ ನೀಡಿದ್ದರು. ಈ ಮಾತನ್ನು ಇವರಿಬ್ಬರೂ ಇದೀಗ ಪೂರೈಸಲು ಮುಂದಾಗಿದ್ದಾರೆ. ಜತೆಗೆ ದೊಡ್ಡಬಳ್ಳಾಪುರದ ಶಾಸಕ ನರಸಿಂಹಸ್ವಾಮಿ ಕೂಡ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಗಮನಾರ್ಹ. ದೊಡ್ಡಬಳ್ಳಾಪುರದ ಪ್ರಮುಖ ಕೆರೆ ಹಾಗೂ ಅರ್ಕಾವತಿ ಕ್ಷೇತ್ರದ ಜೀವಾಳ ನಾಗರಕೆರೆಯನ್ನು ಮುಚ್ಚಿ ಬಸ್‌ ನಿಲ್ದಾಣ ಮಾಡುವುದಾಗಿ ಹೇಳುತ್ತಿರುವ ನರಸಿಂಹಸ್ವಾಮಿ, ಪಾದಯಾತ್ರೆಯಲ್ಲಿರುತ್ತಾರಂತೆ. ಅಂದರೆ ನಾಗರಕೆರೆ ಕೆರೆಯಾಗಿಯೇ ಉಳಿದೀತೇ? ಈ ಪ್ರಶ್ನೆಯನ್ನು ಅವರನ್ನು ನೇರವಾಗಿ ಕೇಳಬೇಕಿದೆ, ಅದೇ ಪಾದಯಾತ್ರೆಯಲ್ಲಿ.
ನಾಲ್ಕು ದಿನಗಳ ಈ ಪಾದಯಾತ್ರೆ ಸಾಧ್ಯವಾಗುತ್ತಿರುವುದು ಎಸ್‌.ಆರ್‌. ವಿಶ್ವನಾಥ್‌ ಅವರ ಕಾಳಜಿಯಿಂದ. ಈ ಪಾದಯಾತ್ರೆಗೆ ಎಲ್ಲ ರೀತಿಯ ಸಂಘಟನೆಗೆ ಅವರೇ ಕಾರಣ. ಎಲ್ಲರನ್ನೂ ಒಂದುಗೂಡಿಸಿ ಪಕ್ಷಾತೀತವಾಗಿ, ರಾಜಕೀಯ ಸೇರಿಸದೆ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಹಾಗೂ ಸರಕಾರ ಕೂಡಲೇ ಇತ್ತ ಗಮನಹರಿಸಿ ಕಾರ್ಯೋನ್ಮುಖವಾಗಬೇಕೆಂಬ ಉದ್ದೇಶದೊಂದಿಗೆ ಪಾದಯಾತ್ರೆ ಆಯೋಜಿಸಿದ್ದಾರೆ. ಇದಕ್ಕೆ ಎಲ್ಲ ವಲಯದ ಮುಖಂಡರೂ ಸೇರಿಕೊಂಡಿರುವುದು ಒಳ್ಳೆಯ ಬೆಳವಣಿಗೆ.
ಪರಿಸರವಾದಿ ಡಾ. ಅ.ನ. ಯಲ್ಲಪ್ಪರೆಡ್ಡಿ, ಪರಿಸರ ರಕ್ಷಣೆ ಹೋರಾಟಗಾರ ಸುರೇಶ್‌ ಹೆಬ್ಳೀಕರ್‌ ಸೇರಿದಂತೆ ದೊಡ್ಡಬಳ್ಳಾಪುರದ ಹಲವು ಸಂಘಟನೆಗಳ ಮುಖಂಡರು ಈ ಪಾದಯಾತ್ರೆಯಲ್ಲಿರುತ್ತಾರೆ. ಅಲ್ಲದೆ, ಹಲವು ಮಠಗಳ ಸ್ವಾಮೀಜಿಗಳೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿರುವುದು ಗಮನಾರ್ಹವಾಗಿದೆ. ಅಷ್ಟೇ ಅಲ್ಲ, ಸುಗಮಸಂಗೀತ ಕ್ಷೇತ್ರದ ದಿಗ್ಗಜರೂ ಇದರಲ್ಲಿ ಭಾಗವಹಿಸುತ್ತಿರುವುದು ಸಂತೋಷಕರ. ಈ ಪಾದಯಾತ್ರೆ ನಾನು ಸಂಪೂರ್ಣವಾಗಿ ಭಾಗವಹಿಸುತ್ತಿದ್ದು, ಸಮಗ್ರ ವಿವರವನ್ನು ನಿಮ್ಮ ಮುಂದಿಡಲಿದ್ದೇನೆ.
ಬೆಂಗಳೂರಿನ ಆದರ್ಶ ಸುಗಮ ಸಂಗೀತ ಅಕಾಡೆಮಿ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಅರ್ಕಾವತಿ ಕ್ಷೇತ್ರ (ಸೆ.೩)ದಲ್ಲಿ ಡಾ. ಶಿವಮೊಗ್ಗ ಸುಬ್ಬಣ್ಣ, ಹೆಸರಘಟ್ಟದಲ್ಲಿ (ಸೆ.೪) ಡಾ. ಸಿ. ಅಶ್ವತ್ಥ್‌ ಹಾಗೂ ಸೊಂಡೆಕೊಪ್ಪದಲ್ಲಿ (ಸೆ.೫) ವೈ.ಕೆ. ಮುದ್ದುಕೃಷ್ಣ ಅವರ ಜತೆ ಕಿಕ್ಕೇರಿ ಕೃಷ್ಣಮೂರ್ತಿ ಅವರ ತಂಡ ಸಂಜೆಯ ಸಮಯದಲ್ಲಿ ಸಂಗೀತ ಸುಧೆ ಹರಿಸಲಿದೆ.
ಅರ್ಕಾವತಿ ಉಗಮಸ್ಥಾನ ನಂದಿಬೆಟ್ಟದಿಂದ ಆರಂಭವಾಗುವ ಪಾದಯಾತ್ರೆ, ಹೆಗ್ಗಡಿಹಳ್ಳಿ, ಸೀಗೆಹಳ್ಳಿ, ಮೇಳೆಕೋಟೆ, ಬೀಡಿಕೆರೆ, ರಾಜಘಟ್ಟ, ತಿಮ್ಮಸಂದ್ರ, ದೊಡ್ಡಬಳ್ಳಾಪುರ ಡಿಕ್ರಾಸ್, ಅರ್ಕಾವತಿ ಕ್ಷೇತ್ರವನ್ನು ತಲುಪುತ್ತದೆ. ಮಾರನೆ ದಿನ ಅಂದರೆ ಸೆಪ್ಟೆಂಬರ‍್ ೪ರಂದು ಬೆಳಗ್ಗೆ ಅರ್ಕಾವತಿ ಕ್ಷೇತ್ರದಿಂದ ನಾಗರಕೆರೆ ಏರಿ ಮೂಲಕ ಸಾಗಿ, ಬಾಶೆಟ್ಟಿಹಳ್ಳಿ ಕ್ರಾಸ್‌, ವೀರಾಪುರ, ಚಿಕ್ಕ ತುಮಕೂರು, ಮಜರಾ ಹೊಸಹಳ್ಳಿ, ಜಿಂಕೆ ಬಚ್ಚಹಳ್ಳಿ, ದೊಡ್ಡ ತುಮಕೂರು, ಗೌಡಹಳ್ಳಿ, ಹನಿಯೂರು ಮೂಲಕ ಹೆಸರಘಟ್ಟ ಜಲಾಶಯ ತಲುಪಲಿದೆ. ಮುಂದಿನ ದಿನ ಅಂದರೆ ಸೆಪ್ಟೆಂಬರ‍್ ೫ರಂದು ಹೆಸರಘಟ್ಟದಿಂದ ತಿರುಮಲಾಪುರ, ಹೊರಳಿ ಚಿಕ್ಕನಹಳ್ಳಿ, ತಬರನಹಳ್ಳಿ, ಮುನಿಯಪ್ಪನಪಾಳ್ಯ, ಆಲೂರು, ಹೆಗ್ಗಡೆದೇವನಪುರ, ಮಾಕಳಿ, ಅಡಕಮಾರನಹಳ್ಳಿ ಗೇಟ್‌, ರಾವುತ್ತನಹಳ್ಳಿ ಕ್ರಾಸ್‌, ಗೌಡಹಲ್ಳಿ ಕಾಲನಿ, ರಾವುತ್ತನಹಳ್ಳಿ ಮೂಲಕ ಸೊಂಡೇಕೊಪ್ಪ ತಲುಪಲಿದೆ. ಕೊನೆಯ ದಿನ ಅಂದರೆ ಸೆಪ್ಟೆಂಬರ‍್ ೬ರಂದು ಸೊಂಡೇಕೊಪ್ಪದಿಂದ ಮಲ್ಲಸಂದ್ರ, ವರ್ತೂರು ಕೆರೆ, ಬೈಚನಗುಪ್ಪೆ ಗೇಟ್, ದೇವಮಾಚನಹಳ್ಳಿ, ಮಾರೇನಹಳ್ಳಿ, ಚೋಳನಾಯಕನಹಳ್ಳಿ ಮೂಲಕ ತಿಪ್ಪಗೊಂಡನಹಳ್ಳಿ ತಲುಪಲಿದೆ.
ಅರ್ಕಾವತಿ ಉಗಮಸ್ಥಾನದಿಂದ ಪಂಚಕಳಸಗಳಲ್ಲಿ ನೀರನ್ನು ತೆಗೆದುಕೊಂಡು ತಿಪ್ಪಗೊಂಡನಹಳ್ಳಿಯಲ್ಲಿ ಅದನ್ನು ಸಮರ್ಪಿಸಲಾಗುತ್ತದೆ. ಅರ್ಕಾವತಿಯನ್ನು ಹರಿಸುವ ಉದ್ದೇಶವನ್ನು ಇದು ಸಾರುತ್ತದೆ.
ಪರಿಸರ ಕಾಳಜಿಯುಳ್ಳ ಮನಸ್ಸುಳ್ಳ ಎಲ್ಲ ನಾಗರಿಕರು ಈ ಪಾದಯಾತ್ರೆಯಲ್ಲಿ ಭಾಗವಹಿಸಿ, ಜಾಗೃತಿ ಮೂಡಿಸಲಿ ಎಂಬುದೇ ಆಶಯ.

No comments:

Post a Comment