Monday, August 10, 2009

ಕೆರೆ ಕರಗುವ ಸಮಯ ನಿಮ್ಮ ಮುಂದಿದೆ...

ಆತ್ಮೀಯ ಸ್ನೇಹಿತರೆ,
'ಕೆರೆ ಕರಗುವ ಸಮಯ'- ಬೆಂಗಳೂರಿನ ನೂರಾರು ಕೆರೆಗಳ ಸಮಗ್ರ ಚಿತ್ರಣ ನೀಡುವ ಪುಸ್ತಕದ ಹೆಸರು. ಈ ಪುಸ್ತಕವನ್ನು ಮುದ್ರಿಸಿದ ಉದ್ದೇಶ: ಜನಸಾಮಾನ್ಯರಿಗೆ ನಮ್ಮ ಜಲಸಂಸ್ಕೃತಿಯ ಅವನತಿಯ ಬಗ್ಗೆ ಮಾಹಿತಿ ನೀಡುವುದು ಹಾಗೂ ತಮ್ಮತನ ಕಳೆದುಕೊಳ್ಳುತ್ತಿರುವ ಬಗ್ಗೆ ಎಚ್ಚರಿಸುವುದು. ಜತೆಗೆ, ಅದರ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುವುದೇ ಆಗಿತ್ತು. ಆದರೆ, 'ಕೆರೆ ಕರಗುವ ಸಮಯ' ಪುಸ್ತಕದ ಮೊದಲ ಮುದ್ರಣ ಅದ್ಧೂರಿತನದಿಂದ ಕೂಡಿತ್ತೇ ವಿನಹ, ಜನಸಾಮಾನ್ಯರ ಕೈಗೆಟುಕುವಲ್ಲಿ ವಿಫಲವಾಯಿತು.

ಪುಸ್ತಕ ನಿರೀಕ್ಷಿತ ಗುಣಮಟ್ಟದಲ್ಲಿ ಹೊರಬಂದಿತಾದರೂ, ನಾಗರಿಕರಿಗೆ ತಲುಪಲಿಲ್ಲ. ಐದು ನೂರು ರೂಪಾಯಿ ಕೊಟ್ಟು ಖರೀದಿಸುವುದು ಸಾಮಾನ್ಯ ಮಾತಲ್ಲ. ಆದರೂ ಅಗತ್ಯ ಮಾಹಿತಿ ಪಡೆಯಲು ಅಷ್ಟೂ ಹಣವನ್ನು ಕೊಟ್ಟು ಖರೀದಿಸುತ್ತೇನೆ ಎಂಬವರಿಗೆ ಪುಸ್ತಕ ಸಿಗುತ್ತಿರಲಿಲ್ಲ. ದಿನಕ್ಕೆ ಕನಿಷ್ಠವೆಂದರೂ ಮೂರು ಜನ ಪುಸ್ತಕದ ಲಭ್ಯತೆ ಬಗ್ಗೆ ನನಗೆ ಕರೆ ಮಾಡುತ್ತಿದ್ದರು. ಅಲ್ಲಿ ಸಿಗುತ್ತೆ, ಇಲ್ಲಿ ಸಿಗುತ್ತೆ ಎಂದು ಹೇಳುತ್ತಿದ್ದೆ. ಮತ್ತೆ ಅವರು ಕರೆ ಮಾಡಿ ಅಲ್ಲಿಲ್ಲ ಸರ್ ಎನ್ನುತ್ತಿದ್ದರು. ಮೂರ್‍ನಾಲ್ಕು ತಿಂಗಳು ಇದೇ ಮಾತುಗಳನ್ನು ನಾನು ಕೇಳುತ್ತಿದ್ದೆ. ಕಡೆಗೆ ನನ್ನ ಅಭಿಮಾನಿ ಓದುಗರು, ಸ್ನೇಹಿತರು ಪುಸ್ತಕ ದುಬಾರಿ ಆಯಿತು. ಜತೆಗೆ ಎಲ್ಲೂ ಸಿಗುತ್ತಿಲ್ಲ. ನಾಗರಿಕರಿಗೆ ತಲುಪುವ ಉದ್ದೇಶ ನಮ್ಮದಾಗಿರುವುದರಿಂದ ಅದನ್ನು ಮರುಮುದ್ರಿಸುವ ಬಗ್ಗೆ ಆಲೋಚಿಸು. ಬೆಲೆ ಕಡಿಮೆ ಇರಲಿ, ಎಲ್ಲೆಡೆ ಸಿಗುವಂತಾಗಲಿ ಎಂದರು.
ಇಂತಹ ಆಲೋಚನೆಯನ್ನು ನನ್ನ ಮಾರ್ಗದರ್ಶಕರಾದ ಶ್ರೀ ವಿಶ್ವೇಶ್ವರ ಭಟ್ ಅವರ ಮುಂದೆ ಹೇಳಿಕೊಂಡೆ. 'ಇಂಥಾ ಆಲೋಚನೆ ಮೊದಲೇ ಮಾಡಬೇಕಿತ್ತು. ಪ್ರಥಮವಾಗಿಯೇ ನೀವೇ ಮುದ್ರಿಸಬೇಕಿತ್ತು. ಅದ್ಯಾರಿಗೋ ಕೊಟ್ಟು ಇಂಥಾ ಪರಿಸ್ಥಿತಿಗೆ ನಿಮ್ಮನ್ನು ನೀವೇ ತಳ್ಳಿಕೊಂಡಿರಿ. ಹೋಗಲಿ ಬಿಡಿ, ಆದದ್ದೆಲ್ಲ ಒಳ್ಳೆಯದ್ದಕ್ಕೇ. ಬೇಗ ಪರಿಷ್ಕೃತ ಆವೃತಿ ಮುದ್ರಿಸಿ, ಜನರಿಗೆ, ಓದುಗರಿಗೆ ತಲುಪುವಂತೆ ಮಾಡಿ' ಎಂದು ಕೂಡಲೇ ಆದೇಶಿಸಿದ್ದರು. ಮತ್ತಿನ್ನೇನು, ಕೆಲಸ ಆರಂಭವಾಯಿತು.
ಪ್ರಕೃತಿ ಪ್ರಕಾಶನ... ಇಂತಹದ್ದೊಂದು ಸೃಷ್ಟಿ ಆಗುತ್ತದೆ ಎಂದು ನಾನು ಖಂಡಿತಾ ನಿರೀಕ್ಷಿಸಿರಲಿಲ್ಲ. ಅದೂ 'ಕೆರೆ ಕರಗುವ ಸಮಯ' ಪ್ರಕಟಿಸಲೆಂದೇ 'ಪ್ರಕೃತಿ' ಹುಟ್ಟಿಕೊಳ್ಳುತ್ತದೆ ಎಂಬುದು ಕನಸಿನಲ್ಲೂ ಕಂಡಿರಲಿಲ್ಲ. ಆದರೆ, ಪ್ರಕೃತಿ ಎಂಬ ಹೆಸರು ನನ್ನಲ್ಲಿ ಬಹಳ ದಿನಗಳಿಂದಲೇ ಆವರಿಸಿತ್ತು. ಪ್ರಕಾಶನಕ್ಕೊಂದು ಹೆಸರು ಸೂಚಿಸಬೇಕೆಂದಾಗ, ಹಿಂದೆ-ಮುಂದೆ ನೋಡದೆ 'ಪ್ರಕೃತಿ' ಅನಾವರಣಗೊಂಡಿತು. 'ಕೆರೆ ಕರಗುವ ಸಮಯ' ಪರಿಷ್ಕೃತಗೊಂಡು ನಿಮ್ಮ ಮುಂದಿದೆ. ಸ್ವೀಕರಿಸಿ...
ಆರ್. ಮಂಜುನಾಥ್

Wednesday, August 5, 2009

ಪ್ರಕೃತಿ- ‘ಕೆರೆ ಕರಗುವ ಸಮಯ’ ಬಿಡುಗಡೆ

ಆತ್ಮೀಯ ಸ್ನೇಹಿತರೆ,
ಉದ್ಯಾನವನಗಳಲ್ಲಿ ಪರಿಸರ ಕಾರ್ಯಕ್ರಮ, ಗಿಡ ನೆಡುವುದು, ಸಂಗೀತ ಕಾರ್ಯಕ್ರಮ ನಡೆಯುತ್ತಿರುತ್ತವೆ. ಹಸಿರು ಪರಿಸರದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮ ಆಯೋಜಿಸುವ ಸಾಹಸಕ್ಕೆ ಕೈಹಾಕಿದ್ದೇನೆ. ನಿಮ್ಮೆಲ್ಲರ ಅಭಿಮಾನ ನನ್ನ ಮೇಲಿದೆ ಎಂಬ ನಂಬಿಕೆ ನನ್ನದು. ನಿಮ್ಮ ಆಗಮನವನ್ನು ಆಕಾಂಕ್ಷಿತ ಕಣ್ಣುಗಳ ಕಾತರತೆಯೊಂದಿಗೆ ನಿರೀಕ್ಷಿಸುತ್ತೇನೆ.... ದಯಮಾಡಿ ಬನ್ನಿ.
ಕೆರೆ ಕರಗುವ ಸಮಯ-ಪುಸ್ತಕದ ಪರಿಷ್ಕೃತ ಆವೃತ್ತಿ ತಯಾರಾಗಿದೆ. ಈ ಭಾನುವಾರ ಅಂದರೆ ಆಗಸ್ಟ್‌ 9ರಂದು ಬೆಳಗ್ಗೆ 10.30ಕ್ಕೆ ಬಸವನಗುಡಿಯ ಬ್ಯೂಗಲ್‌ ರಾಕ್‌ (ಕಹಳೆ ಬಂಡೆ) ಉದ್ಯಾನವನದಲ್ಲಿ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದೇನೆ. ಗ್ರಾಮೀಣಾಭಿವೃದ್ಧಿ ಸಚಿವರಾದ ಶೋಭಾ ಕರಂದ್ಲಾಜೆ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿಜಯ ಕರ್ನಾಟಕದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್‌, ಹಿರಿಯ ಸಂಗೀತ ನಿರ್ದೇಶಕ, ಖ್ಯಾತ ಗಾಯಕರಾದ ಡಾ. ಸಿ. ಅಶ್ವತ್ಥ್‌, ಚಲನಚಿತ್ರ ನಿರ್ದೇಶಕ-ನಟ ಶ್ರೀ ರಮೇಶ್‌ ಅರವಿಂದ್‌, ನೆನಪಿರಲಿ ಖ್ಯಾತಿಯ ನಟ ಪ್ರೇಮ್‌ ಭಾಗವಹಿಸಲಿದ್ದಾರೆ. ಅಲ್ಲದೆ, ಖ್ಯಾತ ಗಾಯಕರಾದ ಡಾ. ಶಿವಮೊಗ್ಗ ಸುಬ್ಬಣ್ಣ, ಶ್ರೀಮತಿ ಬಿ.ಕೆ. ಸುಮಿತ್ರಾ ಹಾಗೂ ಆದರ್ಶ ಸುಗಮ ಸಂಗೀತ ಅಕಾಡೆಮಿಯ ಕಲಾವಿದರ ಸುಗಮ ಸಂಗೀತ ಕಾರ್ಯಕ್ರಮವನ್ನೂ ಈ ಸಂದರ್ಭದಲ್ಲಿ ಆಯೋಜಿಸಲಾಗಿದೆ.
ಇದರ ಬಗ್ಗೆ ಸಂಪೂರ್ಣ ವಿವರದ ಆಮಂತ್ರಣ ಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ. ದಯವಿಟ್ಟು ನೀವೆಲ್ಲ ಬನ್ನಿ.
ಇಂತಿ ನಿಮ್ಮವ
ಕೆರೆ ಮಂಜು

Monday, August 3, 2009

ಕೆರೆ ಕರಗುವ ಸಮಯಕ್ಕಾಗಿ ಪ್ರಕೃತಿಗೆ ಹುಟ್ಟು

ಆತ್ಮೀಯ ಸ್ನೇಹಿತರೆ,
ಕೆರೆ ಕರಗುವ ಸಮಯ- ಬೆಂಗಳೂರಿನ 108 ಕೆರೆಗಳ ಬಗ್ಗೆ ಸಮಗ್ರ ಮಾಹಿತಿ ಒಳಗೊಂಡಿರುವ ಪುಸ್ತಕ ಇದು. ಈ ಬಗ್ಗೆ ನಿಮಗೆಲ್ಲರಿಗೂ ಮಾಹಿತಿ ಇದೆ. ಆದರೆ, ಅದು ಎಲ್ಲರನ್ನೂ ತಲುಪಲಿಲ್ಲ ಎಂಬುದು ನನ್ನ ಸ್ನೇಹಿತರ ದೂರು. ಅದಕ್ಕೇ ಪ್ರಕೃತಿ ಹುಟ್ಟಿಕೊಂಡಿತು. ಕೆರೆ ಕರಗುವ ಸಮಯ ಪುಸ್ತಕದ ಪರಿಷ್ಕೃತ ಆವೃತ್ತಿ ತಯಾರಾಗಿದೆ.
ನಿಮಗೆಲ್ಲರ ಕೈಗೆಟಕುವ ಬೆಲೆಯಲ್ಲಿ ಈ ಪುಸ್ತಕವನ್ನು ನಿಮ್ಮ ಕೈಗಿಡುವ ಉದ್ದೇಶದಿಂದ ಈ ಪ್ರಯತ್ನಕ್ಕೆ ಕೈಹಾಕಿದೆ. ಸಾಕಷ್ಟು ಸ್ನೇಹಿತರು ಇದಕ್ಕೆ ಬೆನ್ನೆಲುಬಾಗಿ ನಿಂತರು. ಇದೀಗ ಪುಸ್ತಕ ಬಿಡುಗಡೆಗೆ ತಯಾರಾಗಿ ನಿಂತಿದೆ. ಈ ಭಾನುವಾರ ಅಂದರೆ ಆಗಸ್ಟ್‌ 9ರಂದು ಬೆಳಗ್ಗೆ 10.30ಕ್ಕೆ ಬಸವನಗುಡಿಯ ಬ್ಯೂಗಲ್‌ ರಾಕ್‌ (ಕಹಳೆ ಬಂಡೆ) ಉದ್ಯಾನವನದಲ್ಲಿ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದೇನೆ. ಇದರ ಬಗ್ಗೆ ಸಂಪೂರ್ಣ ವಿವರವನ್ನು ಒದಗಿಸುತ್ತೇನೆ. ತಾವೆಲ್ಲರೂ ಬಿಡುವು ಮಾಡಿಕೊಂಡು, ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಕೋರುತ್ತೇನೆ.
ನನ್ನ ಈ ಪ್ರಯತ್ನಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ. ನನ್ನೊಂದಿಗೆ ಕೈಜೋಡಿಸಿ, ಉದ್ಯಾನವನದಲ್ಲಿ ಒಂದು ಸಂಗೀತ ಬೆಳಗುವಿನಲ್ಲಿ ಪುಸ್ತಕದ ಅನಾವರಣಕ್ಕೆ ಸಾಕ್ಷಿ ಆಗಲು ನೀವೆಲ್ಲ ಬನ್ನಿ.
ಇಂತಿ ನಿಮ್ಮವ
ಕೆರೆ ಮಂಜು

Friday, July 31, 2009

ಕೆಂಪಾಂಬುಧಿ ಕೆರೆಯಲ್ಲಿ ಕೆಂಪೇಗೌಡರ ಸ್ಮಾರಕ

ಬೆಂಗಳೂರಿನಲ್ಲಿ ಬೆರಳೆಣಿಕೆಯಷ್ಟು ಕೆರೆಗಳು ಅಭಿವೃದ್ಧಿಯ ರುಚಿ ಕಂಡಿವೆ ನಿಜ. ಆದರೆ, ಅದರ ನಿರ್ವಹಣೆ ಇಲ್ಲದೆ ಆಸ್ವಾದ ಹಳಸಿಹೋಗಿದೆ. ಇದನ್ನು ಆ ಕೆಟ್ಟದ್ದನ್ನು ಹೊರಹಾಕಿ, ಶುಚಿಗೊಳಿಸುವ ಕಾರ್ಯ ಆಗಬೇಕಿದೆ. ಇಂತಹ ಕಾರ್ಯ ಹೈಟೆಕ್ ಅಭಿವೃದ್ಧಿ ಕಂಡು ನಿರ್ವಹಣೆಯ ಕೊರತೆಯಿಂದ ನಲುಗಿಹೋಗಿದ್ದ ಕೆಂಪಾಂಬುಧಿ ಕೆರೆಯೇ ಮಾದರಿ ಆಗುವತ್ತ ಚೊಚ್ಚಲ ಹೆಜ್ಜೆ ಇರಿಸಿದೆ. ಈ ಪ್ರಯತ್ನಕ್ಕೆ ಕ್ಷಿಪ್ರ ವೇಗ ದೊರೆತಿದ್ದು, ಜನವರಿ ವೇಳೆಗೆ ಕೆಂಪಾಂಬುಧಿ ಕೆರೆ ಒಳಚರಂಡಿ ನೀರಿನಿಂದ ಮುಕ್ತವಾಗಲಿದೆ. ಜತೆಗೆ, ಹೊಸ ಅಭಿವೃದ್ಧಿ ಕಾರ್ಯಗಳಿಂದ ನಳನಳಿಸಲಿದೆ.
ನಗರದ ಪ್ರಮುಖ ಕೆರೆಗಳಲ್ಲಿ ಒಂದಾಗಿರುವ ಕೆಂಪಾಂಬುಧಿ ಕೆರೆ ತನ್ನ ಹಿಂದಿನ ವೈಭವವನ್ನು ಮರಳಿ ಪಡೆಯಲಿದೆ. ಕೆರೆಗೆ ಹರಿಯುತ್ತಿರುವ ಒಳಚರಂಡಿ ನೀರನ್ನು ಸಂಪೂರ್ಣವಾಗಿ ನಿಲ್ಲಿಸುವ ಪ್ರಕ್ರಿಯೆಗೆ ಸದ್ಯದಲ್ಲಿಯೇ ಚಾಲನೆ ನೀಡಲಾಗುತ್ತದೆ. ಮುಂದಿನ ವಾರವೇ ಗಿಡ-ಗಂಟಿಗಳನ್ನು ತೆಗೆಯುವ ಕಾಮಗಾರಿ ಆರಂಭವಾಗಲಿದೆ. ಮೊದಲ ಹಂತದಲ್ಲಿ 5 ಕೋಟಿ ರೂ.ಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ ಒಂದುವಾರದೊಳಗೆ ಟೆಂಡರ್ ಕರೆಯಲಾಗುತ್ತದೆ.
ಬಸವನಗುಡಿ ಶಾಸಕ ರವಿಸುಬ್ರಹ್ಮಣ್ಯ ಒತ್ತಾಸೆಯ ಮೇರೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಪಾಂಬುಧಿ ಕೆರೆಯನ್ನು ಅಭಿವೃದ್ಧಿಗೊಳಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಬಿಬಿಎಂಪಿ ಆಯುಕ್ತ ಭರತ್ ಲಾಲ್ ಮೀನಾ ಟೆಂಡರ್ ಪ್ರಕ್ರಿಯೆ ಶೀಘ್ರವೇ ಪೂರೈಸುವಂತೆ ಆದೇಶ ನೀಡಿದ್ದಾರೆ. ಕಡಿಮೆ ಅವಧಿ ಕಾಮಗಾರಿ ಮಾದರಿಯಲ್ಲಿ ಈ ಅಭಿವೃದ್ಧಿ ಕಾರ್ಯ ನಡೆಯಲಿದ್ದು, ಜನವರಿ ವೇಳೆಗೆ ಪೂರ್ಣಗೊಳ್ಳಲಿದೆ.
ಕೆಂಪಾಂಬುಧಿ ಕೆರೆಗೆ ೫ ಮಾರ್ಗದಲ್ಲಿ ಒಳಚರಂಡಿ ನೀರು ಹರಿಯುತ್ತಿದೆ. ಇದನ್ನು ನಿಲ್ಲಿಸಿ, ಮಳೆ ನೀರು ಮಾತ್ರ ಕೆರೆಗೆ ಹರಿಯುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಒಳಚರಂಡಿ ನೀರು ಕೆರೆಗೆ ಹರಿಯದಂತೆ ತಡೆಯಲು ಪ್ರತ್ಯೇಕ ಕಾಲುವೆ ರಚಿಸಲಾಗುತ್ತದೆ. ಮಳೆಗಾಲದಲ್ಲಿ ಮಳೆ ನೀರಿನ ಹೊರತು ಬೇರ್‍ಯಾವ ನೀರು ಕೆರೆಗೆ ಹರಿಯದಂತೆ ತಡೆ ಹಾಕಲಾಗುತ್ತದೆ. ಸ್ಥಳದಲ್ಲಿಯೇ ಇರುವ ಒಳಚರಂಡಿ ನೀರು ಸಂಸ್ಕರಣ ಘಟಕದಿಂದ ಸಾಧ್ಯವಾದಷ್ಟು ನೀರು ಸಂಸ್ಕರಿಸಿ ಅದನ್ನು ಮಾತ್ರ ಕೆರೆಗೆ ಬಿಡಲಾಗುತ್ತದೆ. ಈ ಘಟಕದಿಂದ ನಿತ್ಯ ಒಂದು ದಶಲಕ್ಷ ಲೀಟರ್ ನೀರು ಸಂಸ್ಕರಿಸಬಹುದಾಗಿದೆ.
ಗವೀಪುರಂ ಗುಟ್ಟಹಳ್ಳಿಯ ಪಶ್ಚಿಮಭಾಗದಲ್ಲಿರುವ ಕೆಂಪಾಂಬುಧಿ ಕೆರೆ ಸರ್ವೆ ನಂ. 2ರಲ್ಲಿ 36 ಎಕರೆ ಪ್ರದೇಶದಲ್ಲಿದೆ. ಕೆಂಪಾಂಬುಧಿ ಕೆರೆಗೆ ಒಳಚರಂಡಿ ನೀರು ನೇರವಾಗಿ ಹರಿದುಬರುತ್ತಿದೆ. ಸುಂದರ, ಸ್ವಚ್ಛವಾಗಿರುವ ಕೆರೆಯ ಅಂಗಳ, ವಾಕಿಂಗ್ ಟ್ರ್ಯಾಕ್‌ನಲ್ಲಿ ನಡೆದಾಡಲೂ ಸಾಧ್ಯವಿಲ್ಲದಂತಹ ದುರ್ನಾತ ಈ ಒಳಚರಂಡಿ ಕೊಳಕಿನಿಂದ ನಿರ್ಮಾಣವಾಗಿದೆ. ಕೆರೆಯ ಮಧ್ಯಭಾಗ ಮತ್ತೆ ಕಲ್ಮಶಯುಕ್ತ ಹೂಳಿನಿಂದ ತುಂಬಿಹೋಗುತ್ತಿದೆ. ಇದೆಲ್ಲದ ನಿವಾರಣೆಗಾಗಿ ಇದೀಗ ಅಭಿವೃದ್ಧಿ ಯೋಜನೆ ರೂಪುಗೊಂಡಿದೆ. ಈ ಕೆರೆಯನ್ನು ಶೀಘ್ರ ಶುಚಿಗೊಳಿಸಲಾಗುತ್ತದೆ ಎಂಬ ಭರವಸೆಯನ್ನು ಬಿಬಿಎಂಪಿ ಆಯುಕ್ತರು ನೀಡಿದ್ದಾರೆ.
ಬಿಬಿಎಂಪಿ ವತಿಯಿಂದ ಈ ಕೆರೆಗೆ ಕರೆಯಲಾಗುವ ಟೆಂಡರ್‌ನಲ್ಲಿ ಸಮಯ ನಿಗದಿಪಡಿಸುವ ಜತೆಗೆ ವಿಭಾಗಗಳಲ್ಲಿರುತ್ತದೆ. ಕೆರೆ ಹೂಳೆತ್ತುವುದು, ಏರಿ ನಿರ್ಮಾಣ, ಒಳಚರಂಡಿ ನೀರು ಮಾರ್ಗ ಬದಲಾವಣೆ ಸೇರಿದಂತೆ ಕಾಮಗಾರಿಗಳನ್ನು ವಿಭಾಗಿಸಿ, ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಲಾಗುತ್ತದೆ. ಇದರಿಂದ ಅಭಿವೃದ್ಧಿ ಕಾಮಗಾರಿಗೆ ವೇಗ ಸಿಗುತ್ತದೆ. ಈ ಮೂಲಕ ಜನವರಿ ವೇಳೆಗೆ ಕೆಂಪಾಂಬುಧಿ ಕೆರೆ ಶುಚಿ ಹಾಗೂ ಅಭಿವೃದ್ದಿಯಾಗುತ್ತದೆ ಎಂದು ಶಾಸಕ ರವಿಸುಬ್ರಹ್ಮಣ್ಯ ಹೇಳಿದ್ದಾರೆ.
ಕೆಂಪಾಂಬುಧಿ ಕೆರೆ ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿಲ್ಲ. ಆದರೆ, ಇದು ಬಸವನಗುಡಿಗೆ ಕಳಸವಿದ್ದಂತೆ. ಆದ್ದರಿಂದ, ಈ ಕೆರೆಯನ್ನು ಅಭಿವೃದ್ಧಿಪಡಿಸುವಲ್ಲಿ ಹೆಚ್ಚಿನ ಕಾಳಜಿ ವಹಿಸಿದ್ದೇನೆ. ಈ ಕೆರೆಯನ್ನು ಶುಚಿಗೊಳಿಸುವುದರಿಂದ, ಸುತ್ತಮುತ್ತಲಿನ ವಾತಾವರಣವೂ ಸುಧಾರಣೆಯಾಗುತ್ತದೆ. ಕೆಂಪಾಂಬುಧಿ ಕೆರೆಯಲ್ಲಿ ಒಳಚರಂಡಿ ನೀರು ಹೋಗದಂತೆ ತಡೆಯಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗುತ್ತದೆ. ಕೆಂಪೇಗೌಡರು ಕಟ್ಟಿದ ಈ ಕೆರೆಯನ್ನು ಉತ್ತಮ ರೀತಿಯಲ್ಲಿ ಸಂರಕ್ಷಿಸಿಕೊಳ್ಳಲು ಬದ್ಧನಾಗಿದ್ದೇನೆ ಎಂದಿದ್ದಾರೆ.
ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಬಗೆಗಿನ ಸ್ಮಾರಕ ಕೆಂಪಾಂಬುಧಿ ಕೆರೆಯ ಬಳಿ ಸ್ಥಾಪನೆ ಆಗಲಿದೆ. ಕೆಂಪೇಗೌಡರು ಬೆಂಗಳೂರಿನ ನಿರ್ಮಾಣಕ್ಕೆ ನೀಡಿದ ಕೊಡುಗೆಗಳನ್ನು ಸಂಕ್ಷಿಪ್ತವಾಗಿ ವಿವರ ನೀಡುವ ಸ್ಮಾರಕ ಭವನ ಇದಾಗಲಿದೆ. ಈ ಮೂಲಕ ಕೆಂಪೇಗೌಡರ ಬಗ್ಗೆ ಸಮಗ್ರ ಮಾಹಿತಿ ನೀಡುವ ಬೆಂಗಳೂರು ಪ್ರಥಮ ತಾಣ ಇದಾಗಲಿದೆ.
ಕೆಂಪಾಂಬುಧಿ ಕೆರೆಯ ಬಳಿ ಕೆಂಪೇಗೌಡರು ಸ್ಥಾಪಿಸಿದ್ದ ಗೋಪುರಗಳಿವೆ. ಇದಲ್ಲದೆ ಹಲವು ರೀತಿಯ ಸ್ಮಾರಕಗಳೂ ಇವೆ. ಇವುಗಳೆಲ್ಲವನ್ನೂ ಸಂರಕ್ಷಿಸಲಾಗುತ್ತದೆ. ಇದಕ್ಕಿಂತ ಪ್ರಮುಖವಾಗಿ, ಕೆಂಪೇಗೌಡರ ಬಗ್ಗೆ ಸಮಗ್ರ ಚಿತ್ರಣ ನೀಡುವ ಪ್ರಾತ್ಯಕ್ಷಿಕೆಯ ಸ್ಮಾರಕ ಭವನವನ್ನು ಇಲ್ಲಿ ನಿರ್ಮಿಸಲಾಗುತ್ತದೆ. ನಮ್ಮ ನಗರ ನಿರ್ಮಾತೃ ಕೆಂಪೇಗೌಡರ ಸಾಧನೆ, ಅವರು ನಿರ್ಮಿಸಿರುವ ತಾಣಗಳು ಸೇರಿದಂತೆ ಅವರ ಬಗ್ಗೆ ಸವಿವರವನ್ನು ಈ ಸ್ಮಾರಕ ನೀಡಲಿದೆ.
ಕೆಂಪೇಗೌಡರ ಬಗ್ಗೆ ಎಲ್ಲ ರೀತಿಯ ಮಾಹಿತಿ ನೀಡುವ ತಾಣ ಬೆಂಗಳೂರಿನಲ್ಲಿ ಎಲ್ಲೂ ಇಲ್ಲ. ಈ ಶಿಲ್ಪಿಯ ಸಾಹಸ ಹಾಗೂ ಸಾಧನೆಯ ವಿವರವನ್ನು ಈ ಸ್ಮಾರಕ ಭವನ ಒಳಗೊಳ್ಳಲಿದೆ. ಗವಿಗಂಗಾಧರೇಶ್ವರ ಸ್ವಾಮಿ ದೇವಾಲಯ ಹಾಗೂ ಕೆಂಪಾಂಬುಧಿ ಕೆರೆಯ ನಡುವಿನ ಪ್ರದೇಶದಲ್ಲಿ ಈ ಸ್ಮಾರಕ ನಿರ್ಮಿಸಲು ನಿರ್ಧರಿಸಲಾಗಿದೆ. ಜನವರಿ ವೇಳೆಗೆ ಇದು ಕೂಡ ಪೂರ್ಣಗೊಳ್ಳಲಿದೆ ಎಂದು ಶಾಸಕ ರವಿಸುಬ್ರಹ್ಮಣ್ಯ ತಿಳಿಸಿದ್ದಾರೆ.

Monday, July 27, 2009

ಅರ್ಕಾವತಿ ಪುನಶ್ಚೇತನಕ್ಕೆ ಕ್ರಿಯಾಯೋಜನೆ: ಶಾಸಕರ ನಿರ್ಲಕ್ಷ್ಯ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಸರ್ವ ಅಧಿಕಾರವನ್ನು ಒಳಗೊಂಡ ಪ್ರಾಧಿಕಾರದ ರಚನೆ ಅತ್ಯಗತ್ಯ ಎಂದು ತಾಂತ್ರಿಕ ತಜ್ಞರ ತಂಡ ಅಭಿಪ್ರಾಯಪಟ್ಟಿದೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘದ ಸಹಯೋಗದಲ್ಲಿ ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆಗಾಗಿ ಕ್ರಿಯಾಯೋಜನೆ ರಚಿಸಲು ಬುಧವಾರ ಆಯೋಜಿಸಿದ್ದ ಕಾರ್ಯಾಗಾರ ಈ ಅಭಿಪ್ರಾಯ ವ್ಯಕ್ತವಾಗಿದೆ. ಇಂತಹ ಉಪಯೋಗಕಾರಿ ಕಾರ್ಯಾಗಾರಕ್ಕೆ ಶಾಸಕರೊಬ್ಬರೂ ಹಾಜರಾಗದೆ ನಿರ್ಲಕ್ಷ ಧೋರಣೆ ತೋರಿದ್ದು, ವಿಷಾದನೀಯ.
ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ, ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಕೈಗೊಳ್ಳಬೇಕಾದ ಕ್ರಿಯಾಯೋಜನೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ. ಇನ್ನೆಡರು ವಾರಗಳಲ್ಲಿ ಸಮಗ್ರ ಕ್ರಿಯಾಯೋಜನೆಯನ್ನು ಸರಕಾರಕ್ಕೆ ಸಲ್ಲಿಸಿ, ಕ್ರಮ ಕೈಗೊಳ್ಳಲು ಒತ್ತಾಯಪೂರ್ವಕ ಮನವಿ ಮಾಡಬೇಕೆಂದು ಕಾರ್ಯಾಗಾರದಲ್ಲಿ ತೀರ್ಮಾನಿಸಲಾಯಿತು.
ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು ಸಮ್ಮುಖದಲ್ಲಿ ನಡೆದ ಕಾರ್ಯಾಗಾರದಲ್ಲಿ, ಪರಿಸರವಾದಿ ಡಾ.ಅನ. ಯಲ್ಲಪ್ಪರೆಡ್ಡಿ, ಡಬ್ಲ್ಯುಆರ್‌ಡಿಒದ ಸಿ.ವಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾ. ಎಸ್.ರಾಜಾರಾವ್, ಸಣ್ಣ ನೀರಾವರಿ ಇಲಾಖೆಯ ಸುರೇಶ್ ಹಾಗೂ ಬೆಂಗಳೂರು ಜಲಮಂಡಳಿಯ ರೂಪ್‌ಕುಮಾರ್ ಭಾಗವಹಿಸಿದ್ದರು.
ಅರ್ಕಾವತಿ ನದಿ ಪುನಶ್ಚೇತನಕ್ಕೆ ಎಲ್ಲ ಇಲಾಖೆಗಳ ಮೇಲೂ ಅಧಿಕಾರ ಹೊಂದಿರುವ, ಆ ಇಲಾಖೆಗಳಿಂದ ಕೆಲಸ ಮಾಡುವ ಅವಕಾಶ ಹೊಂದಿರುವ ಪ್ರಾಧಿಕಾರವನ್ನು ರಚಿಸಬೇಕೆಂಬ ಒಮ್ಮತ ನಿರ್ಣಯ ಕೈಗೊಳ್ಳಲಾಯಿತು. ಇದರ ಜತೆಗೆ, ಹೊಳೆ ಹರಿಸಲು ನಮ್ಮತನದ ಅರಣ್ಯ ಬೆಳೆಸುವ ಬಗ್ಗೆ ಕ್ರಮ ಕೈಗೊಳ್ಳಬೇಕು. ಅರ್ಕಾವತಿ ನದಿ ಪಾತ್ರದ ಸಂರಕ್ಷಣೆಗಾಗಿ ೨೦೦೩ರಲ್ಲಿ ಹೊರಡಿಸಿದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಆಗ್ರಹಿಸಲಾಯಿತು.
ಅರ್ಕಾವತಿ ನದಿ ಬಗ್ಗೆ ಹಿಂದಿನ ಸ್ಥಿತಿ ಹಾಗೂ ಪ್ರಸ್ತುತ ಸ್ಥಿತಿ ಬಗ್ಗೆ ಒಂದು ಸಾಕ್ಷ್ಯಚಿತ್ರ ತಯಾರಿಸುವಂತೆ ಆರ್ಘ್ಯಂ ಪ್ರತಿಷ್ಠಾನಕ್ಕೆ ಮನವಿ ಮಾಡಿಕೊಳ್ಳಲಾಯಿತು. ಜತೆಗೆ, ಮಾಧ್ಯಮಗಳು ನದಿ ಬಗ್ಗೆ ಕಾಳಜಿಯುತ ವರದಿಗಳನ್ನು ಪ್ರಕಟಿಸಲು ಕೋರಿಕೊಳ್ಳಲಾಯಿತು. ಮೆಟ್ರೊ ರೈಲು ಸುರಂಗ ಮಾರ್ಗದಿಂದ ಲಕ್ಷಾಂತರ ಕೊಳವೆ ಬಾವಿಗಳು ಮುಚ್ಚಿಹೋಗುತ್ತವೆ. ಅಂತರ್ಜಲಕ್ಕೆ ಧಕ್ಕೆ ಉಂಟಾಗುತ್ತದೆ. ಈ ಬಗ್ಗೆ ವಿವರ ನೀಡುವಂತೆ ಬಿಎಂಆರ್‌ಸಿಎಲ್‌ಗೆ ಪತ್ರ ಬರೆಯಲು ನಿರ್ಧರಿಸಲಾಯಿತು.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (ಗ್ಯಾಟ್) ಪ್ರೊಫೆಸರ್ ಡಾ. ವೈ. ಲಿಂಗರಾಜು, ಗ್ಯಾಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಸಿ.ವಿ. ಶ್ರೀನಿವಾಸ್, ಕ್ಯಾಪ್ಟನ್ ಎಸ್. ರಾಜಾರಾವ್, ಬೆಂಗಳೂರು ವಿವಿ ಪ್ರೊಫೆಸರ್ ಡಾ. ಕೆ. ನಂದಿನಿ, ಡಿಎಂಜಿಯ ಮಾಜಿ ಹೆಚ್ಚುವರಿ ಹೆಚ್ಚುವರಿ ನಿರ್ದೇಶಕ ಡಾ. ಟಿ.ಎನ್. ವೇಣುಗೋಪಾಲ್ ಮತ್ತು ಸಿಜಿಡಬ್ಲ್ಯುಬಿಯ ಮಾಜಿ ಸದಸ್ಯ ಸಿ.ಎಸ್. ರಮೇಶ್, ವಿಜಯ ಕರ್ನಾಟಕದ ಆರ್. ಮಂಜುನಾಥ್, ಜಿಯೊ ಇನ್‌ಫರ್ಮೆಟಿಕ್ಸ್ ತಜ್ಞ ಡಾ. ವಿ.ಆರ್. ಹೆಗಡೆ, ಹಾಗೂ ಎನ್ವಿರಾನಮೆಂಟಲ್ ಪ್ರೊಟೆಕ್ಷನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಕೆ. ಶಿವಶಂಕರ್, ಮಾಜಿ ಶಾಸಕ ಪಿ.ಜಿ.ಆರ್. ಸಿಂಧ್ಯಾ ಅವರು ಅರ್ಕಾವತಿ ಪುನಶ್ಚೇತನಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾತನಾಡಿದರು.
ಜನಪ್ರತಿನಿಧಿಗಳ ನಿರ್ಲಕ್ಷ್ಯ
ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ಸಭೆ-ಸಮಾರಂಭಗಳಲ್ಲಿ ಮಾರುದ್ದ ಭಾಷಣ ಮಾಡುವ ಶಾಸಕರು, ನದಿ ಪುನಶ್ಚೇತನಕ್ಕೆ ತಾಂತ್ರಿಕ ಸಲಹೆ ಹಾಗೂ ಕ್ರಿಯಾಯೋಜನೆ ರೂಪಿಸುವ ಕಾರ್ಯಾಗಾರದ ಬಗ್ಗೆ ದಿವ್ಯ ನಿರ್ಲಕ್ಷ್ಯ ತೋರಿದ್ದರು.
ನದಿ ಪಾತ್ರದಲ್ಲಿ ೨೮ ಶಾಸಕರಿದ್ದಾರೆ. ಅವರೆಲ್ಲರಿಗೂ ಸಂಸ್ಥೆ ವತಿಯಿಂದ ಆಹ್ವಾನಿಸಲಾಗಿತ್ತು. ಆದರೆ, ಯಾರೂ ಇತ್ತ ಸುಳಿಯದಿರುವುದು ತೀವ್ರ ಅಸಮಾಧಾನಕ್ಕೆ ಎಡೆ ಮಾಡಿಕೊಟ್ಟಿತು. ಜನಪ್ರತಿನಿಧಿಗಳು ವಿಧಾನಸಭೆ ಹಾಗೂ ಸಮಾರಂಭದಲ್ಲಿ ಪ್ರಚಾರಕ್ಕಾಗಿ ಮಾತ್ರ ನದಿ ಬಗ್ಗೆ ಮಾತನಾಡುತ್ತಾರೆ. ಸಕ್ರಿಯ ಚಟುವಟಿಕೆಗಳಲ್ಲಿ ಭಾಗವಹಿಸಬೇಕಾದಾಗ ಬೆನ್ನು ತೋರುತ್ತಾರೆ. ಇಂತಹವನ್ನು ನಂಬುವುದು ಹೇಗೆ? ಎಂಬ ಪ್ರಶ್ನೆಗೂ ಅಲೆದಾಡುತ್ತಿತ್ತು.
ರಸ್ತೆ ಅಥವಾ ಕಟ್ಟಡಕ್ಕೆ ಪೂಜೆ ಮಾಡಲು ಯಾವ ಕಾರ್ಯಒತ್ತಡವೂ ಇಲ್ಲದೆ ಶಾಸಕರು ಪೋಸು ನೀಡುತ್ತಾರೆ. ಆದರೆ, ಜಲಸಂಸ್ಕೃತಿಯನ್ನು ಉಳಿಸಿಕೊಳ್ಳುವ, ಒಂದು ನದಿಗೇ ಮರುಜನ್ಮ ನೀಡುವ ಇಂತಹ ಕಾರ್ಯಯೋಜನೆಗಳಲ್ಲಿ ತಮ್ಮ ಪಾತ್ರ ಏನು ಎಂಬುದನ್ನು ಅರಿತುಕೊಳ್ಳಲು ಇಲ್ಲಿಗೆ ಆಗಮಿಸಲಿಲ್ಲ. ಇನ್ನು ಇವರು ಒತ್ತುವರಿಯಂತಹ ಜಟಿಲ ಸಮಸ್ಯೆಯನ್ನು ನಿವಾರಿಸಲು ಸಹಕಾರಿಸುತ್ತಾರೆಯೇ ಎಂಬ ಅನುಮಾನ ಮೂಡಿತ್ತು.
ಶಾಸಕರು ಬರದಿದ್ದರೂ, ಎಲ್ಲ ಇಲಾಖೆಗಳ ಅಧಿಕಾರಿಗಳು ಇಲ್ಲಿದ್ದುದು ಸಂತಸದ ವಿಷಯ. ಅವರೆಲ್ಲರೂ ಸಮಸ್ಯೆಗೆ ಸ್ಪಂದಿಸಿ, ಅರ್ಕಾವತಿ ನದಿ ಪುನಶ್ಚೇತನಕ್ಕೆ ಸಂಪೂರ್ಣ ಸಹಕಾರ ನೀಡುವ ಭರವಸೆ ನೀಡಿದರು.ಚಿತ್ರ ಶೀರ್ಷಿಕೆ:
ಅರ್ಕಾವತಿ ನದಿ ಪುನಶ್ಚೇತನ ಕ್ರಿಯಾಯೋಜನೆ ರಚಿಸಲು ಬುಧವಾರ ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಡಬ್ಲ್ಯುಆರ್‌ಡಿಒದ ಸಿ.ವಿ. ಪಾಟೀಲ್, ಸಣ್ಣ ನೀರಾವರಿ ಇಲಾಖೆಯ ಮಾಜಿ ಕಾರ್ಯದರ್ಶಿ ಕ್ಯಾ. ಎಸ್.ರಾಜಾರಾವ್, ಮುಖ್ಯಮಂತ್ರಿಯವರ ಆರ್ಥಿಕ ಸಲಹೆಗಾರ ಡಾ. ಕೆ.ವಿ. ರಾಜು , ಪರಿಸರವಾದಿ ಡಾ.ಅನ. ಯಲ್ಲಪ್ಪರೆಡ್ಡಿ, ಸಣ್ಣ ನೀರಾವರಿ ಇಲಾಖೆಯ ಸುರೇಶ್ ಹಾಗೂ ಬೆಂಗಳೂರು ಜಲಮಂಡಳಿಯ ರೂಪ್‌ಕುಮಾರ್.

Thursday, July 23, 2009

ಅರ್ಕಾವತಿ ನದಿ: ಪುನಶ್ಚೇತನಕ್ಕೆ ಕ್ರಿಯಾಯೋಜನೆ ಕಾರ್ಯಾಗಾರ

ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು ಭಾರತೀಯ ಭೂವೈಜ್ಞಾನಿಕ ಸಂಘದ ಸಹಯೋಗದಲ್ಲಿ 'ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆ'ಗಾಗಿ ಕ್ರಿಯಾಯೋಜನೆ ರಚಿಸಲು ಜುಲೈ 25ರಂದು ನಗರದಲ್ಲಿ ಕಾರ್ಯಾಗಾರ ಏರ್ಪಡಿಸಲಾಗಿದೆ.
ಅರ್ಕಾವತಿ ನದಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಎಲ್ಲ ಶಾಸಕರು, ನೀರಿನ ಬಳಕೆದಾರರು, ತಜ್ಞರು ಈ ಕಾರ್ಯಾಗಾರದಲ್ಲಿ ಭಾಗವಹಿಸಲಿದ್ದಾರೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಆರ್ಘ್ಯಂ ಪ್ರತಿಷ್ಠಾನ, ಕೆಎಸ್‌ಪಿಸಿಬಿ, ಕೆಎಸ್‌ಐಐಡಿಸಿ, ಸೈನ್ಸ್ ಅಂಡ್ ಟೆಕ್ನಾಲಜಿ ಅಕಾಡೆಮಿ ಮತ್ತು ಬೆಂಗಳೂರು ಜಲಮಂಡಳಿ ಈ ಕಾರ್ಯಾಗಾರವನ್ನು ಪ್ರಾಯೋಜಿಸಿವೆ.
ಕಾರ್ಯಾಗಾರದಲ್ಲಿ ನದಿಯ ಪುನಶ್ಚೇತನಕ್ಕೆ ಸಂಬಂಧಿಸಿದಂತೆ ತಜ್ಞರು ತಮ್ಮ ಅಭಿಪ್ರಾಯ ಹಾಗೂ ಸಲಹೆಯ ವರದಿ ಮಂಡಿಸಲಿದ್ದಾರೆ. ಚರ್ಚಾಗೋಷ್ಠಿಯಲ್ಲಿ ಈ ಬಗ್ಗೆ ಸಂವಾದ ನಡೆಸಿ, ಜನಪ್ರತಿನಿಧಿಗಳು ಕೈಗೊಳ್ಳಬೇಕಾದ ಕ್ರಮಗಳನ್ನು ವಿವರಿಸಲಿದ್ದಾರೆ.
ವಿಷಯಗಳ ಬಗ್ಗೆ ಮಾತನಾಡುವರು:
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ (ಗ್ಯಾಟ್) ಪ್ರೊಫೆಸರ್ ಡಾ. ವೈ. ಲಿಂಗರಾಜು- 'ಅರ್ಕಾವತಿ ದರ್ಶನ';
ಗ್ಯಾಟ್‌ನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಪ್ರೊಫೆಸರ್ ಡಾ. ಸಿ.ವಿ. ಶ್ರೀನಿವಾಸ- 'ಚೇಂಜಿಂಗ್ ಸೆನಾರಿಯೊ ಆಫ್ ಅರ್ಬನ್ ಹೈಡ್ರಾಲಜಿ';
ಸಣ್ಣ ನೀರಾವರಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಕ್ಯಾಪ್ಟನ್ ಎಸ್. ರಾಜಾರಾವ್- 'ಸ್ಕೇರ್‌ಸಿಟಿ ಆಫ್ ವಾಟರ್- ಬೆಂಗಳೂರು ತನ್ನ ನೈಸರ್ಗಿಕ ಸಾವು ಎದುರಿಸಲಿದೆ';
ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಸುಬ್ರಮಣಿಯನ್- 'ಬೆಂಗಳೂರು ಕೆರೆಗಳ ರಕ್ಷಣೆ ಹೇಗೆ?- ಕಾರ್ಯಯೋಜನೆ';
ಬೆಂಗಳೂರು ವಿವಿ ಪ್ರೊಫೆಸರ್ ಡಾ. ಕೆ. ನಂದಿನಿ, ಪರಿಸರ ತಜ್ಞ ಡಾ. ಎ.ಎನ್. ಯಲ್ಲಪ್ಪರೆಡ್ಡಿ- 'ಅರ್ಕಾವತಿ ಜಲಾನಯನ ಸಂರಕ್ಷಣೆಯಲ್ಲಿ ಪರಿಸರ ದೃಷ್ಟಿಕೋನದ ಅಳವಡಿಕೆ';
ಡಿಎಂಜಿಯ ಮಾಜಿ ಹೆಚ್ಚುವರಿ ಹೆಚ್ಚುವರಿ ನಿರ್ದೇಶಕ ಡಾ. ಟಿ.ಎನ್. ವೇಣುಗೋಪಾಲ್ ಮತ್ತು ಸಿಜಿಡಬ್ಲ್ಯುಬಿಯ ಮಾಜಿ ಸದಸ್ಯ ಸಿ.ಎಸ್. ರಮೇಶ- 'ಅರ್ಕಾವತಿ ಜಲಾನಯನ ಪ್ರದೇಶದಲ್ಲಿ ಅಂತರ್ಜಲ ಸಂಪನ್ಮೂಲ';
ವಿಜಯ ಕರ್ನಾಟಕದ ಆರ್. ಮಂಜುನಾಥ್- 'ಪತ್ರಕರ್ತರ ದೃಷ್ಟಿಯಲ್ಲಿ ಅರ್ಕಾವತಿ ಸ್ಥಿತಿ';
ಜಿಯೊ ಇನ್‌ಫರ್ಮೆಟಿಕ್ಸ್ ತಜ್ಞ ಡಾ. ವಿ.ಆರ್. ಹೆಗಡೆ- 'ಅರ್ಕಾವತಿ ಮಾಹಿತಿಯ ಭಂಡಾರ- ಜಲ ಸಂಪನ್ಮೂಲ ನಿರ್ವಹಣೆಯತ್ತ';
ಪ್ರೊಟೆಕ್ಷನ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಕೆ. ಶಿವಶಂಕರ್- 'ಅರ್ಕಾವತಿ ಪುನಶ್ಚೇತನಕ್ಕೆ ಸಮಗ್ರ ಕಾರ್ಯ ಮತ್ತು ಶೀಘ್ರ ಕಾನೂನುಗಳ ಅಗತ್ಯ'
ಕಾರ್ಯಾಗಾರದ ಹಿನ್ನೆಲೆ
ಭಾರತೀಯ ಭೂವೈಜ್ಞಾನಿಕ ಸಂಘ ಮತ್ತು ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಂಶೋಧನಾ ಕೇಂದ್ರಗಳು 'ಅರ್ಕಾವತಿ ನದಿ ಜಲಾನಯನದ ಪುನಶ್ಚೇತನ ಮತ್ತು ಸುಸ್ಥಿರತೆ' ವಿಷಯದ ಪ್ರಾಮುಖ್ಯತೆ ಮತ್ತು ಸಾಮಾಜಿಕ ಕಳಕಳಿಯನ್ನರಿತು, ಸಮಸ್ಯೆ ಬಗೆಹರಿಯಲು ಬೇಕಾದ ಕ್ರಿಯಾಯೋಜನೆಯನ್ನು ರಚಿಸುವ ಬಗ್ಗೆ ಕಾರ್ಯಾಗಾರವನ್ನು ಹಮ್ಮಿಕೊಂಡಿದೆ.
ಗ್ಲೋಬಲ್ ಅಕಾಡೆಮಿ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅರ್ಕಾವತಿ ಜಲಾನಯನ ದಕ್ಷಿಣ ಭಾಗದ ಗ್ರಾಮೀಣ ಪ್ರದೇಶದಲ್ಲಿರುವ ಒಂದು ಕಿರು ಜಲಾನಯನದ ಅಧ್ಯಯನ ಕೈಗೊಂಡಿದ್ದಾರೆ. ಅಲ್ಲಿಯ ಸಮಸ್ಯೆಗಳ ಬಗ್ಗೆ ಅರಿವು ಉಂಟು ಮಾಡುತ್ತಿದ್ದಾರೆ. ಈ ವಿದ್ಯಾರ್ಥಿಗಳೊಂದಿಗೆ ದೊಡ್ಡ ಮುದವಾಡಿಯಲ್ಲಿಯೇ ಇರುವ 'ಸೇಕ್ರೆಡ್' ಎಂಬ ಸ್ವಯಂ ಸೇವಾ ಟ್ರಸ್ಟ್ ಕೈಜೋಡಿಸಿದೆ. ಅಲ್ಲಿಯ ಸುತ್ತಮುತ್ತಲ ಹಳ್ಳಿಗಳಲ್ಲಿ ಕಂಪ್ಯೂಟರ್ ಕಲಿಕೆ, ಇಂಗ್ಲಿಷ್ ಭಾಷಾ ಬೋಧನೆ ಮತ್ತು ಪರಿಸರ ಸಮಸ್ಯೆಗಳ ಅರಿವು ಮೂಡಿಸಲು ಪ್ರತಿ ವರ್ಷ ವಿಭಿನ್ನ ಪ್ರದರ್ಶನ ಏರ್ಪಡಿಸುತ್ತಿದೆ. ಈಗ ಅರ್ಕಾವತಿ ಜಲಾನಯನದ ಗ್ರಾಮೀಣ ಭಾಗದಲ್ಲಿ ಜಲ ಸಂರಕ್ಷಣೆ ಬಗ್ಗೆ ಅರಿವು ಉಂಟು ಮಾಡಲು ಮುಂದಾಗಿದೆ.
ಅರ್ಕಾವತಿ ನದಿ ಜಲಾನಯನ ಪ್ರದೇಶವನ್ನು ಪ್ರತಿನಿಧಿಸುವ ಎಲ್ಲಾ ಶಾಸಕರು ಮತ್ತು ಬೆಂಗಳೂರು ನಗರ ಪ್ರದೇಶದಲ್ಲಿ ಕಾರ್ಯನಿರತವಾಗಿರುವ ನೀರಿನ ಬಳಕೆದಾರ ಸರಕಾರಿ ಇಲಾಖೆಗಳ ಕಾರ್ಯ ಚಟುವಟಿಕೆಗಳಲ್ಲಿ ನದಿ ಪುನಶ್ಚೇತನಕ್ಕೆ ಅವಶ್ಯವಾದ ಕಾರ್ಯಕ್ರಮಗಳನ್ನು ಅಳವಡಿಸಿಕೊಳ್ಳಬೇಕು. ಈ ಬಗ್ಗೆ ಗಮನ ಹರಿಸಿ ಅರ್ಕಾವತಿ ನದಿ ಜಲಾನಯನ ಪುನಶ್ಚೇತನ ಮತ್ತು ಸುಸ್ಥಿರತೆಗಾಗಿ ಕ್ರಿಯಾಸೂಚಿ ತಯಾರಿಕೆ ಬಗ್ಗೆ ಅರಿವು ಮೂಡಿಸಲು ಪರಿಸರವಾದಿ ಡಾ. ಎ.ಎನ್. ಯಲ್ಲಪ್ಪರೆಡ್ಡಿಯವರ ನೇತೃತ್ವದಲ್ಲಿ ತಜ್ಞರ ಸಮಿತಿಯನ್ನು ನೇಮಿಸಲಾಗಿದೆ.
ಪರಿಸರ ತಜ್ಞ ಡಾ. ಎ.ಎನ್. ಎಲ್ಲಪ್ಪರೆಡ್ಡಿಯವರ ಅಧ್ಯಕ್ಷತೆಯಲ್ಲಿ ನಾನಾ ವಿಷಯ ತಜ್ಞರ ಸಮಿತಿ ರಚಿಸಿ, ಕಾರ್ಯಾಗಾರದ ರೂಪುರೇಷೆ ಮತ್ತು ಚರ್ಚಿಸಬೇಕಾದ ವಿಷಯಗಳ ಲೇಖನಗಳ ಹೊತ್ತಿಗೆಯನ್ನು ಹೊರತಂದು ಕಾರ್ಯಾಗಾರದಲ್ಲಿ ಚರ್ಚೆಗೆ ಇಡಲಾಗಿದೆ.
ಸ್ಥಳ: ಸೆಮಿನಾರ್ ಹಾಲ್, ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಕ್ಯಾಂಪಸ್, ಬೆಂಗಳೂರು ವಿವಿ, ಅರಮನೆ ರಸ್ತೆ. ಸಮಯ: ಬೆಳಗ್ಗೆ 9.30.

Friday, July 10, 2009

ಡಿಡಿಯಲ್ಲಿ ಎಲ್‌ಡಿಎಯೊಂದಿಗೆ ಸಂವಾದ

ಆತ್ಮೀಯ ಸ್ನೇಹಿತರೇ,
ಕೆರೆಗಳ ಅಭಿವೃದ್ಧಿಗಾಗಿ ಸ್ಥಾಪನೆಯಾಗಿರುವ ಕೆರೆ ಅಭಿವೃದ್ಧಿ ಪ್ರಾಧಿಕಾರದ ಸಿಇಒ ಶ್ರೀ ವೇದಾಂತ್‌ ಅವರೊಂದಿಗೆ ಕೆರೆಗಳ ಕುರಿತ ಒಂದು ಸಂವಾದದಲ್ಲಿ ನಾನು ಭಾಗವಹಿಸಿದ್ದೇನೆ. ಈ ಕಾರ್ಯಕ್ರಮ ಬೆಂಗಳೂರು ದೂರದರ್ಶನ ಚಂದನದಲ್ಲಿ ಜುಲೈ 12ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ವೀಕ್ಷಿಸಿ, ತಮ್ಮ ಅಭಿಪ್ರಾಯ ತಿಳಿಸಿ.
ತಮ್ಮ ವಿಶ್ವಾಸಿ
ಕೆರೆ ಮಂಜು

Friday, June 26, 2009

ಅರ್ಕಾವತಿ ಪುನಶ್ಚೇತನಕ್ಕೆ ಪ್ರಾಧಿಕಾರ- ಮುಖ್ಯಮಂತ್ರಿ

ಅರ್ಕಾವತಿ ನದಿ ಪುನಶ್ಚೇತನಕ್ಕೆ ಪ್ರಾಧಿಕಾರ ರಚಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಭರವಸೆ ನೀಡಿದ್ದಾರೆ. ವಿಜಯ ಕರ್ನಾಟಕದಲ್ಲಿ ಪ್ರಕಟವಾದ "ಅರ್ಕಾವತಿ ಏಕೀ ದುರ್ಗತಿ?" ಲೇಖನ ಮಾಲಿಕೆಯ ಸಮಗ್ರ ಕೈಪಿಡಿಯನ್ನು ಸ್ವೀಕರಿಸಿ ಅವರು ಅರ್ಕಾವತಿ ನದಿ ಪುನಶ್ಚೇತನಕ್ಕೆ ಬದ್ಧ ಎಂದು ಹೇಳಿದ್ದಾರೆ.
ನದಿ ಪುನಶ್ಚೇತನಕ್ಕಾಗಿ ಪ್ರತ್ಯೇಕ ಪ್ರಾಧಿಕಾರ ರಚಿಸುವ ಬಗ್ಗೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ‘ಅರ್ಕಾವತಿ ಏಕೀ ದುರ್ಗತಿ?’ ಲೇಖನ ಮಾಲಿಕೆಯ ಸಮಗ್ರ ಕೈಪಿಡಿಯನ್ನು ಸ್ವೀಕರಿಸಿ ಗುರುವಾರ ಮಾತನಾಡಿದರು.
ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಅರ್ಕಾವತಿ ನದಿ ಪುನಶ್ಚೇತನ ಅಗತ್ಯವಾಗಿದೆ. ಈ ಬಗ್ಗೆ ಪ್ರಾಧಿಕಾರ ಅಥವಾ ಸಮಿತಿ ರಚಿಸುವ ಬಗ್ಗೆ ಪರಿಶೀಲಿಸಲಾಗುವುದು. ಬೆಂಗಳೂರು ಜಲಮಂಡಳಿ ಹಾಗೂ ಜಲಸಂಪನ್ಮೂಲ ಖಾತೆ ಸಚಿವರು ನದಿ ಪುನಶ್ಚೇತನದ ಬಗ್ಗೆ ಇನ್ನು ೧೫ ದಿನಗಳಲ್ಲಿ ವರದಿ ನೀಡಲಿದ್ದು, ಆನಂತರ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ರಾಜ್ಯದಾದ್ಯಂತ ಕೆರೆಗಳ ಸಂರಕ್ಷಣೆ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರು ನಗರದ ಕೆರೆಗಳನ್ನೂ ಅಭಿವೃದ್ಧಿಪಡಿಸಲು ಸರಕಾರ ಬದ್ಧವಾಗಿದೆ ಎಂದರು.
ಅರ್ಕಾವತಿ ನದಿಯ ಮೂಲದಲ್ಲೇ ಒತ್ತುವರಿ ಆಗಿದೆ. ಹೆಸರಘಟ್ಟ ಜಲಾಶಯಕ್ಕೆ ನೀರು ಹರಿಯವುದೇ ದುಸ್ತರವಾಗಿದೆ. ನದಿ ಪಾತ್ರ ಹಾಗೂ ರಾಜಕಾಲುವೆಗಳನ್ನು ಆಕ್ರಮಿಸಿಕೊಳ್ಳಲಾಗಿದೆ. ನಂದಿಯಿಂದ ಹೆಸರಘಟ್ಟದವರೆಗಿನ ೪೮ ಕಿ.ಮೀ ನದಿ ಪಾತ್ರದಲ್ಲಿ ಎಂಟು ಕಿಮೀ ವ್ಯಾಪ್ತಿಯಲ್ಲಿ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಉಳಿದದ್ದು ಇನ್ನು ೧೫ ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, ನಂತರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಲಸಂಪನ್ಮೂಲ ಖಾತೆ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು. ಲೋಕೋಪಯೋಗಿ ಇಲಾಖೆ ಖಾತೆ ಸಚಿವ ಸಿ.ಎಂ. ಉದಾಸಿ ಹಾಜರಿದ್ದರು.
ವಿಜಯ ಕರ್ನಾಟಕದಲ್ಲಿ ಪ್ರಕಟವಾದ ‘ಅರ್ಕಾವತಿ ಏಕೀ ದುರ್ಗತಿ’ ಲೇಖನ ಮಾಲಿಕೆಯ ಸಮಗ್ರ ಕೈಪಿಡಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರಿಕೆ ಸುದ್ದಿ ಸಂಪಾದಕ ವಸಂತ ನಾಡಿಗೇರ್ ನೀಡಿದರು. ಸಚಿವರಾದ ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಪತ್ರಿಕೆ ಮುಖ್ಯ ವರದಿಗಾರ ಪಿ. ತ್ಯಾಗರಾಜ್, ಹಿರಿಯ ವರದಿಗಾರ ಆರ್. ಮಂಜುನಾಥ್ ಉಪಸ್ಥಿತರಿದ್ದರು.

ಚಿತ್ರದಲ್ಲಿ: ಆರ್‌. ಮಂಜುನಾಥ್, ಮುಖ್ಯ ವರದಿಗಾರ ಪಿ. ತ್ಯಾಗರಾಜ್, ಸಚಿವ ಸಿ.ಎಂ. ಉದಾಸಿ, ಸುದ್ದಿ ಸಂಪಾದಕ ವಸಂತ ನಾಡಿಗೇರ್‌, ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ.

Monday, June 15, 2009

ಅರ್ಕಾವತಿ ಪುನಶ್ಚೇತನಕ್ಕೆ ಕ್ರಮ


ಅರ್ಕಾವತಿ ನದಿ ಪುನಶ್ಚೇತನಕ್ಕೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವುದಾಗಿ ಸರಕಾರ ಪ್ರಕಟಿಸಿದೆ

Monday, May 25, 2009

ಅರ್ಕಾವತಿ ಬೆಂಗಳೂರಿನ ಜೀವನದಿ


ಬೆಂಗಳೂರಿಗೆ ನೀರುಣಿಸಿದ ಮೊದಲ ನದಿ
ಮೂಲ ಮೂರು, ಹರಿವು ಐದು
ನಂದಿಬೆಟ್ಟದಲ್ಲಿ ನದಿ ಉಗಮ
ಹತ್ತಿ ಮರದ ಆಸರೆ
ಗೆಜೆಟಿಯರ್‌ನಲ್ಲಿ ಅರ್ಕಾವತಿ
ಈಕೆಯ ಜೀವ ಇರುವುದೇ ಕೆರೆಗಳಲ್ಲಿ...
‘ಅರ್ಕಾವತಿ- ಏಕೀ ದುರ್ಗತಿ?’
ವಿಜಯಕರ್ನಾಟಕದಲ್ಲಿ ಸುರುಳಿ ಬಿಚ್ಚಿದೆ ಸರಣಿ

Saturday, May 23, 2009

ಅರ್ಕಾವತಿ- ಏಕೀ ದುರ್ಗತಿ?

ಕಂಡ ಕಂಡಲ್ಲೆಲ್ಲಾ ಮನೆಯ ಮಾಡಿ, ನದಿಯನ್ನೇ ಅಂಜಿಸಿದೊಡೆಂತಯ್ಯ

ಬೆಂಗಳೂರಿನ ಜೀವನದಿ, ನಿನಗೇಕೆ ಬಂತು ಈ ದುರ್ವಿಧಿ?

ಒತ್ತುವರಿ ಕಾಟಕ್ಕೆ ಇದೇನಿದು, ನದಿಯೊಂದು ಓಡಿದೆ?!

ಅರ್ಕಾವತಿ-
ಏಕೀ ದುರ್ಗತಿ?

ಸ್ನೇಹಿತರೇ...
ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅರ್ಕಾವತಿ ನದಿ ಕುರಿತ ಸರಣಿ ಲೇಖನ 25 ಮೇ 2009 ಪ್ರಾರಂಭ.
ಲೇಖನ ಓದಿ, ದಯವಿಟ್ಟು ತನ್ನ ಅಭಿಪ್ರಾಯ ತಿಳಿಸಿ.

Thursday, May 21, 2009

ನಿರೀಕ್ಷಿಸಿ...

ನದಿಯ ನುಂಗಿ ನೀರು ಕುಡಿವ ನಮ್ಮ ದಾಹ ದೊಡ್ಡದು....

ನದಿ ಮೂಲ ಕೇಳಬಾರದು ಸರಿ
ನದಿಯ ಸಂಕಟದ ಮೂಲವನ್ನೂ ಕೇಳಬಾರದೆ....?

Friday, May 8, 2009

ಕಲ್ಯಾಣಿ ಟಿವಿಯಲ್ಲಿ ‘ಕೆರೆ ಕರಗುವ ಸಮಯ’

ಆತ್ಮೀಯರೇ,
ಪರಿಸರದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮವನ್ನು ನೀಡಬೇಕೆಂದು ಕಲ್ಯಾಣಿ ಟಿವಿ ಪ್ರತಿನಿಧಿ ನನ್ನನ್ನು ಕೇಳಿಕೊಂಡಿದ್ದಾರೆ. ಅದರಲ್ಲೂ ಪ್ರಮುಖವಾಗಿ ಕೆರೆಯ ಬಗ್ಗೆ ಮಾತನಾಡಿ ಎಂದಾಗ, ಒಂದಷ್ಟು ಮಾಹಿತಿಯನ್ನು ಟಿವಿ ವೀಕ್ಷಕರೊಂದಿಗೆ ಹಂಚಿಕೊಳ್ಳಬೇಕೆಂಬ ದೃಷ್ಟಿಯಿಂದ ಸಮ್ಮತಿಸಿದ್ದೇನೆ. ಕೆರೆಗಳ ಪರಿಸರ ಹಾಗೂ ಅದರ ರಕ್ಷಣೆ ಬಗ್ಗೆ ಮಾತನಾಡಲಿದ್ದೇನೆ. ಕಲ್ಯಾಣಿ ಟಿವಿಯಲ್ಲಿ ಭಾನುವಾರ ಮೇ 10ರಂದು ಸಂಜೆ 7ರಿಂದ 8 ಗಂಟೆವರೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಬೆಂಗಳೂರಿನ ಎಲ್ಲ ಭಾಗದಲ್ಲೂ ಈ ಟಿವಿ ಪ್ರಸಾರ ಇಲ್ಲ ಎಂದು ನಾನು ಭಾವಿಸುತ್ತೇನೆ. ಆದರೆ, ಬಹುತೇಕ ಭಾಗದಲ್ಲಿ ಈ ಟಿವಿ ಪ್ರಸಾರ ಆಗಲಿದೆ ಎಂದು ನನಗೆ ಮಾಹಿತಿ ನೀಡಲಾಗಿದೆ. ನಿಮ್ಮ ಮನೆಯಲ್ಲಿ ಪ್ರಸಾರವಾದರೆ ದಯವಿಟ್ಟು ವೀಕ್ಷಿಸಿ, ಒಂದು ಪ್ರತ್ಯುತ್ತರ ನೀಡಿ. ನಿಮ್ಮ ಅಭಿಪ್ರಾಯಕ್ಕಾಗಿ ಕಾಯುತ್ತಿರುತ್ತೇನೆ...
ಪ್ರೀತಿಯಿಂದ
ಕೆರೆ ಮಂಜು

Tuesday, May 5, 2009

ಹೇರೋಹಳ್ಳಿ ಕೆರೆಯಿಂದ ಜನರಿಗೆ ಕಲ್ಮಶ ನೀರು ಪೂರೈಕೆ


ಬೆಂಗಳೂರಿನಲ್ಲಿ ಕೆರೆಗಳನ್ನು ಯಾವ ರೀತಿ ಹಾಳು ಮಾಡುತ್ತಿದ್ದೇವೆ ಎಂದರೆ, ಕೆರೆಗೆ ಕೈ ಹಾಕುವ ಸಾಹಸ ಮಾಡದಂತಹ ಪರಿಸ್ಥಿತಿಯಲ್ಲಿದ್ದೇವೆ. ಆದರೆ, ಇಂತಹ ಕಲ್ಮಶ, ಕೊಳಕು ತುಂಬಿರುವ ಕೆರೆಯ ನೀರನ್ನೇ ಟ್ಯಾಂಕರ್ ಮೂಲಕ ಸಾಗಿಸಿ, ಹಣ ಮಾಡುವ ದಂಧೆ ಮಾತ್ರ ರಾಜಾರೋಷವಾಗಿ ನಡೆಯುತ್ತಿದೆ. ಇವರಿಗೆ ಜನರ ಆರೋಗ್ಯದ ಬಗ್ಗೆ ಕಾಳಜಿಯೇ ಇಲ್ಲ.
ಬೆಂಗಳೂರು- ಮಾಗಡಿ ರಸ್ತೆಯಲ್ಲಿರುವ ಹೇರೋಹಳ್ಳಿ ಕೆರೆಯಲ್ಲಿ ಇಂತಹ ಅಕ್ರಮ ದಂಧೆ ನಡೆಯುತ್ತಿದೆ. ಈ ಕೆರೆ ಟ್ಯಾಂಕ್ ಸೀರಿಯಲ್ ನಂ. ೬೭೧ ಆಗಿದ್ದು, ೧೩.೭೭ ಹೆಕ್ಟೇರ್ ಪ್ರದೇಶದಲ್ಲಿದೆ. ಅಂದರೆ, ೩೩.೩೩ ಎಕರೆ. ಆದರೆ ಇಷ್ಟು ಪ್ರದೇಶದಲ್ಲಿ ಕೆರೆ ಈಗಲೂ ಉಳಿದಿದೆಯೇ ಎಂಬುದೇ ಅನುಮಾನ. ಏಕೆಂದರೆ ಸುತ್ತಲೂ ಸಾಕಷ್ಟು ಒತ್ತುವರಿಯಾಗಿದೆ. ಒಂದು ಸಣ್ಣ ಶೆಡ್ ಆಗಿ ಆರಂಭವಾದ ಕಾರ್ಖಾನೆ, ನಂತರ ಇದೇ ಕೆರೆಯನ್ನು ಮುಚ್ಚಿ ವಿಶಾಲವಾಗಿ ಬೆಳೆದುನಿಂತಿದೆ. ಅಷ್ಟೇ ಅಲ್ಲ, ತನ್ನ ರಾಸಾಯನಿಕ ಅಂಶಯುಕ್ತ ನೀರು ಹಾಗೂ ತ್ಯಾಜ್ಯವನ್ನು ಈ ಕೆರೆಗೇ ತುಂಬುತ್ತಿದೆ. ಇಂತಹ ಧೋರಣೆಯನ್ನು ಸ್ಥಳೀಯ ರಾಜಕೀಯ ಮುಖಂಡರು ಪ್ರೋತ್ಸಾಹಿಸುತ್ತಿದ್ದಾರೆ. ಯುವಕರು ಧ್ವನಿ ಎತ್ತದಂತೆ ತಡೆಯಾಗಿದ್ದಾರೆ.
ಹೇರೋಹಳ್ಳಿ ಕೆರೆಗೆ ಯಥೇಚ್ಛವಾಗಿ ಒಳಚರಂಡಿ ನೀರು ಹರಿಯುತ್ತಿದೆ. ಸುತ್ತಮುತ್ತಲಿರುವ ವಸತಿ ಪ್ರದೇಶ ಹಾಗೂ ಹೊಸ ಬಡಾವಣೆಗಳ ತ್ಯಾಜ್ಯ-ಕೊಳಕು ನೀರೆಲ್ಲ ಈ ಕೆರೆಗೆ ಹರಿಯಲು ಸೂಕ್ತ ಮಾರ್ಗವನ್ನು ಕಲ್ಪಿಸಲಾಗಿದೆ. ಕೆರೆಯ ಬದಿಯಲ್ಲಿ ಮೀನು ಮಾರಾಟವೂ ನಡೆಯುತ್ತದೆ. ಇದಕ್ಕೊಂದು ಗುಡಿಸಲೂ ಇದೆ. ಆದರೆ, ಇಂತಹ ಕಲ್ಮಶ ತುಂಬಿದ ನೀರಿನಲ್ಲಿ ಎಂತಹ ಮೀನು ಸಿಗಬಹುದು ನೀವೇ ಊಹಿಸಿ. ಆದ್ದರಿಂದಲೇ ಸ್ಥಳೀಯರು ಇಲ್ಲಿ ಮೀನು ಕೊಳ್ಳುವುದಿಲ್ಲ. ಹೊರಗಿನವರನ್ನು ಆಕರ್ಷಿಸುವುದೇ ಮಾರಾಟದ ಗಿಮ್ಮಿಕ್ಕು.
ಈ ಕೆರೆಯಲ್ಲಿ ತ್ಯಾಜ್ಯ ಸೇರಿದಂತೆ ಜೊಂಡು ಆವೃತವಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಜತೆಗೆ ರಸ್ತೆಗಳಿಂದ ಗಾಡಿಗೆ ತುಂಬುವ ಕಸ ಹಾಗೂ ಕಾರ್ಖಾನೆಗಳ ಎಲ್ಲ ತ್ಯಾಜ್ಯಕ್ಕೂ ಹೇರೋಹಳ್ಳಿ ಕೆರೆಯೇ ತಾಣ. ಕೆರೆಯ ದಡದ ಮೇಲಿನ ರಸ್ತೆಯಲ್ಲಿಯೇ ಹೇರೋಹಳ್ಳಿಗೆ ತೆರಳಬೇಕು. ಅದೇ ರಸ್ತೆಯ ಬದಿಯೆಲ್ಲ ಕಸದ ತಾಣ. ಈ ಮೂಲಕ ಕೆರೆಯನ್ನು ತುಂಬುವ ಸಂಚು.
ಹೇರೋಹಳ್ಳಿ ಕೆರೆಯ ಮತ್ತೊಂದು ದುರಂತವೆಂದರೆ, ಕೆರೆಗೇ ಬೋರ್‌ವೆಲ್ ಅಳವಡಿಸಲಾಗಿದೆ. ಮೂರ್‍ನಾಲ್ಕು ಬೋರ್‌ವೆಲ್ ಕೊರೆಯಲಾಗಿದ್ದು, ಅದರಿಂದ ನೀರೆತ್ತಲು ರಸ್ತೆಯಲ್ಲೇ ಪಂಪ್‌ಸೆಟ್ ಅಳವಡಿಸಲಾಗಿದೆ. ಇದು ಎಲ್ಲರಿಗೂ ಬಹಿರಂಗವಾಗಿಯೇ ಕಾಣುವ ಅಕ್ರಮ ವ್ಯವಸ್ಥೆ ಆಗಿದ್ದರೂ, ಈ ಬಗ್ಗೆ ಚಕಾರ ಎತ್ತುವವರು ಯಾರೂ ಇಲ್ಲ. ಈ ದಂಧೆಯಲ್ಲಿ ತೊಡಗಿರುವ ವ್ಯಕ್ತಿ ರಾಜಕೀಯ ಪ್ರಭಾವವನ್ನೂ ಹೊಂದಿರುವುದರಿಂದ, ಸ್ಥಳೀಯ ಯುವಕರ ಬಾಯಿ ಮುಚ್ಚಿಸುತ್ತಿದ್ದಾರೆ. ಈ ವ್ಯಕ್ತಿ ಬರೀ ಅಕ್ರಮ ನೀರು ಸಾಗಣೆ ಅಷ್ಟೇ ಮಾಡುತ್ತಿಲ್ಲ. ಜನರ ಜೀವನದೊಂದಿಗೂ ಆಟವಾಡುತ್ತಿದ್ದಾರೆ.
ಕೆರೆಯಿಂದ ಬೋರ್‌ವೆಲ್ ಮೂಲಕ ನೀರು ಪಂಪ್ ಮಾಡಿ, ಅಲ್ಲಿಂದ ಟ್ಯಾಂಕರ್ ಮೂಲಕ ವಿದ್ಯಮಾನ್ಯನಗರ ಸೇರಿದಂತೆ ಸುತ್ತಮುತ್ತಲಿನ ಬಡಾವಣೆಯ ಮನೆಗಳಿಗೆ ಪೂರೈಸಲಾಗುತ್ತಿದೆ. ಇದು ಖಾಸಗಿ ನೀರು ಸರಬರಾಜು ಜಾಲ. ಇವರಿಗೆ ಜನರ ಸ್ವಾಸ್ಥ್ಯದ ಬಗ್ಗೆ ಪರಿವೇ ಇಲ್ಲ. ಇಂತಹ ನೀರನ್ನು ಜನರಿಗೆ ಪೂರೈಸುತ್ತಿದ್ದೇವೆಂಬ ಪಾಪಪ್ರಜ್ಞೆಯೂ ಇಲ್ಲ.
ಕೆರೆಗಳನ್ನು ಸ್ವಾರ್ಥ ಸಾನೆಗಾಗಿ ಬಳಸಿಕೊಳ್ಳುವ ಇಂತಹ ಪ್ರಭಾವಿ ವ್ಯಕ್ತಿಗಳನ್ನು ತಡೆಯಲು ಸ್ಥಳೀಯ ಜನಪ್ರತಿನಿಧಿಗಳೇ ಮುಂದಾಗಬೇಕು. ಸ್ಥಳೀಯ ಯುವಕರು ರಾಜಕೀಯ ಪ್ರೇರಿತ ಶಕ್ತಿಗಳನ್ನು ಮೆಟ್ಟಿ ನಿಲ್ಲಬೇಕಿದೆ.
ಅಲ್ಲದೆ, ಆರೋಗ್ಯ, ಕಾನೂನು, ರಕ್ಷಣೆ ಎಂಬ ಹೆಸರು ಹೊತ್ತಿರುವ ಇಲಾಖೆಗಳೂ ಕ್ರಮ ಕೈಗೊಳ್ಳಬೇಕು. ಜನರ ಆರೋಗ್ಯದೊಂದಿಗೆ ಆಟವಾಡುತ್ತಿರುವ ಇಂತಹ ವ್ಯಕ್ತಿಗಳ ಮೇಲೆ ಕ್ರಮ ಕೈಗೊಳ್ಳದ ಇಲಾಖೆಗಳ ಅಧಿಕಾರಿಗಳ ಮೇಲೆ ಮಾನವ ಹಕ್ಕು ಆಯೋಗ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಿದೆ.

ಚಿತ್ರ: ಹೇರೋಹಳ್ಳಿ ಕೆರೆಯಲ್ಲಿ ತ್ಯಾಜ್ಯ-ರಾಸಾಯನಿಕಯುಕ್ತ ನೀರು. ಇದೇ ನೀರನ್ನು ಬೋರ್‍ವೆಲ್ ಮೂಲಕ ಪಂಪ್‌ಮಾಡಲು ರಸ್ತೆಯಲ್ಲೇ ಪಂಪ್‌ಸೆಟ್ ಅಳವಡಿಸಲಾಗಿದ್ದು, ಇದನ್ನೇ ಜನರಿಗೆ ಪೂರೈಸಲಾಗುತ್ತಿದೆ.


ಶುಚಿ ನೀರು ಮಾನವನ ಹಕ್ಕು...
ಮನುಷ್ಯನಿಗೆ ಶುಚಿಯಾದ ನೀರು ಒದಗಿಸುವುದು ಕರ್ತವ್ಯ ಅಲ್ಲವೇ? ಈ ಉದ್ದೇಶದಿಂದ ಆರಂಭವಾಗುವ ನೀರು ಪೂರೈಕೆಯ ಖಾಸಗಿ ಸಂಸ್ಥೆಗಳು ಕಲ್ಮಶಯುಕ್ತ ನೀರನ್ನು ಜನರಿಗೆ ಪೂರೈಸುವುದು ಮಾನವ ಹಕ್ಕುಗಳ ಉಲ್ಲಂಘನೆ ಅಲ್ಲವೇ?
ನೈತಿಕವಾಗಿ ಖಂಡಿತವಾಗಿಯೂ ಇದು ಮಾನವನ ಹಕ್ಕು ಉಲ್ಲಂಘನೆಯೇ.
ಟ್ಯಾಂಕರ್‌ನಲ್ಲಿ ಮನೆಗೆ ಬರುವ ನೀರಿನ ಮೂಲವನ್ನು ಅದನ್ನು ಖರೀದಿಸುವ ವ್ಯಕ್ತಿ ಕೇಳುವುದಿಲ್ಲ. ಕೇಳಿದರೆ, ಅದಕ್ಕೆ ಸಮರ್ಪಕ ಉತ್ತರ ದೊರೆಯುವುದೂ ಇಲ್ಲ. ಆದರೆ, ಇದನ್ನೇ ಬಂಡವಾಳ ವಾಗಿಸಿಕೊಂಡವರು ಕೆರೆಯ ಕೊಳಕು ನೀರನ್ನು ಅಕ್ರಮವಾಗಿಯೇ ತುಂಬಿಕೊಂಡು ಜನರಿಗೆ ಪೂರೈಸುತ್ತಿದ್ದಾರೆ. ಇವರ ಬಗ್ಗೆ ಕ್ರಮ ಸಂಬಂಧಪಟ್ಟ ಆಯೋಗ ಅಥವಾ ಇಲಾಖೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ. ಮನುಷ್ಯನ ಮೇಲೆ ಮಾನಸಿಕ ಹಾಗೂ ದೈಹಿಕವಾಗಿ ಹಲ್ಲೆ ಮಾಡುವ ರೀತಿಯಲ್ಲಿಯೇ ಇದು ಸ್ವಾಸ್ಥ್ಯಕ್ಕೆ ಪೆಟ್ಟು ನೀಡುವ ಈ ದಂಧೆ ತಡೆಗಟ್ಟಲು ಕ್ರಮ ಕೈಗೊಳ್ಳದ ಅಧಿಕಾರಿಗಳ ವಿರುದ್ಧ ಮಾನವ ಹಕ್ಕು ಆಯೋಗ ಕಾರ್ಯಗತ ಆಗಬಹುದಲ್ಲವೇ?
ಹೇರೋಹಳ್ಳಿ ಕೆರೆಯ ಪರಿಸ್ಥಿತಿಯ ವಿಡಿಯೊ ಚಿತ್ರಣವನ್ನು ನಿಮ್ಮ ಮುಂದಿರಿಸಲಿದ್ದೇನೆ.

Wednesday, April 22, 2009

ಕರಗುತ್ತಿರುವ ಬೆಂಗಳೂರಿನ ಕೆರೆಗಳು-ಮರು ಪ್ರಸಾರ

ಆತ್ಮೀಯ್ ಮಿತ್ರರೇ,
‘ನಮ್ಮೂರ್ ಕೆರೆಮತ್ತು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೂರದರ್ಶನದ ಕರಗುತ್ತಿರುವ ಬೆಂಗಳೂರಿನ ಕೆರೆಗಳು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದೇನೆ. ಮಿತ್ರ ಶಿವರಾಂ ನನ್ನನ್ನು ಮಾತಿಗೆಳೆದಿದ್ದಾರೆ. ಈ ಕಾರ್ಯಕ್ರಮ ಈಗಾಗಲೇ ಪ್ರಸಾರವಾಗಿತ್ತು. ಬಹಳಷ್ಟು ಸ್ನೇಹಿತರು ನೋಡಲಾಗಲಿಲ್ಲ ಎಂದಿದ್ದರು. ಅವರಿಗೆಲ್ಲ ಒಂದು ಅವಕಾಶ ಏನೋ ಎಂಬಂತೆ ಚಂದನದಲ್ಲಿ ಮತ್ತೊಮ್ಮೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ದೂರದರ್ಶನ-1 ಮತ್ತು ಚಂದನದಲ್ಲಿ ಏಪ್ರಿಲ್ 26, 2009 ಭಾನುವಾರದಂದು, ಬೆಳಗ್ಗೆ 8-30 ಕ್ಕೆ ಮರು ಪ್ರಸಾರವಾಗಲಿದೆ.
ದಯವಿಟ್ಟು ವೀಕ್ಷಿಸಿ, ನಿಮ್ಮ ಸ್ನೇಹಿತರಿಗೂ ತಿಳಿಸಿ ಮತ್ತು ತಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿ. ಇದರಿಂದ ಮತ್ತಷ್ಟು ತಿದ್ದಿಕೊಳ್ಳಲು, ಅರಿತುಕೊಳ್ಳಲು ಸಾಧ್ಯವಾದೀತು.

Monday, April 20, 2009

ಚಂದನದಲ್ಲಿ ಕರಗುತ್ತಿರುವ ಬೆಂಗಳೂರು ಕೆರೆಗಳು


ನಮ್ಮೂರ್ ಕೆರೆ ಲೇಖನ ಮಾಲಿಕೆ ಆರಂಭವಾದ ಪ್ರಥಮ ದಿನವೇ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕ ಮಹೇಶ್ಜೋಶಿ ಅವರಿಂದ ಕರೆ ಬಂದಿತ್ತು. ‘ಬದ್ರರ್‌ ತುಂಬಾ ಚೆನ್ನಾಗಿ ಬರೆದಿದ್ದೀರ. ಕೆರೆಗಳ ಪರಿಸ್ಥಿತಿ ಏನಾಯ್ತು ನೋಡಿ’ ಎಂದು ಮರುಗಿದ್ದರು. ನಂತರದ ಕೆಲವು ದಿನಗಳು ಅವರಿಂದ ಯಾವುದೇ ಕರೆ ಬರಲಿಲ್ಲ. ಸರಣಿ ಅಂತ್ಯವಾಯಿತು ನೋಡಿ, ಆಗ ಕರೆ ಬಂದಿತ್ತು. ‘ಎಕ್ಸೆಲೆಂಟ್‌ ಬ್ರದರ್‌, ತುಂಬಾ ಚೆನ್ನಾಗಿ ಬಂತು. ನಿಮ್ಮಿಂದ ಕೆರೆಗಳೊಂದಷ್ಟು ಉದ್ಧಾರ ಆಗಲಿ’ ಎಂದಿದ್ದರು. ಕೊನೆಯಲ್ಲಿ ಫೋನ್ ಕಟ್‌ ಮಾಡುವ ಮುನ್ನ ‘ನಮ್ಮಲ್ಲಿ ನೀವ್ಯಾಕ್ಕೊಂದು ಕಾರ್ಯಕ್ರಮ ನೀಡಬಾರದು?’ ಎಂದು ಸಣ್ಣಗೆ ಹುಳ ಬಿಟ್ಟಿದ್ದರು. ‘ನೋಡೋಣ ಸರ್‌’ ಎಂದಿದ್ದೆ. ನಂತರ ಹಲವು ಬಾರಿ ಮೊಬೈಲ್‌ ಸಂಭಾಷಣೆ ಆಗಿದ್ದರೂ, ಇದರ ಬಗ್ಗೆ ಇಬ್ಬರೂ ಮಾತನಾಡಿರಲಿಲ್ಲ.
‘ಕೆರೆ ಕರಗುವ ಸಮಯ’ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಬನ್ನಿ, ಎಂದು ಒಂದು ಎಸ್‌ಎಂಎಸ್‌ ಕಳಿಸಿದೆ. ಕೂಡಲೇ ಜೋಶಿ ಕರೆ ಮಾಡಿದ್ದರು. ‘ನಾನು ಒಂದು ಕಾರ್ಯಕ್ರಮಕ್ಕೆ ಒಪ್ಪಿಕೊಂಡು ಬಿಟ್ಟಿದ್ದೇನೆ. ಅಲ್ಲಿ ಜಸ್ಟೀಸ್ ಎಲ್ಲ ಬರ್ತಾರೆ, ಮಿಸ್‌ ಮಾಡಲು ಆಗೊಲ್ಲ. ಒಳ್ಳೆದಾಲಿ’ ಎಂದು ಶುಭ ಹಾರೈಸಿದರು. ಆಯ್ತು, ಪುಸ್ತಕ ಬಿಡುಗಡೆಯೂ ಆಯ್ತು. ಎರಡು ದಿನ ಕಳೆದಿತ್ತು ಅಷ್ಟೇ, ಜೋಶಿ ಕರೆ ಮಾಡಿದ್ದರು. ‘ಬ್ರದರ್‌ ನಮ್ಮನ್ನೆಲ್ಲ ಮರೆತು ಹೋದ್ರಾ?’ ಅಂದರು. ಏಕೆ ಎಂದಾಗ, ‘ನೀವು ಪ್ರೋಗ್ರಾಂಗೆ ಬರಲಿಲ್ಲ. ಬನ್ನಿ ನಾಳೆಯೇ ಒಂದು ಕಾರ್ಯಕ್ರಮ ಮಾಡೇ ಬಿಡೋಣ’ ಎಂದರು. ‘ಸಂಪಾದಕರಾದ ವಿಶ್ವೇಶ್ವರ ಭಟ್‌ ಅವರ ಒಪ್ಪಿಗೆ ಪಡೆದು ನಿಮಗೆ ತಿಳಿಸುತ್ತೇನೆ’ ಎಂದೆ. ಎರಡು ದಿನ ಬಿಟ್ಟು ಕರೆ ಮಾಡಿ, ಏನಾಯ್ತು ಎಂದರು ಜೋಶಿ. ಸಂಪಾದಕರಿಂದ ಒಪ್ಪಿಗೆ ಪಡೆದಿದ್ದ ನಾನು ಓಕೆ ಎಂದೆ. ಉಳಿದದ್ದು ನನಗೆ ಬಿಡಿ ಎಂದರು ಜೋಶಿ. ಅದಷ್ಟೇ, ಎಲ್ಲವನ್ನೂ ನಿರ್ವಹಿಸಿದ್ದರೂ ಶ್ರೀಯುತ ಮಹೇಶ್‌ ಜೋಶಿ.
ದೂರದರ್ಶನ ಚಂದನಲ್ಲಿ ನಿರೂಪಕರಾಗಿರುವ ಶಿವರಾಂ ಕರೆ ಮಾಡಿದರು. ಸರ್‌, ಕೆರೆಗಳ ಬಗ್ಗೆ ಕಾರ್ಯಕ್ರಮ. ನಾಳೆಯೇ ಬನ್ನಿ, ಚರ್ಚಿಸಿ ಕಾರ್ಯಕ್ರಮ ಮಾಡೋಣ ಎಂದರು. ನಾಳೆ ಆಗೊಲ್ಲ, ಮತ್ತೊಮ್ಮೆ ಬರುತ್ತೇನೆ ಎಂದೆ. ಆಮೇಲೆ ಏಪ್ರಿಲ್‌ 8ರಂದು ದೂರದರ್ಶನ ಕೇಂದ್ರಕ್ಕೆ ಹೋದೆ. ಅಲ್ಲಿ ಸಹಾಯಕ ಕೇಂದ್ರ ನಿರ್ದೇಶಕ ಬಿ.ಎನ್. ಚಂದ್ರಕುಮಾರ್‌‌ ಅವರೊಂದಿಗೆ ಮಾತನಾಡಿದೆ. ಅತ್ಯಂತ ಅನುಭವದ ಚಂದ್ರಶೇಖರ್‌, ದೂರದರ್ಶನದ ನೂರಾರು ಕಾರ್ಯಕ್ರಮಗಳಿಗೆ ಕಾರಣರಾಗಿದ್ದಾರೆ. ಅವರಲ್ಲಿದ್ದ ಕೆರೆಗಳ ಬಗ್ಗೆಗಿನ ಮಾಹಿತಿಗೆ ನಾನು ಮಾರುಹೋದೆ. ಅವರೊಂದಿಗೆ ಈ ಬಗ್ಗೆ ಮಾತನಾಡುತ್ತಿದ್ದಾಗ ಸಮಯ ಹೋಗಿದ ಅರಿವೇ ಆಗಲಿಲ್ಲ. ಅವರು ಅವರೇ ನೋಡಿದ ಕೆರೆ ಹಾಗೂ ಐದೇ ಅಡಿಯಲ್ಲಿ ನೀರು ಸಿಗುವ ಬಾವಿ ಬಗ್ಗೆ ವಿವರ ನೀಡಿದರು. ಅವರು ಮಿತುಭಾಷಿ ಎಂಬುದು ಅರಿವಿಗೆ ಬಂತು. ಅದೇ ಸ್ವಭಾವದ ನಾನೂ ಅವರು ಸಾಕಷ್ಟು ಮಾತನಾಡಿದೆವು. ಆದರೆ, ದಿನ ಅವರೊಂದಿಗೆ ಮಾತನಾಡಬೇಕೆಂಬ ಹಾಗೂ ಅವರಲ್ಲಿರುವ ಮಾಹಿತಿ ಕಣಜದಲ್ಲಿ ಕೊಂಚ ಭಾಗವನ್ನಾದರೂ ಅರಿಯಬೇಕೆಂಬ ಆಸೆ ಇದೆ. ಇದು ಸಾಧ್ಯಾನಾ? ಗೊತ್ತಿಲ್ಲ. ಏಕೆಂದರೆ, ಚಂದ್ರಕುಮಾರ್‌ ಅವರನ್ನು ನಾನು ಈ ಬಗ್ಗೆ ಕೇಳಿಯೇ ಇಲ್ಲ!
ಕಾರ್ಯಕ್ರಮದ ಬಗ್ಗೆ ಚರ್ಚೆ ಆದ ಮೇಲೆ, ಏಪ್ರಿಲ್ 9ರಂದು ರೆಕಾರ್ಡಿಂಗ್‌ ಎಂದು ಚಂದ್ರಕುಮಾರ್‌ ಹೇಳಿದರು. ಅವರೊಂದಿಗೆ ಕಾಫಿ ಕುಡಿದು, ಥ್ಯಾಂಕ್ಸ್ ಹೇಳಿ ಗೆಳೆಯ ಶಿವರಾಂನೊಂದಿಗೆ ಹೊರಬಿದ್ದೆ. ನಾಳೆ ಬೆಳಗ್ಗೆ 9.3೦ ಬಂದುಬಿಡಿ ಎಂದ ಶಿವರಾಂನೊಂದಿಗೆ ಕೆಲ ಸಮಯ ಮಾತನಾಡಿ, ಕೇಂದ್ರದ ಗೇಟ್‌ ಹೊರಗೆ ಕಾರು ಡ್ರೈವ್‌ ಮಾಡಿ ಹೊರಬಿದ್ದೆ. ಆದರೆ, ರೆಕಾರ್ಡಿಂಗ್‌ ಮನಸ್ಸು, ತಲೆ ಎರಡನ್ನೂ ಆವರಿಸಿಕೊಂಡಿತ್ತು. ಅದರ ಬಗ್ಗೆಯೇ ಚಿಂತೆ. ಏಕೆಂದರೆ, ಪ್ರಥಮ ಬಾರಿಗೆ ಕ್ಯಾಮೆರಾ ಎದುರಿಸುತ್ತಿದ್ದೆ. ಆತಂಕಕ್ಕಿಂತ ಕಾತುರ ತುಂಬಿಹೋಗಿತ್ತು.
ರೆರ್ಕಾಡಿಂಗ್‌, ಶಾಲಾ ದಿನದ ನಂತರ ಮುಖಕ್ಕೊಂದು ಮೇಕಪ್‌, ಕೇಂದ್ರ ಸಹೃದಯರೊಂದಿಗಿನ ಮಾತುಕತೆ ಬಗ್ಗೆ ಮತ್ತೊಮ್ಮೆ ಬರೆಯುತ್ತೇನೆ. ಕ್ಯಾಮೆರಾ ಹಿಂದೆ ಕೇಂದ್ರದ ಹಲವು ಚಟುವಟಿಕೆಗಳಿಗೆ ಕಾರಣರಾದ ಹಿರಿಯರಾದ ಚಂದ್ರಶೇಖರ್‌ ಅವರನ್ನು ಚಿತ್ರದ ಮೂಲಕ ನಿಮಗೆ ಪರಿಚಯಿಸುವ ಪ್ರಯತ್ನವನ್ನೂ ಮಾಡುತ್ತೇನೆ.

Saturday, April 11, 2009

ಕೆರೆ ಕರಗುವ ಸಮಯ ಬಿಡುಗಡೆ-2

ಕೆರೆ ಕರಗುವ ಸಮಯ ಪುಸ್ತಕ ಬಿಡುಗಡೆ ಸಮಾರಂಭವನ್ನು ನಿಮ್ಮೊಂದಿಗೆ ಈಗಾಗಲೇ ಹಂಚಿಕೊಂಡಿದ್ದೇನೆ. ಇದಕ್ಕೊಂದು ಕಾಮೆಂಟ್ಬರೆದಿರುವ ಸ್ನೇಹಿತ ಮಹೇಶ್‌ ಯಲಗೋಡಮನೆ, ಸಮಾರಂಭದಲ್ಲಿ ಸವಿದ ಕೇಸರಿಬಾತ್ ಹಾಗೂ ಇಡ್ಲಿ ವಡೆ ಬಗ್ಗೆ ಹೇಳಿದ್ದಾನೆ. ಅವನಿಗೊಂದು ಥ್ಯಾಂಕ್ಸ್ಹೇಳುತ್ತಾ, ನಾನು ಹಿಂದೆ ನಿಮಗೆ ತಿಳಿಸಿದಂತೆ, ಸಮಾರಂಭದಲ್ಲಿ ನನ್ನ ಸ್ನೇಹಿತರು, ಆತ್ಮೀಯರನ್ನು ನಾನು ಕಂಡ ರೀತಿಯನ್ನು ವಿವರಿಸುತ್ತೇನೆ.
ಬೆಳಗ್ಗೆ 9.15ಕ್ಕೆ ಮಿಥಿಕ್‌ ಸೊಸೈಟಿಗೆ ಸತಿಸಹಿತ ಬಂದಿಳಿದೆ. ಬೈರೇಗೌಡ, ಗಣೇಶ ಕಂಡರು. ಮತ್ತಷ್ಟು ತಯಾರಿ ಕೆಲಸ ಆಗುತ್ತಿತ್ತು. ಛಾಯಾಚಿತ್ರ ಪ್ರದರ್ಶನ ತಯಾರಿ ನಡೆಯುತ್ತಿತ್ತು. ಕಾರಿನಲ್ಲಿ ಕುಳಿದ್ದಾಗಲೇ ಮಹೇಶ ಬಂದಿಳಿದ. ಪತ್ನಿ ಎಲ್ಲೋ ಎಂದರೆ, ಬೇಗ ಹೊರಟೆ ಕರೆ ತರಲಿಲ್ಲ ಎಂದ. ಅವನು ಮನಸ್ಸು ಮಾಡಿದ್ದರೆ ಕರೆ ತರಬಹುದಾಗಿತ್ತು, ಆದರೆ, ಬೇಡ ಅಂದುಕೊಂಡನೋ ಏನೋ? ಗೊತ್ತಿಲ್ಲ. ಅವನೊಂದಿಗೆ ಒಂದು ಮಾತನಾಡಿ, ವಿಡಿಯೊ ಕ್ಯಾಮೆರಾದಲ್ಲಿ ಸಮಾರಂಭ ಸೆರೆ ಹಿಡಿಯುವ ಕಾರ್ಯವನ್ನು ಒಪ್ಪಿಸಿದೆ.
ಇಷ್ಟಾದ ಮೇಲೆ, ಉಪಹಾರ ನೀಡುವ ತಂಡ ತನ್ನ ಕಾರ್ಯ ಆರಂಭಿಸಿತ್ತು. ಅಲ್ಲಿಯೇ ಇಡ್ಲಿ-ವಡೆಯ ತಯಾರಿಯೂ ನಡೆದಿತ್ತು. ಪ್ರವೇಶ ದ್ವಾರ ಬಳಿ ತಿಂಡಿ ಏರ್ಪಾಟು ಬೇಡ ಎಂದು, ಪಕ್ಕದಲ್ಲಿ ಅದರ ವ್ಯವಸ್ಥೆ ಮಾಡಿಸಲಾಯಿತು. ಇಷ್ಟೆಲ್ಲ ಆಗುವಷ್ಟರಿಗೆ ಒಬ್ಬೊಬ್ಬರು ಬರಲಾರಂಭಿಸಿದರು. ಪ್ರಥಮವಾಗಿ ಬಂದವ ಸ್ನೇಹಿತ ಕೆ.ಎಸ್‌. ಶ್ರೀಧರ್‌. ಅವನೇ ಅಂದಿನ ದಿನ ಛಾಯಾಗ್ರಾಹಕ. ನಾವು ಹೀಗೆ ಮಾತನಾಡುತ್ತಿರುವಾಗಲೇ ಪರಿಸರ ಚಟುವಟಿಕೆಗಳಲ್ಲಿ ನಿರವಾಗಿರುವ ಶಿವಮಲ್ಲು ಬಂದರು. ಕಚೇರಿಯ ಸ್ನೇಹಿತರಾದ ಪ್ರೇಮ್‌ಕುಮರ್‍‌ ಆಗಮಿಸಿದರು.
ಬೈರಸಂದ್ರ ಕೆರೆಯನ್ನು ಉಳಿಸಲು ಹೋರಾಡುತ್ತಿರುವ ವೆಂಕಟಸುಬ್ಬರಾವ್‌ ಆಗಮಿಸಿದಾಗ ಸಂತಸವಾಯಿತು. ಒಂದು ಕರೆ ಮಾಡಿ ಹೇಳಿದ್ದೆ ಅಷ್ಟೇ. ಇಂತಹ ಕಾರ್ಯಕ್ರಮಕ್ಕೆ ಬರಲಾಗದೆ ಇರುವುದಕ್ಕೆ ಸಾಧ್ಯವೇ? ಎಂದು ಬಂದಿದ್ದರು. ಈ ಸಮಯಕ್ಕೇ ಮುಖ್ಯ ಅತಿಥಿಗಳಾದ ಡಾ. ಅ.ನ. ಯಲ್ಲಪ್ಪರೆಡ್ಡಿ ಬಂದರು. ಅವರನ್ನು ಎಲ್ಲರೂ ಬರಮಾಡಿಕೊಂಡು, ಸಭಾಂಗಣದಲ್ಲಿ ಕೂರಿಸಿ, ಅವರೊಂದಿಗೆ ಒಂದಷ್ಟು ಮಾತನಾಡಿದೆವು.
ಹೊರಗೆ ತಿಂಡಿ ವ್ಯವಸ್ಥೆ ಆಗಿತ್ತು. ಯಲ್ಲಪ್ಪರೆಡ್ಡಿ ಅವರನ್ನು ಕರೆತಂದು, ತಿಂಡಿ ಕೊಡಿಸಿ ಇತ್ತ ಸರಿದಾಗ, ಅಲ್ಲಿದ್ದರು ಡಾ. ನಾ. ಸೋಮೇಶ್ವರ. ಅವರಿಗೊಂದು ಎಸ್‌ಎಂಎಸ್‌ ಕಳುಹಿಸಿದ್ದೆ. ನನ್ನ ಆಮಂತ್ರಣಕ್ಕೆ ಓಗೊಟ್ಟು ಬಂದಿದ್ದ ಅವರನ್ನು ನೋಡಿ ಅತೀವ ಆನಂದವಾಯಿತು. ಅವರು ತಮ್ಮ ಮೇಷ್ಟ್ರು ಅವರನ್ನು ಪರಿಚಯ ಮಾಡಿಕೊಟ್ಟರು. ಈ ಸಮಾರಂಭದಿಂದ ಇವರನ್ನು ಭೇಟಿ ಮಾಡಿದಂತಾಯಿತು ಎಂದು ಸಂತಸಪಟ್ಟರು.
ಎಫ್‌ಕೆಸಿಸಿಐ ವಿಜಯ್‌ ಸತಿಸಹಿತ ಬಂದರು. ಸುಗಮಗೀತೆ ಗಾಯಕ ಮೃತ್ಯುಂಜಯ ದೊಡ್ಡವಾಡ, ಜಮಾದಾರ್‍, ರಾಮಲಿಂಗ ಶೆಟ್ರು ಬಂದ್ರು. ಮಂಜುನಾಥ ಹಿರೇಮಠ, ಸಾಧು ಶ್ರೀನಾಥ್‌, ಪುಣ್ಯವತಿ, ಪ್ರಕಾಶ್ ಬಾಬು, ಶಶಿಧರ್‌ ನಂದಿಕಲ್‌, ಮುನೇಗೌಡ, ಸುರೇಶ್ ಬಂದರು. ನನ್ನ ಮಾವಂದಿರಾದ ಆರ್‌. ಪಾಲಾಕ್ಷ, ಆರ್‍.ಎಚ್. ರಾಜು, ಸೋದರ ಜಗದೀಶ ಬಂದರು.
ಆನೆ ಆಕ್ಟೀವಾದ ಮೇಲೆ ಬಂದಾಗ...
ತಿಂಡಿ ತಿಂದೇ ಬಿಡೋಣ ಎಂದು ಎರಡು ಇಡ್ಲಿಯನ್ನು ತಟ್ಟೆಗಿರಿಸಿಕೊಂಡು ನಿಂತಾಗ, ಕಾಣಿಸಿಕೊಂಡಿತು ಆಕ್ಟೀವಾದ ಮೇಲೆ ಆನೆ. ಹೌದು, ಅವನು ನನ್ನ ಸ್ನೇಹಿತ ಡುಮ್ಮ-ಎಂ.ಎಸ್‌. ಆನಂದ್. ಆಕ್ಟೀವಾ ಮೇಲೇರಿ ಅದನ್ನು ಓಡಿಸಿಕೊಂಡು ಬಂದಿದ್ದ. ಹಿಂದೆ ವೇಣುಗೋಪಾಲ್‌, ಮತ್ತೊಂದರಲ್ಲಿ ಆಪ್ತಸ್ನೇಹಿತ ಕೆ.ಎಸ್‌. ಜಗನ್ನಾಥ್. ಆನಂದನನ್ನು ನಾವು ಆನೆ ಎಂದೇ ಕರೆಯೋದು. ಆತನ ಗಾತ್ರ ಮತ್ತು ಆ ಮುಗ್ಧತೆಗೆ ಆನೆ ಸೂಕ್ತ ಹೋಲಿಕೆ.
ಇವರ ಹಿಂದೆಯೇ ದಿಂಡಲಕೊಪ್ಪ, ವಿಜಯ್‌ ಲೊಂಡೆ, ಬಾಷಾ ಗೂಳ್ಯಂ ಬಂದರು. ರಾಧಾಕೃಷ್ಣ ಭಡ್ತಿ, ಚಂದ್ರಕಲಾ ಬೈಕ್‌ನಿಂದ ಇಳಿದರು. ನಮ್ಮ ರಿಸೆಪ್ಷನಿಸ್ಟ್‌ ದೀಪಾ ಆಗಮಿಸಿದಾಗ, ಮಹೇಶ ಸಣ್ಣಗೆ ಉಸುರಿದ್ದ: ನಮ್ಮ ಪ್ರವೇಶದ್ವಾರದ ಆಕರ್ಷಣೆ ಎಂದು. ಈ ನಡುವೆ ಜೀವದ ಗೆಳೆಯ ಪ್ರತಾಪ್‌ ಸಿಂಹ, ಕರೆ ಮಾಡಿದ್ದ. ಊರಿನಲ್ಲಿ ತುರ್ತು ಕಾರ್ಯದ ನಿಮಿತ್ತ ಹೋಗಿದ್ದ ಅವನಿಗೆ, ಸಮಾರಂಭದ ಬಗ್ಗೆ ಸಾಕಷ್ಟು ಕಾಳಜಿ ಇತ್ತು. ಅದಕ್ಕೇ ಹೇಗೆ ತಯಾರಿ ಆಗುತ್ತಿದೆಯೋ? ಸರಿಯಾಗಿ ನೋಡಿಕೊ. ಏನಾದರೂ ಆಗಬೇಕಾ? ಎಂದೆಲ್ಲಾ ಕರೆ ಮಾಡಿ ವಿಚಾರಿಸಿಕೊಂಡ.
ಇಷ್ಟೆಲ್ಲ ಆಗುವ ವೇಳೆಗೆ ಪಿ. ತ್ಯಾಗರಾಜ್‌ ಪತ್ನಿ ಸಮೇತ ಆಗಮಿಸಿದರು. ಅವರೊಂದಿಗೆ ಬೆರೆತು, ನನ್ನ ಪತ್ನಿಯನ್ನು ಅವರಿಗೆ ಪರಿಚಯಿಸಿ ತಿಂಡಿಗೆ ಆಹ್ವಾನಿಸಿದೆ. ಅಷ್ಟರಲ್ಲಿ ನನ್ನ ಸ್ನೇಹಿತರಾದ ಎಲ್.ಸಿ. ನಾಗರಾಜ್‌, ಶಿವರಾಂ ಆಗಮಿಸಿದ್ದರು. ಅವರೊಂದಿಗಿಷ್ಟು ಚರ್ಚೆ ಮಾಡುತ್ತಿದ್ದಾಗಲೇ, ಸುರೇಶ್‌ ಹೆಬ್ಳೀಕರ್‌ ಕರೆ ಮಾಡಿದರು. ನಾನು ಧಾರವಾಡದಿಂದ ಬರುತ್ತಿದ್ದೇನೆ. ಕಳೆದ ರಾತ್ರಿ ಹೊರಡಲು ಸಾಧ್ಯವಾಗಲಿಲ್ಲ. ಮುಂಜಾನೆಯೇ ಹೊರಟಿದ್ದೇನೆ. ನಿಮ್ಮ ಕಾರ್ಯಕ್ರಮದ ವೇಳೆಗೆ ಬರಲು ಸಾಧ್ಯ ಆಗುತ್ತಿಲ್ಲ ಎಂದು ಪರಿತಪಿಸಿದರು. ಏಕೆಂದರೆ, ಈ ಸಮಾರಂಭಕ್ಕೆ ಶೇ.99.9 ರಷ್ಟು ಬರುತ್ತೇನೆ ಎಂದು ಹೇಳಿದ್ದರು. ಆದರೆ ೦.01 ಯಶಸಾಧಿಸಿತ್ತು.
ಇದಾದ ಮೇಲೆ ಸಹೋದ್ಯೋಗಿ ಸಂಗಮೇಶ ಬಂದರು. ಅವರೊಂದಿಗೆ ಸ್ನೇಹಿತರನ್ನು ಕರೆತಂದು ಇವರು ನಿಮ್ಮ ಕೆರೆ ಲೇಖನದ ಅಭಿಮಾನಿ ಎಂದರು. ಖುಷಿ ಆಯಿತು. ಇಂತಹ ಓದುಗರಿಂದಲೇ ಇದು ಸಾಧ್ಯವಾದದ್ದಲ್ಲೇ ಎಂದು ನಾನೇ ಪ್ರಶ್ನಿಸಿಕೊಂಡೆ.
ಇದಾದ ಮೇಲೆ ಸಹೋದ್ಯೋಗಿ-ಸ್ನೇಹಿತರು ತಿಂಡಿ ತಿನ್ನುವಾಗ ಒಂದಿಷ್ಟು ಹರಟೆ ಹೊಡೆದೆವು. ಅಲ್ಲಿಷ್ಟು ಓಡಾಟ, ಇವರೊಂದಿಗೊಷ್ಟು ಮಾತು ಆಗುತ್ತಿರುವಂತೆಯೇ, ಸಮಯ ಬಂತೇಬಿಟ್ಟಿತು. ವಿಧಾನಪರಿಷತ್‌ ಸದಸ್ಯೆ ಎಸ್‌.ಆರ್‌. ಲೀಲಾ ಬಂದರು. ಆತ್ಮೀಯವಾಗಿ ಅವರನ್ನು ಸ್ವಾಗತಿಸಿದೆ. 10.20 ಅಷ್ಟೇ. ಆ ವೇಳೆಗೇ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದರು. ಇನ್ನೇನು ಸಮಾರಂಭ ಆರಂಭಿಸುವ ತವಕ...ಹೆಚ್ಚಾಯಿತು. ಹಿಂದೆಯೇ ನನ್ನ ಮಾರ್ಗದರ್ಶಕರಾದ ವಿಶ್ವೇಶ್ವರ ಭಟ್‌ ಬಂದರು. ಇನ್ನೇನು ಕಾರ್ಯಕ್ರಮ ಶುರು. ಈ ಓಡಾಟದಲ್ಲಿ ಎಲ್ಲರನ್ನೂ ಗಮನಿಸಲು ಸಾಧ್ಯವಾಗಲೇ ಇಲ್ಲ. ಅವರಿಗೆಲ್ಲ ಒಂದೊಂದು ಕ್ಷಮೆಯಾಚನೆ. ನನ್ನನ್ನು ತಪ್ಪು ತಿಳಿದುಕೊಳ್ಳಬಾರದೆಂದು ಮನವಿ ಮಾಡಿಕೊಡುತ್ತೇನೆ. ಏಕೆಂದರೆ ಬಹುತೇಕರು ಬರುವವಷ್ಟರಲ್ಲಿ ನಾನು ವೇದಿಕೆ ಏರಬೇಕಾಗಿತ್ತು.
ಆದರೆ ಸಮಾರಂಭ ಮುಗಿಯಿತಲ್ಲ, ಇದ್ದವರನ್ನೆಲ್ಲ ಮಾತನಾಡಿಸಿದೆ. ನನ್ನ ಸಂತೋಷಕ್ಕೆ ಅಂದು ಕೊನೆಯೇ ಇರಲಿಲ್ಲ. ಸಮಾರಂಭದ ನಂತರದ ವಿಷಯವನ್ನು ಆನಂತರ ಬರೆಯುತ್ತೇನೆ...

Thursday, April 9, 2009

ಕರಗುತ್ತಿರುವ ಬೆಂಗಳೂರಿನ ಕೆರೆಗಳು

ಆತ್ಮೀಯ ಮಿತ್ರರೇ,
ಬೆಂಗಳೂರು ಕೆರೆಗಳ ಸ್ಥಿತಿಯನ್ನು ನೀವುನಮ್ಮೂರ್ ಕೆರೆಸರಣಿಯಲ್ಲಿ ಓದಿದ್ದೀರಿ. ಬಗೆಗಿನ ಅನುಭವ ಮತ್ತು ಕೆರೆಗಳ ಬಗ್ಗೆ ಮತ್ತಷ್ಟು ಮಾಹಿತಿಯನ್ನು ದೂರದರ್ಶನದ ಕರಗುತ್ತಿರುವ ಬೆಂಗಳೂರಿನ ಕೆರೆಗಳು ಕಾರ್ಯಕ್ರಮದಲ್ಲಿ ಹಂಚಿಕೊಂಡಿದ್ದೇನೆ. ಮಿತ್ರ ಶಿವರಾಂ ನನ್ನನ್ನು ಮಾತಿಗೆಳೆದಿದ್ದಾರೆ. ಕಾರ್ಯಕ್ರಮ ದೂರದರ್ಶನ-1 ಮತ್ತು ಚಂದನದಲ್ಲಿ ಏಪ್ರಿಲ್ 13, 2009 ಸೋಮವಾರದಂದು, ಬೆಳಗ್ಗೆ 8-30 ಕ್ಕೆ ಪ್ರಸಾರವಾಗಲಿದೆ.
ದಯವಿಟ್ಟು ವೀಕ್ಷಿಸಿ, ಮತ್ತು ತಮ್ಮ ಅಮೂಲ್ಯ ಪ್ರತಿಕ್ರಿಯೆಯನ್ನು ನೀಡಿ.

Thursday, April 2, 2009

ಕೆರೆ ಕರಗುವ ಸಮಯ ಬಿಡುಗಡೆ...

ಅಂದು ವಿಶ್ವ ಜಲ ದಿನ. ಅಂದೇ ಕೆರೆ ಕರಗುವ ಸಮಯ ಪುಸ್ತಕ ಬಿಡುಗಡೆ ಮಾಡಬೇಕೆಂಬ ಆಸೆ ಇತ್ತು. ಇದಕ್ಕಾಗಿ ಅಲೆದಾಟ ಸಾಕಷ್ಟಿತ್ತು. ಪುಸ್ತಕ ಮಾರ್ಚ್ 10ಕ್ಕೆ ಸಿದ್ಧವಾಗುತ್ತದೆ ಎಂದು ಪ್ರಕಾಶಕ ಬೈರೇಗೌಡರು ಹೇಳಿದರು. ಆದರೆ, ಯಾವ ಸಭಾಂಗಣದಲ್ಲಿ ಸಮಾರಂಭ ಮಾಡೋದು ಎಂಬುದೇ ಸಮಸ್ಯೆಯಾಗಿತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ವರ್ಲ್ಡ್ಕಲ್ಚರ್‌, ಗಾಯನ ಸಮಾಜ, ನಯನ, ರವೀಂದ್ರ ಕಲಾಕ್ಷೇತ್ರ ಹೀಗೆ ಹಲವು ಹಾಲ್ಗಳನ್ನು ಕೇಳಿದೆವು. ಎಲ್ಲೂ ಅಂದು ಖಾಲಿ ಇರಲಿಲ್ಲ. ಕೊನೆಗೆ ಭಾರತೀಯ ವಿದ್ಯಾಭವನ ವಿಚಾರಿಸಿದೆವು. ದುಬಾರಿ ಆದರೂ ಸರಿ ಅಂದೇ ಪುಸ್ತಕ ಬಿಡುಗಡೆ ಮಾಡಿಬಿಡೋಣ ಎಂದು ತೀರ್ಮಾನಿಸಿದೆವು. ಕೊನೆಯ ಗಳಿಗೆಯಲ್ಲಿ ಜೀವದ ಗೆಳಯ ಪ್ರತಾಪ ಸಿಂಹ ನೆರವಿಗೆ ಬಂದ. ಆತನಿಗೆ ಸಂಪರ್ಕವಿರುವವರನ್ನು ಕೇಳಿ, ಮಿಥಿಕ್ಸೊಸೈಟಿಯನ್ನು ಅಂದು ನೀಡಲು ಮನವಿ ಮಾಡಿಕೊಂಡ. ಪ್ರಯತ್ನ ಫಲ ನೀಡಿತು. ಮಾರ್ಚ್14ರಂದು ಅದನ್ನು ಬುಕ್ಮಾಡಲಾಯಿತು. ಮಾರ್ಚ್‌ 22 ಪುಸ್ತಕ ಬಿಡುಗಡೆ ವೇದಿಕೆ ಸಿದ್ಧವಾಯಿತು.
ಅರ್ಕಾವತಿ ಪಯಣವನ್ನು ಛಾಯಾಗ್ರಾಹಕ, ಆಪ್ತಮಿತ್ರ ಕೆ.ಎಸ್‌. ಶ್ರೀಧರನೊಂದಿಗೇ ಆರಂಭಿಸಿ ಆಗಲೇ ಒಂದು ತಿಂಗಳಾಗಿತ್ತು. ವಾರಾಂತ್ಯವೂ ಹೋಗಿ ಬಂದು ನಂತರ ಆಮಂತ್ರಣ ಪತ್ರಿಕೆ ನೀಡೋಣ ಎಂದು ಶ್ರೀಧರ ನಾನು ತೀರ್ಮಾನಿಸಿದೆವು. ಸೋಮವಾರದಿಂದ ಆಹ್ವಾನದ ವೇಳಾಪಟ್ಟಿ ಶುರುವಾಯಿತು. ಖುದ್ದಾಗಿ ಆಹ್ವಾನ ಪತ್ರಿಕೆ ಕೊಟ್ಟಿದ್ದು ಕಡಿಮೆ ಜನಕ್ಕಾದರೂ, ಎಸ್ಎಂಎಸ್, ಇಮೇಲ್ ಮೂಲಕ ಆತ್ಮೀಯರನ್ನು ಆಹ್ವಾನಿಸಿದ ಸಂಖ್ಯೆ ದೊಡ್ಡದಾಗಿತ್ತು. ಅಲೆದಾಟದಲ್ಲೇ ಶನಿವಾರ ಬಂತು. ಆದರೆ, ಗುರುವಾರದಿಂದ ನಮ್ಮ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರನ್ನು ಕಂಡಿರಲಿಲ್ಲ. ಆಗ ಗೊತ್ತಾಯಿತು, ಅವರು ಊರಲಿಲ್ಲ ಎಂದು. ಮೊಬೈಲ್ಗೆ ಸಂಪರ್ಕಿಸಿದರೆ ರೀಚ್ ಆಗಲಿಲ್ಲ. ತಳಮಳ ಆರಂಭ. ಕುಳಿತಲ್ಲಿ ಕೂರಲಾಗಲಿಲ್ಲ. ನಮ್ಮ ಮುಖ್ಯ ವರದಿಗಾರ ಪಿ. ತ್ಯಾಗರಾಜ್ ನನ್ನ ಪೀಕಲಾಟ ನೋಡಲಾಗದೆ, ಸಂಪಾದಕರು ಕರೆ ಮಾಡಿದ್ದಾಗ ಹೇಳಿಯೇ ಬಿಟ್ಟಿದ್ದರು. ನಾನು ರಾತ್ರಿ 10 ಗಂಟೆಗೆ ಕರೆ ಮಾಡಿದೆ. ಆಗ ‘ಬರುತ್ತಿದ್ದೇನೆ ಮಂಜುಎಂದರು. ಮನಸ್ಸು ಹಗುರವಾಯಿತು. ಬೆಳಗ್ಗೆ 8 ಗಂಟೆಗೆ ಮತ್ತೆ ಫೋನ್ ಮಾಡಿದಾಗ, ರಾತ್ರಿ 2.30ಕ್ಕೆ ಬಂದೆ. 10.30ಕ್ಕೆ ಮಿಥಿಕ್ ಸೊಸೈಟಿಯಲ್ಲಿರುತ್ತೇನೆ ಎಂದರು.
ಮಾರ್ಚ್ 22ರಂದು ಬೆಳಗ್ಗೆ 6ಕ್ಕೇ ಎದ್ದೆ. ರಾತ್ರಿ ಇಡೀ ನಿದ್ದೆ ಕಣ್ಣತ್ತಿರಲಿಲ್ಲ. ಎಲ್ಲವೂ ಸಮಾರಂಭದ ಮೇಲೇ ಕಣ್ಣು. ಬೆಳಗ್ಗೆ 9 ಗಂಟೆಗೇ ಮಿಥಿಕ್ ಸೊಸೈಟಿಗೆ ಪತ್ನಿ ಸೌಭಾಗ್ಯಳೊಂದಿಗೆ ಹಾಜರಾದೆ. ಕೆ.ಎಸ್‌. ಗಣೇಶ, ಬೈರೇಗೌಡರೊಂದಿಗೆ ಚರ್ಚಿಸಿದೆ. 10 ಗಂಟೆ ಆಗುತ್ತಿದ್ದಂತೆಯೇ ಸ್ನೇಹಿತರು ಬರಲಾರಂಭಿಸಿದರು. ಅದಕ್ಕೆ ಮುನ್ನವೇ ಮಹೇಶ್ ಹೆಗಡೆ ಬಂದಿದ್ದ. ಸಮಾರಂಭಕ್ಕೆ ಜನ ಬರುತ್ತಾರೋ ಇಲ್ಲವೋ ಎಂಬ ಆತಂಕ ಮೈತುಂಬಿಕೊಂಡಿತ್ತು. ಪರಿಸರವಾದಿ ಡಾ. .. ಯಲ್ಲಪ್ಪರೆಡ್ಡಿ 10ಗಂಟೆಗೇ ಹಾಜರಾದರು. 10.20ಕ್ಕೆ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಬಂದರು. ಇದಕ್ಕೂ ಮುನ್ನ ವಿಧಾನಪರಿಷತ್ ಸದಸ್ಯರಾದ ಡಾ. ಎಸ್.ಆರ್. ಲೀಲಾ ಹಾಜರಾದರು. 10.40ಕ್ಕೆ ಸಚಿವ ಆರ್. ಅಶೋಕ್ ಸಹ ಬಂದು ಸೇರಿಕೊಂಡರು.ಸಾಮಾನ್ಯವಾಗಿ ಸಚಿವರು ಸಮಾರಂಭದಲ್ಲಿರುತ್ತಾರೆಂದರೆ ಕಾರ್ಯಕ್ರಮ ಅರ್ಧ-ಮುಕ್ಕಾಲು ಗಂಟೆ ತಡವಾಗೋದು ಸಹಜ. ಆದರೆ ಇಲ್ಲಿ ಹಾಗಾಗಲಿಲ್ಲ. ವಿಶ್ವೇಶ್ವರ ಭಟ್ ಅವರೂ 10.30ಕ್ಕೇ ಬಂದಿದ್ದರಿಂದ ಸಮಾರಂಭ ನಿಗದಿತ ಸಮಯಕ್ಕಿಂತ 15 ನಿಮಿಷ ತಡವಾಗಿ ಆರಂಭವಾಯಿತು. ಆರಂಭದಲ್ಲಿ ಮಿಥಿಕ್ ಸೊಸೈಟಿ ಅರ್ಧ ಮಾತ್ರ ತುಂಬಿತ್ತು. ಆಮೇಲೆ, ಪ್ರಾರ್ಥನೆ ನಂತರ ನೋಡಿದಾಗ ಹಾಲ್ನಲ್ಲಿ ಹಾಕಿದ್ದ ಸುಮಾರು 180 ಕುರ್ಚಿಗಳು ತುಂಬಿಹೋದವು. ಸಂತಸಕ್ಕೋ ಏನೋ ಮಾತೇ ಹೊರಡಲಿಲ್ಲ. ವೇದಿಕೆ ಏರಿದ್ದು ಮೊದಲಲ್ಲವಾದರೂ, ಪ್ರಥಮ ಪುಸ್ತಕ ಬಿಡುಗಡೆ ಹಾಗೂ ನನ್ನದೇ ಕಾರ್ಯಕ್ರಮಕ್ಕಾಗಿ ವೇದಿಕೆಯಲ್ಲಿದ್ದು ಇದೇ ಪ್ರಥಮ .
ಆತ್ಮೀಯ ಸ್ನೇಹಿತರನ್ನು ಕಂಡು ಮನಸ್ಸು ತುಂಬಿ ಬಂದಿತ್ತು. ಮಾತು ಹೊರಡಲಿಲ್ಲ. ಎಲ್ಲರಿಗೂ ಧನ್ಯವಾದ ತಿಳಿಸಿ ಮಾತು ಮುಗಿಸಿದೆ. ಅಂದು ಆತ್ಮೀಯ ಸ್ನೇಹಿತರು ನನ್ನೊಂದಿಗಿದ್ದು ನನಗೆ ಹಿಂದೆಂದೂ ಇಲ್ಲದಷ್ಟು ಸಂತೋಷ ತಂದಿತ್ತು. ಇಷ್ಟು ಹೇಳಿದ್ದೇನೆ. ಕಾರ್ಯಕ್ರಮಕ್ಕೆ ಬಂದಿದ್ದವರೊಂದಿಗಿನ ನನ್ನ ಸ್ನೇಹಿತರು, ಆತ್ಮೀಯರೊಂದಿಗಿನ ಮಾತುಗಳನ್ನು ಮತ್ತೊಮ್ಮೆ ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ.

Wednesday, April 1, 2009

ಕೆರೆ ಆಳಕ್ಕೆ ಹೋಗುವ ಮುನ್ನ...

ಸಿಲಿಕಾನ್ ಸಿಟಿ, ಐಟಿ ಸಿಟಿ, ಹೈಟೆಕ್ ಸಿಟಿ ಎಂದೆಲ್ಲ ಪಟ್ಟ ಗಳಿಸುವ ಮುನ್ನ ಉದ್ಯಾನನಗರಿ ‘ಲೇಕ್ ಸಿಟಿ ಎಂಬ ಬಿರುದನ್ನೂ ಹೊಂದಿತ್ತು. ಇದು ಹೆಸರು ಮಾತ್ರವಲ್ಲ, ಬೆಂಗಳೂರು ತನ್ನ ವ್ಯಾಪ್ತಿಯಲ್ಲಿ ಹೊಂದಿದ್ದ ಕೆರೆಗಳ ವೈಭವದ ಪ್ರತಿಬಿಂಬವಾಗಿತ್ತು. ಆದರೆ ಈ ಮಾತು ಹಿಂದಿನ ಶತಮಾನದ್ದು. ಈಗ ಉಳಿದಿರುವ ಕೆಲವೇ ಕೆಲವು ಕೆರೆಗಳನ್ನು ಉಳಿಸಿಕೊಳ್ಳಲೂ ಪರಿತಪಿಸಬೇಕಾದ ಸನ್ನಿವೇಶ ಬಂದೊದಗಿದೆ. ಇದಕ್ಕೆ ಕಾರಣ ಯೋಜನೆ ಇಲ್ಲದೆ ಬೃಹತ್ ಪ್ರಮಾಣದಲ್ಲಿ ಅದರಲ್ಲೂ ಕ್ಷಿಪ್ರವೇಗದಲ್ಲಿ ವಿಸ್ತಾರವಾದ, ಆಗುತ್ತಿರುವ ಬೆಂಗಳೂರು.
ಬೆಂಗಳೂರು ನಗರದ ಶಿಲ್ಪಿ ಕೆಂಪೇಗೌಡರ ಕಾಲದ ಬೆಂದಕಾಳೂರು ತನ್ನ ನಾಲ್ಕು ದಿಕ್ಕಿನ ಗೋಪುರಗಳ ಒಳಗೆ ಇದ್ದಾಗ ಸಮೃದ್ಧವಾಗಿತ್ತು. ಆನಂತರದ ಕೆಲ ದಶಕಗಳು ಕಳೆದ ಮೇಲೂ ನಗರ ಹವಾನಿಯಂತ್ರಿತವಾಗಿಯೇ ಇತ್ತು. ಇದಕ್ಕೆ ಕಾರಣ ಈ ನಗರದ ಒಳಗೆ ಹಾಗೂ ಸುತ್ತಮುತ್ತಲಿದ್ದ ಕೆರೆಗಳು. ಅಂತರ್ಜಲದ ಸಮೃದ್ಧಿಯಿಂದ ಹಿಡಿದು ಆಹ್ಲಾದಕರ ವಾತಾವರಣಕ್ಕೆ ಉದ್ಯಾನನಗರಿಗೆ ಆಸರೆಯಾಗಿದ್ದವು. ಐಟಿ ಸಿಟಿ ಎಂಬ ಪಟ್ಟಕ್ಕೆ ಅಂಬೆಗಾಲಿಡಲು ಆರಂಭಿಸಿದಂದಿನಿಂದ ಹವಾನಿಯಂತ್ರಿತ ನಗರಿಯ ವಾಸ್ತವ ಚಿತ್ರಣ ಬದಲಾಗುತ್ತಾ ಹೋಯಿತು. ಪೂರ್ವ ಯೋಜನೆ ಇಲ್ಲದೇ ೩೬೦ ಡಿಗ್ರಿಯಲ್ಲೂ ನಗರ ಬೆಳೆಯುತ್ತಾ ಸಾಗಿತು. ಎಲ್ಲಿ ನೋಡಿದರೂ ಬಡಾವಣೆಗಳು, ರಸ್ತೆಗಳು, ಕಟ್ಟಡಗಳು. ಕಾಂಕ್ರೀಟ್ ಕಾಡಾಗುವಾಗ ಹಿಂದಿನ ವೈಭವಕ್ಕೆ ಕಾರಣವಾದ ಕೆರೆಗಳನ್ನು ಮರೆಯಲಾಯಿತು. ಅಷ್ಟಾಗಿದ್ದರೆ ಪರವಾಗಿರಲಿಲ್ಲ, ಆ ಕೆರೆಗಳ ಸಮಾಧಿ ಮೇಲೆಯೇ ಬಡಾವಣೆ, ಅಭಿವೃದ್ಧಿ ಯೋಜನೆಗಳು ನಿರ್ಮಾಣವಾದವು. ಅಂದು ಮಾಡಿದ ತಪ್ಪಿಗೆ ಇಂದು ನಗರ ವಾತಾವರಣದ ವಿಕೋಪದಿಂದ ನರಳುತ್ತಿದೆ.
ಬೆಂಗಳೂರಿನಲ್ಲಿ ಕಳೆದ ಶತಮಾನದಲ್ಲಿ 262 ಕೆರೆಗಳಿದ್ದವು. ಈಗ ಎಣಿಕೆಯಲ್ಲಿ ಉಳಿದಿರುವುದು ೧೨೭. ಆದರೆ, ಇದರಲ್ಲಿ ೨೦೦೮ರ ವೇಳೆಗೆ ಜೀವಂತಿಕೆಯಿಂದಿರುವುದು ಕೇವಲ 81 ಕೆರೆಗಳು ಮಾತ್ರ. ಕೆಲವು ದಶಕಗಳ ಹಿಂದೆ ನಗರವಾಸಿಗಳ ಜೀವಜಲದ ಕೇಂದ್ರಬಿಂದುವಾಗಿದ್ದ ಕೆರೆಗಳಲ್ಲಿ ಕೆಲವು ಅಭಿವೃದ್ಧಿಯ ಹೆಸರಿನಲ್ಲಿ ನಿರ್ನಾಮವಾಗಿವೆ. ಇನ್ನು ಕೆಲವು ಕೆರೆಗಳು ಅದೇ ಅಭಿವೃದ್ಧಿಗಾಗಿ ಜೀವ ನೀಡುತ್ತಿವೆ. ಬೆಂಗಳೂರಿನಲ್ಲಿರುವ ಕೆರೆಗಳು ಯಾರ ಲೆಕ್ಕದಲ್ಲಿ ಸರಿ ಇವೆ, ಯಾರದ್ದು ತಪ್ಪು ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಒಬ್ಬರು ನೀಡುವ ಲೆಕ್ಕಕ್ಕೂ ಮತ್ತೊಬ್ಬರ ಮಾಹಿತಿಗೂ ಅಜಗಜಾಂತರ. ಬೆಂಗಳೂರಿನಲ್ಲಿ ೮೧ ಕೆರೆಗಳಿವೆ ಎಂದು ಕೆರೆ ಅಭಿವೃದ್ಧಿ ಪ್ರಾಧಿಕಾರ ಅದರ ಪಟ್ಟಿಯನ್ನು ನೀಡುತ್ತದೆ. ಆದರೆ, ಕೆರೆಯ ಮುಂದೇ ಪ್ರಾಧಿಕಾರದ್ದೇ ಫಲಕವಿದ್ದರೂ, ಈ ಕೆರೆ ಪಟ್ಟಿಯಲ್ಲಿಲ್ಲ. ಇದು ಯಾರ ಲೆಕ್ಕಕ್ಕೆ ಹೋಗಿದೆ?. ಲೆಕ್ಕದಲ್ಲಿ ಇರುವ ಕೆರೆಗಳೇ ಪೂರ್ಣ ಉಳಿದಿಲ್ಲ. ಲೆಕ್ಕಕ್ಕೇ ಇಲ್ಲದ ಕೆರೆಗಳ ಪರಿಸ್ಥಿತಿ ಏನು? ಆಟಕ್ಕೆ ಇದ್ದರೂ ಲೆಕ್ಕಕ್ಕೆ ಇಲ್ಲ ಎಂಬಂತಾಗಿದೆ.

ಕೆರೆ ಕರಗುವ ಸಮಯ

ಬೆಂಗಳೂರಿನ ಕೆರೆಗಳನ್ನು ಸುತ್ತುವಾಗ ಸಾಕಷ್ಟು ನೋವು-ನಲಿವುಗಳನ್ನು ಉಂಡಿದ್ದೇನೆ. ಆದರೆ, ಕೆರೆಯ ಸ್ಥಿತಿ ನೋಡಿದಾಗ, ಅದನ್ನು ದಾಖಲಿಸಲು, ಅದಕ್ಕಾಗಿ ಪಟ್ಟಶ್ರಮ ಸಾರ್ಥಕ ಎಂದೆನಿಸಿದೆ. ಕೆಲವು ಅನುಭವಗಳನ್ನು ಮುಂದೆ ಹಂಚಿಕೊಳ್ಳುತ್ತೇನೆ. ಒಂದು ಕಾಲದಲ್ಲಿ ಜೀವಜಲವಾಗಿ ನಗರದ ಜನರಿಗೆ ಕುಡಿಯುವ ನೀರಿನ ತಾಣವಾಗಿದ್ದ ಕೆರೆಗಳಲ್ಲಿ, ಇಂದು ಉಗುಳಲೂ ಮನಸ್ಸು ಬರುವುದಿಲ್ಲ. ಅಂದರೆ, ಎಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಊಹಿಸಿಕೊಳ್ಳಿ. ಕೆರೆಗಳ ಸ್ಥಿತಿ ಬಗ್ಗೆ ಬರೆಯುವಾಗ ಮನಸ್ಸಿನಾಳದಲ್ಲಿ ದುಃಖದ ಛಾಯೆ ಆವರಿಸಿತ್ತು. ನಿರ್ಮಾತೃ ಕೆಂಪೇಗೌಡ ಮತ್ತು ನಮ್ಮ ಪೂರ್ವಜರು ಕಟ್ಟಿಬೆಳೆಸಿದ ಕೆರೆಗಳ ಬಗ್ಗೆ ರೀತಿ ಬರೆಯಬೇಕಾಯಿತಲ್ಲ ಎಂಬ ನೋವಿದೆ.
ಇದೇ ಕೆರೆ ಕರಗುವ ಸಮಯ...