Tuesday, September 29, 2009

ಮಳೆ: ಒಳಭಾಗದಲ್ಲಿ ಕಿರಿಕಿರಿ; ಹೊರಭಾಗದಲ್ಲಿ ನಲಿನಲಿ

ಭಾರಿ ಮಳೆ ಬಂದಾಗ ಮಹಾನಗರ ತತ್ತರಿಸುತ್ತದೆ. ಒಳಭಾಗದಲ್ಲಿರುವ ಜನರ ಶಾಪಕ್ಕೂ ಗುರಿಯಾಗುತ್ತದೆ. ಏಕೆಂದರೆ, ಇಲ್ಲಿ ಬರೀ ನೀರಲ್ಲ, ಕೊಳಕೂ ಮನೆ ಒಳಗೆ ನುಗ್ಗುತ್ತದೆ. ಆದರೆ, ಹೊರವಲಯ ಹಾಗಲ್ಲ. ಮಳೆಯಲ್ಲಿ ಮಿಂದೇಳಲು ಬಯಸುತ್ತದೆ. ಅದಕ್ಕೇ, ಉದ್ಯಾನನಗರಿಯ ಅಂಚಿನಲ್ಲಿ ನದಿಯೊಂದು ದಶಕದ ನಂತರ ಸ್ವಚ್ಛವಾಗಿ ಹರಿಯುತ್ತಿದೆ.
ಸೋಮವಾರದಿಂದ ಬೆಂಗಳೂರು ಭಾರಿ ಮಳೆ ಸುರಿಯುತ್ತಿದೆ. ನೂರಾರು ಮಿಲಿಮೀಟರ್‌ನಷ್ಟು ಮಳೆಯಾಗಿದೆ. ನಗರದಲ್ಲಿ ನೂರಾರು ಕೆರೆಗಳಿದ್ದರೂ ಈ ನೀರನ್ನು ತಮ್ಮ ಒಡಲಿಗೆ ಸೇರಿಸಿಕೊಳ್ಳುವಲ್ಲಿ ವಿಫಲವಾಗಿವೆ. ರಾಜಕಾಲುವೆ ಹಾಗೂ ಮಳೆ ನೀರು ಕೆರೆಗೆ ಹರಿಯುವ ವ್ಯವಸ್ಥೆ ಇಲ್ಲ. ಆದ್ದರಿಂದಲೇ ನಗರ ಹಲವು ಭಾಗದಲ್ಲಿ ಒಳಚರಂಡಿ ನೀರು ಮನೆಯೊಳಗೆ ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಹೀಗಿದ್ದರೂ, ವೃಷಭಾವತಿ ನದಿ ಮಾತ್ರ ಅಲ್ಪ ಕೊಳೆ ಕಳೆದುಕೊಂಡಿದೆ.
ನಗರದಲ್ಲಿರುವ ಕೆರೆಗಳಿಗೆ ಮಳೆ ನೀರು ಹರಿಸುವ ಸೂಕ್ತ ವ್ಯವಸ್ಥೆ ಇಲ್ಲದಿರುವುದೇ ಬೆಂಗಳೂರು ನಗರ ಮಳೆಗೆ ತತ್ತರಿಸುವಂತಾಗಿರುವುದಕ್ಕೆ ಪ್ರಮುಖ ಕಾರಣ. ಮಡಿವಾಳ, ಅಗರ, ಬೇಗೂರು, ದೊರೆಕೆರೆ, ಸಾರಕ್ಕಿ, ಪುಟ್ಟೇನಹಳ್ಳಿಯಂತಹ ದೊಡ್ಡ ಕೆರೆಗಳು ಇಂದಿಗೂ ಕೋಡಿ ಹೋಗಿಲ್ಲ. ಏಕೆಂದರೆ, ಸಾಮಾನ್ಯ ಹರಿವೇ ಹೊರಹೋಗುತ್ತಿದೆ. ಅಂದರೆ, ಒಳಚರಂಡಿ ನೀರು ಬಿಟ್ಟರೆ ಮಳೆ ನೀರು ಇಲ್ಲಿಗೆ ಹರಿಯುತ್ತಿಲ್ಲ. ನಗರದಲ್ಲಿ ಹಲವು ಕೆರೆಗಳಿಗೆ ಮಳೆ ನೀರು ಹರಿಯಲು ಮಾರ್ಗವೇ ಇಲ್ಲ. ಕೆಲವು ಕೆರೆಗಳಿಗೆ ನೀರು ಹರಿದರೂ, ಅಲ್ಲಿ ನೀರಿನ ಸಂಗ್ರಹಕ್ಕೆ ಸ್ಥಳವೇ ಇಲ್ಲ. ಹೂಳು ಯಥೇಚ್ಛವಾಗಿ ತುಂಬಿದೆ.
ಈ ಬಾರಿಯ ಮಳೆಗಾಲದಲ್ಲಿ ಯಾವುದೇ ಸಮಸ್ಯೆ ಆಗುವುದಿಲ್ಲ. ಮಳೆ ನೀರು ಹರಿಯಲು ರಾಜಕಾಲುವೆಗಳನ್ನು ಸೂಕ್ತವಾಗಿ ನಿರ್ವಹಿಸಲಾಗಿದೆ. ಕೆರೆಗೆ ನೀರು ಹರಿಸಿ, ಪ್ರವಾಹ ಆಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಬೇಸಿಗೆ ಕಾಲದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಹೇಳಿತ್ತು. ಆದರೆ, ಕಳೆದ ವಾರದ ನಾಲ್ಕು ದಿನ ಮಳೆ ಇದನ್ನು ಅಲ್ಲಗಳೆದಿದೆ. ಬಿಬಿಎಂಪಿ ಯಾವುದೇ ಮುನ್ನೆಚ್ಚರಿಕೆ ಕಾರ್ಯ ಕೈಗೊಂಡಿಲ್ಲ, ಕೆರೆಯಲ್ಲಿ ಹೂಳು ಎತ್ತಿಲ್ಲ ಎಂಬುದು ಸಾಬೀತಾಗಿದೆ. ಕೆರೆಗಳ ಮಹತ್ವ ಬಿಬಿಎಂಪಿ ಅರಿವಿಗೆ ಇನ್ನಾದರೂ ಬಂದೀತೇ?
ಹೊರವಲಯದಲ್ಲಿ ಖುಷಿ
ನಗರದ ಒಳಗೆ ಮಳೆ ಏಕೆ ಬರುತ್ತೋ ಎಂದು ಜನ ಒಲ್ಲದ ಮನಸ್ಸಿನಿಂದ ಶಾಪ ಹಾಕುತ್ತಿದ್ದರೆ, ಹೊರಭಾಗದಲ್ಲಿ ಮಳೆ ಇನ್ನಷ್ಟು ಬಂದಿದ್ದರೆ ನಮ್ಮ ಕೆರೆ ತುಂಬುತ್ತಿತ್ತು. ಬೋರ್‌ವೆಲ್‌ನಲ್ಲಿ ನೀರು ಹೆಚ್ಚಾಗುತ್ತಿತ್ತು. ನಮ್ಮ ಜಲಾಶಯ ತುಂಬುತ್ತಿತ್ತು ಎಂಬ ಮಾತು ಕೇಳಿಬರುತ್ತಿದೆ. ಮಾಕಳಿಯಲ್ಲಿ ಅರ್ಕಾವತಿ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮಕ್ಕಳು, ಹಿರಿಯರು ಸಂತಸಪಡುತ್ತಿದ್ದಾರೆ.
ಹೆಸರಘಟ್ಟ ಜಲಾಶಯಕ್ಕೆ ನೀರಿನ ಹರಿವು ಹೆಚ್ಚಾದಂತೆ ಅಲ್ಲಿಂದ, ತಿಪ್ಪಗೊಂಡನಹಳ್ಳಿಯವರೆಗೆ ಅರ್ಕಾವತಿ ನದಿ ಹರಿವು ಕೂಡ ಹೆಚ್ಚಾಗಿದೆ. ತರಬನಹಳ್ಳಿ ಸಮೀಪವಿರುವ ರೈಲ್ವೆ ಸೇತುವೆ ಕೆಳಗೆ ಅರ್ಕಾವತಿ ಹೊಳೆ ಮೈದುಂಬಿ ಹರಿಯುತ್ತಿದೆ. ೧೫ ದಿನಗಳ ಹಿಂದ ವಾಹನ ಓಡಾಡುವ ರಸ್ತೆಯಾಗಿದ್ದ ಈ ಪ್ರದೇಶದಲ್ಲಿ ಈಗ ನೀರಿನ ಸಾಮ್ರಾಜ್ಯ.
ಮಾಕಳಿಯ ಬಳಿಯಿರುವ ಭೀರೇಶ್ವರ ಸ್ವಾಮಿ ದೇವಾಲಯದ ತಪ್ಪಲಿನಲ್ಲಿ ಹೊಳೆಯ ಹರಿವು ವೃದ್ಧಿಯಾಗಿದೆ. ಶಾಲಾ ಮಕ್ಕಳು ಈ ಹೊಳೆಯನ್ನು ದಾಟುವುದೇ ಅದೃಷ್ಟ ಎಂಬಂತೆ ಮೋಜು ಅನುಭವಿಸುತ್ತಿದ್ದಾರೆ. ಯಾವಾಗಲೂ, ಕಲ್ಮಶವನ್ನು ಮೈಗಂಟಿಕೊಂಡು ಸಣ್ಣದಾಗಿ ಹರಿಯುತ್ತಿದ್ದ ಅರ್ಕಾವತಿ ನದಿ, ಈಗ ಇಲ್ಲಿ ಮೀನುಗಾರರಿಗೆ ಕೆಲಸ ನೀಡಿದ್ದಾಳೆ. ಅಲ್ಲಲ್ಲಿ ಸಣ್ಣ ಬಲೆಗಳನ್ನು ಹಾಕಿ ಮೀನು ಹಿಡಿಯುವ ಕಾರ್ಯ ನಡೆಯುತ್ತಿದೆ.
ಹೆಸರಘಟ್ಟದಿಂದ ತಿಪ್ಪಗೊಂಡನಹಳ್ಳಿಯವರೆಗೂ ಅರ್ಕಾವತಿ ನದಿ ಹರಿವು ಹತ್ತು ವರ್ಷಗಳ ನಂತರ ಉತ್ತಮವಾಗಿದೆ. ಸೊಂಡೆಕೊಪ್ಪ, ವರ್ತೂರು ಬಳಿಯ ಹೊಳೆಯ ಹರಿವು ಕಂಡು ಜನ ಸಂತಸಗೊಂಡಿದ್ದಾರೆ. ಅಬ್ಬಾ, ನಮ್ಮ ನದಿ ಮತ್ತೊಮ್ಮೆ ಹರಿಯುತ್ತಿದೆಯಲ್ಲ ಎಂದು ಹಿರಿಯರು ಸಮಾಧಾನ ಪಡುತ್ತಿದ್ದಾರೆ. ಯುವಕರಿಗೆ ಉಲ್ಲಾಸ ಮೈತುಂಬಿದ್ದರೆ, ಮಕ್ಕಳು ಕಣ್ಣರಳಿಸಿಕೊಂಡು ಹೊಳೆಯನ್ನು ನೋಡುತ್ತಿದ್ದಾರೆ. ನೀರು ಹರಿಯುತ್ತಿರುವ ಎಲ್ಲ ಕಡೆಯೂ ಜನ ಅಚ್ಚರಿಯಿಂದ ದೃಷ್ಟಿ ಹರಿಸುತ್ತಿದ್ದಾರೆ.

No comments:

Post a Comment